ಆಸ್ಟೇಲಿಯಾದಲ್ಲಿ ಭಾರತೀಯ ಯುವತಿಗೆ ಕಲ್ಚರ್ ಶಾಕ್; ಸಂಜೆ 5ಕ್ಕೆ ಅಂಗಡಿ ಕ್ಲೋಸ್, ಯಾರಿಗೂ ಸರ್ ಅನ್ನಂಗಿಲ್ಲ!

Published : Sep 11, 2026, 01:36 PM IST
Woman shares her Australian Experience

ಸಾರಾಂಶ

ಆಸ್ಟ್ರೇಲಿಯಾಗೆ ತೆರಳಿದ ಭಾರತೀಯ ಯುವತಿ ದಿಶಾ ಶಾ ತಮಗಾದ 5 ಪ್ರಮುಖ 'ಕಲ್ಚರ್ ಶಾಕ್' ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಂಜೆ 5ಕ್ಕೆ ಅಂಗಡಿಗಳ ಬಂದ್, ಕುದುರೆ ಮೇಲಿನ ಪೊಲೀಸರು, 'ಸರ್-ಮೇಡಂ' ಇಲ್ಲದ ಸಂಸ್ಕೃತಿ, ಮತ್ತು ಕಟ್ಟುನಿಟ್ಟಾದ ವರ್ಕ್-ಲೈಫ್ ಬ್ಯಾಲೆನ್ಸ್ ಸೇರಿದಂತೆ ಅಲ್ಲಿನ ಜೀವನಶೈಲಿಯ ವ್ಯತ್ಯಾಸಗಳನ್ನು ಅವರು ವಿವರಿಸಿದ್ದಾರೆ.

ಉನ್ನತ ವಿದ್ಯಾಭ್ಯಾಸಕ್ಕಾಗಲಿ ಅಥವಾ ಕೈತುಂಬಾ ಸಂಬಳ ತರುವ ಉದ್ಯೋಗಕ್ಕಾಗಲಿ ವಿದೇಶಕ್ಕೆ ಹಾರುವ ಭಾರತೀಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಹುಟ್ಟಿ ಬೆಳೆದ ನೆಲವನ್ನು ಬಿಟ್ಟು ಬೇರೊಂದು ದೇಶಕ್ಕೆ ಹೋದಾಗ ಅಲ್ಲಿನ ಭಾಷೆ, ಆಹಾರ, ಹವಾಮಾನ ಹಾಗೂ ಮುಖ್ಯವಾಗಿ ಜೀವನಶೈಲಿಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ಅಲ್ಲಿನ ನಿಯಮಗಳು, ಸಂಸ್ಕೃತಿ ನಮಗೆ ಭಾರೀ ‘ಕಲ್ಚರ್ ಶಾಕ್’ (Culture Shock) ನೀಡುತ್ತವೆ.

ಇದೇ ರೀತಿಯ ಅನುಭವ ಭಾರತೀಯ ಮೂಲದ ಯುವತಿ ದಿಶಾ ಶಾ ಅವರಿಗೂ ಆಗಿದೆ. ಆಸ್ಟ್ರೇಲಿಯಾಗೆ ತೆರಳಿದ ಬಳಿಕ ತಮಗೆ ಅತ್ಯಂತ ಅಚ್ಚರಿ ಮೂಡಿಸಿದ 5 ಪ್ರಮುಖ ಜೀವನಶೈಲಿಯ ವ್ಯತ್ಯಾಸಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದು, ಸದ್ಯ ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ದಿಶಾಗೆ ಆಸ್ಟ್ರೇಲಿಯಾದಲ್ಲಿ ಅಚ್ಚರಿ ಮೂಡಿಸಿದ 5 ಸಂಗತಿಗಳು ಇಲ್ಲಿವೆ:

1. ಸಂಜೆ 5 ಗಂಟೆಗೇ ಅಂಗಡಿ-ಮುಂಗಟ್ಟುಗಳು ಕ್ಲೋಸ್!

