ವಿಶ್ವವನ್ನೇ ಬೆಚ್ಚಿ ಬೀಳಿಸಿದ ಅಮೆರಿಕ ಮೇಲಿನ 9/11 ದಾಳಿಗೆ 25 ವರ್ಷ..! ಲಾಡೆನ್ ಹೊಡೆದುರುಳಿದಿದ್ದು ಇನ್ನೂ ಇಂಟ್ರೆಸ್ಟಿಂಗ್ ಸ್ಟೋರಿ!

Kannadaprabha News   | Kannada Prabha
Published : Sep 11, 2026, 10:14 AM IST
9/11 Osama bin laden killing story

ಸಾರಾಂಶ

ಸೆಪ್ಟೆಂಬರ್‌ 11, 2001 ರಂದು ಅಲ್‌ ಖೈದಾ ಉಗ್ರರು ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ ಮತ್ತು ಪೆಂಟಗನ್‌ ಮೇಲೆ ವೈಮಾನಿಕ ದಾಳಿ ನಡೆಸಿದರು. ಈ ದಾಳಿಯು "ಭಯೋತ್ಪಾದನೆ ವಿರುದ್ಧದ ಯುದ್ಧ"ಕ್ಕೆ ಕಾರಣವಾಯಿತು, ಇದು ಅಫ್ಘಾನಿಸ್ತಾನದ ಮೇಲಿನ ಆಕ್ರಮಣ ಮತ್ತು ಅಂತಿಮವಾಗಿ ಪಾಕಿಸ್ತಾನದಲ್ಲಿ ಒಸಾಮಾ ಬಿನ್ ಲಾಡೆನ್‌ನ ಹತ್ಯೆಯಲ್ಲಿ ಕೊನೆಗೊಂಡಿತು.

ಅದು ಸೆಪ್ಟೆಂಬರ್‌ 11, 2001. ಅಮೆರಿಕನ್ನರು ಆಗಷ್ಟೇ ಬೆಚ್ಚಗಿನ ನಿದ್ದೆಯಿಂದ ಎದ್ದೇಳುತ್ತಿದ್ದರು. ಅಷ್ಟರಲ್ಲಾಗಲೇ ನ್ಯೂಯಾರ್ಕ್‌ನಲ್ಲಿರುವ ವಿಶ್ವ ವಾಣಿಜ್ಯ ಕೇಂದ್ರದ (ವರ್ಲ್ಡ್‌ ಟ್ರೇಡ್‌ ಸೆಂಟರ್‌) ಅವಳಿ ಗೋಪುರಗಳ (ಟ್ವಿನ್‌ ಟವರ್‌) ಮೇಲೆ ವೈಮಾನಿಕ ದಾಳಿ ನಡೆದಿತ್ತು. ಪೆಂಟಗನ್‌ ಹಾಗೂ ಪೆನ್ಸಿಲ್ವೇನಿಯಾದಲ್ಲೂ ಉಗ್ರರ ಕರಿನೆರಳು ಬಿದ್ದಿತ್ತು. ಕೇವಲ 1 ಗಂಟೆ 17 ನಿಮಿಷಗಳ ಅವಧಿಯಲ್ಲಿ ನಡೆದ ದಾಳಿಗಳ ಸರಣಿಯಲ್ಲಿ 2,977 ಅಮಾಯಕರು ಬಲಿಯಾಗಿದ್ದರು. ಲಾಡೆನ್‌ ನೇತೃತ್ವದ ಅಲ್‌ ಖೈದಾ ನಡೆಸಿದ ಜಗತ್ತು ಕಂಡ ಭೀಕರ ದಾಳಿ ನಡೆದು ಇಂದಿಗೆ 25 ವರ್ಷ.

