4ನೇ ದಿನವೂ ಇರಾನ್‌ - ಇಸ್ರೇಲ್‌ ಘೋರ ಕದನ

Published : Jun 17, 2025, 06:00 AM IST
Iran-Israel Conflict 2025

ಸಾರಾಂಶ

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 4ನೇ ದಿನವಾದ ಸೋಮವಾರ ಮತ್ತಷ್ಟು ತಾರಕಕ್ಕೇರಿದ್ದು ಎರಡೂ ದೇಶಗಳು ಹಗಲು-ರಾತ್ರಿ ದಾಳಿ-ಪ್ರತಿದಾಳಿ ಮುಂದುವರಿಸಿವೆ.

ಟೆಹ್ರಾನ್‌/ಟೆಲ್‌ ಅವಿವ್‌: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 4ನೇ ದಿನವಾದ ಸೋಮವಾರ ಮತ್ತಷ್ಟು ತಾರಕಕ್ಕೇರಿದ್ದು ಎರಡೂ ದೇಶಗಳು ಹಗಲು-ರಾತ್ರಿ ದಾಳಿ-ಪ್ರತಿದಾಳಿ ಮುಂದುವರಿಸಿವೆ. ಇದೇ ವೇಳೆ, ಕದನವಿರಾಮಕ್ಕೆ ವಿಶ್ವದ ಕೆಲವು ದೇಶಗಳು ಮಾಡಿದ ಕರೆಯನ್ನು ಇರಾನ್ ತಿರಸ್ಕರಿಸಿದೆ. ಹೀಗಾಗಿ ಯುದ್ಧ ದೀರ್ಘಕಾಲೀನ ಆಗಬಹುದು ಎಂಬ ಕಳವಳ ವಿಶ್ವದಲ್ಲಿ ಸೃಷ್ಟಿಯಾಗಿದೆ.

ಇಸ್ರೇಲ್ ಮೇಲೆ ಇರಾನ್ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗಿನವರೆಗೆ 100 ಕ್ಷಿಪಣಿ ಬಳಸಿ ಭಾರಿ ದಾಳಿ ನಡೆಸಿದೆ. ಈ ವೇಳೆ ಇಸ್ರೇಲ್‌ನ 5 ಜನರು ಸಾವನ್ನಪ್ಪಿದ್ದು. ಡಜನ್‌ಗಟ್ಟಲೆ ಜನರಿಗೆ ಗಾಯಗಳಾಗಿವೆ. ಇದರಿಂದ 4 ದಿನಗಳ ಸಮರದಲ್ಲಿ ಇಸ್ರೇಲ್‌ನಲ್ಲಿನ ಸಾವಿನ ಸಂಖ್ಯೆ 24ಕ್ಕೇರಿದೆ. ಇದೇ ವೇಳೆ, ಇಸ್ರೇಲ್‌ನ ಪ್ರಮುಖ ನಗರಿ ಟೆಲ್ ಅವಿವ್‌ನಲ್ಲಿರುವ ಅಮೆರಿಕನ್ ಕಾನ್ಸುಲೇಟ್ ಕಟ್ಟಡದ ಭಾಗಕ್ಕೆ ಒಂದು ಕ್ಷಿಪಣಿಯ ಚೂರು ಬಿದ್ದಿದ್ದು, ಕಟ್ಟಡದ ಭಾಗಕ್ಕೆ ಸ್ವಲ್ಪ ಹಾನಿಯಾಗಿದೆ. ‘ಕ್ಷಿಪಣಿಯ ತುಣುಕು ಸಿಡಿದ ಕಾರಣ ಅಲ್ಪ ಹಾನಿಯಾಗಿದೆ. ಹೆಚ್ಚಿನ ಆತಂಕದ ಅಗ್ಯವಿಲ್ಲ’ ಎಂದು ಅಮೆರಿಕ ಕಾನ್ಸುಲೇಟ್‌ ಸ್ಪಷ್ಟಪಡಿಸಿದೆ.

ಇದೇ ವೇಳೆ, ಇಸ್ರೇಲ್‌ನ ಪ್ರಮುಖ ಬಂದರು ನಗರವಾದ ಹೈಫಾದ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಕ್ಷಿಪಣಿ ದಾಳಿ ಮಾಡಿದೆ. ಹೀಗಾಗಿ ಅದು ಹೊತ್ತಿ ಉರಿಯುತ್ತಿದೆ ಎಂದು ವರದಿಯಾಗಿದೆ. ಈ ಸಂಸ್ಕರಣಾಗಾರವು ಇಸ್ರೇಲ್‌ಗೆ ಶೇ. 80ರಷ್ಟು ಇಂಧನ ಪೂರೈಸುತ್ತದೆ. ಹೀಗಾಗಿ ಇಸ್ರೇಲ್‌ನಲ್ಲಿ ತೈಲ ಹಾಹಾಕಾರ ಸೃಷ್ಟಿಯಾಗಬಹುದು ಎನ್ನಲಾಗುತ್ತಿದೆ.