ಭಾರತದ ಬೆಂಗಳೂರು, ಮುಂಬೈ, ದೆಹಲಿಯಂತಹ ಮೆಟ್ರೋ ನಗರಗಳಲ್ಲಿ ರಾತ್ರಿ 10-11 ಗಂಟೆಯಾದರೂ ಮಾರುಕಟ್ಟೆಗಳು ಜನರಿಂದ ಗಿಜಿಗುಡುತ್ತಿರುತ್ತವೆ. ಆದರೆ, ಆಸ್ಟ್ರೇಲಿಯಾದಲ್ಲಿ ಸಂಜೆ 5 ಗಂಟೆಯಾಗುತ್ತಿದ್ದಂತೆ ಬಹುತೇಕ ಎಲ್ಲಾ ರಿಟೇಲ್ ಅಂಗಡಿಗಳು ಮತ್ತು ಶಾಪಿಂಗ್ ಮಳಿಗೆಗಳು ಬಾಗಿಲು ಮುಚ್ಚುತ್ತವೆ. ಸಂಜೆಯ ನಂತರ ರಸ್ತೆಗಳಲ್ಲಿ ಯಾವುದೇ ವ್ಯಾಪಾರ ಗದ್ದಲವಿರುವುದಿಲ್ಲ.

2. ರಸ್ತೆಗಳಲ್ಲಿ ಕುದುರೆ ಸವಾರಿ ಮಾಡುವ ಪೊಲೀಸರು:

ನಗರದ ಪ್ರಮುಖ ರಸ್ತೆಗಳಲ್ಲಿ ಮತ್ತು ಜನದಟ್ಟಣೆಯ ವಾಣಿಜ್ಯ ಪ್ರದೇಶಗಳಲ್ಲಿ ಪೊಲೀಸರು ಕುದುರೆಗಳ ಮೇಲೆ ಕುಳಿತು ಗಸ್ತು (ಪ್ಯಾಟ್ರೋಲಿಂಗ್) ತಿರುಗುವುದು ದಿಶಾ ಅವರಿಗೆ ಆರಂಭದಲ್ಲಿ ವಿಸ್ಮಯ ಮೂಡಿಸಿತ್ತು. ಇದು ಅಲ್ಲಿನ ದೈನಂದಿನ ಭದ್ರತೆಯ ಸಾಮಾನ್ಯ ಭಾಗವಾಗಿದ್ದರೂ, ಭಾರತದಿಂದ ಹೋದವರಿಗೆ ವಿಶೇಷವಾಗಿ ಕಾಣಿಸುತ್ತದೆ.

3. 'ಸರ್', 'ಮೇಡಂ' ಅನ್ನೋ ಸಂಸ್ಕೃತಿಯೇ ಇಲ್ಲ:

ನಮ್ಮಲ್ಲಿ ಹಿರಿಯರು, ಮೇಲಧಿಕಾರಿಗಳು, ವೈದ್ಯರು ಅಥವಾ ಶಿಕ್ಷಕರನ್ನು ‘ಸರ್’, ‘ಮೇಡಂ’, ‘ಅಂಕಲ್’, ‘ಆಂಟಿ’ ಎಂದು ಕರೆಯುವುದು ಸಂಪ್ರದಾಯ. ಆದರೆ, ಆಸ್ಟ್ರೇಲಿಯಾದಲ್ಲಿ ಇಂತಹ ಯಾವುದೇ ಔಪಚಾರಿಕ ಪದಗಳಿಲ್ಲ. ಕಚೇರಿಯ ಬಾಸ್ ಆಗಿರಲಿ, ಆಸ್ಪತ್ರೆಯ ವೈದ್ಯರಾಗಿರಲಿ ಅಥವಾ ಶಿಕ್ಷಕರಾಗಿರಲಿ, ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರನ್ನೂ ಅವರ ಮೊದಲ ಹೆಸರಿನಿಂದಲೇ (First Name) ನೇರವಾಗಿ ಕರೆಯಲಾಗುತ್ತದೆ.

