
ಟೆಲ್ ಅವಿವ್: ಜಗತ್ತಿನ ಅತ್ಯಂತ ಕ್ರೂರ ಭಯೋತ್ಪಾದಕ ಸಂಘಟನೆಯೆಂದು ಹೆಸರಾಗಿದ್ದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ತಾವು ಅಪಹರಿಸಿ ಲೈಂಗಿಕ ಗುಲಾಮರನ್ನಾಗಿ ಬಳಸುತ್ತಿದ್ದ ಯೆಜಿದಿ ಜನಾಂಗದ ಮಹಿಳೆಯರಿಗೆ ಮಕ್ಕಳ ಮಾಂಸವನ್ನು ತಿನ್ನಿಸುತ್ತಿದ್ದರು ಎಂಬ ಭಯಾನಕ ಸಂಗತಿ ಬೆಳಕಿಗೆ ಬಂದಿದೆ. ಇಸ್ರೇಲ್ ಸೇನಾಪಡೆ ಇತ್ತೀಚೆಗೆ ಗಾಜಾಪಟ್ಟಿಯಲ್ಲಿ ಐಸಿಸ್ ಉಗ್ರರ ಪಾಳೆಯದಿಂದ ರಕ್ಷಿಸಿದ ಯೆಜಿದಿ ಮಹಿಳೆ ಫೌಜಿಯಾ ಅಮಿನ್ ಸಿದೋ ಈ ಮಾಹಿತಿ ನೀಡಿದ್ದಾಳೆ.
ಯೆಜಿದಿ ಎಂಬುದು ಇರಾಕ್‌ನಲ್ಲಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವಾಗಿದ್ದು, ಅಲ್ಲಿನ ನೂರಾರು ಮಹಿಳೆಯರನ್ನು ಐಸಿಸ್ ಉಗ್ರರು 2014ರಲ್ಲಿ ಅಪಹರಿಸಿ ಲೈಂಗಿಕ ಗುಲಾಮರನ್ನಾಗಿ ಇರಿಸಿಕೊಂಡಿದ್ದರು. ಅವರ ಪೈಕಿ ಒಬ್ಬ ಮಹಿಳೆಯನ್ನು ಇತ್ತೀಚೆಗೆ ಇಸ್ರೇಲ್ ಸೇನಾಪಡೆ ಗಾಜಾದಲ್ಲಿ ರಕ್ಷಿಸಿ, ಇರಾಕ್‌ಗೆ ಕಳುಹಿಸಿದೆ.
ಫೌಜಿಯಾ ಸಿದೋ ಹೇಳಿದ ಕತೆ:
‘ನಾನು 9 ವರ್ಷದವಳಾಗಿದ್ದಾಗ ಐಸಿಸ್ ಉಗ್ರರು ಅಪಹರಿಸಿದರು. ನನ್ನ ಜೊತೆಗೆ ಇನ್ನೂ ನೂರಾರು ಯೆಜಿದಿ ಜನಾಂಗದ ಜನರಿದ್ದರು. ನಮ್ಮನ್ನು ಅಪರಿಚಿತ ಸ್ಥಳಕ್ಕೆ ನಡೆಸಿಕೊಂಡು ಹೋಗಿ, 3 ದಿನ ಉಪವಾಸ ಇರಿಸಿದರು. ನಂತರ ನಮಗೆ ತಿನ್ನಲು ಅನ್ನ ಮತ್ತು ಮಾಂಸ ನೀಡಿದರು. ಮಾಂಸದ ರುಚಿ ವಿಚಿತ್ರವಾಗಿತ್ತು. ತಿಂದಾದ ಮೇಲೆ ನಮಗೆ ಅದು ಹತ್ಯೆಗೀಡಾಗಿದ್ದ ಯೆಜಿದಿ ಜನಾಂಗದ ಮಕ್ಕಳ ಮಾಂಸವೆಂದು ತಿಳಿಯಿತು. ಮಾಂಸಕ್ಕಾಗಿ ಕೊಂದ ಮಕ್ಕಳ ಫೋಟೋವನ್ನು ಕೂಡ ನಮಗೆ ತೋರಿಸಿ ‘ಇದೇ ಮಕ್ಕಳ ಮಾಂಸ ನೀವೀಗ ತಿಂದಿರುವುದು’ ಎಂದು ಹೇಳಿದರು’ ಎಂದು ಸಿದೋ ಹೇಳಿದ್ದಾಳೆ.
‘ಒಂದು ಫೋಟೋದಲ್ಲಿ ನಮ್ಮ ಜೊತೆಗೆ ಮಾಂಸ ಸೇವಿಸಿದ ಮಹಿಳೆಯೊಬ್ಬಳ ಮಗುವೇ ಇತ್ತು! ಮಾಂಸ ತಿಂದ ಅನೇಕರಿಗೆ ಹೊಟ್ಟೆನೋವು ಬಂದಿತ್ತು. ಒಬ್ಬ ಮಹಿಳೆ ತಾನು ಮಕ್ಕಳ ಮಾಂಸ ತಿಂದೆನೆಂದು ಹೃದಯಾಘಾತಕ್ಕೊಳಗಾಗಿ ಸತ್ತುಹೋದಳು’ ಎಂದೂ ಸಿದೋ ತಿಳಿಸಿದ್ದಾಳೆ.
‘ನಂತರ ನನ್ನನ್ನು ಹಾಗೂ ಇನ್ನೂ ಸುಮಾರು 200 ಯೆಜಿದಿ ಮಹಿಳೆಯರು ಮತ್ತು ಮಕ್ಕಳನ್ನು ನೆಲಮಾಳಿಗೆಯ ಜೈಲಿನಲ್ಲಿ 9 ತಿಂಗಳು ಬಂಧಿಸಿಟ್ಟಿದ್ದರು. ಬಳಿಕ ನಮ್ಮನ್ನು ಬೇರೆ ಬೇರೆ ಜಿಹಾದಿ ಹೋರಾಟಗಾರರಿಗೆ ಮಾರಾಟ ಮಾಡಿದರು. ನನ್ನನ್ನು ಅಬು ಅಮರ್ ಅಲ್ ಮಕ್ದಿಸಿ ಎಂಬುವನಿಗೆ ಮಾರಿದರು. ಅವನಿಂದ ನನಗೆ ಇಬ್ಬರು ಮಕ್ಕಳು ಜನಿಸಿದರು’ ಎಂದು ಸಿದೋ ಹೇಳಿದ್ದಾಳೆ. ಸಿದೋಳ ಮಕ್ಕಳು ಈಗಲೂ ಗಾಜಾದಲ್ಲಿ ತಂದೆಯ ಜೊತೆಗಿದ್ದಾರೆ. ಸಿದೋ ಇರಾಕ್ ಸೇರಿಕೊಂಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