ಅವಳಿ ಗೋಪುರಗಳೇ ಗುರಿ

ನ್ಯೂಯಾರ್ಕ್‌ ನಾಗರಿಕರಿಗೆ 2001ರ ಸೆಪ್ಟೆಂಬರ್‌ 11 ಎಂದಿನಂತೆಯೇ ಸಾಮಾನ್ಯ ದಿನವಾಗಿತ್ತು. ಆದರೆ ಬೆಳಿಗ್ಗೆ 8:46ಕ್ಕೆ ಅಮೆರಿಕನ್‌ ಏರ್‌ಲೈನ್ಸ್‌ನ ಫ್ಲೈಟ್‌ 11 ವಿಮಾನವು ವರ್ಲ್ಡ್‌ ಟ್ರೇಡ್‌ ಸೆಂಟರ್‌ನ ಉತ್ತರ ಗೋಪುರಕ್ಕೆ ಅಪ್ಪಳಿಸಿತು. ಆರಂಭದಲ್ಲಿ ಅಪಘಾತವೆಂದೇ ಭಾವಿಸಲಾಗಿತ್ತು. ಅದಾದ ಕೆಲವೇ ನಿಮಿಷಗಳಲ್ಲಿ, ಅಂದರೆ 9:03ಕ್ಕೆ ಯುನೈಟೆಡ್‌ ಏರ್‌ಲೈನ್ಸ್‌ನ ಫ್ಲೈಟ್‌ 175 ದಕ್ಷಿಣ ಗೋಪುರಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ 110 ಅಂತಸ್ತಿನ ವರ್ಲ್ಡ್‌ ಟ್ರೇಡ್‌ ಸೆಂಟರ್‌ನ ದಕ್ಷಿಣ ಗೋಪುರ ಬೆಳಿಗ್ಗೆ 9:59ಕ್ಕೆ ನೋಡನೋಡುತ್ತಿದ್ದಂತೆ ಸಂಪೂರ್ಣವಾಗಿ ಕುಸಿದುಬಿತ್ತು. ಉತ್ತರ ಗೋಪುರ 10:28ಕ್ಕೆ ಧರಾಶಾಹಿಯಾಯಿತು.

ಅಮೆರಿಕ ಚೇತರಿಸಿಕೊಳ್ಳುವ ಮುನ್ನವೇ ಅಮೆರಿಕನ್‌ ಏರ್‌ಲೈನ್ಸ್‌ನ ಫ್ಲೈಟ್‌ 77 ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿ ಪೆಂಟಗನ್‌ಗೆ ಅಪ್ಪಳಿಸಿತು. ಇತ್ತ ಯುನೈಟೆಡ್‌ ಏರ್‌ಲೈನ್ಸ್‌ನ ಫ್ಲೈಟ್‌ 93 ಅನ್ನು ಅಪಹರಿಸಿದ್ದ ಭಯೋತ್ಪಾದಕರು ಶ್ವೇತಭವನದತ್ತ ವಿಮಾನವನ್ನು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಆದರೆ ಪ್ರಯಾಣಿಕರ ಪ್ರತಿರೋಧವೊಡ್ಡಿದ್ದಕ್ಕೆ ವಪೆನ್ಸಿಲ್ವೇನಿಯಾದ ಶ್ಯಾಂಕ್ಸ್‌ವಿಲ್ಲೆಯಲ್ಲಿ ಹೊಲದಲ್ಲಿ ಪತನ ಗೊಂಡಿತು.

ಒಟ್ಟಾರೆ ದಾಳಿಗಳಲ್ಲಿ ವರ್ಲ್ಡ್‌ ಟ್ರೇಡ್‌ ಸೆಂಟರ್‌ನಲ್ಲಿ 2,753 ಮಂದಿ, ಪೆಂಟಗನ್‌ನಲ್ಲಿ 184 ಮಂದಿ ಹಾಗೂ ಫ್ಲೈಟ್‌ 93 ದಾಳಿಯಲ್ಲಿ 40 ಮಂದಿ ಬಲಿಯಾಗಿದ್ದರು.

