ಇನ್ಫೋಸಿಸ್‌ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್‌ ಬ್ರಿಟನ್‌ ಮುಂದಿನ ಪ್ರಧಾನಿ?

By Santosh Naik  |  First Published Jul 7, 2022, 3:16 PM IST

ತನ್ನ ಸಂಪುಟದ ಅಂದಾಜು 40ಕ್ಕೂ ಅಧಿಕ ಸಚಿವರ ರಾಜೀನಾಮೆಯ ಬೆನ್ನಲ್ಲಿಯೇ ಇಂಗ್ಲೆಂಡ್‌ ಪ್ರಧಾನಿ ಸ್ಥಾನಕ್ಕೆ ಬೊರಿಸ್‌ ಜಾನ್ಸನ್‌ ಗುರುವಾರ ರಾಜೀನಾಮೆ ಘೋಷಣೆ ಮಾಡುವುದು ಖಚಿತವಾಗಿದೆ. ಇದರ ಬೆನಲ್ಲಿಯೇ ಬ್ರಿಟನ್‌ನ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಆರಂಭವಾಗಿದ್ದು, ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್‌, ಕನ್ಸರ್ವೇಟಿವ್‌ ಪಕ್ಷದ ಆಯ್ಕೆಯಾಗುವ ಸಾಧ್ಯತೆ ಇದೆ.
 


ಲಂಡನ್‌ (ಜುಲೈ 7): ಸಾಲು ಸಾಲು ಹಗರಣಗಳಿಂದ ಸ್ವಪಕ್ಷೀಯರಿಂದಲೇ ವಿರೋಧ ಕಟ್ಟಿಕೊಂಡ ಬ್ರಿಟನ್‌ ಪ್ರಧಾನಿ (Britain prime minister) ಬೊರಿಸ್‌ ಜಾನ್ಸನ್‌ (Boris Johnson) ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದು ಖಚಿತವಾಗಿದೆ. ಕೊನೆಯ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿ ರಾಜೀನಾಮೆ ಘೋಷಣೆ ಮಾಡಲಿದ್ದಾರೆ ಎಂದು ಬ್ರಿಟನ್‌ ಮಾಧ್ಯಮಗಳು ವರದಿ ಮಾಡಿದೆ. ಇದರ ಬೆನ್ನಲ್ಲಿಯೇ ಬ್ರಿಟನ್‌ ಮುಂದಿನ ಪ್ರಧಾನಿ ಯಾರಾಗಬಹುದು ಎನ್ನುವ ಕುತೂಹಲ ಆರಂಭವಾಗಿದೆ.

ಈಗಾಗಲೇ 40ಕ್ಕೂ ಅಧಿಕ ಸಚಿವರು ರಾಜೀನಾಮೆ ನೀಡಿದ್ದರಿಂದ ಬೊರಿಸ್‌ ಜಾನ್ಸನ್‌ ಪದಾತ್ಯಾಗ ಮಾಡಲು ನಿರ್ಧರಿಸಿದ್ದಾರೆ. ಅದರ ಜೊತೆಗೆ ಕನ್ಸರ್ವೇಟಿವ್‌ ಪಕ್ಷವು (Conservative Party) ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Infosys Narayana Murthy son in law) ಅವರ ಅಳಿಯ ಅವರನ್ನು ಮುಂದಿನ ನಾಯಕರನ್ನಾಗಿ ಆಯ್ಕೆ ಮಾಡಲಿದೆ ಎಂದು ವರದಿಯಾಗಿದೆ. ಹಾಗೇನಾದರೂ ಆದಲ್ಲಿ ಬ್ರಿಟನ್‌ನ ಮುಂದಿನ ಪ್ರಧಾನಿಯಾಗಿ ರಿಷಿ ಸುನಾಕ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಮುಂದಿನ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಮತ್ತು ಪ್ರಧಾನ ಮಂತ್ರಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ವಿಚಾರ ಇಂಗ್ಲೆಂಡ್‌ನಲ್ಲಿ ಟ್ರೆಂಡಿಂಗ್‌ ಆಗಿದ್ದು, ಈ ವಿಚಾರದಲ್ಲಿ ಬಹುತೇಕ ಮುಕ್ತ ರೇಸ್ ಕಂಡುಬಂದಿದೆ. ತಮ್ಮ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ರಿಷಿ ಸುನಾಕ್‌, ವಿದೇಶಾಂಗ ಕಾರ್ಯದರ್ಶಿ ಲಿಜ್‌ ಟ್ರಸ್,ಮಾಜಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್  ಸೇರಿದಂತೆ ಉನ್ನತ ಅಧಿಕಾರಿಗಳು ಪ್ರಧಾನಿಯಾಗುವ ರೇಸ್‌ನಲ್ಲಿದ್ದಾರೆ.

