
ಇರಾನ್‌ನ ಸರ್ವೋಚ್ಚ ನಾಯಕ (Supreme Leader) ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂಬ ವರದಿಗಳು ಹೊರಬಿದ್ದಿದ್ದು, ಪಶ್ಚಿಮ ಏಷ್ಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ, ಮೊಜ್ತಬಾ ಇರಾನ್‌ನ ನಾಯಕತ್ವ ವಹಿಸಿಕೊಂಡಿದ್ದರು. ಆದರೆ, ಅಧಿಕಾರಕ್ಕೆ ಬಂದಾಗಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇಸ್ರೇಲಿ ಮಾಧ್ಯಮ ಚಾನೆಲ್ 14 ವರದಿ ಪ್ರಕಾರ ಅವರ ಪರಿಸ್ಥಿತಿ ತೀರ ಹದಗೆಟ್ಟಿದ್ದು, ಸಾವು ಸನ್ನಿಹಿತವಾಗಿದೆ ಎಂದೂ ಹೇಳಲಾಗುತ್ತಿದೆ. ಆದಾಗ್ಯೂ, ಈ ವರದಿಗಳನ್ನು ಇರಾನ್ ಸರ್ಕಾರ ಅಧಿಕೃತವಾಗಿ ಇನ್ನೂ ದೃಢಪಡಿಸಿಲ್ಲ. ಒಂದು ವೇಳೆ ಮೊಜ್ತಬಾ ಖಮೇನಿ ಅವರು ನಿಧನರಾದರೆ ಅಥವಾ ನಾಯಕತ್ವ ವಹಿಸಲು ಅಸಮರ್ಥರಾದರೆ ಇರಾನ್ ಆಡಳಿತ ಯಾರ ಕೈಗೆ ಹೋಗುತ್ತದೆ? ಹೊಸ ನಾಯಕನನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಇರಾನ್ ಸಂವಿಧಾನದ ವಿಧಿ 111 ರ ಪ್ರಕಾರ, ಸರ್ವೋಚ್ಚ ನಾಯಕ ನಿಧನರಾದರೆ, ರಾಜೀನಾಮೆ ನೀಡಿದರೆ ಅಥವಾ ಹುದ್ದೆಯಿಂದ ವಜಾಗೊಂಡರೆ ತಕ್ಷಣವೇ ಮೂವರು ಸದಸ್ಯರನ್ನೊಳಗೊಂಡ 'ಮಧ್ಯಂತರ ನಾಯಕತ್ವ ಮಂಡಳಿ' ಅಧಿಕಾರಕ್ಕೆ ಬರುತ್ತದೆ. ನೂತನ ನಾಯಕನ ಆಯ್ಕೆಯಾಗುವವರೆಗೆ ಈ ಮಂಡಳಿಯೇ ದೇಶದ ಆಡಳಿತ ಮತ್ತು ನಿರ್ಧಾರಗಳನ್ನು ನೋಡಿಕೊಳ್ಳುತ್ತದೆ.
1. ಇರಾನ್ ದೇಶದ ಅಧ್ಯಕ್ಷರು (ಪ್ರಸ್ತುತ ಮಸೌದ್ ಪೆಜೆಶ್ಕಿಯಾನ್).
2. ದೇಶದ ನ್ಯಾಯಾಂಗ ವಿಭಾಗದ ಮುಖ್ಯಸ್ಥರು (ಪ್ರಸ್ತುತ ಘೋಲಮ್-ಹೊಸೇನ್ ಮೊಹ್ಸೆನಿ-ಎಜೆಯ್).
3. 'ಗಾರ್ಡಿಯನ್ ಕೌನ್ಸಿಲ್' ನಿಂದ ಆಯ್ಕೆಯಾದ ಹಿರಿಯ ಧಾರ್ಮಿಕ ನ್ಯಾಯಶಾಸ್ತ್ರಜ್ಞ ಇರುತ್ತಾರೆ.
ಇರಾನ್‌ನಲ್ಲಿ ನೂತನ ಸುಪ್ರೀಂ ಲೀಡರ್ ಅನ್ನು ಆಯ್ಕೆ ಮಾಡುವ ಪೂರ್ಣ ಅಧಿಕಾರ 88 ಸದಸ್ಯರ 'ತಜ್ಞರ ಸಭೆ'ಗೆ ಇರುತ್ತದೆ. ಈ ಸಭೆಯು ಸಭೆ ಸೇರಿ, ಅರ್ಹ ಧಾರ್ಮಿಕ ನಾಯಕನನ್ನು ಆರಿಸಬೇಕಾಗುತ್ತದೆ. ಇರಾನ್‌ನ ಮಿಲಿಟರಿ, ವಿದೇಶಾಂಗ ನೀತಿ ಮತ್ತು ನ್ಯಾಯಾಂಗದ ಮೇಲೆ ಸರ್ವೋಚ್ಚ ನಾಯಕನಿಗೆ ಸಂಪೂರ್ಣ ಅಧಿಕಾರವಿರುವುದರಿಂದ ಈ ಆಯ್ಕೆಯು ದೇಶದ ಭವಿಷ್ಯಕ್ಕೆ ಅತ್ಯಂತ ನಿರ್ಣಾಯಕವಾಗಿದೆ.
