
ಎಡ್ಮಂಟನ್:ತೀವ್ರ ಹೃದಯಾಘಾತದಿಂದ ಬಳಲುತ್ತಿದ್ದರೂ, ಸುಮಾರು ಎಂಟು ಗಂಟೆಗಳ ಕಾಲ ಯಾವುದೇ ಸೂಕ್ತ ಚಿಕಿತ್ಸೆ ನೀಡದ ಕಾರಣ 44 ವರ್ಷದ ಭಾರತೀಯ ಮೂಲದ ವ್ಯಕ್ತಿ ಕೆನಡಾದ ಆದ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದು, ಅಲ್ಲಿನ ಆರೋಗ್ಯ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ. ಮೃತ ವ್ಯಕ್ತಿಯನ್ನು ಪ್ರಶಾಂತ್ ಶ್ರೀಕುಮಾರ್ ಎಂದು ಗುರುತಿಸಲಾಗಿದ್ದು, ಅವರು ಇಬ್ಬರು ಮಕ್ಕಳ ತಂದೆಯಾಗಿದ್ದರು. ಡಿಸೆಂಬರ್ 22ರಂದು ಕೆನಡಾದ ಎಡ್ಮಂಟನ್‌ನಲ್ಲಿರುವ ಗ್ರೇ ನನ್ಸ್ ಕಮ್ಯುನಿಟಿ ಆಸ್ಪತ್ರೆ (ಸರ್ಕಾರಿ ಆಸ್ಪತ್ರೆ)ಯಲ್ಲಿ ಈ ಘಟನೆ ಸಂಭವಿಸಿದೆ.
ಡಿಸೆಂಬರ್ 22ರಂದು ಕೆಲಸದಲ್ಲಿದ್ದ ವೇಳೆ ಪ್ರಶಾಂತ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಗಂಭೀರ ಸ್ಥಿತಿಯಲ್ಲಿದ್ದರೂ ಅವರನ್ನು ತುರ್ತು ಚಿಕಿತ್ಸಾ ವಿಭಾಗದ ವಿಶ್ರಾಂತಿ ಕೊಠಡಿಯಲ್ಲಿ ಕೂರಿಸಿ ಕಾಯುವಂತೆ ಮಾಡಲಾಯಿತು. ಪದೇಪದೇ ತೀವ್ರ ನೋವಾಗುತ್ತಿದೆ ಎಂದು ಗಮನಕ್ಕೆ ತಂದರೂ, ಆಸ್ಪತ್ರೆ ಸಿಬ್ಬಂದಿ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ಪ್ರಶಾಂತ್ ತಂದೆ ಕುಮಾರ್ ಶ್ರೀಕುಮಾರ್ ಆಸ್ಪತ್ರೆಗೆ ಆಗಮಿಸಿದರು. “ಪುತ್ರ ನನಗೆ, ‘ಅಪ್ಪಾ, ನೋವು ತಾಳಲಾಗುತ್ತಿಲ್ಲ’ ಎಂದು ಪದೇಪದೇ ಹೇಳುತ್ತಿದ್ದ ಎಂದು ತಂದೆ ನೋವಿನಿಂದ ತಿಳಿಸಿದ್ದಾರೆ.
ವೈದ್ಯರು ಪ್ರಶಾಂತ್‌ಗೆ ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಪರೀಕ್ಷೆ ನಡೆಸಿದ್ದು, ಆತಂಕಕಾರಿ ಲಕ್ಷಣಗಳಿಲ್ಲ ಎಂದು ಕುಟುಂಬಕ್ಕೆ ತಿಳಿಸಲಾಗಿದೆ. ಇದಾದ ಬಳಿಕವೂ ಅವರನ್ನು ಚಿಕಿತ್ಸೆಗೆ ದಾಖಲಿಸದೇ, ಮತ್ತೆ ಕಾಯುವಂತೆ ಸೂಚಿಸಲಾಗಿದೆ. ಈ ಅವಧಿಯಲ್ಲಿ ಅವರ ರಕ್ತದೊತ್ತಡ ಕ್ರಮೇಣ ಹೆಚ್ಚಾಗುತ್ತಲೇ ಇತ್ತು. ನೋವು ನಿವಾರಣೆಗೆ ಕೇವಲ ಟೈಲೆನಾಲ್ ಮಾತ್ರ ನೀಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.
