ದಕ್ಷಿಣ ಚೀನಾ ಸಮುದ್ರದ ವಿಷಯದಲ್ಲಿ ಚೀನಾ ತೋರುತ್ತಿರುವ ಉದ್ಧಟತನಕ್ಕೆ ಸಡ್ಡು ಹೊಡೆಯಬಲ್ಲ ದೇಶ ಭಾರತವೊಂದೇ ಎಂಬುದು ಜಗತ್ತಿಗೆ ಗೊತ್ತಾಗಿದೆ. ಹೀಗಾಗಿ ಚೀನಾವನ್ನು ಮಣಿಸಲು ಮೋದಿ ಹಿಂದೆ ಅಮೆರಿಕ, ಜಪಾನ್, ಆಸ್ಪ್ರೇಲಿಯಾದಂಥ ಘಟಾನುಘಟಿ ದೇಶಗಳೇ ಬೆಂಬಲವಾಗಿ ನಿಂತಿವೆ.
ಬೆಂಗಳೂರು (ನ. 10): ಭಾರತ ಮತ್ತು ಚೀನಾ ಮಧ್ಯೆ ಶುರುವಾದ ಕದನ ಕುತೂಹಲದ ರಂಗಭೂಮಿ ಕೇವಲ ಲಡಾಖ್ ಅಲ್ಲವೆಂದು ಖಾತ್ರಿಯಾಗಿದ್ದು ಜುಲೈ 20, 2020ಕ್ಕೆ. ಅವತ್ತು ಸೌತ್ ಚೀನಾ ಸಮುದ್ರ ಪ್ರದೇಶದಿಂದ ಅರಬ್ಬಿ ಸಮುದ್ರಕ್ಕೆ ಹೋಗುವುದರಲ್ಲಿತ್ತು ವಿಶ್ವದ ಅತಿದೊಡ್ಡ ಯುದ್ಧನೌಕೆ ಎಂದೆನಿಸಿಕೊಂಡಿರುವ ಅಮೆರಿಕದ ನಿಮಿಟ್‌್ಜ.
ಅದು ಯಾವ ಜಾಗದಿಂದ ಬರುತ್ತಿದೆ ಎಂಬುದೇ ಚೀನಾ ವಿರುದ್ಧದ ಜಾಗತಿಕ ಆಟವನ್ನು ಸೂಚಿಸುತ್ತಿತ್ತು. ಅಷ್ಟಕ್ಕೇ ನಿಲ್ಲದೆ, ಜಗತ್ತಿನ ಚೋಕ್ ಪಾಯಿಂಟ್ ಅಂತ ಗುರುತಿಸಿಕೊಂಡಿರುವ ಮಲಾಕಾ ಜಲಸಂಧಿಯನ್ನು ದಾಟುತ್ತಲೇ ಅದಕ್ಕೆ ಭಾರತೀಯ ಯುದ್ಧನೌಕೆಗಳು ಜತೆಯಾದವು. ಅಂಡಮಾನಿನ ಸಮೀಪ ಅವು ಪರಸ್ಪರರ ಸಂವಹನ ಪರಿಕರಗಳನ್ನು ಒಬ್ಬರಿಗೊಬ್ಬರು ಹೊಂದಿಸಿಕೊಳ್ಳುತ್ತಾ ತಾಲೀಮಿನಲ್ಲಿ ತೊಡಗಿಕೊಂಡು, ಸುದ್ದಿಗ್ರಾಹಿಗಳಿಗೆ ‘ಪ್ಯಾಸೆಕ್ಸ್’ ಎಂಬ ಶಬ್ದವೊಂದನ್ನು ಪರಿಚಯಿಸಿದವು. ದಿನಗಳ ಹಿಂದಷ್ಟೇ ಜಪಾನ್ ಮತ್ತು ಆಸ್ಪ್ರೇಲಿಯಾಗಳೊಂದಿಗೆ ಸೌತ್ ಚೀನಾ ಸಮುದ್ರ ಭಾಗದಲ್ಲಿ ಸಮರಾಭ್ಯಾಸ ನಡೆಸಿದ ಅಮೆರಿಕವೂ ಭಾರತದೊಂದಿಗೆ ಸೇರಿಕೊಂಡು ನೀಡಿದ ಸೂಚನೆಯನ್ನು ಜಗತ್ತೇ ಗಮನಿಸಿತು.
