ಸಿರಿಯಾದಲ್ಲಿ ಗಲ್ಲಿಗೇರಿಸಲ್ಪಟ್ಟು 60 ವರ್ಷ ನಂತರ ತನ್ನ ನೆಚ್ಚಿನ ಗೂಢಚಾರನ ವಸ್ತುಗಳ ವಾಪಸ್‌ ಪಡೆದ ಇಸ್ರೇಲ್‌

Published : May 19, 2025, 01:24 PM ISTUpdated : May 19, 2025, 01:25 PM IST
ಸಿರಿಯಾದಲ್ಲಿ ಗಲ್ಲಿಗೇರಿಸಲ್ಪಟ್ಟು 60 ವರ್ಷ ನಂತರ ತನ್ನ ನೆಚ್ಚಿನ ಗೂಢಚಾರನ ವಸ್ತುಗಳ ವಾಪಸ್‌ ಪಡೆದ ಇಸ್ರೇಲ್‌

ಸಾರಾಂಶ

60 ವರ್ಷಗಳ ಹಿಂದೆ ಸಿರಿಯಾದಲ್ಲಿ ಗಲ್ಲಿಗೇರಿಸಲಾದ ಇಸ್ರೇಲ್‌ನ ಖ್ಯಾತ ಗೂಢಚಾರ ಎಲಿ ಕೊಹೆನ್‌ ಅವರ ಅಮೂಲ್ಯ ದಾಖಲೆಗಳನ್ನು ಇಸ್ರೇಲ್ ವಾಪಸ್ ಪಡೆದುಕೊಳ್ಳುವಲ್ಲಿ ಕೊನೆಗೂ ಯಶಸ್ವಿಯಾಗಿದೆ.


ಇಸ್ರೇಲ್‌ನ ಖ್ಯಾತ ಗೂಢಚಾರ ಎಲ್ಲಿ ಕೊಹೆನ್‌ (eli cohens)ಅವರಿಗೆ ಸಂಬಂಧಿಸಿದ ಅತ್ಯಮೂಲ್ಯವಾದ ದಾಖಲೆಗಳನ್ನು ಸಿರಿಯಾದಿಂದ ಮತ್ತೆ ವಶಕ್ಕೆ ಪಡೆದುಕೊಂಡಿರುವುದಾಗಿ ಇಸ್ರೇಲ್‌ ಭಾನುವಾರ ಘೋಷಣೆ ಮಾಡಿದೆ. ಇಸ್ರೇಲ್ ಗುಪ್ತಚರ ಸಂಸ್ಥೆಯ ಖ್ಯಾತ ಗೂಢಚಾರ ಎಲ್ಲಿ ಕೊಹೆನ್‌ ಅವರನ್ನು 60 ವರ್ಷಗಳ ಹಿಂದೆ ಗೂಢಚಾರಿಕೆ ಮಾಡಿದ ಆರೋಪದ ಮೇಲೆ ಸಿರಿಯಾದ ಡಮಸ್ಕಸ್‌ನಲ್ಲಿ 1965ರಲ್ಲಿ ಗಲ್ಲಿಗೇರಿಸಲಾಗಿತ್ತು. ಈಗ ಅವರಿಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಸಿರಿಯಾ ವಶದಿಂದ ವಾಪಸ್ ಪಡೆದಿರುವುದಾಗಿ ಇಸ್ರೇಲ್ ಹೇಳಿದೆ. 

ಇಸ್ರೇಲ್‌ ವಾಪಸ್ ಪಡೆದ ತನ್ನ ನೆಚ್ಚಿನ ಗೂಢಚಾರ ಎಲ್ಲಿ ಕೊಹೆನ್‌ಗೆ ಸೇರಿದ ಈ ವಸ್ತುಗಳಲ್ಲಿ ಒಟ್ಟು 2,500 ದಾಖಲೆಗಳು, ಫೋಟೋಗಳು, ವೈಯಕ್ತಿಕ ವಸ್ತುಗಳು ಸೇರಿವೆ. ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ನಡೆಸಿದ ಬಹಳ ಸಂಕೀರ್ಣವಾದ ಕಾರ್ಯಾಚರಣೆಯಲ್ಲಿ  ಈ ಕಾರ್ಯತಂತ್ರದ ಪಾಲುದಾರ ಸೇವೆಯ(strategic partner service)ಸಹಾಯದಿಂದ ಎಲ್ಲಿ ಕೊಹೆನ್‌ ಅವರಿಗೆ ಸೇರಿದ ಅಧಿಕೃತ ಸಿರಿಯನ್ ಆರ್ಕೈವ್ ಅನ್ನು ಇಸ್ರೇಲ್‌ಗೆ ತರಲಾಯ್ತು ಎಂದು ಇಸ್ರೇಲ್ ಬಾಹ್ಯ ಗುಪ್ತಚರ ಸಂಸ್ಥೆಯನ್ನು ಉಲ್ಲೇಖಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಕಚೇರಿ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ.

