ಏಕಾಏಕಿ ಸಾವಿರಾರು ರಾಕೆಟ್ ದಾಳಿ ನಡೆಸಿದ್ದೂ ಅಲ್ಲದೆ ದೇಶದೊಳಗೆ ನುಗ್ಗಿ 700ಕ್ಕೂ ಹೆಚ್ಚು ಜನರನ್ನು ಹತ್ಯೆಗೈದ, 150ಕ್ಕೂ ಹೆಚ್ಚು ಜನರನ್ನು ಒತ್ತೆ ಇಟ್ಟುಕೊಂಡಿರುವ ಹಮಾಸ್ ಉಗ್ರ ಸಂಘಟನೆಯನ್ನು ಈ ಬಾರಿ ಸಂಪೂರ್ಣ ಸರ್ವನಾಶ ಮಾಡಲು ಇಸ್ರೇಲ್ ಸರ್ಕಾರ ಮುಂದಾಗಿದೆ.
ಜೆರುಸಲೇಂ: ಏಕಾಏಕಿ ಸಾವಿರಾರು ರಾಕೆಟ್ ದಾಳಿ ನಡೆಸಿದ್ದೂ ಅಲ್ಲದೆ ದೇಶದೊಳಗೆ ನುಗ್ಗಿ 700ಕ್ಕೂ ಹೆಚ್ಚು ಜನರನ್ನು ಹತ್ಯೆಗೈದ, 150ಕ್ಕೂ ಹೆಚ್ಚು ಜನರನ್ನು ಒತ್ತೆ ಇಟ್ಟುಕೊಂಡಿರುವ ಹಮಾಸ್ ಉಗ್ರ ಸಂಘಟನೆಯನ್ನು ಈ ಬಾರಿ ಸಂಪೂರ್ಣ ಸರ್ವನಾಶ ಮಾಡಲು ಇಸ್ರೇಲ್ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಭಾನುವಾರ ರಾತ್ರಿಯಿಂದೀಚೆಗೆ ಹಮಾಸ್ ಸರ್ಕಾರ ಆಡಳಿತ ನಡೆಸುತ್ತಿರುವ ಗಾಜಾಪಟ್ಟಿ ( Gaza Strip)ಪ್ರದೇಶದ 1000ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿರುವ ಇಸ್ರೇಲಿ ಪಡೆಗಳು, ಮತ್ತೊಂದೆಡೆ ಗಾಜಾಪ್ರದೇಶಕ್ಕೆ ಇಂಧನ, ವಿದ್ಯುತ್, ಆಹಾರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಳಿಸಿ ಪೂರ್ಣ ದಿಗ್ಭಂಧನಕ್ಕೆ ಆದೇಶಿಸಿದೆ. ಇದು ಹಂತಹಂತವಾಗಿ ಗಾಜಾಪಟ್ಟಿ ಪ್ರದೇಶದಲ್ಲಿನ ಹಮಾಸ್ ಉಗ್ರರ ನೆಲೆಯನ್ನು ಪೂರ್ಣ ನಾಶ ಮಾಡುವುದರ ಜೊತೆಗೆ, ಆ ಪ್ರದೇಶವನ್ನು ಸಂಪೂರ್ಣ ತನ್ನ ವಶಕ್ಕೆ ತೆಗೆದುಕೊಳ್ಳುವ ಯೋಜನೆಯ ಭಾಗವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಹಮಾಸ್ ವಿರುದ್ಧ ಯುದ್ಧದಲ್ಲಿ ಭಾಗಿಯಾದ ಇಸ್ರೇಲ್ ಮಾಜಿ ಪ್ರಧಾನಿ: ಸೈನಿಕರ ಜತೆ ಯುದ್ಧಭೂಮಿಗಿಳಿದ ರಾಜಕಾರಣಿ!
