
ನವದೆಹಲಿ (ಮಾ.10): ಜಗತ್ತು ಮತ್ತೊಂದು ಮಹಾಯುದ್ಧದ ಅಂಚಿನಲ್ಲಿ ನಿಂತಿದ್ಯಾ? ಇಡೀ ವಿಶ್ವದ ಕಣ್ಣು ಈಗ ಪರ್ಷಿಯನ್ ಗಲ್ಫ್‌ನಲ್ಲಿರುವ 'ಖಾರ್ಗ್ ಐಸ್ಲೆಂಡ್' ಎಂಬ ಪುಟ್ಟ ದ್ವೀಪದ ಮೇಲಿದೆ. ಇರಾನ್‌ನ ಒಟ್ಟು ತೈಲ ರಫ್ತಿನ ಶೇಕಡಾ 90 ರಷ್ಟು ಭಾಗ ಈ ಒಂದೇ ದ್ವೀಪದಿಂದ ನಡೆಯುತ್ತದೆ ಅಂದರೆ ನಿಮಗೆ ಅಚ್ಚರಿಯಾಗಬಹುದು. ಅಮೆರಿಕದ ಟ್ರಂಪ್ ಆಡಳಿತ ಈಗ ಇದೇ ದ್ವೀಪವನ್ನ ವಶಪಡಿಸಿಕೊಳ್ಳಲು ಸ್ಕೆಚ್ ಹಾಕಿದೆ ಎಂಬ ವರದಿಗಳು ಕೇಳಿಬಂದಿವೆ. ಒಂದು ವೇಳೆ ಈ ದ್ವೀಪದ ಮೇಲೆ ದಾಳಿ ನಡೆದರೆ ಇರಾನ್‌ನ ಆರ್ಥಿಕ ಬೆನ್ನೆಲುಬಾದ ತೈಲ ಆದಾಯ ಸಂಪೂರ್ಣವಾಗಿ ಕುಸಿದು ಹೋಗುತ್ತೆ. ಎರಡನೆಯದಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ರಾಕೆಟ್ ವೇಗದಲ್ಲಿ ಏರಿಕೆಯಾಗಲಿವೆ. ತಜ್ಞರ ಪ್ರಕಾರ, ಈ ದ್ವೀಪದ ಮೇಲಿನ ಒಂದು ಸಣ್ಣ ದಾಳಿ ಕೂಡ 'ಮೂರನೇ ಮಹಾಯುದ್ಧ'ಕ್ಕೆ ನಾಂದಿ ಹಾಡಬಹುದು.
ಇರಾನ್‌ನ ಒಟ್ಟು ಕಚ್ಚಾ ತೈಲ ರಫ್ತಿನ ಸುಮಾರು 80 ರಿಂದ 90% ಭಾಗವು ಈ ಒಂದೇ ದ್ವೀಪದಿಂದ ನಡೆಯುತ್ತದೆ. ಇಲ್ಲಿ ಬೃಹತ್ ತೈಲ ಟರ್ಮಿನಲ್‌ಗಳು, ಪೈಪ್‌ಲೈನ್‌ಗಳು ಮತ್ತು ಸಂಗ್ರಹಣಾ ಟ್ಯಾಂಕ್‌ಗಳಿವೆ. ಹಡ್ಸನ್ ಇನ್‌ಸ್ಟಿಟ್ಯೂಟ್‌ನ ಮೈಕೆಲ್ ಡೋರನ್ ಪ್ರಕಾರ, 1960ರ ದಶಕದ ಹೂಡಿಕೆಯ ನಂತರ ಈ ದ್ವೀಪವು ಇರಾನ್‌ನ ಆರ್ಥಿಕತೆಯ ಬೆನ್ನೆಲುಬಾಗಿ ಬೆಳೆದಿದೆ. ಇಲ್ಲಿ ಪ್ರತಿದಿನ ಸುಮಾರು 70 ಲಕ್ಷ ಬ್ಯಾರೆಲ್ ತೈಲವನ್ನು ಹಡಗುಗಳಿಗೆ ಲೋಡ್ ಮಾಡುವ ಸಾಮರ್ಥ್ಯವಿದೆ.
ಇಸ್ರೇಲ್ ಮತ್ತು ಅಮೆರಿಕ ಇರಾನ್‌ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿದ್ದರೂ, ಖಾರ್ಗ್ ದ್ವೀಪದ ಮೇಲೆ ಇದುವರೆಗೆ ದಾಳಿ ಮಾಡಿಲ್ಲ. ಸ್ಯಾಟಲೈಟ್ ದತ್ತಾಂಶಗಳ ಪ್ರಕಾರ, ಫೆಬ್ರವರಿ 28 ರಿಂದ ಇಲ್ಲಿಯವರೆಗೆ ಇರಾನ್ 1.2 ಕೋಟಿ ಬ್ಯಾರೆಲ್‌ಗಳಿಗಿಂತ ಹೆಚ್ಚು ತೈಲವನ್ನು ರಫ್ತು ಮಾಡಿದೆ. ಟ್ರ್ಯಾಕಿಂಗ್ ಸಿಸ್ಟಮ್ ಆಫ್ ಮಾಡಿ ಸಂಚರಿಸುವ 'ಡಾರ್ಕ್ ಫ್ಲೀಟ್' (Dark Fleet) ಹಡಗುಗಳ ಮೂಲಕ ಇರಾನ್ ಗುಟ್ಟಾಗಿ ತೈಲ ಸಾಗಿಸುತ್ತಿದೆ.