ಈಗ ಇಸ್ರೇಲ್‌ಗೆ ತಂದಿರುವ ಇಸ್ರೇಲ್‌ಗೆ ಬಹಳ ಅಮೂಲ್ಯವೆನಿಸಿದ ಈ ನಿಧಿಯಲ್ಲಿ ಸಿರಿಯನ್ ಗುಪ್ತಚರ ಇಲಾಖೆ ಹಲವು ದಶಕಗಳಿಂದಲೂ ಬಹಳ ರಹಸ್ಯವಾಗಿ ಇರಿಸಿದ್ದ ಸಾವಿರಾರು ವಸ್ತುಗಳು ಇವೆ ಎಂದು ಇಸ್ರೇಲ್ ಪ್ರಧಾನಿ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ. 1965ರ ಮೇ 18 ರಂದು ಕೊಹೆನ್‌ ಅವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿತ್ತು. ಅವರ ಗಲ್ಲಿಗೇರಿಸಿ 60 ವರ್ಷ ಕಳೆದಿದ್ದು, ಈ ಸಂದರ್ಭವನ್ನು ನೆನಪಿಸಿಕೊಳ್ಳಲು ಆಯೋಜಿಸಿದ್ದ ಸಮಾರಂಭದಲ್ಲಿ  ಇಸ್ರೇಲ್ ಈ ಘೋಷಣೆ ಮಾಡಿದೆ. ಇಸ್ರೇಲ್ ಪ್ರಧಾನಿ ನೇತನ್ಯಾಹು ಹಾಗೂ ಗುಪ್ತಚರ ಸಂಸ್ಥೆ ಮೊಸಾದ್‌ನ ಮುಖ್ಯಸ್ಥ ಡೇವಿಡ್ ಬಾರ್ನಿಯಾ ಅವರು ಕೊಹೆನ್ ಅವರ ವಿಧವೆ ಪತ್ನಿ ನಾಡಿಯಾ ಕೊಹೆನ್ ಅವರಿಗೆ ಈ ವಸ್ತುಗಳನ್ನು ಹಸ್ತಾಂತರಿಸಲಾಯ್ತು ಎಂದು ಇಸ್ರೇಲ್‌ನ ಮಾಧ್ಯಮ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. 

ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಎಲ್ಲಿ ಕೊಹೆನ್ ಅವರಿಗೆ ಸಂಬಂಧಿಸಿದಂತೆ ಸಿರಿಯಾದ ಗುಪ್ತಚರ ಸಂಸ್ಥೆ ಸಿದ್ಧಪಡಿಸಿದ್ದ ಸಂಪೂರ್ಣ ವಿವರವಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಹೇಳಿದೆ. ಅಲ್ಲದೇ ಈ ಕಾರ್ಯಾಚರಣೆಯನ್ನು ಇಸ್ರೇಲ್ ಒಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದೆ. ವಿದೇಶಿ ಗುಪ್ತಚರ ಸಂಸ್ಥೆಯ ಸಹಾಯದಿಂದ ಈ ರಹಸ್ಯ ಕಾರ್ಯಾಚರಣೆಯನ್ನು ನಡೆಸಲಾಗಿದೆ.  

ಈ ದಾಖಲೆಗಳಲ್ಲಿ ಕೊಹೆನ್ ತನ್ನ ಕುಟುಂಬಕ್ಕೆ ಬರೆದ ಕೈಬರಹದ ಪತ್ರಗಳು, ಅವರ ಹಾಗೂ ಸಿರಿಯನ್ ಅಧಿಕಾರಿಗಳ ನಡುವೆ ನಡೆದ ಮಾತುಕತೆಯನ್ನು ತೋರಿಸುವ ದಾಖಲೆಗಳು, ಸಿರಿಯಾದಲ್ಲಿ ಅವರಿದ್ದ ಸಂದರ್ಭದಲ್ಲಿ ತೆಗೆದ ಕೆಲ ಫೋಟೋಗಳು ಮತ್ತು ನಕಲಿ ಪಾಸ್‌ಪೋರ್ಟ್‌ಗಳನ್ನು ಕೂಡ ಈ ದಾಖಲೆ ಒಳಗೊಂಡಿದೆ. ಡಮಾಸ್ಕಸ್‌ನಲ್ಲಿ ಎಲ್ಲಿ ಕೊಹೆನ್ ವಾಸವಿದ್ದ ಅಪಾರ್ಟ್‌ಮೆಂಟ್‌ನ ಕೀಲಿ ಕೈಗಳು ಕೂಡ ಈ ದಾಖಲೆಗಳಲ್ಲಿ ಸೇರಿವೆ.  ಕೊಹೆನ್ ಅವರನ್ನು ಬಂಧಿಸಿದ ವೇಳೆ ಸಿರಿಯಾದ ಅಧಿಕಾರಿಗಳು ಈ ಕೀಲಿ ಕೈಗಳನ್ನು ವಶಕ್ಕೆ ಪಡೆದಿದ್ದರು.

