ಇರಾನ್‌ ಮೇಲೆ ಭಾರೀ ದಾಳಿಗೆ ಇಸ್ರೇಲ್‌ ಸಿದ್ಧತೆ- ಸೋರಿಕೆಯಾದ ಅಮೆರಿಕದ 2 ರಹಸ್ಯ ದಾಖಲೆಗಳಿಂದ ಪತ್ತೆ

By Mahmad Rafik  |  First Published Oct 21, 2024, 8:15 AM IST

ಇಸ್ರೇಲ್ ಇರಾನ್ ಮೇಲೆ ಪ್ರತೀಕಾರದ ದಾಳಿಗೆ ಸಜ್ಜಾಗಿದೆ ಎಂದು ಅಮೆರಿಕದ ರಹಸ್ಯ ದಾಖಲೆಗಳು ಬಹಿರಂಗಪಡಿಸಿವೆ. ಗಾಜಾ ಮತ್ತು ಲೆಬನಾನ್ ಮೇಲಿನ ಇಸ್ರೇಲ್ ದಾಳಿಯಲ್ಲಿ ಹಲವು ಪ್ಯಾಲೆಸ್ತೀನರು ಸಾವನ್ನಪ್ಪಿದ್ದಾರೆ.


ನವದೆಹಲಿ: ಹಮಾಸ್‌ ಮತ್ತು ಹಿಜ್ಬುಲ್ಲಾ ಉಗ್ರರ ವಿಷಯದಲ್ಲಿ ತೀವ್ರ ಸಂಘರ್ಷಕ್ಕಿಳಿದಿರುವ ಇಸ್ರೇಲ್‌ ಮತ್ತು ಇರಾನ್‌ ನಡುವೆ ಯುದ್ಧೋನ್ಮಾದ ಇನ್ನಷ್ಟು ತೀವ್ರವಾಗುವ ಲಕ್ಷಣಗಳು ಗೋಚರಿಸಿವೆ. ಇರಾನ್‌ ಮೇಲೆ ಇಸ್ರೇಲ್‌ ಪ್ರತೀಕಾರದ ದಾಳಿ ನಡೆಸಲು ಸರ್ವಸಿದ್ಧತೆ ಮಾಡಿಕೊಂಡಿದೆ ಎಂದು ಹೇಳುವ ಅಮೆರಿಕದ 2 ರಹಸ್ಯ ದಾಖಲೆಗಳು ಸೋರಿಕೆಯಾಗಿವೆ. ಅಮೆರಿಕದ ‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ಇದನ್ನು ವರದಿ ಮಾಡಿದೆ.

ಟೆಲಿಗ್ರಾಂ ಚಾನಲ್‌ನಲ್ಲಿ ಸೋರಿಕೆಯಾಗಿರುವ ಅಮೆರಿಕದ ಗುಪ್ತಚರ ದಳಗಳು ಸಿದ್ಧಪಡಿಸಿರುವ ಈ ದಾಖಲೆಗಳ ಪ್ರಕಾರ ಇರಾನ್‌ ಮೇಲೆ ದಾಳಿ ನಡೆಸಲು ಇಸ್ರೇಲ್‌ ಮಿಲಿಟರಿ ತಾಲೀಮು ನಡೆಸುತ್ತಿದೆ. ಮತ್ತು ದಾಳಿಗೆ ಅಗತ್ಯವಿರುವ ಸ್ಫೋಟಕ ಇತ್ಯಾದಿ ಸರಕುಗಳನ್ನು ವ್ಯೂಹಾತ್ಮಕ ಸ್ಥಳಗಳಿಗೆ ರವಾನೆ ಮಾಡುತ್ತಿದೆ.

Latest Videos

undefined

ಅ.15 ಮತ್ತು ಅ.16ನೇ ತಾರೀಖಿನಂದು ಸಿದ್ಧಪಡಿಸಿರುವ ದಾಖಲೆಗಳು ಇವಾಗಿವೆ. ಇವು ಅತ್ಯಂತ ರಹಸ್ಯ ದಾಖಲೆಗಳಾಗಿದ್ದು, ಹೇಗೆ ಸೋರಿಕೆಯಾಗಿವೆ ಎಂಬ ಬಗ್ಗೆ ಅಮೆರಿಕದ ಎಫ್‌ಬಿಐ ತನಿಖೆ ಆರಂಭಿಸಿದೆ.