ನಿಲ್ಲದ ಇಸ್ರೇಲ್‌ ದಾಳಿ:

ಇನ್ನೊಂದೆಡೆ, ಇಸ್ರೇಲಿ ಸೇನೆಯು ರಾತ್ರಿಯಿಡೀ ಇರಾನ್ ರಾಜಧಾನಿ ಟೆಹ್ರಾನ್‌ನ 80ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ಸೋಮವಾರ ಬೆಳಗ್ಗೆ ಹಾಗೂ ರಾತ್ರಿ ಮಾಡಿದೆ. ಇರಾನ್‌ ಸರ್ಕಾರಿ ಟೀವಿ ಕಚೇರಿ ಮೇಲೂ ಕ್ಷಿಪಣಿ ಹಾರಿಸಿದೆ. ಅಲ್ಲದೆ, ಟೆಹ್ರಾನ್‌ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಿದೆ. ಇಸ್ರೇಲ್‌ ದಾಳಿಯಿಂದ ಇರಾನ್‌ನಲ್ಲಿ 4 ದಿನದಲ್ಲಿ 224 ಜನ ಬಲಿಯಾಗಿದ್ದಾರೆ ಹಾಗೂ 1277 ಜನರಿಗೆ ಗಾಯಗಳಾಗಿವೆ ಎಂದು ಖುದ್ದು ಇರಾನ್‌ ಸರ್ಕಾರ ಹೇಳಿಕೆ ನೀಡಿದೆ. ಆದರೆ ಭಾನುವಾರ ಅಮೆರಿಕದ ಮಾನವ ಹಕ್ಕು ಸಂಸ್ಥೆಯೊಂದು, ’ಇರಾನ್‌ನಲ್ಲಿ 406 ಸಾವನ್ನಪ್ಪಿದ್ದಾರೆ’ ಎಂದು ಹೇಳಿತ್ತು.

ಟೆಹ್ರಾನ್‌ ಮೇಲೆ ವಾಯು ಪ್ರಾಬಲ್ಯ- ಇರಾನ್:

ಟೆಹ್ರಾನ್‌ ಮೇಲೆ 4 ದಿನದಿಂದ ನಿರಂತರ ದಾಳಿ ನಡೆಸುತ್ತಿರುವ ಇಸ್ರೇಲ್‌, ತಾನು ಇರಾನ್‌ ರಾಜಧಾನಿ ಮೇಲೆ ವಾಯುಪ್ರಾಬಲ್ಯ ಸಾಧಿಸಿದ್ದೇನೆ. ನಿರಾತಂಕವಾಗಿ ಟೆಹ್ರಾನ್‌ ವಾಯುವಲಯದಿಂದ ಕಾರ್ಯಾಚರಣೆ ನಡೆಸಬಹುದಾಗಿದೆ ಎಂದು ಹೇಳಿಕೊಂಡಿದೆ.

ಕದನ ವಿರಾಮಕ್ಕೆ ಒಪ್ಪದ ಇರಾನ್:

ಇಸ್ರೇಲ್‌ ದಾಳಿ ನಿಲ್ಲಿಸಿದರೆ ತಾನೂ ಪ್ರತಿದಾಳಿ ನಿಲ್ಲಿಸುವ ಎಂದಿದ್ದ ಇರಾನ್, ಸೋಮವಾರ ವಿರಾಮ ಮಾತುಕತೆಗಳನ್ನು ತಿರಸ್ಕರಿಸಿದೆ. ‘ಇಸ್ರೇಲ್ ದಾಳಿಗೆ ನಾವು ಇನ್ನಷ್ಟು ಉತ್ತರ ಕೊಡಬೇಕಿದೆ. ಅದನ್ನು ಪೂರ್ಣಗೊಳಿಸಿದ ನಂತರವೇ ಗಂಭೀರ ಮಾತುಕತೆಗೆ ಸಿದ್ಧರಾಗುತ್ತೇವೆ’ ಎಂದು ಮಧ್ಯವರ್ತಿಗಳಾದ ಕತಾರ್ ಮತ್ತು ಒಮಾನ್‌ಗೆ ಇರಾನ್‌ ತಿಳಿಸಿದೆ ಎಂದು ವರದಿಯಾಗಿದೆ.

ಇರಾನ್‌ ಟೀವಿ ಲೈವ್‌ ಪ್ರಸಾರ ವೇಳೆಯೇ ಇಸ್ರೇಲ್‌ ಕ್ಷಿಪಣಿ ದಾಳಿ

ಇರಾನ್‌ ರಾಷ್ಟ್ರೀಯ ಟೀವಿ ಕಚೇರಿ ಮೇಲೆ ನೇರಪ್ರಸಾರ ವೇಳೆಯೇ ಇಸ್ರೇಲ್‌, ಸೋಮವಾರ ರಾತ್ರಿ ಕ್ಷಿಪಣಿ ದಾಳಿ ಮಾಡಿದೆ. ಆಗ ದಾಳಿಗೆ ಬೆಚ್ಚಿ ಸುದ್ದಿವಾಚಕಿ ಓಡಿ ಹೋದ ಪ್ರಸಂಗವು ನೇರಪ್ರಸಾರದಲ್ಲೇ ಸೆರೆಯಾಗಿದೆ.

