
ಇಸ್ಲಾಮಾಬಾದ್ (ಏ.18): ಇರಾನ್ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ್ದೇವೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಾಕ್ಸಮರಕ್ಕೆ ಕಾರಣವಾಗಿವೆ. ಟ್ರಂಪ್ ಅವರ ಸರಣಿ ಪೋಸ್ಟ್‌ಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್, ಟ್ರಂಪ್ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಕಿಡಿಕಾರಿದೆ. ಅಲ್ಲದೆ, ಅಮೆರಿಕ ತನ್ನ ನೌಕಾ ದಿಗ್ಬಂಧನವನ್ನು ಮುಂದುವರಿಸಿದರೆ ಆಯಕಟ್ಟಿನ 'ಹಾರ್ಮುಜ್ ಜಲಸಂಧಿ'ಯನ್ನು (Strait of Hormuz) ಮತ್ತೆ ಮುಚ್ಚುವುದಾಗಿ ಎಚ್ಚರಿಕೆ ನೀಡಿದೆ.
ಶುಕ್ರವಾರ 'ಟ್ರೂತ್ ಸೋಶಿಯಲ್'ನಲ್ಲಿ ಸರಣಿ ಪೋಸ್ಟ್ ಮಾಡಿದ ಟ್ರಂಪ್, "ಇರಾನ್ ಇನ್ಮುಂದೆ ಎಂದಿಗೂ ಹಾರ್ಮುಜ್ ಜಲಸಂಧಿಯನ್ನು ಮುಚ್ಚದಿರಲು ಒಪ್ಪಿಕೊಂಡಿದೆ. ಇದು ಇನ್ನು ಮುಂದೆ ವಿಶ್ವದ ವಿರುದ್ಧ ಅಸ್ತ್ರವಾಗಿ ಜಲಸಂಧಿ ಬಳಕೆಯಾಗುವುದಿಲ್ಲ. ಜಗತ್ತಿಗೆ ಇಂದು ಅತ್ಯಂತ ಮಹಾನ್ ಮತ್ತು ಅದ್ಭುತ ದಿನ!" ಎಂದು ಬರೆದುಕೊಂಡಿದ್ದರು. ಇರಾನ್ ವಿದೇಶಾಂಗ ಸಚಿವರು ವಾಣಿಜ್ಯ ಹಡಗುಗಳಿಗೆ ಜಲಸಂಧಿ ಮುಕ್ತವಾಗಿದೆ ಎಂದು ಹೇಳಿದ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದರು.
ಟ್ರಂಪ್ ಅವರ ಈ ಅಬ್ಬರದ ಹೇಳಿಕೆಗೆ ವಿಶ್ವದಾದ್ಯಂತ ಇರುವ ಇರಾನ್ ರಾಯಭಾರ ಕಚೇರಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಗಿ ಮತ್ತು ಖಾರವಾಗಿ ಉತ್ತರಿಸಿವೆ. ಜಿಂಬಾಬ್ವೆಯಲ್ಲಿನ ಇರಾನ್ ರಾಯಭಾರ ಕಚೇರಿ ಟ್ರಂಪ್ ಅವರ ಪೋಸ್ಟ್ ಅನ್ನು ಹಂಚಿಕೊಂಡು ಬೇಕಾಬಿಟ್ಟಿಯಾಗಿ ಕಾಲೆಳೆದಿದೆ. 'ಅತಿಯಾದ ಸಂತೋಷ ಪ್ರದರ್ಶಿಸಬೇಡಿ, ಸ್ವಲ್ಪ ಗೌರವ ಉಳಿಸಿಕೊಳ್ಳಿ', ಜಲಸಂಧಿಯ ಹೊಸ ಕಾನೂನು ವ್ಯವಸ್ಥೆ ಬಗ್ಗೆ ಕನಸು ಕಾಣಬೇಡಿ, ಅದನ್ನು ನಾವೇ ಸರಿಪಡಿಸುತ್ತೇವೆ, ಫೋನ್ ಆಫ್ ಮಾಡಿ ರಿಲ್ಯಾಕ್ಸ್ ಆಗಿ, ಇನ್ಮುಂದೆ ಯಾವುದೇ ಪೋಸ್ಟ್ ಹಾಕಬೇಡಿ, ಮೊದಲು ನೆತನ್ಯಾಹು (ಬಿಬಿ) ಅವರನ್ನು ಒಂದು ವಾರ ಬ್ಲಾಕ್ ಮಾಡಿ, ಹಗುರವಾದ ಊಟ ಮಾಡಿ ಚೆನ್ನಾಗಿ ನಿದ್ದೆ ಮಾಡಿ ಎಂದು ತಿವಿದಿದೆ.
