
ಟೆಹ್ರಾನ್: ಗುರುವಾರ ತಡರಾತ್ರಿಯಿಂದಲೇ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಭಾರಿ ಗುಂಡಿನ ಮೊರೆತ ಕೇಳಿ ಬಂದ ಬಗ್ಗೆ ವರದಿಯಾಗಿದೆ. ಟೆಹ್ರಾನ್ ನಿವಾಸಿಗಳು ಜೋರಾಗಿ ಸ್ಫೋಟಗಳ ಸದ್ದು ಕೇಳಿದ್ದಾಗಿ ವರದಿ ಮಾಡಿದ್ದಾರೆ. ಇರಾನ್‌ನ ಸರ್ಕಾರಿ ಸುದ್ದಿಸಂಸ್ಥೆಗಳು ಈ ದಾಳಿಗಳನ್ನು ದೃಢಪಡಿಸಿದೆ. ಇರಾನ್‌ನ ಪರಮಾಣು ಮತ್ತು ಮಿಲಿಟರಿ ಕಾರ್ಯಕ್ರಮಗಳನ್ನು ಗುರಿಯಾಗಿಸಿ ಈ ಪ್ರಮುಖ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಈ ಕಾರ್ಯಾಚರಣೆಯನ್ನು ಅಗತ್ಯವಿರುವವರೆಗೆ ಮುಂದುವರೆಸಲಾಗುವುದು ಎಂದು ಅವರು ಹೇಳಿದ್ದಾರೆ. ಇಸ್ರೇಲ್ ದಾಳಿಗೆ ಇರಾನ್ ನ IRGC ಪಡೆ ಮುಖ್ಯಸ್ಥ ಹೊಸೈನ್ ಸಲಾಮಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ನಾವು ಇರಾನ್‌ನ ಪರಮಾಣು ಪುಷ್ಟಿಕರಣ ಕಾರ್ಯಕ್ರಮ, ಇರಾನ್ ಪರಮಾಣು ಶಸ್ತ್ರಾಸ್ತ್ರೀಕರಣ ಕಾರ್ಯಕ್ರಮ, ಇರಾನ್ ಪ್ರಮುಖ ಪುಷ್ಟಿಕರಣ ಸೌಲಭ್ಯಗಳು, ಪ್ರಮುಖ ಪರಮಾಣು ವಿಜ್ಞಾನಿಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳ ಹೃದಯಭಾಗದ ಮೇಲೆ ದಾಳಿ ಮಾಡಿದ್ದೇವೆ. ಕೆಲವು ಕ್ಷಣಗಳ ಹಿಂದೆ, ಇಸ್ರೇಲ್ ಆಪರೇಷನ್ ರೈಸಿಂಗ್ ಲಯನ್ ಅನ್ನು ಪ್ರಾರಂಭಿಸಿತು, ಇಸ್ರೇಲ್‌ನ ಉಳಿವಿಗೆ ಇರಾನ್ ಪರಮಾಣು ಕಾರ್ಯಕ್ರಮಗಳು ಬೆದರಿಕೆಯೊಡ್ಡುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಹಿಮ್ಮೆಟ್ಟಿಸುವ ಗುರಿಯಿಟ್ಟುಕೊಂಡ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಇಸ್ರೇಲ್‌ನ ಈ ದಾಳಿಗಳು ಇರಾನ್ ಪರಮಾಣು ಕಾರ್ಯಕ್ರಮ, ಕ್ಷಿಪಣಿ ವ್ಯವಸ್ಥೆಗಳು ಮತ್ತು ಮಿಲಿಟರಿ ಮೂಲಸೌಕರ್ಯಗಳ ಮೇಲೆ ಕೇಂದ್ರೀಕೃತವಾಗಿವೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಇಸ್ರೇಲ್‌ನ ಸೇನಾ ಮುಖ್ಯಸ್ಥರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಇಸ್ರೇಲ್ ದೇಶವು ತನ್ನ ಎಲ್ಲಾ ಗಡಿಗಳಲ್ಲಿ ಸಂಪೂರ್ಣವಾಗಿ ಯುದ್ಧ ಸಿದ್ದವಾಗಿದೆ ಎಂದು ಹೇಳಿದ್ದು, ತನ್ನ ಶತ್ರುಗಳಿಗೆ ಬಲವಾದ ಎಚ್ಚರಿಕೆಯನ್ನು ನೀಡಿದರು. ನಾವು ಎಲ್ಲಾ ಗಡಿಗಳಲ್ಲಿಯೂ ಸಿದ್ಧರಿದ್ದೇವೆ. ನಮಗೆ ಸವಾಲು ಹಾಕಲು ಪ್ರಯತ್ನಿಸುವ ಯಾರೇ ಆದರೂ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ನಾನು ಎಚ್ಚರಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್‌ನ ಈ ದಾಳಿಯ ನಂತರ ಇರಾನ್‌ನ ತಸ್ಮಿಮ್ ಸುದ್ದಿ ಸಂಸ್ಥೆ ಟೆಹ್ರಾನ್‌ನ ಪ್ರಮುಖ ವಿಮಾನ ನಿಲ್ದಾಣವಾದ ಇಮಾಮ್ ಬೊಮೇನಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ.
ಇರಾನ್ ಪರಮಾಣು ಕಾರ್ಯಕ್ರಮವು ತನ್ನ ದೇಶಕ್ಕೆ ನಿಜವಾದ ಬೆದರಿಕೆಯಾಗುತ್ತದೆ ಎಂದು ಕಂಡು ಬಂದರೆ, ಇರಾನ್ ಮೇಲೆ ದಾಳಿ ಮಾಡುವುದಾಗಿ ಇಸ್ರೇಲ್ ಬಹಳ ಹಿಂದಿನಿಂದಲೂ ಎಚ್ಚರಿಸುತ್ತಾ ಬಂದಿದೆ. ಎರಡೂ ದೇಶಗಳು ದಶಕಗಳ ಕಾಲದಿಂದಲೂ ಶತ್ರುಗಳಾಗಿವೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳಿಗೆ ಅಗತ್ಯವಿರುವ ಮಟ್ಟಕ್ಕೆ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುತ್ತಿದೆ ಎಂದು ಅಂತರರಾಷ್ಟ್ರೀಯ ತಜ್ಞರು ಹೇಳಿದ್ದರು, ಇದರ ಜೊತೆಗೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಆಡಳಿತವು ಇರಾನ್ ಜೊತೆ ತನ್ನ ಪರಮಾಣು ಚಟುವಟಿಕೆಯನ್ನು ಮಿತಿಗೊಳಿಸಲು ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ಇಸ್ರೇಲ್ ಈ ದಾಳಿ ನಡೆಸಿದೆ.
ಇರಾನ್ ಪರಮಾಣು ಚಟುವಟಿಕೆಗೆ ಸಂಬಂಧಿಸಿದಂತೆ ಅಮೆರಿಕದ ರಾಯಭಾರಿ ಸ್ಟೀವ್ ವಿಟ್ನಾನ್ ಈಗಾಗಲೇ ಇರಾನ್ ಅಧಿಕಾರಿಗಳೊಂದಿಗೆ ಐದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಈ ಇಸ್ರೇಲ್ ದಾಳಿಗೆ ಪ್ರತಿಯಾಗಿ ಅಮೆರಿಕ ಇರಾನ್‌ಗೆ ಸಹಾಯ ಮಾಡಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ಇದರಲ್ಲಿ ಅಮೆರಿಕ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇಸ್ರೇಲ್ ತನ್ನದೇ ಆದ ಮೇಲೆ ಕಾರ್ಯನಿರ್ವಹಿಸಿದೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