ಪರಮಾಣು ನಿಶಸ್ತ್ರೀಕರಣ ಒಪ್ಪಂದ ಕೈಬಿಡಲು ಇರಾನ್ ಸಿದ್ಧತೆತೆಹರಾನ್‌: ಅಣ್ವಸ್ತ್ರ ಹೊಂದಲು ಮುಂದಾಗಿರುವ ಕಾರಣಕ್ಕೇ ಇಸ್ರೇಲ್‌ ದಾಳಿಗೆ ಗುರಿಯಾಗಿರುವ ಇರಾನ್‌, ಪರಮಾಣು ನಿಶಸ್ತ್ರೀಕರಣ ಒಪ್ಪಂದದಿಂದ ಹೊರಬರಲು ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಇರಾನ್‌ ಅಣ್ವಸ್ತ್ರ ಬಳಸಬಹುದೆ ಎಂಬ ಆತಂಕ ಸೃಷ್ಟಿಯಾಗಿದೆ.ಈ ಬಗ್ಗೆ ಇರಾನ್‌ನ ವಿದೇಶಾಂಗ ಸಚಿವರು ಮಾತನಾಡಿದ್ದು, ‘ಅಣು ನಿಶ್ಶಸ್ತ್ರೀಕರಣ ಒಪ್ಪಂದ ಕೈಬಿಡಲು ಸಂಸತ್ತು ಮಸೂದೆ ಸಿದ್ಧಪಡಿಸುತ್ತಿದೆ. ಆದಾಗ್ಯೂ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ’ ಎಂದರು.ಈ ಮೊದಲು, ‘ನಮಗೂ ಪರಮಾಣು ಶಕ್ತಿ ಹೊಂದುವ ಮತ್ತು ಆ ಬಗ್ಗೆ ಸಂಶೋಧನೆ ನಡೆಸುವ ಹಕ್ಕಿದೆ’ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದರು. ಜತೆಗೆ, ಸಾಮೂಹ ವಿನಾಶ ಶಸ್ತ್ರಾಸ್ತ್ರ ಹೊಂದುವ ಬಗ್ಗೆ ಅಲ್ಲಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ವಿರೋಧವನ್ನೂ ಪುನರುಚ್ಚರಿಸಿದ್ದರು.

ಇಸ್ರೇಲ್‌ ಮೇಲೆ ಪಾಕ್‌ ಅಣ್ವಸ್ತ್ರ ದಾಳಿ ’ಸಹಾಯ’: ಇರಾನ್‌

ಟೆಹ್ರಾನ್: ‘ಇರಾನ್ ಮೇಲೆ ಇಸ್ರೇಲ್‌ ಪರಮಾಣು ಬಾಂಬ್ ಹಾಕಿದರೆ ಪಾಕಿಸ್ತಾನವು ಇಸ್ರೇಲ್ ಮೇಲೆ ಪರಮಾಣು ದಾಳಿ ನಡೆಸಲಿದೆ’ ಎಂದು ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ಹೇಳಿಕೆ ಬಂದಿರುವುದು ಕುತೂಹಲಕ್ಕೆ ನಾಂದಿ ಹಾಡಿದೆ.

ಇರಾನಿನ ಟೀವಿ ಜತೆ ಮಾತನಾಡಿದ ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಹಾಗೂ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್‌ ಜನರಲ್ ಮೊಹ್ಸೆನ್ ರೆಝೈ, ‘ಇಸ್ರೇಲ್ ಇರಾನ್ ಮೇಲೆ ಪರಮಾಣು ಬಾಂಬ್ ಹಾಕಿದರೆ. ಇಸ್ರೇಲ್ ಮೇಲೆ ತಾನು ಪರಮಾಣು ಬಾಂಬ್ ದಾಳಿ ಮಾಡುತ್ತೇನೆ ಎಂದು ಪಾಕಿಸ್ತಾನ ನಮಗೆ ಭರವಸೆ ನೀಡಿದೆ’ ಎಂದು ಹೇಳಿದರು.ಇತ್ತೀಚೆಗೆ ಭಾರತ-ಪಾಕ್‌ ನಡುವಿನ ಯುದ್ಧದ ವೇಳೆಯೂ ಪಾಕಿಸ್ತಾನವು ಭಾರತದ ಮೇಲೆ ಅಣುದಾಳಿ ನಡೆಸಬಹುದು ಎಂಬ ಊಹಾಪೋಹ ಹರಡಿದ್ದವು. ಆದರೆ ಅದನ್ನು ಪಾಕ್‌ ನಿರಾಕರಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!