ಸೋರಿಕೆಯಾಗಿರುವ ಎರಡು ದಾಖಲೆಗಳ ಪೈಕಿ ಒಂದು ದಾಖಲೆಗೆ ‘ಇಸ್ರೇಲ್‌: ಇರಾನ್‌ ಮೇಲೆ ದಾಳಿ ನಡೆಸಲು ವಾಯುಪಡೆಯಿಂದ ಸಿದ್ಧತೆ ಮುಂದುವರಿಕೆ’ ಎಂಬ ಶೀರ್ಷಿಕೆ ನೀಡಲಾಗಿದೆ. ಇಸ್ರೇಲ್‌ ನಡೆಸುತ್ತಿರುವ ಸಮರ ತಾಲೀಮಿನ ಉಪಗ್ರಹ ಚಿತ್ರಗಳು ಈ ದಾಖಲೆಗಳಲ್ಲಿ ಅಡಕವಾಗಿವೆ.

87 ಪ್ಯಾಲೆಸ್ತೀನರ ಸಾವು

ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಹತ್ಯೆಗೆ ಹಿಜ್ಬುಲ್ಲಾ ಉಗ್ರರು ವಿಫಲ ಯತ್ನ ನಡೆಸಿದ ಬೆನ್ನಲ್ಲೇ ಇಸ್ರೇಲ್‌, ಗಾಜಾ ಪಟ್ಟಿ ಹಾಗೂ ಲೆಬನಾನ್‌ ಮೇಲೆ ವಾಯುದಾಳಿ ತೀವ್ರಗೊಳಿಸಿದೆ. ಇಸ್ರೇಲ್‌ ಶನಿವಾರ ತಡರಾತ್ರಿ ಹಾಗೂ ಭಾನುವಾರ ಉತ್ತರ ಗಾಜಾ ಮೇಲೆ ನಡೆಸಿದ ವಾಯುದಾಳಿಗೆ 87 ಪ್ಯಾಲೆಸ್ತೀನರು ಅಸುನೀಗಿದ್ದಾರೆ.

ಮನೆ ಮನೆ ಅಲೆಯುತ್ತಿದ್ದ ಸಿನ್ವರ್‌ನ ಹುಡುಕಿ ಹತ್ಯೆಗೈದ ಇಸ್ರೇಲ್‌- ಕೊನೇ ಕ್ಷಣ ಡ್ರೋನ್‌ ಕ್ಯಾಮೆರಾದಲ್ಲಿ ಸೆರೆ

ಲೆಬನಾನ್‌ ರಾಜಧಾನಿ ದಕ್ಷಿಣ ಬೈರೂತ್ ಮೇಲೂ ಭಾರಿ ವಾಯುದಾಳಿಯನ್ನು ಶನಿವಾರ ತಡರಾತ್ರಿ ಇಸ್ರೇಲ್‌ ನಡೆಸಿದೆ. ಈ ವೇಳೆ 3 ಲೆಬನಾನ್‌ ಯೋಧರು ಸಾವನ್ನಪ್ಪಿದ್ದಾರೆ. ಇನ್ನು ಗಾಜಾ ಮೇಲಿನ ದಾಳಿಯ ಮಾಹಿತಿ ನೀಡಿದ ಗಾಜಾ ಆರೋಗ್ಯ ಸಚಿವಾಲಯ, ‘ಇಸ್ರೇಲ್‌ ನಡೆಸಿದ ದಾಳಿಗೆ 87 ಮಂದಿ ಪ್ಯಾಲೆಸ್ತೀನೀಯರು ಮೃತಪಟ್ಟಿದ್ದಾರೆ. ಜತೆಗೆ ಕಳೆದ 2 ದಿನಗಳಿಂದ ಬೀಟ್‌ ಲಾಹಿಯಾದ ಮೇಲೆ ನಡೆಸುತ್ತಿರುವ ದಾಳಿಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ’ ಎಂದಿದೆ. 

ಇಸ್ರೇಲ್‌ ಶನಿವಾರ ಉತ್ತರ ಗಾಜಾದ ಆಸ್ಪತ್ರೆಗಳು ಸೇರಿ ಕೆಲವು ಪ್ರದೇಶಗಳ ಮೇಲೆ ದಾಳಿ ನಡೆಸಿದ್ದು, 50 ಜನ ಅಸುನೀಗಿದ್ದರು.

ಸಿನ್ವರ್ ಹತ್ಯೆಗೆ ಪ್ರತೀಕಾರಕ್ಕೆ ಇಳಿದ ಹಮಾಸ್; ಇಸ್ರೇಲ್ ಪ್ರಧಾನಿ ನಿವಾಸದ ಮೇಲೆ ಡ್ರೋನ್ ದಾಳಿ ಯತ್ನ

click me!