ಗಾಜಾ ಪಟ್ಟಿಯನ್ನ ಟೆಂಟ್ ಸಿಟಿ ಮಾಡ್ತೇವೆ ಎಂದ ಇಸ್ರೇಲ್‌: ಬಾಹ್ಯ ಸಂಪರ್ಕ ಕಳಕೊಂಡ ಹಮಾಸ್‌

By Kannadaprabha NewsFirst Published Oct 12, 2023, 7:02 AM IST
Highlights

ತನ್ನ ಮೇಲೆ ದಾಳಿ ನಡೆಸಿದ ಗಾಜಾಪಟ್ಟಿಯ ಹಮಾಸ್‌ ಉಗ್ರರನ್ನು ಸರ್ವನಾಶ ಮಾಡುವುದಾಗಿ ಶಪಥ ಮಾಡಿರುವ ಇಸ್ರೇಲ್‌ ಗಾಜಾಪಟ್ಟಿಗೆ ಎಲ್ಲಾ ದಿಕ್ಕುಗಳಿಂದಲೂ ಸಂಪರ್ಕ ಕಡಿತಗೊಳಿಸಿದ್ದು, ಶೀಘ್ರದಲ್ಲೇ ಭೂದಾಳಿ ನಡೆಸುವುದಾಗಿ ಪ್ರಕಟಿಸಿದೆ. ಜೊತೆಗೆ ಗಾಜಾ ಪಟ್ಟಿ ಪ್ರದೇಶವನ್ನು ‘ಟೆಂಟ್‌ ಸಿಟಿ’ ಮಾಡುವುದಾಗಿ ಎಚ್ಚರಿಸಿದೆ.

ಜೆರುಸಲೇಂ: ತನ್ನ ಮೇಲೆ ದಾಳಿ ನಡೆಸಿದ ಗಾಜಾಪಟ್ಟಿಯ ಹಮಾಸ್‌ ಉಗ್ರರನ್ನು ಸರ್ವನಾಶ ಮಾಡುವುದಾಗಿ ಶಪಥ ಮಾಡಿರುವ ಇಸ್ರೇಲ್‌, ಬುಧವಾರ ಕ್ಷಿಪಣಿಗಳ ಮಳೆಯನ್ನೇ ಸುರಿಸಿದೆ. ಗಾಜಾಪಟ್ಟಿಗೆ ಎಲ್ಲಾ ದಿಕ್ಕುಗಳಿಂದಲೂ ಸಂಪರ್ಕ ಕಡಿತಗೊಳಿಸಿದ್ದು, ಶೀಘ್ರದಲ್ಲೇ ಭೂದಾಳಿ ನಡೆಸುವುದಾಗಿ ಪ್ರಕಟಿಸಿದೆ. ಜೊತೆಗೆ ಗಾಜಾ ಪಟ್ಟಿ ಪ್ರದೇಶವನ್ನು ‘ಟೆಂಟ್‌ ಸಿಟಿ’ ಮಾಡುವುದಾಗಿ ಎಚ್ಚರಿಸಿದೆ.