ಸಮಯಾವಳಿ

ಬೆಳಿಗ್ಗೆ 8:46 ಮೊದಲ ದಾಳಿ ಅಮೆರಿಕನ್‌ ಏರ್‌ಲೈನ್ಸ್‌ ವಿಮಾನ 11 ಉತ್ತರ ಗೋಪುರ

ಬೆಳಿಗ್ಗೆ 9:03 ಎರಡನೇ ದಾಳಿ ಯುನೈಟೆಡ್‌ ಏರ್‌ಲೈನ್ಸ್‌ನ ವಿಮಾನ 175 ದಕ್ಷಿಣ ಗೋಪುರ

ಬೆಳಿಗ್ಗೆ 9:37 ಮೂರನೇ ದಾಳಿ ಅಮೆರಿಕನ್‌ ಏರನ್ಲೈನ್ಸ್‌ನ ವಿಮಾನ 77 ಪೆಂಟಗನ್‌

ಬೆಳಿಗ್ಗೆ 10:03 ನಾಲ್ಕನೇ ದಾಳಿ ಯುನೈಟೆಡ್‌ ಏರ್‌ಲೈನ್ಸ್‌ನ ವಿಮಾನ 93 ಪೆನ್ಸಿಲ್ವೇನಿಯಾ

19 ಉಗ್ರರು, 4 ವಿಮಾನಗಳ ಹೈಜಾಕ್‌

1990ರ ದಶಕದಲ್ಲಿ ಅಲ್‌ ಖೈದಾ ಮುಖ್ಯಸ್ಥ ಒಸಾಮಾ ಬಿನ್‌ ಲಾಡೆನ್‌ ಮತ್ತು ಉಗ್ರ ಖಾಲಿದ್‌ ಶೇಖ್‌ ಮೊಹಮ್ಮದ್‌ ದಾಳಿ ಯೋಜನೆ ರೂಪಿಸಿದರು. ಜರ್ಮನಿಯಲ್ಲಿ ಓದುತ್ತಿದ್ದ ಮೊಹಮ್ಮದ್‌ ಅಟ್ಟಾ ಸೇರಿದಂತೆ ಹಲವರು ಸಾಥ್‌ ನೀಡಿದರು. 15 ಸೌದಿ ಅರೇಬಿಯಾ, ಇಬ್ಬರು ಯುಎಇ, ಈಜಿಪ್ಟ್‌ ಮತ್ತು ಲೆಬನಾನ್‌ನ ತಲಾ ಇಬ್ಬರು ಸೇರಿದಂತೆ 19 ಉಗ್ರರು ಇದಕ್ಕೆ ಸಿದ್ಧರಾದರು. ಅಮೆರಿಕದ ಫ್ಲೋರಿಡಾ ಸೇರಿ ವಿವಿಧೆಡೆ ವಿಮಾನ ಹಾರಿಸುವ ತರಬೇತಿ ಪಡೆದಿದ್ದರು.

ಇವರೆಲ್ಲ ನಾಲ್ಕು ತಂಡಗಳಾಗಿ ವಿಂಗಡಣೆಗೊಂಡು, ಬಾಕ್ಸ್‌ ಕಟರ್‌ ಸೇರಿದಂತೆ ಸಣ್ಣ ಹರಿತವಾದ ಆಯುಧಗಳೊಂದಿಗೆ ವಿಮಾನಗಳನ್ನು ಏರಿದ್ದರು. ಟೇಕ್‌ಆಫ್‌ ಆಗಿ ಸೀಟ್‌ಬೆಲ್ಟ್‌ ಚಿಹ್ನೆ ಆಫ್‌ ಆಗುತ್ತಿದ್ದಂತೆ ಸಿಬ್ಬಂದಿ, ಪ್ರಯಾಣಿಕರ ಮೇಲೆ ದಾಳಿ ನಡೆಸಿ, ಕಾಕ್‌ಪಿಟ್‌ಗೆ ನುಗ್ಗಿದರು. ವಿಮಾನಗಳಲ್ಲಿ ಟ್ರಾನ್ಸ್‌ಪಾಂಡರ್‌ಗಳನ್ನು ಸ್ಥಗಿತಗೊಳಿಸಿ ವಿಮಾನ ಹೈಜಾಕ್‌ ಮಾಡಿ ಅವಳಿ ಗೋಪುರಗಳಿಗೆ ಡಿಕ್ಕಿಹೊಡೆಸಿ ಸಾವಿರಾರು ಜನರನ್ನು ಕೊಂದರು.

ಅಲ್‌ ಖೈದಾ ದಾಳಿ ನಡೆಸಿದ್ದು ಏಕೆ?

ಅಮೆರಿಕದ ವಿದೇಶಾಂಗ ನೀತಿಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ಅದರ ಪ್ರಾಬಲ್ಯವೇ ಪ್ರಮುಖ ಕಾರಣಗಳಾಗಿದ್ದವು. ಇಸ್ಲಾಂ ಧರ್ಮದ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಮೆಕ್ಕಾ ಮತ್ತು ಮದೀನಾ ಇರುವ ಸೌದಿ ಅರೇಬಿಯಾದಲ್ಲಿ ಅಮೆರಿಕದ ಸೇನಾ ಉಪಸ್ಥಿತಿಯನ್ನು ಲಾಡೆನ್‌ ತೀವ್ರವಾಗಿ ವಿರೋಧಿಸುತ್ತಿದ್ದನು. ಇದರ ಜತೆಗೆ ಕಡುವೈರಿ ಇಸ್ರೇಲ್‌ಗೆ ಅಮೆರಿಕ ನೀಡುತ್ತಿದ್ದ ಆರ್ಥಿಕ, ರಾಜಕೀಯ ಮತ್ತು ಮಿಲಿಟರಿ ಬೆಂಬಲವೂ ಆತನ ಆಕ್ರೋಶಕ್ಕೆ ಕಾರಣವಾಗಿತ್ತು. ಹೀ

