ಇಸ್ರೇಲ್‌ನಲ್ಲಿ 18 ಸಾವಿರ ಭಾರತೀಯರ ವಾಸ, ಇವರಲ್ಲಿ 6 ಸಾವಿರಕ್ಕೂ ಹೆಚ್ಚು ಕೇರಳಿಗರು

By Kannadaprabha NewsFirst Published Oct 8, 2023, 9:44 AM IST
Highlights

ಹಮಾಸ್‌ ಉಗ್ರರಿಂದ ದಾಳಿಗೊಳಗಾಗಿರುವ ಇಸ್ರೇಲಿನಲ್ಲಿರುವ 18,000 ಭಾರತೀಯರ ಪೈಕಿ ಸುಮಾರು 6,000 ಜನರು ಕೇರಳದವರೇ (Kerala) ಆಗಿದ್ದಾರೆ. 

ಜೆರುಸಲೇಂ: ಹಮಾಸ್‌ ಉಗ್ರರಿಂದ ದಾಳಿಗೊಳಗಾಗಿರುವ ಇಸ್ರೇಲಿನಲ್ಲಿರುವ 18,000 ಭಾರತೀಯರ ಪೈಕಿ ಸುಮಾರು 6,000 ಜನರು ಕೇರಳದವರೇ (Kerala) ಆಗಿದ್ದಾರೆ. ಈ ಪೈಕಿ ಹೆಚ್ಚಿನವರು ಆಸ್ಪತ್ರೆಗಳಲ್ಲಿ ನರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿದ್ದು, ಅವರೆಲ್ಲಾ ದಾಳಿಯಿಂದ ಗಾಬರಿಗೊಂಡು ಹತ್ತಿರದ ಬಂಕರ್‌ಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಇಸ್ರೇಲ್‌ನಲ್ಲಿರುವ ಕೇರಳ ಮೂಲದ ದಾದಿಯೊಬ್ಬರು ತಿಳಿಸಿದ್ದಾರೆ. 

ಟಿವಿ ಚಾನಲ್‌ವೊಂದರಲ್ಲಿ ಮಾತನಾಡಿದ ಅವರು ನಾನು 8 ವರ್ಷಗಳಿಂದ ಇಸ್ರೇಲ್‌ನಲ್ಲಿ (Israel) ದಾದಿಯಾಗಿ ಕೆಲಸ ಮಾಡುತ್ತಿದ್ದೇನೆ. ನಾನೀಗ ಬಂಕರ್‌ನಲ್ಲಿದ್ದೇನೆ. ನಮಗೆ ಸ್ಫೋಟದ ಸದ್ದುಗಳು ಕೇಳುತ್ತಿವೆ. ಈ ಹಿಂದೆಯೂ ಇಂತಹ ಸಂಘರ್ಷಗಳು ನಡೆಯುತ್ತಿದ್ದವಾದರೂ ಈ ಬಾರಿ ಈ ಘರ್ಷಣೆ ಭಾರೀ ಪ್ರಬಲವಾಗಿದೆ ಎಂದಿದ್ದಾರೆ.

ಯೋಧರ ಮುಷ್ಕರದ ಸಮಯ, ಹಬ್ಬದ ಅವಧಿ ಗಮನಿಸಿ ಏಕಾಏಕಿ ದಾಳಿ

ಜೆರುಸಲೇಂ: ವಿಶ್ವದಲ್ಲೇ ಅತ್ಯಂತ ಕುಖ್ಯಾತ ಗುಪ್ತಚರ ಸಂಸ್ಥೆಯಾದ (notorious intelligence agency) ಮೊಸ್ಸಾದ್ (Mossad, ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಹೊಂದಿದ್ದರೂ, ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ ತುತ್ತಾಗಿದ್ದು ಹೇಗೆ? ಇಂಥದ್ದೊಂದು ಪ್ರಶ್ನೆ ಎಲ್ಲರನ್ನೂ ಕಾಡಿದೆ. ಹೌದು. ಸೇನಾ ಬಲದಲ್ಲಿ ಇಸ್ರೇಲಿಗೆ ಯಾವುದೇ ರೀತಿಯಲ್ಲೂ ಸಾಟಿ ಇಲ್ಲದ ಹಮಾಸ್‌ ಉಗ್ರರು(Hamas militants), ಇಸ್ರೇಲ್‌ ವಶದಲ್ಲಿರುವ ಆಯಕಟ್ಟಿನ ಪ್ರದೇಶ ವಶಪಡಿಸಿಕೊಳ್ಳಲು ಯೋಜಿತ ಸಂಚು ರೂಪಿಸಿದ್ದ ವಿಷಯ ಬೆಳಕಿಗೆ ಬಂದಿದೆ. ನೇರ ಯುದ್ಧ ಮಾಡಿದರೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅರಿತ ಉಗ್ರರು ಇದಕ್ಕಾಗಿ ಹೊಂಚುಹಾಕಿ ಮುಗಿಬಿದ್ದಿದ್ದಾರೆ.