1. ಅಯತೊಲ್ಲಾ ಅಲಿರೆಜಾ ಅರಾಫಿ; ಇವರು ಗಾರ್ಡಿಯನ್ ಕೌನ್ಸಿಲ್‌ನ ಸದಸ್ಯ ಹಾಗೂ ಹಿರಿಯ ಧರ್ಮಗುರು. ಅಲಿ ಖಮೇನಿ ನಿಧನದ ನಂತರ ಮಧ್ಯಂತರ ನಾಯಕತ್ವದಲ್ಲೂ ಪ್ರಮುಖ ಪಾತ್ರ ವಹಿಸಿದ ಅನುಭವ ಹೊಂದಿದ್ದಾರೆ.
2. ಅಯತೊಲ್ಲಾ ಹಶೀಮ್ ಹೊಸೇನಿ ಬುಶೆಹ್ರಿ; ಧಾರ್ಮಿಕ ಕೇಂದ್ರವಾದ 'ಕೋಮ್' ಜೊತೆ ಬಲವಾದ ನಂಟು ಹೊಂದಿರುವ ಇವರು, ತಜ್ಞರ ಸಭೆಯಲ್ಲಿ ಭಾರಿ ಪ್ರಭಾವ ಹೊಂದಿದ್ದಾರೆ.
3. ಘೋಲಮ್-ಹೊಸೇನ್ ಮೊಹ್ಸೇನಿ-ಎಜೆಯ್; ಪ್ರಸ್ತುತ ನ್ಯಾಯಾಂಗ ಮುಖ್ಯಸ್ಥರಾಗಿರುವ ಇವರು, ಕಠಿಣ ನಿಲುವಿನ ಭದ್ರತಾ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.
4. ಹಸನ್ ಖೊಮೇನಿ; ಇರಾನ್ ದೇಶದ ಸಂಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖೊಮೇನಿಯವರ ಮೊಮ್ಮಗ. ಆದರೆ, ಇವರ ಸಾಫ್ಟ್ ಅಥವಾ ಉದಾರವಾದಿ ರಾಜಕೀಯ ನಿಲುವು ಕಠಿಣ ನಿರ್ಧಾರದ ಧರ್ಮಗುರುಗಳಿಗೆ ಇಷ್ಟವಿಲ್ಲದಿರಬಹುದು.
ಸಾಮೂಹಿಕ ನಾಯಕತ್ವ ಮತ್ತು IRGC ಮಿಲಿಟರಿ ಪ್ರಭಾವ!
ಒಂದೊಮ್ಮೆ ತಜ್ಞರ ಸಭೆಗೆ ಒಬ್ಬ ನಿರ್ದಿಷ್ಟ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದಿದ್ದರೆ, 'ಸಾಮೂಹಿಕ ನಾಯಕತ್ವ ಮಂಡಳಿ' ರಚನೆಯಾಗುವ ಸಾಧ್ಯತೆಯಿದೆ. ಅಂದರೆ, ಒಬ್ಬ ವ್ಯಕ್ತಿಯ ಬದಲಿಗೆ ನಾಯಕರ ಗುಂಪೊಂದು ದೇಶವನ್ನು ಆಳಲಿದೆ. ಇದು ಇರಾನ್ ಸಾಂಪ್ರದಾಯಿಕ ರಾಜಕೀಯ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇನ್ನೊಂದೆಡೆ, ಈ ರಾಜಕೀಯ ಅಸ್ಥಿರತೆಯ ಲಾಭವನ್ನು ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾ ಪಡೆ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (IRGC) ಪಡೆದುಕೊಳ್ಳಬಹುದು. ದೇಶದ ಆರ್ಥಿಕತೆ ಮತ್ತು ಭದ್ರತೆಯ ಮೇಲೆ ಭಾರಿ ಹಿಡಿತ ಹೊಂದಿರುವ IRGC, ತಮಗೆ ಅನುಕೂಲವಾಗುವಂತಹ ನಾಯಕನನ್ನು ಪೀಠದ ಮೇಲೆ ಕುಳ್ಳಿರಿಸಲು ತನ್ನ ಸಂಪೂರ್ಣ ಶಕ್ತಿಯನ್ನು ಬಳಸುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