ದಕ್ಷಿಣ ಆಫ್ರಿಕಾದಲ್ಲಿನ ಇರಾನ್ ರಾಯಭಾರ ಕಚೇರಿ: "ಒಬ್ಬ ಅರ್ಹ ಮನೋವೈದ್ಯರ (Psychiatrist) ಬಳಿ ಅಪಾಯಿಂಟ್‌ಮೆಂಟ್ ಪಡೆದುಕೊಳ್ಳಿ" ಎಂದು ನೇರವಾಗಿ ಟ್ರಂಪ್ ಅವರಿಗೆ ಸಲಹೆ ನೀಡಿದೆ! ಅಷ್ಟೇ ಅಲ್ಲದೆ, "ಹೇ ಅಂಕಲ್ ಸ್ಯಾಮ್! ಮೊದಲು ನಿರ್ಧಾರ ಮಾಡಿ, ನಿಮಗೆ ಜಲಸಂಧಿ ತೆರೆಯಬೇಕೋ ಅಥವಾ ಮತ್ತೆ ಮುಚ್ಚಬೇಕೋ?" ಎಂದು ಪ್ರಶ್ನಿಸಿದೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಘಲಿಬಾಫ್ ಅವರು ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಟ್ರಂಪ್ ಅವರು "ಒಂದು ಗಂಟೆಯಲ್ಲಿ ಏಳು ಸುಳ್ಳನ್ನು ಸಲೀಸಾಗಿ ಹೇಳಿದ್ದಾರೆ" ಎಂದು ಟೀಕಿಸಿದರು. ಅಮೆರಿಕ ಯುದ್ಧದಲ್ಲೂ ಸೋತಿದೆ ಮತ್ತು ಮಾತುಕತೆಯಲ್ಲೂ ವಿಫಲವಾಗಿದೆ. ಇಂತಹ ತಪ್ಪು ಮಾಹಿತಿಗಳಿಂದ ಅವರಿಗೆ ಗೆಲುವು ಸಿಗಲ್ಲ. ಅಮೆರಿಕದ ದಿಗ್ಬಂಧನ ಮುಂದುವರಿದರೆ ಹಾರ್ಮುಜ್ ಜಲಸಂಧಿ ಮುಕ್ತವಾಗಿರಲು ಸಾಧ್ಯವೇ ಇಲ್ಲ. ಜಲಸಂಧಿಯಲ್ಲಿ ಹಡಗುಗಳ ಸಂಚಾರವು ಇರಾನ್ ನಿಗದಿಪಡಿಸಿದ ಮಾರ್ಗ ಮತ್ತು ಇರಾನ್ ಅನುಮತಿಯ ಮೇಲೆಯೇ ನಡೆಯಬೇಕು. ಜಲಸಂಧಿ ಮುಕ್ತವಾಗಿರಬೇಕೋ ಅಥವಾ ಮುಚ್ಚಬೇಕೋ ಎಂಬುದು ಯುದ್ಧಭೂಮಿಯಲ್ಲಿ ನಿರ್ಧಾರವಾಗುತ್ತದೆಯೇ ಹೊರತು ಸೋಶಿಯಲ್ ಮೀಡಿಯಾದಲ್ಲಲ್ಲ. ಮಾಧ್ಯಮ ಸಮರ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ದಾರಿತಪ್ಪಿಸುವುದು ಯುದ್ಧದ ಒಂದು ಭಾಗ, ಆದರೆ ಇರಾನ್ ಜನತೆ ಇಂತಹ ಟ್ರಿಕ್ಸ್‌ಗಳಿಗೆ ಮರಳಾಗುವುದಿಲ್ಲ.
ಒಟ್ಟಾರೆಯಾಗಿ, ಮಧ್ಯಪ್ರಾಚ್ಯದಲ್ಲಿ ಯುದ್ಧ ಅಂತ್ಯವಾಗುವ ಭರವಸೆಗಳ ನಡುವೆಯೇ, ಅಮೆರಿಕ ಮತ್ತು ಇರಾನ್ ನಡುವಿನ ಈ ಶೀತಲ ಸಮರ ತಾರಕಕ್ಕೇರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