ಸುಮಾರು ಎಂಟು ಗಂಟೆಗಳ ನಂತರ, ರಕ್ತದೊತ್ತಡ ಮಿತಿಮೀರಿದಾಗ ಪ್ರಶಾಂತ್ ಅವರನ್ನು ಚಿಕಿತ್ಸೆ ನೀಡುವ ವಿಭಾಗಕ್ಕೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಕುಳಿತ ಕೆಲವೇ ಕ್ಷಣಗಳಲ್ಲಿ ಅವರು ಎದೆ ಹಿಡಿದುಕೊಂಡು ಕುಸಿದು ಬಿದ್ದರು. “ಅವರು ನನ್ನನ್ನು ನೋಡಿದರು, ಎದ್ದು ನಿಂತು ಎದೆಯ ಮೇಲೆ ಕೈ ಇಟ್ಟು ಬಿದ್ದರು. ಎಲ್ಲವೂ 10 ಸೆಕೆಂಡುಗಳಲ್ಲೇ ಮುಗಿದುಹೋಯಿತು” ಎಂದು ತಂದೆ ಕುಮಾರ್ ಶ್ರೀಕುಮಾರ್ ಕಣ್ಣೀರಿಟ್ಟಿದ್ದಾರೆ. ದಾದಿಯರು ಮತ್ತು ವೈದ್ಯರು ತಕ್ಷಣವೇ ಜೀವ ಉಳಿಸುವ ಪ್ರಯತ್ನ ನಡೆಸಿದರೂ, ಅದು ತುಂಬಾ ತಡವಾಗಿತ್ತು. ಪ್ರಶಾಂತ್ ಶ್ರೀಕುಮಾರ್ ಹೃದಯಾಘಾತದಿಂದ ಮೃತಪಟ್ಟರು ಎಂದು ತಂದೆ ನೋವಿನಿಂದ ಹೇಳಿಕೊಂಡಿದ್ದಾರೆ.
ಪ್ರಶಾಂತ್ ಅವರ ನಿಧನದಿಂದ ಅವರ ಪತ್ನಿ ಹಾಗೂ 3, 10 ಮತ್ತು 14 ವರ್ಷದ ಮೂವರು ಮಕ್ಕಳು ತಂದೆಯಿಲ್ಲದೇ ಅನಾಥರಾಗಿದ್ದಾರೆ. ಈ ಘಟನೆ ಬಳಿಕ ಕೆನಡಾದ ತುರ್ತು ಆರೋಗ್ಯ ಸೇವೆಗಳ ವಿಳಂಬದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯವನ್ನು ಖಂಡಿಸಲಾಗುತ್ತಿದೆ.
ಗ್ರೇ ನನ್ಸ್ ಕಮ್ಯುನಿಟಿ ಆಸ್ಪತ್ರೆಯನ್ನು ನಿರ್ವಹಿಸುವ ಕವೆನಂಟ್ ಹೆಲ್ತ್ ಸಂಸ್ಥೆ, ವೈಯಕ್ತಿಕ ರೋಗಿಗಳ ಚಿಕಿತ್ಸೆಯ ಕುರಿತು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೆ ಈ ಪ್ರಕರಣವನ್ನು ಮುಖ್ಯ ವೈದ್ಯಕೀಯ ಪರೀಕ್ಷಕರ ಕಚೇರಿ ತನಿಖೆ ನಡೆಸುತ್ತಿದೆ ಎಂದು ದೃಢಪಡಿಸಲಾಗಿದೆ. ಜೊತೆಗೆ, ಕುಟುಂಬಕ್ಕೆ ಸಂತಾಪ ಸೂಚಿಸಿರುವ ಆಸ್ಪತ್ರೆ ಆಡಳಿತ, ರೋಗಿಯ ಸುರಕ್ಷತೆ ನಮ್ಮ ಪ್ರಮುಖ ಆದ್ಯತೆ ಎಂದು ಹೇಳಿದೆ. ಆದರೆ, ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಒಂದು ಜೀವ ಉಳಿಯಬಹುದಿತ್ತು ಎಂಬ ಪ್ರಶ್ನೆ ಇದೀಗ ಕೆನಡಾದ ಆರೋಗ್ಯ ವ್ಯವಸ್ಥೆಯ ಮುಂದಿರುವ ದೊಡ್ಡ ಸವಾಲಾಗಿ ಉಳಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