ಇಂಥ ಎಚ್ಚರಿಕೆ ನಡುವೆಯೇ ತನ್ನ ವೈಮಾನಿಕ ದಾಳಿ ಮೇಲೆ ನಿಗಾ ಇಡಲು ಉಗ್ರರು ಬಳಸುತ್ತಿದ್ದ ‘ಅಡ್ವಾನ್ಸ್‌ ಡಿಟೆಕ್ಷನ್‌ ಸಿಸ್ಟಂ’ ಅನ್ನು ಇಸ್ರೇಲಿ ಸೇನೆ ಸಂಪೂರ್ಣವಾಗಿ ನಿರ್ನಾಮ ಮಾಡಿದೆ. ಅಲ್ಲದೆ ಹಮಾಸ್‌ಗೆ ಹಣಕಾಸು ಪೂರೈಕೆ ಮಾಡುತ್ತಿದ್ದ 2 ಬ್ಯಾಂಕ್‌ ಶಾಖೆಗಳು, ಒಂದು ಸುರಂಗ, ಹಮಾಸ್‌ ಉಗ್ರರ ಕಾರ್ಯಾಚರಣೆಯ 2 ಕಮಾಂಡ್‌ ಕ್ಯಾಂಪ್‌ಗಳು, ಆಯುಧ ಸಂಗ್ರಹಣಾ ವ್ಯವಸ್ಥೆ, ತರಬೇತಿಗೆ ಬಳಕೆಯಾಗುತ್ತಿದ್ದ 2 ಪ್ರದೇಶಗಳು, ಶಸ್ತ್ರಾಸ್ತ್ರ ಉತ್ಪಾದನಾ ಘಟಕಗಳನ್ನು ನಾಶ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ನಡುವೆ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ಯುದ್ಧದಲ್ಲಿ (Israel Palestin War) ಮೃತಪಟ್ಟವರ ಸಂಖ್ಯೆ 2200 ಅನ್ನು ದಾಟಿದೆ. ಗಾಜಾ ನಗರ ಮಾತ್ರವಲ್ಲದೆ ಸುತ್ತಮುತ್ತಲ ಪ್ರದೇಶಗಳ ಮೇಲೂ ಇಸ್ರೇಲ್‌ ತೀವ್ರ ದಾಳಿ ನಡೆಸುತ್ತಿದ್ದು, ಕಟ್ಟಡಗಳು ನೆಲಸಮಗೊಂಡು ಅವುಗಳಡಿಯಲ್ಲಿ ಅಸಂಖ್ಯ ಜನರು ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಮತ್ತೊಂದೆಡೆ ಹಮಾಸ್‌ ಉಗ್ರರ ವಶದಲ್ಲಿರುವ 150 ಒತ್ತೆಯಾಳುಗಳ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಇನ್ನು ಯಾವುದೇ ಮಾಹಿತಿ ಸಿಗದ ಕಾರಣ ಕುಟುಂಬ ಸದಸ್ಯರು ಆತಂಕದಲ್ಲೇ ದಿನ ಕಳೆಯುವಂತಾಗಿದೆ.

ಬಾಹ್ಯ ಸಂಪರ್ಕ ಕಳಕೊಂಡ ಹಮಾಸ್‌:

40 ಕಿ.ಮೀ. ಉದ್ದ ಹಾಗೂ 10 ಕಿ.ಮೀ. ಅಗಲದ, 23 ಲಕ್ಷ ಜನಸಂಖ್ಯೆಯ ಗಾಜಾಪಟ್ಟಿಯ ಒಂದು ದಿಕ್ಕಿನಲ್ಲಿ ಮೆಡಿಟರೇನಿಯನ್‌ ಸಮುದ್ರ (Mediterranean sea) ಹಾಗೂ ಇನ್ನುಳಿದ ಮೂರು ದಿಕ್ಕಿನಲ್ಲಿ ಇಸ್ರೇಲ್‌ ಇದೆ. ಒಂದು ತುದಿಯಲ್ಲಿ ಈಜಿಪ್ಟ್‌ ಜೊತೆಗೆ ಸಣ್ಣ ಗಡಿ ಇದೆ. ಪ್ಯಾಲೆಸ್ತೀನ್‌ನ ಆಡಳಿತದಲ್ಲಿದ್ದ ಗಾಜಾಪಟ್ಟಿಯನ್ನು 2007ರಲ್ಲಿ ಹಮಾಸ್‌ ಉಗ್ರರು ವಶಪಡಿಸಿಕೊಂಡ ಮೇಲೆ ಈಜಿಪ್ಟ್‌ ಕೂಡ ಆ ಗಡಿಯನ್ನು ಮುಚ್ಚಿದೆ. ಆದರೆ ಇಂಧನ, ಔಷಧ ಹಾಗೂ ತುರ್ತು ಅಗತ್ಯಗಳಿಗಾಗಿ ಆ ಗಡಿ ಸೀಮಿತ ಪ್ರಮಾಣದಲ್ಲಿ ಈಗಲೂ ಬಳಕೆಯಾಗುತ್ತಿತ್ತು. ಅದರ ಮೇಲೀಗ ಇಸ್ರೇಲ್‌ ಕ್ಷಿಪಣಿ ದಾಳಿ ನಡೆಸಿ ಬಂದ್‌ ಮಾಡಿದೆ. ಹೀಗಾಗಿ ಗಾಜಾಪಟ್ಟಿ ಬಾಹ್ಯ ಜಗತ್ತಿನಿಂದ ಸಂಪೂರ್ಣ ಸಂಪರ್ಕ ಕಳೆದುಕೊಂಡಿದೆ.

