ಭ್ರಷ್ಟಾಚಾರ ಪ್ರಕರಣ: ಭಾರತ ಮೂಲದ ಗುಪ್ತಾ ಸಹೋದರರನ್ನು ಬಂಧಿಸಿದ UAE ಪೊಲೀಸರು

By Sharath SharmaFirst Published Jun 7, 2022, 11:36 AM IST
Highlights

Gupta brothers arrested in UAE: ಭಾರತ ಮೂಲದ ರಾಜೇಶ್‌ ಗುಪ್ತಾ ಮತ್ತು ಅತುಲ್‌ ಗುಪ್ತಾ ಇಬ್ಬರನ್ನೂ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ವರ್ಷಗಳ ಕಾಲ ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಿದ ಗುರುತರ ಆರೋಪ ಈ ಇಬ್ಬರ ಮೇಲಿದೆ. ಸದ್ಯ ಹಸ್ತಾಂತರ ಒಪ್ಪಂದ ಕುರಿತು ಎರಡೂ ರಾಷ್ಟ್ರಗಳ ನಡುವೆ ಮಾತುಕತೆ ನಡೆಯುತ್ತಿದೆ.

ದುಬೈ: ಭಾರತ ಮೂಲದ ರಾಜೇಶ್‌ ಗುಪ್ತಾ ಮತ್ತು ಅತುಲ್‌ ಗುಪ್ತಾ (Rajesh Gupta and Atul Gupta) ಇಬ್ಬರನ್ನೂ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಪೊಲೀಸರು (United Arab Emirates Police) ಬಂಧಿಸಿದ್ದಾರೆ ಎಂದು ದಕ್ಷಿಣ ಆಫ್ರಿಕಾ (South Africa) ಸೋಮವಾರ ತಿಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ವ್ಯಾಪಕ ಭ್ರಷ್ಟಾಚಾರದಲ್ಲಿ ಗುಪ್ತಾ ಸಹೋದರರು ಭಾಗಿಯಾಗಿದ್ದರು ಎಂಬ ಆರೋಪಿವಿದೆ (Gupta Brothers corruption case in South Africa). ಈ ಹಿಂದಿನ ಅಧ್ಯಕ್ಷ ಜೇಕಬ್‌ ಝೂಮಾ (Jacob Zuma) ಕಾಲಾವಧಿಯಲ್ಲಿ ಸರ್ಕಾರದ ಹಣವನ್ನು ಹೊಡೆದಿದ್ದಾರೆ ಎನ್ನಲಾಗಿತ್ತು. ಝೂಮಾ ಅಧಿಕಾರ ಕಳೆದುಕೊಂಡ ನಂತರ 2018 ರಲ್ಲಿ ಗುಪ್ತಾ ಸಹೋದರರು ದಕ್ಷಿಣ ಆಫ್ರಿಕಾವನ್ನು ತೊರೆದಿದ್ದರು. 

ದಕ್ಷಿಣ ಆಫ್ರಿಕಾ ಮತ್ತು ಯುಎಇ ನಡುವೆ ಹಸ್ತಾಂತರ ಒಪ್ಪಂದದ (Extradition Treaty) ಅನ್ವಯ 2021ರ ಏಪ್ರಿಲ್‌ನಲ್ಲಿ ಗುಪ್ತಾ ಸಹೋದರರನ್ನು ಬಂಧಿಸುವಂತೆ ಕೋರಲಾಗಿತ್ತು. ಅದರನ್ವಯ ಈಗ ಇಬ್ಬರನ್ನೂ ಯುಎಇ ಪೊಲೀಸರು ಬಂಧಿಸಿದ್ದಾರೆ. ಆದರೆ ಅವರನ್ನು ದಕ್ಷಿಣ ಆಫ್ರಿಕಾಕ್ಕೆ ಹಸ್ತಾಂತರ ಮಾಡುತ್ತಾರ ಅಥವಾ ಯುಎಇಯಲ್ಲೇ ವಿಚಾರಣೆಗೆ ಒಳಪಡಿಸುತ್ತಾರ ಎಂಬುದನ್ನು ಕಾದುನೋಡಬೇಕು. ದಕ್ಷಿಣ ಆಫ್ರಿಕಾದ ನ್ಯಾಯ ಇಲಾಖೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಯುಎಇ ಅಧಿಕಾರಿಗಳ ಜತೆ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ. 

Latest Videos

ಇದನ್ನೂ ಓದಿ: ಮತ್ತೆ ಇಸ್ಲಾಮಿಕ್ ಭಯೋತ್ಪಾದನೆಗೆ ನಲುಗಿದ ನೈಜೀರಿಯಾ, ಚರ್ಚ್ ಮೇಲೆ ದಾಳಿ, ಮೃತದೇಹಗಳ ರಾಶಿ!