ದಿಗ್ಭಂಧನ:
ಗಾಜಾಗೆ ದಿಗ್ಭಂಧನ ವಿಧಿಸುವ ಕುರಿತು ಹೇಳಿಕೆ ನೀಡಿರುವ ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ‘ಗಾಜಾಗೆ ಸಂಪೂರ್ಣ ದಿಗ್ಭಂಧನಕ್ಕೆ ಆದೇಶಿಸಲಾಗಿದೆ. ಅಲ್ಲಿಗೆ ಇಂಧನ, ವಿದ್ಯುತ್, ಆಹಾರ ವಸ್ತುಗಳ ಪೂರೈಕೆ ಸಂಪೂರ್ಣ ಸ್ಥಗಿತಗೊಳಿಸಲಾಗುವುದು. ನಾವು ಬರ್ಬರ ವ್ಯಕ್ತಿಗಳೊಂದಿಗೆ ಸೆಣಸುತ್ತಿದ್ದೇವೆ ಮತ್ತು ಅವರಿಗೆ ತಕ್ಕನಾದ ಪ್ರತ್ಯುತ್ತರ ನೀಡಲಿದ್ದೇವೆ’ ಎಂದು ಘೋಷಿಸಿದ್ದಾರೆ. ಗಾಜಾಪಟ್ಟಿಯಲ್ಲಿ ನೆಲೆಸಿರುವ 2.30 ಲಕ್ಷ ಪ್ಯಾಲೇಸ್ತೀನಿಯರು ತಮ್ಮ ಬಹುತೇಕ ಅಗತ್ಯಗಳಿಗೆ ಇಸ್ರೇಲ್ ಅನ್ನೇ ಅವಲಂಬಿಸಿದ್ದು, ಇಸ್ರೇಲ್ ದಿಗ್ಭಂಧನ ಆದೇಶದಿಂದ ಅವರೆಲ್ಲಾ ಭಾರೀ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವುದು ಖಚಿತವಾಗಿದೆ.
ನಮ್ಮ ಯುದ್ಧ ನಾವೇ ಮಾಡುತ್ತೇವೆ: ಸುತ್ತಲೂ ಶತ್ರುಗಳನ್ನೇ ಹೊಂದಿರುವ ಪುಟ್ಟದೇಶ ಇಸ್ರೇಲ್‌ನ ಆತ್ಮವಿಶ್ವಾಸದ ನುಡಿ
ಜನರ ಪಲಾಯನ:
ಹಮಾಸ್ ದಾಳಿಗೆ (Hamas Attack) ಇಸ್ರೇಲ್ (israel)ಪ್ರತಿದಾಳಿ ಆರಂಭಿಸಿದ ಬೆನ್ನಲ್ಲೇ, ಗಾಜಾಪಟ್ಟಿ ಪ್ರದೇಶದ 1.50 ಲಕ್ಷಕ್ಕೂ ಹೆಚ್ಚು ಜನ ತೀರ ಪ್ರದೇಶಗಳಿಗೆ ಪಲಾಯನ ಮಾಡಿ ಜೀವ ಉಳಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಹೀಗಾಗಿ ಹಲವು ನಗರಗಳು ಕಳೆದ 3 ದಿನಗಳಿಂದ ಸಂಪೂರ್ಣ ನಿರ್ಜನವಾಗಿವೆ.
ಭಾರೀ ದಾಳಿ:
ಈ ನಡುವೆ ಭಾನುವಾರ ರಾತ್ರಿಯಿಂದೀಚೆಗೆ ಇಸ್ರೇಲಿ ಪಡೆಗಳು ಗಾಜಾದ 1000ಕ್ಕೂ ಹೆಚ್ಚು ಪ್ರದೇಶಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ರಾತ್ರಿ ವೇಳೆ ಹಲವು ನಗರಗಳು ಬೆಂಕಿ ಉಂಡೆಯಂತೆ ಗೋಚರಿಸುತ್ತಿದ್ದವು. ಇವೆಲ್ಲಾ ಬಹುತೇಕ ಹಮಾಸ್ ಉಗ್ರರ ಮತ್ತು ಅವರ ಬೆಂಬಲಿಗರ ನೆಲೆ ಎನ್ನಲಾಗಿದೆ.