ಭಾರಿ ಪೂರ್ವ ತಯಾರಿಯೊಂದಿಗೆ ಇಸ್ರೇಲ್ ಮೇಲೆ ಮುಗಿಬಿದ್ದಿದ್ದ ಹಮಾಸ್ ಉಗ್ರರು

ಯೋಧರ ಮುಷ್ಕರ

ಇಸ್ರೇಲ್‌ನ ನ್ಯಾಯಾಂಗ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಲು ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Prime Minister Benjamin Netanyahu) ಮುಂದಾಗಿದ್ದಾರೆ. ಆದರೆ ಸುಪ್ರೀಂಕೋರ್ಟ್‌ (Supreme Court)ಅನ್ನೇ ದುರ್ಬಲಗೊಳಿಸುವ ಹುನ್ನಾರ ಇದು ಎಂದು ಇಸ್ರೇಲ್‌ ಪ್ರಜೆಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಬೆಂಬಲ ಸೂಚಿಸಿ ಸೇನಾ ಮೀಸಲು ಪಡೆಯ ಯೋಧರು ತರಬೇತಿಯಿಂದ ದೂರ ಉಳಿದಿದ್ದಾರೆ ಹಾಗೂ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಹೀಗಾಗಿ ಇಸ್ರೇಲ್‌ನ ಯುದ್ಧ ಸನ್ನದ್ಧತೆಯ ಬಗ್ಗೆಯೇ ಸೇನಾ ತಜ್ಞರು ಕಳವಳ ವ್ಯಕ್ತಪಡಿಸಿದ್ದರು. ಇಂತಹ ಸಂದರ್ಭದಲ್ಲೇ ಅತ್ಯಂತ ಯೋಜಿತ ರೀತಿಯಲ್ಲಿ ಹಮಾಸ್‌ ಉಗ್ರರು ದಾಳಿ ನಡೆಸಿದ್ದಾರೆ.

ಇದರ ಜೊತೆಗೆ ಹಾಲಿ ಇಸ್ರೇಲಿನಲ್ಲಿ ಯಹೂದಿಗಳ ಹಬ್ಬದ ಸಮಯ ನಡೆಯುತ್ತಿದೆ. ಈ ಹೊತ್ತಿನಲ್ಲಿ ಎಲ್ಲರೂ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ. ಈ ಎರಡೂ ವಿಷಯಗಳನ್ನು ಗಮನಿಸಿಕೊಂಡೇ ಉಗ್ರರು ದಾಳಿ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಇಸ್ರೇಲ್‌- ಪ್ಯಾಲೆಸ್ತೀನ್‌ ಸಂಘರ್ಷ : ಅಮೆರಿಕ ಮಧ್ಯಪ್ರವೇಶಕ್ಕೂ ಬಗೆಹರಿಯದ ಯಹೂದಿ ಅರಬ್ಬರ ಬಿಕ್ಕಟ್ಟು