4. ಕಟ್ಟುನಿಟ್ಟಾದ 'ವರ್ಕ್-ಲೈಫ್ ಬ್ಯಾಲೆನ್ಸ್':

ಭಾರತದಲ್ಲಿ ಕಚೇರಿಯಲ್ಲಿ ತಡರಾತ್ರಿಯವರೆಗೂ ಕೆಲಸ ಮಾಡುವುದನ್ನು ಡೆಡಿಕೇಷನ್ ಎಂದು ಬಿಂಬಿಸುವುದಿದೆ. ಆದರೆ ಆಸ್ಟ್ರೇಲಿಯನ್ನರು ಕೆಲಸ ಮುಗಿದ ತಕ್ಷಣ ಲ್ಯಾಪ್‌ಟಾಪ್ ಮುಚ್ಚುತ್ತಾರೆ. ಅಲ್ಲಿ ಯಾರೂ ಓವರ್‌ಟೈಮ್ ಮಾಡುವುದನ್ನು ಹೆಮ್ಮೆಯ ವಿಷಯ ಎಂದು ಭಾವಿಸುವುದಿಲ್ಲ. ಬದಲಾಗಿ ತಮ್ಮ ವೈಯಕ್ತಿಕ ಬದುಕು, ಹವ್ಯಾಸ, ಆರೋಗ್ಯ ಮತ್ತು ಕುಟುಂಬದ ಜೊತೆ ಕಳೆಯುವ ಬಿಡುವಿನ ಸಮಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ.

5. ಅತ್ಯಾಧುನಿಕ ಹಾಗೂ ಸುಸಜ್ಜಿತ ಸಾರ್ವಜನಿಕ ಪಾರ್ಕ್‌ಗಳು:

ಆಸ್ಟ್ರೇಲಿಯಾದ ಸ್ಥಳೀಯ ಉದ್ಯಾನವನಗಳು ಮತ್ತು ಸಾರ್ವಜನಿಕ ತಾಣಗಳ ನಿರ್ವಹಣೆ ಅದ್ಭುತವಾಗಿದೆ. ಬಹುತೇಕ ಪಾರ್ಕ್‌ಗಳಲ್ಲಿ ಮಕ್ಕಳ ಆಟದ ಮೈದಾನ, ಹೈಜಿನ್ ಶೌಚಾಲಯಗಳು, ವಾಕಿಂಗ್ ಪಾತ್‌ಗಳ ಜೊತೆಗೆ ಸಾರ್ವಜನಿಕರು ಉಚಿತವಾಗಿ ಬಳಸಬಹುದಾದ ವಿದ್ಯುತ್ ಚಾಲಿತ 'ಬಾರ್ಬೆಕ್ಯೂ' (BBQ) ಸೌಲಭ್ಯಗಳೂ ಲಭ್ಯವಿವೆ.

ನೆಟ್ಟಿಗರ ಮೆಚ್ಚುಗೆ, ತರಹೇವಾರಿ ಚರ್ಚೆ:

ದಿಶಾ ಶಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. "ಕೇರಳದ ತಿರುವನಂತಪುರಂನಲ್ಲಿಯೂ ಪೊಲೀಸರು ರಾತ್ರಿ ವೇಳೆ ಕುದುರೆಗಳ ಮೇಲೆ ಗಸ್ತು ತಿರುಗುತ್ತಾರೆ, ಹಾಗಾಗಿ ಇದು ನಮಗೇನೂ ಹೊಸದಲ್ಲ" ಎಂದು ಮಲಯಾಳಿ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, "ಕಾನೂನಿಗಿಂತ ಜನರ ಸ್ವಯಂ ಶಿಸ್ತು ಮತ್ತು ಕೆಲಸದ ಸ್ಥಳಗಳಲ್ಲಿ ಮಾನಸಿಕ ಆರೋಗ್ಯಕ್ಕೆ ನೀಡುವ ಗೌರವವೇ ಇಂತಹ ಸುಂದರ ಸಮಾಜಕ್ಕೆ ಕಾರಣ" ಎಂದು ಶ್ಲಾಘಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವವನ್ನೇ ಬೆಚ್ಚಿ ಬೀಳಿಸಿದ ಅಮೆರಿಕ ಮೇಲಿನ 9/11 ದಾಳಿಗೆ 25 ವರ್ಷ..! ಲಾಡೆನ್ ಹೊಡೆದುರುಳಿದಿದ್ದು ಇನ್ನೂ ಇಂಟ್ರೆಸ್ಟಿಂಗ್ ಸ್ಟೋರಿ!
ಕರ್ನಾಟಕದ ಗ್ಯಾರಂಟಿ ಸ್ಕೀಮ್ ಕಾಪಿ ಮಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್! ಇಲ್ಲಿ ₹2000, ಅಲ್ಲಿ $5000