ಹೆಚ್ಚು ಕೊರೋನಾ ಟೆಸ್ಟ್ ನಡೆದರೆ ಅಮೆರಿಕವನ್ನು ಮೀರಿಸುತ್ತೆ ಭಾರತ| ಚೀನಾದಲ್ಲೂ ಇದೇ ಸ್ಥಿತಿ: ಟ್ರಂಪ್
ವಾಷಿಂಗ್ಟನ್(ಜೂ.07): ರೋಗ ಪತ್ತೆ ಪರೀಕ್ಷೆ ಪ್ರಮಾಣ ಹೆಚ್ಚಿಸಿದ್ದೇ ಆದಲ್ಲಿ ಭಾರತ ಮತ್ತು ಚೀನಾದಲ್ಲಿ ಅಮೆರಿಕಕ್ಕಿಂತ ಅಧಿಕ ಸಂಖ್ಯೆಯಲ್ಲಿ ಕೊರೋನಾ ಸೋಂಕಿತರು ಕಂಡುಬರುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಕ್ಕೆ, ಹೆಚ್ಚಿನ ಪ್ರಮಾಣದಲ್ಲಿ ನಡೆಸಿದ ಸೋಂಕು ಪತ್ತೆ ಪರೀಕ್ಷೆಯೇ ಕಾರಣ ಎಂದು ಸಮರ್ಥಿಸಿಕೊಂಡಿದ್ದಾರೆ.
'ಎಂಥಾ ಕೆಟ್ಟ ಗಿಫ್ಟ್ ಕೊಟ್ರಿ'..! ಚೀನಾ ವಿರುದ್ಧ ಟ್ರಂಪ್ ಕಿಡಿ
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, ‘ನಾವು ಈಗಾಗಲೇ 2 ಕೋಟಿಗೂ ಹೆಚ್ಚಿನ ರೋಗ ಪತ್ತೆ ಪರೀಕ್ಷೆ ನಡೆಸಿದ್ದೇವೆ. ಜರ್ಮನಿಯಲ್ಲಿ 40 ಲಕ್ಷ, ದಕ್ಷಿಣ ಕೊರಿಯಾದಲ್ಲಿ 30 ಲಕ್ಷ ರೋಗ ಪತ್ತೆ ಪರೀಕ್ಷೆ ನಡೆಸಲಾಗಿದೆ. ನೀವು ನೆನಪಿಟ್ಟುಕೊಳ್ಳಿ, ನೀವು ಹೆಚ್ಚೆಚ್ಚು ಪರೀಕ್ಷೆ ಮಾಡಿದಷ್ಟೂಹೆಚ್ಚಿನ ಸೋಂಕಿತರು ಪತ್ತೆಯಾಗುತ್ತಾರೆ. ಒಂದು ವೇಳೆ ನೀವು ಭಾರತ ಮತ್ತು ಚೀನಾದಲ್ಲಿ ಇನ್ನಷ್ಟುಹೆಚ್ಚಿನ ಗಂಟಲುದ್ರವ ಪರೀಕ್ಷೆ ನಡೆಸಿದ್ದೇ ಆದಲ್ಲಿ, ಅಲ್ಲಿ ಇನ್ನಷ್ಟುಹೆಚ್ಚಿನ ಸೋಂಕು ಪತ್ತೆಯಾಗಿರುತ್ತಿತ್ತು’ ಎಂದು ಹೇಳಿದ್ದಾರೆ. ಭಾರತದ ಆರೋಗ್ಯ ಸಚಿವಾಲಯದ ಮಾಹಿತಿ ಅನ್ವಯ ದೇಶದಲ್ಲಿ ಈವರೆಗೆ 40 ಲಕ್ಷ ಪರೀಕ್ಷೆ ನಡೆಸಲಾಗಿದೆ.
ಅಮೆರಿಕದಲ್ಲಿ ಈವರೆಗೆ 19 ಲಕ್ಷ ಸೋಂಕಿತರು ಪತ್ತೆಯಾಗಿದ್ದು, 1.09 ಲಕ್ಷ ಜನ ಸಾವನ್ನಪ್ಪಿದ್ದಾರೆ.