
ಟೆಲ್ ಅವಿವ್/ಕುವೈತ್/ದುಬೈ: ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತಿಕ್ರಿಯೆಯಾಗಿ ಇರಾನ್ ಈಗ ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯನ್ನೇ ಗುರಿಯಾಗಿಸಿ ಇರಾನ್ ಕ್ಷಿಪಣಿ ದಾಳಿ ನಡೆಸುವ ಮೂಲಕ ಯುದ್ಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಟೆಲ್ ಅವಿವ್‌ನಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯ ಮೇಲೆ ಅಚ್ಚರಿಯ ಕ್ಷಿಪಣಿ ದಾಳಿ ಮಾಡಿರುವುದಾಗಿ ತಿಳಿಸಿದೆ.
ಇನ್ನು ದಾಳಿಯಲ್ಲಿ ನೆತನ್ಯಾಹು ಬದುಕಿರುವುದೇ ಅನುಮಾನ ಎಂದು IRGC ತಿಳಿಸಿದ್ದು, ಅವರ ಕುರಿತಾಗಿ ಇರುವ ಮಾಹಿತಿ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದಿದೆ. ನೆತನ್ಯಾಹು ಕಚೇರಿ ಮಾತ್ರವಲ್ಲದೆ ಹೈಫಾದಲ್ಲಿರುವ ಇಸ್ರೇಲ್ ವಾಯುಪಡೆ ಕಮಾಂಡರ್ ಕೇಂದ್ರ ಕಚೇರಿ ಮತ್ತು ಮಿಲಿಟರಿ ನೆಲೆಗಳ ಮೇಲೆ 'ಖೈಬರ್' (Kheibar) ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ.
ಸೋಮವಾರ ಜೆರುಸಲೇಂನ ಆಗಸದಲ್ಲಿ ಸರಣಿ ಸ್ಫೋಟಗಳು ಕೇಳಿಬಂದಿದ್ದು, ಇರಾನ್‌ನಿಂದ ಬಂದ ಕ್ಷಿಪಣಿಗಳನ್ನು ಇಸ್ರೇಲ್‌ನ ರಕ್ಷಣಾ ವ್ಯವಸ್ಥೆಯು ಹೊಡೆದುರುಳಿಸಿದೆ ಎಂದು ಇಸ್ರೇಲ್ ಸೇನೆ (IDF) ಖಚಿತಪಡಿಸಿದೆ.
ಶನಿವಾರದಿಂದ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಜಂಟಿ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ ಇರಾನ್ ಈಗ ಗಲ್ಫ್ ರಾಷ್ಟ್ರಗಳ ಮೇಲೂ ದಾಳಿ ಮುಂದುವರಿಸಿದೆ.
ಕುವೈತ್: ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯಿಂದ ದಟ್ಟವಾದ ಕಪ್ಪು ಹೊಗೆ ಏಳುತ್ತಿರುವುದು ಕಂಡುಬಂದಿದೆ. ಅಮೆರಿಕದ ಎಫ್-15 ಯುದ್ಧವಿಮಾನವೊಂದು ಪತನಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕುವೈತ್‌ನ ವಿದ್ಯುತ್ ಸ್ಥಾವರವನ್ನೂ ಗುರಿಯಾಗಿಸಲಾಗಿದೆ.
ಭೀತಿಯಲ್ಲಿ ಗಲ್ಫ್: ಅಬುಧಾಬಿ, ದುಬೈ, ದೋಹಾ ಮತ್ತು ಮನಮಾದಲ್ಲೂ ಸ್ಫೋಟದ ಸದ್ದುಗಳು ಕೇಳಿಬಂದಿವೆ. ಕುವೈತ್‌ನಲ್ಲಿ ಒಬ್ಬರು ಸೇರಿದಂತೆ ಗಲ್ಫ್ ವಲಯದಲ್ಲಿ ಇದುವರೆಗೆ ಐವರು ಸಾವನ್ನಪ್ಪಿದ್ದಾರೆ.
ಅಮೆರಿಕ ಎಚ್ಚರಿಕೆ: ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ತನ್ನ ಸಿಬ್ಬಂದಿಗೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಿದೆ ಮತ್ತು ನಾಗರಿಕರಿಗೆ ಕಚೇರಿ ಬಳಿ ಬರದಂತೆ ಎಚ್ಚರಿಸಿದೆ.
ಇರಾನ್‌ನ ಈ ಮನಸೋಇಚ್ಛೆ ದಾಳಿಯನ್ನು ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯನ್ ತೀವ್ರವಾಗಿ ಖಂಡಿಸಿದ್ದಾರೆ. ಸೈಪ್ರಸ್‌ನಲ್ಲಿರುವ ಬ್ರಿಟಿಷ್ ವಾಯುನೆಲೆ ಮತ್ತು ಸೌದಿ ಅರೇಬಿಯಾದ ತೈಲ ಘಟಕದ ಮೇಲೆ ನಡೆದಿರುವ ದಾಳಿಯು ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತಂದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿಯ ವರದಿಯ ಪ್ರಕಾರ, ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಯ ಆರಂಭದಿಂದ ಈವರೆಗೆ ಇರಾನ್‌ನಲ್ಲಿ ಕನಿಷ್ಠ 555 ಜನರು ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