5 ನಗರ ತೆರವು:
ತನ್ನೊಂದಿಗೆ ಗಡಿ ಹಂಚಿಕೊಂಡಿರುವ ಗಾಜಾ ಪ್ರದೇಶ 5 ನಗರಗಳನ್ನು ತೆರವುಗೊಳಿಸುವಂತೆ ಇಸ್ರೇಲಿ ಸೇನೆ, ಆ ಪ್ರದೇಶದ ಜನರಿಗೆ ಸೂಚಿಸಿದೆ. ಜನರು ಅಲ್ಲಿಂದ ತೆರವಾದ ಬಳಿಕ ಇಸ್ರೇಲಿ ಸೇನಾಪಡೆಗಳು ಗಾಜಾಪಟ್ಟಿ ಪ್ರವೇಶ ಮಾಡಿ ಅದನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೆಂಗಸರು ಮಕ್ಕಳ ಮೇಲೆ ಹಮಾಸ್ ಉಗ್ರರ ರಕ್ಕಸ ಕೃತ್ಯಗಳು: ಬಾಲಕಿಯ ಕೊಂದು ಸ್ವರ್ಗ ಸೇರಿತು ಎಂದರು
ಗಾಜಾಪಟ್ಟಿ ವಶ ಏಕೆ ಮಹತ್ವ?
ವೆಸ್ಟ್‌ಬ್ಯಾಂಕ್ ಮತ್ತು ಗಾಜಾಪಟ್ಟಿ ಎರಡೂ ಸೇರಿ ಪ್ಯಾಲೆಸ್ತೀನ್ ದೇಶ ಎನ್ನಲಾಗುತ್ತದೆ. ಆದರೆ ಇವರೆಡೂ ಪ್ರತ್ಯೇಕ ಭಾಗಗಳು. ಪಾಲೆಸ್ತೀನ್‌ನಲ್ಲಿ ಪ್ರತ್ಯೇಕ ಸರ್ಕಾರವಿದೆ. ಆದರೆ ಅಲ್ಲಿಂದ 100 ಕಿ.ಮೀ ದೂರದ ಗಾಜಾಪಟ್ಟಿ ಪ್ರದೇಶ 365 ಚದರ ಕಿ.ಮೀ ವ್ಯಾಪ್ತಿಯ (41 ಕಿ.ಮೀ ಉದ್ದ- 6ರಿಂದ 12 ಕಿ.ಮೀ ಅಗಲದ ಪ್ರದೇಶ) ಸಣ್ಣ ಪ್ರದೇಶದಲ್ಲಿ 2.30 ಲಕ್ಷ ಜನರು ವಾಸಿಸುತ್ತಾರೆ. ಇದು ವಿಶ್ವದಲ್ಲೇ 3ನೇ ಅತಿದೊಡ್ಡ ಜನದಟ್ಟಣೆ ಪ್ರದೇಶ. 2007ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಮಾಸ್ ಉಗ್ರರು ಅಧಿಕಾರ ಪಡೆದುಕೊಂಡಿದ್ದಾರೆ. ದೇಶದ ಶೇ.70ರಷ್ಟು ಜನರು ಕಡುಬಡವರು. ಈ ಪ್ರದೇಶ ಇಸ್ರೇಲ್‌ನೊಂದಿಗೆ 51 ಕಿ.ಮೀ ಮತ್ತು ಈಜಿಪ್ಟ್‌ನೊಂದಿಗೆ 14 ಕಿ.ಮೀ ಗಡಿ ಹಂಚಿಕೊಂಡಿದೆ. 2007ರಲ್ಲೇ ಗಾಜಾಗೆ ಇಸ್ರೇಲ್ ಮತ್ತು ಈಜಿಪ್ಟ್ ಹಲವು ನಿರ್ಬಂಧ ಹೇರಿವೆ. ಆದರೆ ಮಾನವೀಯ ನೆಲೆಯಲ್ಲಿ ಅಲ್ಲಿಗೆ ಇಂಧನ, ವಿದ್ಯುತ್ ಮತ್ತು ಆಹಾರ ವಸ್ತುಗಳನ್ನು ಇಸ್ರೇಲ್ ಪೂರೈಸುತ್ತಿತ್ತು. ಇದು ಹಮಾಸ್ ಉಗ್ರರ ಪ್ರಮುಖ ನೆಲೆ. ಇಲ್ಲಿಂದ ಹಮಾಸ್ ಉಗ್ರರು ನಾಮಾವಶೇ಼ಷವಾದರೆ ದಶಕಗಳ ಸಂಘರ್ಷ ಅಂತ್ಯವಾದಂತೆ ಎಂಬುದು ಇಸ್ರೇಲ್ ಲೆಕ್ಕಾಚಾರ. ಹೀಗಾಗಿಯೇ ಈ ಬಾರಿ ಅದು ಅಂತಿಮ ಯುದ್ಧಕ್ಕೆ ಸಜ್ಜಾಗಿದೆ.