ಆಫ್ಘನ್‌ ಮೇಲೆ ಮುಗಿಬಿದ್ದ ಅಮೆರಿಕ

ದಾಳಿಯ ನಂತರ ಅಮೆರಿಕದ ಆಗಿನ ಅಧ್ಯಕ್ಷ ಜಾರ್ಜ್‌ ಡಬ್ಲ್ಯೂ. ಬುಷ್‌ ''ವಾರ್‌ ಆನ್‌ ಟೆರರ್‌'' ಅಂದರೆ ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಘೋಷಿಸಿದರು. ಮೊದಲ ಗುರಿಯೇ ಅಫ್ಘಾನಿಸ್ತಾನವಾಗಿತ್ತು. ಯಾಕೆಂದರೆ ಲಾಡೆನ್‌ ಹಾಗೂ ಆತನ ಅಲ್‌ ಖೈದಾ ಸಹಚರರಿಗೆ ಅಫ್ಘಾನಿಸ್ತಾನವನ್ನು ಆಳುತ್ತಿದ್ದ ತಾಲಿಬಾನ್‌ ಆಡಳಿತ ಆಶ್ರಯ ನೀಡಿತ್ತು. ಅಮೆರಿಕ ಕೂಡಲೇ ಲಾಡೆನ್‌ ಅನ್ನು ಹಸ್ತಾಂತರಿಸಬೇಕೆಂದು ಒತ್ತಾಯಿಸಿತು. ಆದರೆ ತಾಲಿಬಾನ್‌ ಒಪ್ಪಲಿಲ್ಲ. ಸಾಕ್ಷಿ ಕೇಳಿತು. ಇದರಿಂದ ಅಮೆರಿಕ ''ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಮ್‌'' ಹೆಸರಿನಲ್ಲಿ ಅಫ್ಘಾನಿಸ್ತಾನದ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತು. ಕೆಲವೇ ತಿಂಗಳುಗಳಲ್ಲಿ ತಾಲಿಬಾನ್‌ ಆಡಳಿತ ಪತನವಾಯಿತು. ಅಮೆರಿಕ ಸೇನೆ ಹಿಡಿತಕ್ಕೆ ಬಂತು. ಸುಮಾರು 20 ವರ್ಷಗಳ ಬಳಿಕ, 2021ರ ಆಗಸ್ಟ್‌ನಲ್ಲಿ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ತಾಲಿಬಾನ್‌ ಮತ್ತೆ ಅಫ್ಘಾನಿಸ್ತಾನದ ಆಡಳಿತವನ್ನು ತನ್ನ ವಶಕ್ಕೆ ಪಡೆದುಕೊಂಡಿತು.

ಹೊಂಚು ಹಾಕಿ ಲಾಡೆನ್‌ ಹತ್ಯೆ

ಅಮೆರಿಕಗೆ 2001ರಲ್ಲೇ ಅಫ್ಘಾನಿಸ್ತಾನದ ತೋರಾ ಬೋರಾ ಪರ್ವತ ಪ್ರದೇಶದಲ್ಲಿ ಲಾಡೆನ್‌ ಅಡಗಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು. ಅಲ್ಲಿ ಬಾಂಬ್‌ ದಾಳಿ ನಡೆಸಿತು. ಆದರೆ ಆತ ಅಲ್ಲಿಂದ ಪಾಕ್‌ಗೆ ಪರಾರಿಯಾಗುವಲ್ಲಿ ಯಶಸ್ವಿಯಾದನು. ಮುಂದೆ 10 ವರ್ಷಗಳ ಸುದೀರ್ಘ ಹುಡುಕಾಟದ ನಂತರ ಅಂದಿನ ಅಮೆರಿಕ ಅಧ್ಯಕ್ಷನ ಬರಾಕ್ ಒಬಾಮ ಮಾರ್ಗದರ್ಶನದಲ್ಲಿ ಲಾಡೆನ್‌ನನ್ನು ಹೊಡೆದುರುಳಿಸಿತು.