ಕೊಹೆನ್‌ ಅವರನ್ನು ಗಲ್ಲಿಗೇರಿಸುವ ಸ್ವಲ್ಪ ಮೊದಲು ಅವರು ಬರೆದಿದ್ದಮೂಲ ವಿಲ್, ಮರಳಿ ಪಡೆದ ವಸ್ತುಗಳಲ್ಲಿ ಒಂದಾಗಿದೆ.  ಸಿರಿಯನ್ ಗುಪ್ತಚರ ಇಲಾಖೆ ಕೊಹೆನ್ ಅವರು ವಾಸವಿದ್ದ ನಿವಾಸದಿಂದ ಸಂಗ್ರಹಿಸಿದ ಅನೇಕ ಕೈಬರಹದ ಟಿಪ್ಪಣಿಗಳನ್ನು ಸಹ ಈ ದಾಖಲೆ ಒಳಗೊಂಡಿದೆ. ಇದು ಮೊಸಾದ್‌ನಿಂದ ಅವರು ಪಡೆದ ಕಾರ್ಯಯೋಜನೆಗಳನ್ನು ವಿವರಿಸುತ್ತದೆ. ಇವುಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನು ಗಮನಿಸಲು ಮತ್ತು ಕುನ್ಮತ್ರಾ ಪ್ರದೇಶದಲ್ಲಿನ ಸಿರಿಯನ್ ಮಿಲಿಟರಿ ಸೌಲಭ್ಯಗಳ ಕುರಿತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಲು ನೀಡಿದ ಸೂಚನೆಗಳು ಸೇರಿವೆ.

ಕೊಹೆನ್‌ಗೆ ಮರಣದಂಡನೆ ವಿಧಿಸಿದ ಪ್ರಮುಖ ಮೂಲ ದಾಖಲೆ ಮತ್ತು ಡಮಾಸ್ಕಸ್‌ನಲ್ಲಿರುವ ಯಹೂದಿ ಸಮುದಾಯದ ಮುಖ್ಯಸ್ಥ ರಬ್ಬಿ ನಿಸ್ಸಿಮ್ ಅಂಡಾಬೊ ಅವರು ತಮ್ಮ ಕೊನೆಯ ಗಂಟೆಗಳಲ್ಲಿ ಕೊಹೆನ್ ಜೊತೆ ಇರಲು ಅವಕಾಶ ನೀಡುವಂತೆ ಬರೆದ ಪತ್ರವೂ ಸಹ ಇದೆ. 

ಸಿರಿಯನ್ ಅಧಿಕಾರಿಗಳಿಂದ ಈತ ಇಸ್ರೇಲ್ ಗುಪ್ತಚರ ಎಂದು ಗುರುತಿಸಲ್ಪಡುವ ಮೊದಲು ಕೊಹೆನ್ ಅವರು ಓರ್ವ ಶ್ರೀಮಂತ ವ್ಯಾಪಾರಿಯ ಸೋಗಿನಲ್ಲಿದ್ದರು. ನಾಲ್ಕು ವರ್ಷಗಳ ಗುಪ್ತಚರ ಕಾರ್ಯಾಚರಣೆಯ ಸಮಯದಲ್ಲಿ ಕೊಹೆನ್ ಸಿರಿಯಾದ ಹಿರಿಯ ರಾಜಕೀಯ ಮತ್ತು ಮಿಲಿಟರಿ ವ್ಯಕ್ತಿಗಳೊಂದಿಗೆ ಬಲವಾದ ಸಂಪರ್ಕವನ್ನು ಬೆಳೆಸಿಕೊಂಡಿದ್ದನು. ಅವನನ್ನು ಮೇ 18, 1965 ರಂದು ಡಮಾಸ್ಕಸ್‌ನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು. ಎಲಿ ಕೋಹೆನ್ ಅವರ ಜೀವನಕ್ಕೆ ಸಂಬಂಧಿ ವೆಬ್‌ ಸರಣಿ ನಿರ್ಮಾಣವಾಗಿದ್ದು,  ನೆಟ್‌ಫ್ಲಿಕ್ಸ್‌ನಲ್ಲಿ ದಿ ಸ್ಟೈ ಹೆಸರಿನಲ್ಲಿ ಸ್ಟ್ರೀಮಿಂಗ್‌ನಲ್ಲಿದೆ. ಬ್ರಿಟಿಷ್ ನಟ ಸಚಾ ಬ್ಯಾರನ್ ಅವರು ಕೊಹೆನ್ ಪಾತ್ರವನ್ನು ನಿರ್ವಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!