ಘೋಷಿತ ಅಭ್ಯರ್ಥಿಗಳ ಪಟ್ಟಿಯನ್ನು ಎರಡಕ್ಕೆ ಇಳಿಸಲು ಸಂಸತ್ತಿನ 358 ಕನ್ಸರ್ವೇಟಿವ್ ಸದಸ್ಯರು ಮತ ಚಲಾಯಿಸುವುದರೊಂದಿಗೆ ನಾಯಕತ್ವದ ಚುನಾವಣೆಯ ಮೊದಲ ಹಂತವು ಪ್ರಾರಂಭವಾಗುತ್ತದೆ. ನಂತರ ಕನ್ಸರ್ವೇಟಿವ್ ಪಕ್ಷದ 180,000 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರು ಮುಂದಿನ ನಾಯಕನನ್ನು ಆಯ್ಕೆ ಮಾಡಲು ಮತ ಹಾಕುತ್ತಾರೆ.

ಯಾರಿವರು ರಿಷಿ ಸುನಾಕ್‌: ವೆಸ್ಟ್‌ ಮಿನಿಸ್ಟರ್‌ನ ಅತ್ಯಂತ ಪ್ರಬಲ ನಾಯಕ ರಿಷಿ ಸುನಾಕ್‌. ಇಂಗ್ಲೆಂಡ್‌ ಕೋವಿಡ್‌ ಬೆಂಬಲಿತ ಕಾರ್ಯಕ್ರಮಗಳಿಗೆ ದೊಡ್ಡ ಮಟ್ಟದ ಬೆಂಬಲಿಗರಾಗಿದ್ದರು. ಬೊರಿಸ್‌ ಜಾನ್ಸನ್‌ ಅವರ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಇವರ ಹೆಸರು ಪೇ ಗೇಟ್‌ ಹಗರಣದಲ್ಲಿ ಜಾನ್ಸನ್‌ ಅವರೊಂದಿಗೆ ಕೇಳಿ ಬಂದಿತ್ತು. ಇದರ ಬೆನ್ನಲ್ಲಿಯೇ ಅವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿತ್ತು.

42 ವರ್ಷದ ರಿಷಿ ಸುನಕ್ ಅವರನ್ನು ಬೋರಿಸ್ ಜಾನ್ಸನ್ 2020ರ ಫೆಬ್ರವರಿಯಲ್ಲಿ ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿದ್ದರು. ಖಜಾನೆಯ ಚಾನ್ಸಲರ್‌ ಆಗಿ ನೇಮಕವಾಗಿದ್ದ ಇವರು ಮೊದಲ ಬಾರಿಗೆ ಪೂರ್ಣ ಕ್ಯಾಬಿನೆಟ್‌ ಸ್ಥಾನವನ್ನು ಪಡೆದಿದ್ದರು.

ಬ್ರಿಟನ್‌ ಸಚಿವ, ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್‌ ರಾಜೀನಾಮೆ

ಮಾಜಿ ರಕ್ಷಣಾ ಕಾರ್ಯದರ್ಶಿ ಪೆನ್ನಿ ಮೊರ್ಡಾಂಟ್ ಜೊತೆಗೆ ಮುಂದಿನ ಪ್ರಧಾನಿಯಾಗಿ ರಿಷಿ ಅನರನ್ನು ನೆಚ್ಚಿನವರಾಗಿ ಗಮನಿಸಿದ್ದಾರೆ. ವ್ಯಾಪಾರಗಳು ಮತ್ತು ಕಾರ್ಮಿಕರಿಗೆ ಸಹಾಯ ಮಾಡಲು ಹತ್ತಾರು ಶತಕೋಟಿ ಪೌಂಡ್‌ಗಳ ಬೃಹತ್ ಪ್ಯಾಕೇಜ್ ಅನ್ನು ರೂಪಿಸಿದ ನಂತರ ಅವರು ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಜನಪ್ರಿಯರಾದರು. "ಡಿಶಿ" ರಿಷಿ ಎಂಬ ಅಡ್ಡಹೆಸರನ್ನು ಇವರು ಹೊಂದಿದ್ದು, ಪತ್ನಿ ಅಕ್ಷತಾ ಮೂರ್ತಿ ವಿಚಾರವಾಗಿ ಎದುರಾದ ತೆರಿಗೆ ಸಂಬಂಧಿತ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಹಿಂಜರಿದಿದ್ದರು. ಕೋವಿಡ್ ಲಾಕ್‌ಡೌನ್ ಅನ್ನು ಧಿಕ್ಕರಿಸಿ ಡೌನಿಂಗ್ ಸ್ಟ್ರೀಟ್ ಕೂಟದಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ದಂಡವನ್ನೂ ವಿಧಿಸಲಾಗಿತ್ತು.

ಅಕ್ಷತಾ ಮೂರ್ತಿ ತೆರಿಗೆ ವಿನಾಯಿತಿ ವಿವಾದ: ಸ್ವತಂತ್ರ ತನಿಖೆ ನಡೆಸಲು ಪತಿ ರಿಷಿ ಆಗ್ರಹ

ಪಂಜಾಬ್‌ ಮೂಲದ ರಿಷಿ ಸುನಾಕ್‌: ರಿಷಿ ಸುನಾಕ್‌ ಅವರ ಕುಟುಂಬ ಪಂಜಾಬ್‌ ಮೂಲದವರು. ಇನ್ಫೋಸಿಸ್‌ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಇಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದರು.

click me!