ಇಸ್ರೇಲ್‌- ಪ್ಯಾಲೆಸ್ತೀನ್‌ ಸಂಘರ್ಷ : ಅಮೆರಿಕ ಮಧ್ಯಪ್ರವೇಶಕ್ಕೂ ಬಗೆಹರಿಯದ ಯಹೂದಿ ಅರಬ್ಬರ ಬಿಕ್ಕಟ್ಟು

Published : Oct 08, 2023, 07:15 AM ISTUpdated : Oct 08, 2023, 07:19 AM IST
ಇಸ್ರೇಲ್‌- ಪ್ಯಾಲೆಸ್ತೀನ್‌ ಸಂಘರ್ಷ : ಅಮೆರಿಕ ಮಧ್ಯಪ್ರವೇಶಕ್ಕೂ ಬಗೆಹರಿಯದ ಯಹೂದಿ ಅರಬ್ಬರ ಬಿಕ್ಕಟ್ಟು

ಸಾರಾಂಶ

ಪ್ಯಾಲೆಸ್ತೀನಿ ಉಗ್ರರು ಶನಿವಾರ 5000ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿ, ಇಸ್ರೇಲ್‌ಗೆ ಪ್ರವೇಶಿಸುವುದರೊಂದಿಗೆ ಎರಡೂ ದೇಶಗಳ ನಡುವಣ ಸಂಘರ್ಷ ಮತ್ತೊಮ್ಮೆ ತಾರಕಕ್ಕೇರುವಂತಾಗಿದೆ. ಉಭಯ ರಾಷ್ಟ್ರಗಳ ಕಿತ್ತಾಟ ಇಂದು- ನಿನ್ನೆಯದಲ್ಲ. ದಶಕಗಳ ಘೋರ ಇತಿಹಾಸವನ್ನೇ ಹೊಂದಿದೆ.

ನವದೆಹಲಿ: ಪ್ಯಾಲೆಸ್ತೀನಿ ಉಗ್ರರು ಶನಿವಾರ 5000ಕ್ಕೂ ಹೆಚ್ಚು ರಾಕೆಟ್‌ಗಳನ್ನು ಹಾರಿಸಿ, ಇಸ್ರೇಲ್‌ಗೆ ಪ್ರವೇಶಿಸುವುದರೊಂದಿಗೆ ಎರಡೂ ದೇಶಗಳ ನಡುವಣ ಸಂಘರ್ಷ ಮತ್ತೊಮ್ಮೆ ತಾರಕಕ್ಕೇರುವಂತಾಗಿದೆ. ಉಭಯ ರಾಷ್ಟ್ರಗಳ ಕಿತ್ತಾಟ ಇಂದು- ನಿನ್ನೆಯದಲ್ಲ. ದಶಕಗಳ ಘೋರ ಇತಿಹಾಸವನ್ನೇ ಹೊಂದಿದೆ.

ಒಟ್ಟೋಮನ್‌ ಸಾಮ್ರಾಜ್ಯ (Ottoman Empire) ಒಂದನೇ ಮಹಾಯುದ್ಧದಲ್ಲಿ (World War I) ಸೋತ ಬಳಿಕ ಪ್ಯಾಲೆಸ್ತೀನ್‌ ನಿಯಂತ್ರಣ ಬ್ರಿಟನ್‌ ಪಾಲಾಯಿತು. ಅಲ್ಲಿ ಆಗ ಯಹೂದಿಗಳು ಅಲ್ಪಸಂಖ್ಯಾತರಾಗಿದ್ದರು. ಅರಬ್ಬರು ಬಹುಸಂಖ್ಯಾತರಾಗಿದ್ದರು. ಈ ನಡುವೆ, ಪ್ಯಾಲೆಸ್ತೀನ್‌ನಲ್ಲಿ ಯಹೂದಿಗಳಿಗೆ ಒಂದು ನೆಲೆ ಕಟ್ಟಿಕೊಡಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯ ಒತ್ತಡ ಹೇರಿ, ಆ ಹೊಣೆಗಾರಿಕೆಯನ್ನು ಬ್ರಿಟನ್‌ಗೆ ವಹಿಸಿತ್ತು. ಆಗ ಯಹೂದಿ ಹಾಗೂ ಅರಬ್ಬರ ನಡುವೆ ಸಂಘರ್ಷ ಆರಂಭವಾಯಿತು.

ಏತನ್ಮಧ್ಯೆ, ಪ್ಯಾಲೆಸ್ತೀನ್‌ನಲ್ಲಿ ತಮ್ಮದೊಂದು ದೇಶ ಸ್ಥಾಪನೆಯಾಗುತ್ತದೆ ಎಂಬ ಕಾರಣದಿಂದಾಗಿ 1920ರಿಂದ 1940ರ ನಡುವಣ ಅವಧಿಯಲ್ಲಿ ವಿಶ್ವದ ವಿವಿಧೆಡೆಯಲ್ಲಿ ನೆಲೆ ನಿಂತಿದ್ದ ಯಹೂದಿಗಳು ಪ್ಯಾಲೆಸ್ತೀನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದರು. ಜರ್ಮನಿಯ ಅಟ್ಟಹಾಸದಿಂದ ನಲುಗಿದ್ದ ಯಹೂದಿಗಳು ಯುರೋಪ್‌ ತೊರೆದು ಹೊಸ ದೇಶಕ್ಕೆ ಹಕ್ಕೊತ್ತಾಯ ತೀವ್ರಗೊಳಿಸಿದರು.

