UAE ಬೇಸ್‌ನಲ್ಲಿದ್ದ 200 ಸಿಬ್ಬಂದಿಗಳ ಯುಎಸ್‌ ಕಮಾಂಡ್‌ ಸೆಂಟರ್‌ ಮೇಲೆ ಡ್ರೋನ್‌ ದಾಳಿ ಮಾಡಿದ ಇರಾನ್‌

Published : Mar 31, 2026, 04:59 PM IST
iran drone strike

ಸಾರಾಂಶ

ಯುಎಇಯಲ್ಲಿರುವ ಅಮೆರಿಕದ ಹಿರಿಯ ಕಮಾಂಡರ್‌ಗಳ ಸಭೆಯನ್ನು ಗುರಿಯಾಗಿಸಿ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂದು ಹೇಳಿಕೊಂಡಿದೆ. ಇದಕ್ಕೂ ಮುನ್ನ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಈ ಸಂಘರ್ಷವು ಕೊಲ್ಲಿ ರಾಷ್ಟ್ರಗಳಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಸಿದೆ.

ದುಬೈ (ಮಾ.31): ಕೊಲ್ಲಿ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಮಿತಿ ಮೀರಿದ್ದು, ಅಮೆರಿಕದ ನೌಕಾಪಡೆಯ ನಾಯಕತ್ವವನ್ನೇ ಗುರಿಯಾಗಿಸಿಕೊಂಡು ಇರಾನ್ ಭೀಕರ ಡ್ರೋನ್ ದಾಳಿ ನಡೆಸಿದೆ ಎಂದು ಇರಾನ್ ನೌಕಾಪಡೆ ಪ್ರತಿಪಾದಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಅಲ್ ಮಿನ್ಹಾದ್ ವಾಯುನೆಲೆಯ ಸಮೀಪವಿರುವ ಅಮೆರಿಕದ ಹಿರಿಯ ಕಮಾಂಡರ್‌ಗಳ ಸಭೆಯನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಇರಾನ್ ನೌಕಾಪಡೆ ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, ಅಲ್ ಮಿನ್ಹಾದ್ ವಾಯುನೆಲೆಯ ಹೊರಗಿರುವ ಅಮೆರಿಕ ಸೇನೆಯ 'ರಹಸ್ಯ ಕಮಾಂಡ್ ಸೆಂಟರ್' ಅನ್ನು ಇರಾನ್ ಗುಪ್ತಚರ ಇಲಾಖೆ ಪತ್ತೆಹಚ್ಚಿ ಧ್ವಂಸಗೊಳಿಸಿದೆ. ದಾಳಿ ನಡೆದ ಸಮಯದಲ್ಲಿ ಅಲ್ಲಿ ಸುಮಾರು 200 ಅಮೆರಿಕನ್ ಅಧಿಕಾರಿಗಳು ಮತ್ತು ಕಮಾಂಡರ್‌ಗಳು ಹಾಜರಿದ್ದರು ಎಂದು ಇರಾನ್ ಹೇಳಿಕೆ ನೀಡಿದೆ.

ಅಮೆರಿಕದ ಐದನೇ ನೌಕಾಪಡೆಯ (US Fifth Fleet) ಕಮಾಂಡರ್‌ಗಳು ಸಭೆ ಸೇರಿದ್ದ ತಾತ್ಕಾಲಿಕ ನಿವಾಸವನ್ನು ಗುರುತಿಸಿ, ಅತ್ಯಂತ ನಿಖರವಾಗಿ ಡ್ರೋನ್ ದಾಳಿ ನಡೆಸಲಾಗಿದೆ ಎಂದು ಇರಾನ್ ಹೇಳಿದೆ. ಅಲ್ಲದೆ, ಈ ಪ್ರದೇಶದಲ್ಲಿರುವ ಅಮೆರಿಕದ ಎಲ್ಲಾ ಸೇನಾ ನೆಲೆಗಳು ಇನ್ನು ಮುಂದೆ ಹಿರಿಯ ಅಧಿಕಾರಿಗಳಿಗೆ ಸುರಕ್ಷಿತವಲ್ಲ ಎಂದು ಇರಾನ್ ಎಚ್ಚರಿಸಿದೆ. ಆದರೆ, ಈ ಬಗ್ಗೆ ಅಮೆರಿಕದ ಸೆಂಟ್ರಲ್ ಕಮಾಂಡ್‌ನಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ.

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ

ಇರಾನ್‌ನ ಈ ದಾಳಿಗೂ ಕೆಲವು ಗಂಟೆಗಳ ಮೊದಲು, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಮಧ್ಯ ಇರಾನ್‌ನ ಸೇನಾ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ವಾಯುವ್ಯ ಇರಾನ್‌ನ ಪ್ರಮುಖ ಧಾರ್ಮಿಕ ಕೇಂದ್ರವೊಂದು ಹಾನಿಗೊಳಗಾಗಿದ್ದು, ಇರಾನ್‌ನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇರಾನ್‌ನ ತೈಲ ಮತ್ತು ಇಂಧನ ಘಟಕಗಳನ್ನು ಸ್ಫೋಟಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ದಾಳಿಗಳು ನಡೆದಿವೆ.