ತಜ್ಞರ ಪ್ರಕಾರ, ಒಂದು ವೇಳೆ ಖಾರ್ಗ್ ದ್ವೀಪದ ಮೇಲೆ ದಾಳಿ ನಡೆದರೆ ಎರಡು ಪ್ರಮುಖ ಅನಾಹುತಗಳು ಸಂಭವಿಸಬಹುದು. ಇರಾನ್ ಸರ್ಕಾರದ ಮಿಲಿಟರಿ ಶಕ್ತಿಗೆ ತೈಲ ಮಾರಾಟವೇ ಮೂಲ ಹಣಕಾಸಿನ ನೆರವು. ಇದು ನಿಂತರೆ ಇರಾನ್ ದೀರ್ಘಕಾಲ ಯುದ್ಧ ಮಾಡುವುದು ಕಷ್ಟವಾಗುತ್ತದೆ. ಜಗತ್ತಿನ 20% ತೈಲವು ಹಾದುಹೋಗುವ 'ಹಾರ್ಮುಜ್ ಜಲಸಂಧಿ'ಯ ಸಮೀಪವೇ ಈ ದ್ವೀಪ ಇರುವುದರಿಂದ, ದಾಳಿ ನಡೆದರೆ ಜಾಗತಿಕ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಕನಿಷ್ಠ 10 ಡಾಲರ್‌ಗಳಷ್ಟು ಏರಿಕೆಯಾಗಬಹುದು. ಇದು ವಿಶ್ವದ ಆರ್ಥಿಕತೆಯ ಮೇಲೆ ಭಾರಿ ಹೊಡೆತ ನೀಡಲಿದೆ.
1980ರ ದಶಕದ ಯುದ್ಧದ ಸಮಯದಲ್ಲಿ ಇರಾಕ್ ಈ ದ್ವೀಪದ ಮೇಲೆ ಭಾರಿ ದಾಳಿ ಮಾಡಿತ್ತು, ಆದರೆ ಇರಾನ್ ಅದನ್ನು ಮತ್ತೆ ಪುನರ್ನಿರ್ಮಿಸಿತ್ತು.ಇನ್ನು 1979 ರ ಒತ್ತೆಯಾಳು ಬಿಕ್ಕಟ್ಟಿನ ಸಮಯದಲ್ಲೂ ಅಮೆರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಈ ದ್ವೀಪ ವಶಪಡಿಸಿಕೊಳ್ಳಲು ಯೋಚಿಸಿದ್ದರು, ಆದರೆ ದಾಳಿ ಮಾಡಿರಲಿಲ್ಲ. ಈ ದ್ವೀಪದಲ್ಲಿ 3 ಕೋಟಿ ಬ್ಯಾರೆಲ್ ತೈಲ ಸಂಗ್ರಹಿಸುವ ಸಾಮರ್ಥ್ಯವಿದೆ. ಸದ್ಯ ಅಲ್ಲಿ ಸುಮಾರು 1.8 ಕೋಟಿ ಬ್ಯಾರೆಲ್ ತೈಲ ದಾಸ್ತಾನು ಇದೆ ಎಂದು ಅಂದಾಜಿಸಲಾಗಿದೆ.
ಖಾರ್ಗ್ ದ್ವೀಪದ ಮೇಲೆ ದಾಳಿ ಮಾಡುವುದು ಎಂದರೆ ಇರಾನ್ ಅನ್ನು ಕೆಣಕಿದಂತೆ. ಇದಕ್ಕೆ ಪ್ರತಿಯಾಗಿ ಇರಾನ್ ಭೀಕರ ತಿರುಗೇಟು ನೀಡಿದರೆ ಅದು 'ಮೂರನೇ ಮಹಾಯುದ್ಧ'ಕ್ಕೆ ನಾಂದಿ ಹಾಡಬಹುದು ಎಂಬ ಭೀತಿ ಅಮೆರಿಕಕ್ಕಿದೆ. ಆದ್ದರಿಂದಲೇ, ಸದ್ಯಕ್ಕೆ ಇರಾನ್‌ನ ಮಿಲಿಟರಿ ಮತ್ತು ಪರಮಾಣು ಕೇಂದ್ರಗಳನ್ನು ಮಾತ್ರ ಗುರಿಯಾಗಿಸಿಕೊಂಡಿರುವ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು, ತೈಲ ಕೇಂದ್ರದ ಮೇಲೆ ಸದ್ಯಕ್ಕೆ ನೇರ ಯುದ್ಧ ಆರಂಭಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