ಅಲ್‌ ಖೈದಾದ ಬಂಧಿತರು ನೀಡಿದ ಮಾಹಿತಿ ಮೇರೆಗೆ ಲಾಡೆನ್‌ನ ನಂಬಿಕಸ್ಥ ಸಂದೇಶವಾಹಕನ ಅಬು ಅಹ್ಮದ್‌ ಅಲ್‌-ಕುವೈತಿ ಎಂಬಾತನ ಮಾಹಿತಿ ಸಂಗ್ರಹಿಸಿತ್ತು. ಜಾಡು ಹಿಡಿದು ಪಾಕಿಸ್ತಾನದ ಅಬೊಟ್ಟಾಬಾದ್‌ನಲ್ಲಿದ್ದ ಭವ್ಯ ಬಂಗಲೆ ಪತ್ತೆಹಚ್ಚಿತು. ಮೊಬೈಲ್‌, ಇಂಟರ್ನೆಟ್‌ ಬಳಸದ ಲಾಡೆನ್‌ ಗೆ ಕುವೈತಿಯೇ ನಂಬಿಕಸ್ಥನಾಗಿದ್ದ.ಆತ ಓಡಾಡುತ್ತಿದ್ದ ಬಂಗಲೆ ಮೇಲೆ ಆ ಮನೆಯಲ್ಲಿ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿಮೆ ಇತ್ತು. ಎತ್ತರದ ಗೋಡೆಗಳಿದ್ದವು. ಮನೆಯ ಕಸವನ್ನು ಹೊರಗೆ ನೀಡದೆ ಒಳಗೇ ಸುಡಲಾಗುತ್ತಿತ್ತು. ಅಲ್ಲಿ ಒಬ್ಬ ಎತ್ತರದ ವ್ಯಕ್ತಿ ಇದ್ದಾನೆಂಬ ಮಾಹಿತಿಯೂ ಸಿಕ್ಕಿತ್ತು. ಆ ವ್ಯಕ್ತಿಯನ್ನು ''ದಿ ಪೇಸರ್‌'' ಎಂದು ಕರೆಯಲಾಗುತ್ತಿತ್ತು. ಆತನೇ ಬಿನ್‌ ಲಾಡೆನ್‌ ಆಗಿರಬಹುದು ಎಂದು ನಿಗಾ ವಹಿಸಿತು. ಕೊನೆಗೆ 2011ರ ಮೇ 2ರಂದು ಅಮೆರಿಕದ ವಿಶೇಷ ಪಡೆಗಳು ''ಆಪರೇಷನ್‌ ನೆಪ್ಚೂನ್‌ ಸ್ಪಿಯರ್‌'' ಹೆಸರಿನಲ್ಲಿ ಎರಡು ಹೆಲಿಕಾಪ್ಟರ್‌ಗಳಲ್ಲಿ ಪಾಕಿಸ್ತಾನದ ಗಡಿಯೊಳಗೆ ನುಗ್ಗಿದ ಅಮೆರಿಕದ ವಿಶೇಷ ಕಮಾಂಡೋ ಪಡೆಗಳು ಲಾಡೆನ್‌ ಅಡಗಿದ್ದ ಬಂಗಲೆಗೆ ಇಳಿದವು. 40 ನಿಮಿಷಗಳಲ್ಲೇ ಲಾಡೆನ್‌ನನ್ನು ಹೊಡೆದುರುಳಿಸಲಾಯಿತು.

ಹತ್ಯೆಯ ನಂತರ ಲಾಡೆನ್‌ನ ಮೃತದೇಹವನ್ನು ವಶಕ್ಕೆ ಪಡೆದ ಅಮೆರಿಕನ್‌ ಪಡೆಗಳು ಆತನ ಶವವನ್ನು ಯಾವುದೇ ದೇಶಕ್ಕೆ ಹಸ್ತಾಂತರಿಸದೆ ಸಮುದ್ರದಲ್ಲಿ ಜಲಸಮಾಧಿ ಮಾಡಿತು ಆತನ ಸಮಾಧಿ ಭವಿಷ್ಯದಲ್ಲಿ ಉಗ್ರರ ಸಂಕೇತ ಸ್ಥಳವಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕದ ಗ್ಯಾರಂಟಿ ಸ್ಕೀಮ್ ಕಾಪಿ ಮಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್! ಇಲ್ಲಿ ₹2000, ಅಲ್ಲಿ $5000
ಮಿಸ್ಟರ್ ಸಿಂಗ್ ಜಾಹೀರಾತಿಗೆ ಭಾರಿ ಆಕ್ರೋಶ, ಅಮೆರಿಕದಿಂದ ಜನಾಂಗೀಯ ನಿಂದನೆ ವಿವಾದ