ಬಲಿಷ್ಠ ಬೇಲಿಯನ್ನೂ ದಾಟಿ ಬಂದರು

ಪ್ಯಾಲೆಸ್ತೀನ್‌ (Palestinians) ಜತೆ ವೈರತ್ವ ಹೊಂದಿರುವ ಇಸ್ರೇಲ್, ಉಗ್ರರ ಒಳನುಸುಳುವಿಕೆಯನ್ನು ತಡೆಯಲು ಗಾಜಾ ಗಡಿಯಲ್ಲಿ ಬಲಿಷ್ಠವಾದ ಹಾಗೂ ಅತ್ಯಂತ ಆಳವಾದ ಬೇಲಿಯನ್ನು ನಿರ್ಮಿಸಿದೆ. ಇದರ ಜತೆಗೆ ಬೇಲಿಯಲ್ಲಿ ಕ್ಯಾಮೆರಾ, ಅತ್ಯಾಧುನಿಕ ಸೆನ್ಸರ್‌, ಸೂಕ್ಷ್ಮ ಶಬ್ದವನ್ನೂ ಕೇಳುವ ತಂತ್ರಜ್ಞಾನವನ್ನೂ ಅಳವಡಿಕೆ ಮಾಡಿದೆ. ಆದರೂ ಹಮಾಸ್‌ ಉಗ್ರರು ದಾಳಿ ನಡೆಸಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಹುಷಾರಾಗಿರಿ: ಇಸ್ರೇಲ್‌ನಲ್ಲಿನ ಭಾರತೀಯರಿಗೆ ನಾಗರಿಕರಿಗೆ ರಾಯಭಾರ ಕಚೇರಿ ಸಲಹೆ

ಜೆರುಸಲೇಂ: ಹಮಾಸ್‌ ಉಗ್ರರ ದಾಳಿ ಬೆನ್ನ್ಲಲೇ ಜಾಗರೂಕರಾಗಿರುವಂತೆ ಇಸ್ರೇಲ್‌ನಲ್ಲಿರುವ ತನ್ನ ನಾಗರಿಕರಿಗೆ ಭಾರತೀಯ ರಾಯಭಾರ ಕಚೇರಿ ಎಚ್ಚರಿಕೆ ನೀಡಿದೆ. ಸದ್ಯ ಇಸ್ರೇಲ್‌ನಲ್ಲಿ 18,000ಕ್ಕೂ ಹೆಚ್ಚು ಭಾರತೀಯ ನಾಗರಿಕರಿದ್ದಾರೆ.

ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಯಭಾರ ಕಚೇರಿ, ‘ಇಸ್ರೇಲ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್‌ನಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಲು ಹಾಗೂ ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಸುರಕ್ಷತಾ ಶಿಷ್ಟಾಚಾರಗಳನ್ನು ಗಮನಿಸಲು ಸೂಚಿಸಲಾಗಿದೆ. ತುರ್ತು ಸಂದರ್ಭದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿ. ದಯವಿಟ್ಟು ಎಚ್ಚರಿಕೆ ವಹಿಸಿ, ಅನಗತ್ಯ ಸಂಚಾರವನ್ನು ತಪ್ಪಿಸಿ’ ಎಂದು ಸಲಹೆ ನೀಡಿದೆ. ಅಲ್ಲದೇ ತುರ್ತು ಪರಿಸ್ಥಿತಿ ಉಂಟಾದರೆ ರಾಯಭಾರ ಕಚೇರಿಯ ಸಹಾಯವಾಣಿ +97235226748ಗೆ ಕರೆ ಮಾಡುವಂತೆ ಸೂಚಿಸಿದೆ. ಇನ್ನು ಕನ್ನಡ, ಹಿಂದಿ, ಮರಾಠಿ, ತೆಲುಗು, ತಮಿಳು, ಮಲಯಾಳಂ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಸಲಹೆ ನೀಡಲಾಗಿದೆ.

ಯುದ್ಧ ಪೀಡಿತ ಇಸ್ರೇಲ್‌ಗೆ ಏರ್‌ಇಂಡಿಯ ವಿಮಾನ ರದ್ದು: ಹಮಾಸ್‌ ಉಗ್ರರ ಕೃತ್ಯಕ್ಕೆ ಜಾಗತಿಕ ಖಂಡನೆ

ಇಸ್ರೇಲಿನಲ್ಲಿರುವ ಬಹುತೇಕ ಭಾರತೀಯರು ವಜ್ರದ ವ್ಯಾಪಾರಿಗಳು, ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ಇತರ ಉದ್ಯೋಗಿಗಳಾಗಿದ್ದಾರೆ. ಇನ್ನು ಇಸ್ರೇಲಿನಲ್ಲಿ 85,000 ಕ್ಕೂ ಹೆಚ್ಚು ಭಾರತೀಯ ಮೂಲದ ಯಹೂದಿಗಳಿದ್ದಾರೆ. ಇವರೆಲ್ಲ 50-60ರ ದಶಕದಲ್ಲಿ ಭಾರತದಿಂದ ಇಸ್ರೇಲ್‌ಗೆ ವಲಸೆ ಬಂದವರಾಗಿದ್ದಾರೆ.

click me!