ದೇಶ ಮೊದಲು.. ಮಗನನ್ನೂ ಸಮರ ಭೂಮಿಗೆ ಕಳುಹಿಸಿದ್ರಾ ಇಸ್ರೇಲ್ ಪ್ರಧಾನಿ?

ವಿದ್ಯುತ್‌, ಇಂಧನ, ಔಷಧ ಇಲ್ಲ:

ಗಾಜಾಪಟ್ಟಿಯಲ್ಲಿ ವಿದ್ಯುತ್‌ ಪೂರೈಕೆಗೆ ಸಂಪೂರ್ಣವಾಗಿ ಜನರೇಟರ್‌ಗಳನ್ನೇ ಅವಲಂಬಿಸಲಾಗಿದೆ. ಇಂಧನ ಪೂರೈಕೆ ಸ್ಥಗಿತಗೊಂಡಿರುವುದರಿಂದ ಅವು ಬಂದ್‌ ಆಗಿವೆ. ಹೀಗಾಗಿ ಇಡೀ ಗಾಜಾಪಟ್ಟಿಯೀಗ (Gaza Strip) ಕತ್ತಲಲ್ಲಿ ಸಿಲುಕಿದೆ. ಹೊರಗಿನಿಂದ ಔಷಧಗಳೂ ಪೂರೈಕೆಯಾಗುವುದು ನಿಂತಿದೆ. ಹೀಗಾಗಿ ಯುದ್ಧದಿಂದಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ಜನರಿಗೆ ಚಿಕಿತ್ಸೆ ನೀಡಲು ಔಷಧಗಳು ಇಲ್ಲದಂತಾಗಿದೆ. ಆಸ್ಪತ್ರೆಗಳು ಕೂಡ ಕತ್ತಲಿನಲ್ಲಿ ಮುಳುಗಿವೆ.

ಇಸ್ಲಾಮಿಕ್‌ ವಿವಿ ಮೇಲೆ ದಾಳಿ:

ಇಸ್ರೇಲ್‌ನ ಕ್ಷಿಪಣಿಗಳು ಗಾಜಾಪಟ್ಟಿಯಲ್ಲಿರುವ ಇಸ್ಲಾಮಿಕ್‌ ವಿವಿ ಮೇಲೆ ದಾಳಿ ನಡೆಸಿ ನೆಲಸಮಗೊಳಿಸಿವೆ. ಈ ವಿಶ್ವವಿದ್ಯಾಲಯವು ಹಮಾಸ್‌ ಉಗ್ರರಿಗೆ (Hamas Terrorist) ತರಬೇತಿ ಕ್ಯಾಂಪ್‌ ರೀತಿ ಬಳಕೆಯಾಗುತ್ತಿತ್ತು. ಜೊತೆಗೆ ಅಲ್ಲಿ ಶಸ್ತ್ರಾಸ್ತ್ರಗಳನ್ನು ಕೂಡ ತಯಾರಿಸಲಾಗುತ್ತಿತ್ತು. ಭಯೋತ್ಪಾದನೆಗೆ ಹಣ ಸಂಗ್ರಹಿಸಲು ಅಲ್ಲಿ ಹಮಾಸ್‌ ಉಗ್ರರು ವಿಚಾರ ಸಂಕಿರಣಗಳನ್ನು ನಡೆಸುತ್ತಿದ್ದರು. ಅದನ್ನು ನಾಶಪಡಿಸುವ ಮೂಲಕ ಹಮಾಸ್‌ಗೆ ಇಸ್ರೇಲ್‌ ದೊಡ್ಡ ಆಘಾತ ನೀಡಿದೆ.

ತಾಯ್ನಾಡಿಗೆ ಸಂಕಷ್ಟ ಕಾಲ: ತವರಿಗೆ ಮರಳಿದ ಸಾವಿರಾರು ಇಸ್ರೇಲಿಗರು

click me!