ಪ್ರಪಂಚದಾದ್ಯಂತ ಕೇಳಿಬರುತ್ತಿದೆ ಸ್ಫೋಟದ ಸದ್ದು

ಇಸ್ಫಹಾನ್ ನಗರದಲ್ಲಿ ಭಾರಿ ಸ್ಫೋಟಗಳು ಸಂಭವಿಸಿದ್ದು, ಹೊಗೆಯ ಮೋಡಗಳು ಆವರಿಸಿವೆ. ಟೆಹ್ರಾನ್‌ನಲ್ಲಿ ಬಿಗಿ ಭದ್ರತೆಯ ನಡುವೆಯೂ ವಿದ್ಯುತ್ ಕಡಿತ ವರದಿಯಾಗಿದೆ. ದುಬೈ ಮತ್ತು ಉತ್ತರ ಇರಾಕ್‌ನ ಅರ್ಬಿಲ್ ವಿಮಾನ ನಿಲ್ದಾಣದ ಬಳಿ ಸ್ಫೋಟದ ಸದ್ದು ಕೇಳಿಬಂದಿದೆ. ಇಸ್ರೇಲ್‌ನ ಜೆರುಸಲೆಮ್‌ನಲ್ಲಿ ಸೈರನ್ ಮೊಳಗಿದ್ದು, ಇರಾನ್‌ನಿಂದ ಕ್ಷಿಪಣಿ ಉಡಾವಣೆಯಾಗಿರುವುದು ಪತ್ತೆಯಾಗಿದೆ. ಇಸ್ರೇಲ್‌ನ ಬೆನಿ ಬ್ರಾಕ್ ಪ್ರದೇಶದಲ್ಲಿ ಕ್ಷಿಪಣಿ ಚೂರುಗಳು ಬಿದ್ದು ಎಂಟು ಜನರು ಗಾಯಗೊಂಡಿದ್ದಾರೆ. ಸೌದಿ ಅರೇಬಿಯಾದ ರಿಯಾದ್ ಬಳಿ ಡ್ರೋನ್ ಒಂದನ್ನು ಹೊಡೆದುರುಳಿಸಿದಾಗ ಇಬ್ಬರು ಗಾಯಗೊಂಡಿದ್ದಾರೆ.

ಟ್ರಂಪ್ ಎಚ್ಚರಿಕೆ ಮತ್ತು ಇರಾನ್ ಪ್ರತಿರೋಧ

ಒಂದು ವೇಳೆ ಇರಾನ್ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಮತ್ತು ಅಂತರರಾಷ್ಟ್ರೀಯ ತೈಲ ಸಾಗಣೆಯ ಪ್ರಮುಖ ಮಾರ್ಗವಾದ 'ಹಾರ್ಮುಜ್ ಜಲಸಂಧಿ'ಯನ್ನು ಮುಕ್ತಗೊಳಿಸದಿದ್ದರೆ, ಇರಾನ್‌ನ ಎಲ್ಲಾ ತೈಲ ಬಾವಿಗಳು, ವಿದ್ಯುತ್ ವ್ಯವಸ್ಥೆ ಮತ್ತು ರಫ್ತು ಕೇಂದ್ರಗಳನ್ನು ನಾಶಪಡಿಸುವುದಾಗಿ ಟ್ರಂಪ್ ಎಚ್ಚರಿಸಿದ್ದಾರೆ.

ಇದಕ್ಕೆ ಜಗ್ಗದ ಇರಾನ್ ಸಂಸತ್ತು, ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಸುಂಕ ವಿಧಿಸಲು ಮತ್ತು ಅಮೆರಿಕ ಹಾಗೂ ಇಸ್ರೇಲ್‌ನ ಹಡಗುಗಳನ್ನು ಸಂಪೂರ್ಣವಾಗಿ ನಿಷೇಧವಿರಲಿದೆ ಎಂದು ತಿಳಿಸಿದೆ. ಪ್ರಸ್ತುತ ಜಾಗತಿಕ ತೈಲದ ಐದನೇ ಒಂದು ಭಾಗ ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಈ ಸಂಘರ್ಷದಿಂದಾಗಿ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೈಶ್ ಸಂಘಟನೆಯ ಮತ್ತೊಬ್ಬ ಉಗ್ರನ ನಿಗೂಢ ಸಾವು! ಪಾಕಿಸ್ತಾನದಲ್ಲಿ ನಡೆದದ್ದೇನು? ಯಾರೀ ಭಯೋತ್ಪಾದಕ
ಇರಾನ್ ಯುದ್ಧ: ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಗ್ಯಾಲನ್‌ಗೆ 4 ಡಾಲರ್‌ಗೆ ಏರಿಕೆ: 1 ಲೀಟರ್ ಪೆಟ್ರೋಲ್ ಬೆಲೆ ಎಷ್ಟು?