ಉಕ್ರೇನ್ ವಿರುದ್ಧ ಯುದ್ಧ ಸಾರಿ ವರ್ಷವೇ ಉರುಳಿದೆ. ಯುದ್ಧ ನಿಂತಿಲ್ಲ. ಸಾವು ನೋವುಗಳು ನಿಂತಿಲ್ಲ. ಈ ಕುರಿತು ರಷ್ಯಾ ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ ದೇಶಗಳ ಸಂಖ್ಯೆ ತೀರಾ ಕಡಿಮೆ. ಇದೀಗ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದೆ.
ನೆದರ್ಲೆಂಡ್(ಮಾ.17): ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ತನ್ನ ಪ್ರತಿಷ್ಠೆಯಿಂದ ಹಿಂದೆ ಸರಿಯುತ್ತಿಲ್ಲ. ಇತ್ತ ಯುದ್ಧ ನಿಲ್ಲಿಸುತ್ತಿಲ್ಲ. ಈಗಾಗಲೇ ಯುದ್ಧದಿಂದ 42 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 58 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 1.40 ಲಕ್ಷಕ್ಕೂ ಹೆಚ್ಚು ಕಟ್ಟಡಗಳು ಉಡೀಸ್ ಮಾಡಲಾಗಿದೆ. ರಷ್ಯಾಗೆ ಯುದ್ಧ ನಿಲ್ಲಿಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಭಾರತ ಸೇರಿದಂತೆ ಕೆಲ ದೇಶಗಳು ಸೂಚನೆ ನೀಡಿದೆ. ಇತ್ತ ಬಹಿರಂಗಾಗಿ ಯಾರೂ ಕೂಡ ರಷ್ಯಾ ವಿರುದ್ಧ ನಿಂತಿಲ್ಲ. ಇದೀಗ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಉಕ್ರೇನ್‌ನಲ್ಲಿ ಮಕ್ಕಳ ವಿರುದ್ಧ ನಡೆಸಿದ ಯುದ್ಧ ಅಪರಾಧಕ್ಕೆ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್, ಪುಟಿನ್ ವಿರುದ್ದ ಅರೆಸ್ಟ್ ವಾರೆಂಟ್ ಹೊರಡಿಸಿದೆ.
ಉಕ್ರೇನ್ ಮೇಲಿನ ಯುದ್ಧದ ಅವಧಿಯಲ್ಲಿನ ಉಕ್ರೇನ್‌ನ ಮಕ್ಕಳನ್ನು ಬಲವಂತವಾಗಿ ಅಪಹರಣದ ಮಾಡಿದ ಪ್ರಕರಣ ಸಂಬಂಧ ಪುಟಿನ್ ವಿರುದ್ಧ ಈ ವಾರಂಟ್ ಹೊರಡಿಸಲಾಗಿದೆ. ತನ್ನ ಆದೇಶದ ಕುರಿತು ಶುಕ್ರವಾರ ಇಲ್ಲಿ ಪ್ರಕಟಣೆ ಹೊರಡಿಸಿರುವ ನ್ಯಾಯಾಲಯ ‘ಮಕ್ಕಳನ್ನು ಕಾನೂನು ಬಾಹಿರವಾಗಿ ಅಪಹರಣ ಮಾಡಿದ ಮತ್ತು ಅವರನ್ನು ಉಕ್ರೇನ್‌ನಿಂದ ರಷ್ಯಾಕ್ಕೆ ಕಾನೂನುಬಾಹಿರವಾಗಿ ಸ್ಥಳಾಂತರ ಮಾಡಿದ ಯುದ್ಧಾಪರಾಧಕ್ಕೆ ಪುಟಿನ್ ಕಾರಣರಾಗಿದ್ದಾರೆ. ವಿಚಾರಣಾ ಪೂರ್ವ ಹಂತದ ಪರಿಶೀಲನೆ ವೇಳೆ ಪ್ರತಿ ಆರೋಪಿ ಕೂಡಾ ಕಾರಣರಾಗಿರುವುದು ಕಂಡುಬಂದಿದೆ’ ಎಂದು ಹೇಳಿದೆ.
ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಆಪ್ತರೇ ಹತ್ಯೆ ಮಾಡ್ತಾರೆ: ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಭವಿಷ್ಯ
ಪುಟಿನ್ ಜೊತೆಗೆ, ರಷ್ಯಾದ ಮಕ್ಕಳ ಹಕ್ಕುಗಳ ಕಚೇರಿಯ ಆಯುಕ್ತೆ ಮರಿಯಾ ಅಲೆಕ್ಸೆಯೇವ್ನಾ ಲೋವಾ-ಬೆಲೋವಾ ವಿರುದ್ಧವೂ ವಾರಂಟ್ ಹೊರಡಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಸತತ ಯುದ್ಧದಿಂದ ರಷ್ಯಾ ಇದೀಗ ಸಂಕಷ್ಟಕ್ಕೆ ಸಿಲುಕಿದೆ. ಇತ್ತ ಯುದ್ಧ ಹಿಂಪಡೆಯದೇ ಪ್ರತಿಷ್ಠೆಗಾಗಿ ಹೋರಾಟ ನಡಸುತ್ತಿದೆ. ಒಂದು ವರ್ಷದಿಂದ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಹೆಚ್ಚುಕಮ್ಮಿ ದಿವಾಳಿಯಂಚಿಗೆ ಬಂದಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ‘ಯುದ್ಧದಿಂದಾಗಿ ಈಗಾಗಲೇ ದೇಶದಲ್ಲಿರುವ ಹಣ ಖಾಲಿಯಾಗುತ್ತಿದ್ದು, ಮುಂದಿನ ವರ್ಷ ಖರ್ಚಿಗೆ ಹಣವಿರುವುದಿಲ್ಲ. ದೇಶದ ಆರ್ಥಿಕತೆ ಕಾಪಾಡಲು ಸ್ನೇಹಿತ ರಾಷ್ಟ್ರಗಳ ಹೂಡಿಕೆ ಅಗತ್ಯವಿದೆ’ ಎಂದು ರಷ್ಯಾದ ಖ್ಯಾತ ಉದ್ಯಮಿ ಒಲೆಗ್ ಡೆರಿಪಾಸ್ಕಾ ಹೇಳಿದ್ದಾರೆ.
ಪಾಶ್ಚಾತ್ಯ ದೇಶಗಳು ನಿರ್ಬಂಧ ಹೇರಿದ್ದರ ಹೊರತಾಗಿಯೂ ದೇಶದ ಆರ್ಥಿಕತೆ ಚೆನ್ನಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೊಗಳಿಕೊಂಡ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ. ಡೆರಿಪಾಸ್ಕಾ ಹೇಳಿಕೆಯನ್ನು ರಷ್ಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮ ‘ಟಾಸ್’ ವರದಿ ಮಾಡಿದೆ.
ಉಕ್ರೇನ್ ಯುದ್ಧದಲ್ಲಿ ಹೋರಾಡಲು ನಿರಾಕರಿಸಿದ ಯೋಧನ ತಲೆಗೆ ಸುತ್ತಿಗೆ ಬಡಿದು ಸಾಯಿಸಿದ ರಷ್ಯಾ!
ಸೈಬೀರಿಯಾದಲ್ಲಿ ನಡೆದ ಆರ್ಥಿಕ ಶೃಂಗವೊಂದರಲ್ಲಿ ಮಾತನಾಡಿದ ರಷ್ಯಾದ ಶತಕೋಟ್ಯಧಿಪತಿ ಉದ್ಯಮಿ ಒಲೆಗ್ ಡೆರಿಪಾಸ್ಕಾ, ‘ಇನ್ನೊಂದು ವರ್ಷದೊಳಗೆ ರಷ್ಯಾದ ಬೊಕ್ಕಸ ಖಾಲಿಯಾಗಬಹುದು. ಮುಂದಿನ ವರ್ಷ ಖರ್ಚಿಗೆ ಹಣವಿರುವುದಿಲ್ಲ. ನಮಗೆ ವಿದೇಶಿ ಹೂಡಿಕೆದಾರರು ಬೇಕು. ವಿಶೇಷವಾಗಿ ಸ್ನೇಹಿತ ರಾಷ್ಟ್ರಗಳಿಂದ ಹೂಡಿಕೆದಾರರು ಬರಬೇಕು. ರಷ್ಯಾ ತನ್ನ ಮಾರುಕಟ್ಟೆಗಳನ್ನು ಆಕರ್ಷಕವಾಗಿಸಿ ಹೂಡಿಕೆಗೆ ಸೂಕ್ತ ವಾತಾವರಣ ನಿರ್ಮಿಸಿದರೆ ಮಾತ್ರ ಹೂಡಿಕೆದಾರರು ಬರುತ್ತಾರೆ’ ಎಂದು ಹೇಳಿದ್ದಾರೆ.