"ಯುಎಇಯ ಹಲವಾರು ತನಿಖಾ ಸಂಸ್ಥೆಗಳು ಮತ್ತು ಅಧೀಕಾರಿಗಳ ಜತೆ ದಕ್ಷಿಣ ಆಫ್ರಿಕಾ ಸಂಪರ್ಕದಲ್ಲಿದ್ದು, ಮಾತುಕತೆ ನಡೆಯುತ್ತಿದೆ," ಎಂದು ದಕ್ಷಿಣ ಆಫ್ರಿಕಾ ನ್ಯಾಯಾಂಗ ಸಚಿವಾಲಯದ (Ministry of justice) ಪ್ರಕಟಣೆ ತಿಳಿಸಿದೆ. ಗುಪ್ತಾ ಸಹೋದರರು ದಕ್ಷಿಣ ಆಫ್ರಿಕಾದಲ್ಲಿ ಝುಮಾ ಅಧ್ಯಕ್ಷರಾಗಿದ್ದ ಒಂಭತ್ತು ವರ್ಷ (2009-2018) ಹಲವಾರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಸರ್ಕಾರಿ ಟೆಂಡರ್‌ಗಳನ್ನು ಪಡೆಯುವುದು, ಅಧಿಕಾರಿಗಳ ವರ್ಗಾವಣೆ, ಕ್ಯಾಬಿನೆಟ್‌ ಪೋಸ್ಟಿಂಗ್‌ ಸೇರಿದಂತೆ ಸರ್ಕಾರಿ ಹಣವನ್ನು ದುರ್ಬಳಕೆ ಮಾಡಿಕೊಳ್ಳುವವರೆಗೂ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. 

ಇದನ್ನೂ ಓದಿ: ಮೇಹುಲ್‌ ಚೋಕ್ಸಿ ವಿರುದ್ಧದ ಪ್ರಕರಣ ಕೈ ಬಿಟ್ಟ ಡೊಮಿನಿಕಾ ಸರ್ಕಾರ; ಭಾರತಕ್ಕೆ ಹಿನ್ನಡೆ

ಈ ಕಾರಣಕ್ಕಾಗಿಯೇ ಝೂಮಾ ಅಧಿಕಾರದಿಂದ ಕೆಳಗಿಳಿದ ತಕ್ಷಣ ದಕ್ಷಿಣ ಆಫ್ರಿಕಾದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಜೇಕಬ್‌ ಝೂಮಾ ಮತ್ತು ರಾಜೇಶ್‌ ಗುಪ್ತಾ - ಅತುಲ್‌ ಗುಪ್ತಾ ಮಾತ್ರ ಆರೋಪವನ್ನು ಅಲ್ಲಗಳೆದಿದ್ದಾರೆ. ಯಾವುದೇ ರೀತಿಯ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ಇವೆಲ್ಲವೂ ದುರುದ್ದೇಶದಿಂದ ಹೂಡಿದ ಆರೋಪಗಳು ಎಂದು ಈ ಹಿಂದೆಯೇ ಹೇಳಿದ್ದರು. 
ದಕ್ಷಿಣ ಆಫ್ರಿಕಾದ ನೂತನ ಅಧ್ಯಕ್ಷ ಸಿರಿಲ್‌ ರಾಮಾಪೋಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜೇಕಬ್‌ ಝೂಮಾ ಮತ್ತು ಗುಪ್ತಾ ಸಹೋದರರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಇದಕ್ಕೆ ಸರ್ಕಾರದಲ್ಲಿದ್ದ ಎಲ್ಲರೂ ಬೆಂಬಲ ನೀಡಿದ್ದರು. ಪ್ರಕರಣ ದಾಖಲಿಸಿದ ನಂತರ ಗುಪ್ತಾ ಸಹೋದರರು ಆಫ್ರಿಕಾಕ್ಕೆ ವಾಪಸಾಗಲಿದ್ದಾರೆ ಎಂದು ಸರ್ಕಾರ ಭಾವಿಸಿತ್ತು. ಆದರೆ ಆರೋಪವನ್ನು ಅಲ್ಲಗಳೆದು, ಆಫ್ರಿಕಾಕ್ಕೆ ವಾಪಸ್‌ ಬರುವುದಿಲ್ಲ ಎಂದು ಗುಪ್ತಾ ಸಹೋದರರು ಹೇಳಿದ್ದರು. 

ಇದನ್ನೂ ಓದಿ: PMLA Cases : ವಿಜಯ್ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿಯಿಂದ ಈವರೆಗೂ 18 ಸಾವಿರ ಕೋಟಿ ವಸೂಲಿ!

"ರಾಜೇಶ್‌ ಗುಪ್ತಾ ಮತ್ತು ಅತುಲ್‌ ಗುಪ್ತಾ ಬಂಧನ ಆರಂಭವಷ್ಟೇ. ವರ್ಷಗಳ ಕಾಲ ದಕ್ಷಿಣ ಆಫ್ರಿಕಾದ ಜನರ ಹಣವನ್ನು ಇವರು ಲೂಟಿ ಮಾಡಿದ್ದಾರೆ. ಆ ಮೂಲಕ ಲಕ್ಷಾಂತರ ದಕ್ಷಿಣ ಆಫ್ರಿಕನ್ನರನ್ನು ಕಷ್ಟಕ್ಕೆ ದೂಡಿದ್ದಾರೆ. ಇದು ಇಲ್ಲಿಗೇ ಮುಗಿಯುವುದಿಲ್ಲ, ಅವರನ್ನು ವಾಪಸ್‌ ದೇಶಕ್ಕೆ ಕರೆತಂದು, ಕಾನೂನು ಕ್ರಮ ಜಾರಿಗೊಳಿಸುತ್ತೇವೆ," ಎಂದು ಡೆಮಾಕ್ರಟಿಕ್‌ ಅಲಯನ್ಸ್‌ ಪ್ರಕಟಣೆಯಲ್ಲಿ ಹೇಳಿದೆ. 

click me!