ಪ್ಯಾಲೆಸ್ತೀನ್‌ನಲ್ಲಿ ಯಹೂದಿ- ಅರಬ್ಬರ ಸಂಘರ್ಷದ ಜತೆಗೆ ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ಹೋರಾಟವೂ ತೀವ್ರವಾಯಿತು. ಪ್ಯಾಲೆಸ್ತೀನ್‌ ಅನ್ನು ಯಹೂದಿ ಹಾಗೂ ಅರಬ್‌ ರಾಜ್ಯಗಳಾಗಿ ವಿಭಜಿಸಲು ವಿಶ್ವಸಂಸ್ಥೆ 1947ರಲ್ಲಿ ಮತ ಹಾಕಿತು. ಜೆರುಸಲೇಂ ಅಂತಾರಾಷ್ಟ್ರೀಯ ನಿಯಂತ್ರಣಕ್ಕೆ ಒಳಪಟ್ಟಿತು. ಅದಕ್ಕೆ ಯಹೂದಿ ನಾಯಕತ್ವ ಒಪ್ಪಿಗೆ ನೀಡಿತು. ಆದರೆ ಅರಬ್ಬರು ತಿರಸ್ಕರಿಸಿದರು. ಅವರು ಇಂದಿಗೂ ಒಪ್ಪಿಕೊಳ್ಳದ ಕಾರಣ ಸಂಘರ್ಷ ಮುಂದುವರಿದಿದೆ.

ಸಂಘರ್ಷಕ್ಕೆ ಪರಿಹಾರ ಹುಡುಕಲು ವಿಫಲರಾದ ಬ್ರಿಟಿಷರು ಜಾಗ ಖಾಲಿ ಮಾಡಿದರು. ಯಹೂದಿಗಳು ಇಸ್ರೇಲ್‌ ಸ್ಥಾಪನೆ ಘೋಷಣೆ ಮಾಡಿದರು. ಪ್ಯಾಲೆಸ್ತೀನಿಯರು ಅದಕ್ಕೆ ಆಕ್ಷೇಪ ಎತ್ತಿದರು. ಯುದ್ಧ ಆರಂಭವಾಯಿತು. ನೆರೆಹೊರೆಯ ಅರಬ್‌ ದೇಶಗಳು ಸೇನಾ ಬಲದೊಂದಿಗೆ ಇಸ್ರೇಲ್‌ ಮೇಲೆ ಮುಗಿಬಿದ್ದವು. ಈ ನಡುವೆ ಇಸ್ರೇಲ್‌ನಿಂದ ಅರಬ್ಬರನ್ನು ಹೊರಹಾಕಲಾಯಿತು.

Watch: ಗಾಜಾದ ಮೇಲೆ ಮುಗಿಬಿದ್ದ ಇಸ್ರೇಲ್‌ ಏರ್‌ಫೋರ್ಸ್‌, ಬಾಂಬ್‌ ದಾಳಿಗೆ 160 ಪ್ಯಾಲಿಸ್ತೇನಿಯನ್ನರ ಸಾವು!

ಅದಾದ ಬಳಿಕ ಕಾಲಕಾಲಕ್ಕೆ ಇಸ್ರೇಲ್‌- ಪ್ಯಾಲೆಸ್ತೀನ್‌ ನಡುವೆ ಸಣ್ಣ ಹಾಗೂ ಅಗಾಧ ಪ್ರಮಾಣದ ಸಂಘರ್ಷಗಳು ನಡೆದು ಸಹಸ್ರಾರು ಮಂದಿ ಬಲಿಯಾಗಿದ್ದಾರೆ. ಈ ನಡುವೆ 1987ರಲ್ಲಿ ಪ್ಯಾಲೆಸ್ತೀನ್‌ ಮೌಲ್ವಿ ಶೇಖ್‌ ಅಹಮದ್‌ ಯಾಸಿನ್‌ (Palestinian cleric Sheikh Ahmed Yassin) ಅವರು ಹಮಾಸ್ ಉಗ್ರ ಸಂಘಟನೆ ಸ್ಥಾಪಿಸಿದ ಬಳಿಕ ಈ ಸಂಘರ್ಷ ಮತ್ತಷ್ಟು ವಿಕೋಪಕ್ಕೆ ಮುಟ್ಟಿದೆ. 2000ನೇ ಇಸ್ವಿಯಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಎರಡೂ ರಾಷ್ಟ್ರಗಳ ಪ್ರಧಾನಿಗಳ ನಡುವೆ ಸಂಧಾನ ಸಭೆ ಏರ್ಪಡಿಸಿದ್ದರು. ಅದು ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲಿಗೆ ಎರಡೂ ದೇಶಗಳ ಸಂಬಂಧವನ್ನು ಮತ್ತಷ್ಟು ವಿಷಮಗೊಳಿಸಿತು. ಹೀಗಾಗಿ ಎರಡೂ ದೇಶಗಳ ವಿವಾದ ಕಗ್ಗಂಟಾಗಿ ಮುಂದುವರಿದಿದೆ.

ಇಸ್ರೇಲ್ ಮೇಲಿನ ದಾಳಿಯ ವಿಡಿಯೋ ಬರುತ್ತಿದ್ದಂತೆ 'ಅಲ್ಲಾಹ್‌' ಗೆ ಇದ್ದಲ್ಲಿಂದಲೇ ಸಜ್ದಾ ಮಾಡಿದ ಹಮಾಸ್‌ ಮುಖ್ಯಸ್ಥ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?