ಸಹಕಾರ ಜಾಲದ ಕೇಂದ್ರ ಭಾರತ
ಇದೇನೋ, ನಮಸ್ತೆ ಟ್ರಂಪ್ ನೆನಪಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಹಾಗೂ ಮೋದಿಗೆ ಸಹಕರಿಸಿದ ಸಣ್ಣ ಪ್ರಸಂಗ ಅಂತ ನೋಡಿದರೆ ನಮ್ಮ ಕಣ್ಣೆದುರು ರೂಪುಗೊಳ್ಳುತ್ತಿರುವ ಸಾಗರೇತಿಹಾಸವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ನಾವು ಸೋತಂತಾಗುತ್ತದೆ. ವಸಹಾತುಗಳು, ವ್ಯಾಪಾರ ಸಾಮ್ರಾಜ್ಯಗಳು, ಇವತ್ತಿನ ಶಕ್ತಿಮೂಲವಾಗಿರುವ ತೈಲಸಾಗಣೆ ಹೀಗೆ ಜಾಗತಿಕ ಇತಿಹಾಸವನ್ನು ರೂಪಿಸುವಲ್ಲಿ ಸಮುದ್ರದ ಪಾತ್ರ ಹಿರಿದು. ಇವತ್ತಿಗೆ, ವುಹಾನ್ ವೈರಸ್ಸಿನ ನಂತರ ಜಗತ್ತಿಗೆ ಅಪಾಯದ ಸಂಕೇತದಂತೆ ಕಾಣುತ್ತಿರುವ ಚೀನಾದ ಕಮ್ಯುನಿಸ್ಟ್ ಸಾಮ್ರಾಜ್ಯವನ್ನು ಎದುರಿಸುವುದಕ್ಕೆ ರೂಪುಗೊಳ್ಳುತ್ತಿರುವ ಸಾಮೂಹಿಕ ಚಿಂತನೆಗಳ ಬೇರುಗಳೆಲ್ಲಾ ಭೂಮಿಯ ಮೇಲಲ್ಲದೇ ಹೆಚ್ಚು ಹೆಚ್ಚು ಸಾಗರದಲ್ಲಿ ಚಾಚಿಕೊಂಡಿವೆ.
ಬೈಡೆನ್‌ಗೆ ಶುಭಾಶಯ ಹೇಳಲ್ಲ; ರಷ್ಯಾ, ಚೀನಾ!
ಈ ಸಹಕಾರ ಜಾಲದ ಕೇಂದ್ರಬಿಂದು ಭಾರತ. ಹೀಗೊಂದು ಭಾರತ ಕೇಂದ್ರಿತ ಜಾಗತಿಕ ಮೈತ್ರಿಯೊಂದು ಕೊರೋನಾದ ನಂತರ ಅವಸರವಸರವಾಗಿ ರೂಪುಗೊಳ್ಳುತ್ತಿದೆ ಅಂತಲೂ ಅಂದುಕೊಳ್ಳಬೇಕಿಲ್ಲ. ಮೋದಿ ಸರ್ಕಾರದ ಮೊದಲ ಅವಧಿಯಲ್ಲೇ ಬೆಸೆದುಕೊಳ್ಳುತ್ತಿದ್ದ ಎಷ್ಟೋ ಸಂಗತಿಗಳು ಕೊರೋನಾ ಮತ್ತು ಅದರ ಹಿನ್ನೆಲೆಯಲ್ಲಿ ಚೀನಾದ ಉದ್ಧಟತನಗಳನ್ನು ಗಮನಿಸಿ ವೇಗ ಪಡೆದುಕೊಂಡಿವೆ. ಚೀನಾಕ್ಕೆ ಪ್ರತಿಯಾಗಿ ಸಮತೋಲನವನ್ನು ಸಾಧಿಸಿಕೊಳ್ಳುವ ಸಮುದ್ರದಾಟದಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿ ಎಂದು ಈಗ ಜಗತ್ತಿನ ಬಹುತೇಕ ಶಕ್ತಿಶಾಲಿ ರಾಷ್ಟ್ರಗಳು ಬಯಸಿವೆ.
ಅವಸರವಸರದ ಮೈತ್ರಿ ಅಲ್ಲ
ಟ್ರಂಪ್-ಮೋದಿ ಸಮೀಕರಣ, ಶಿಂಜೊ ಅಬೆ- ಮೋದಿ ಫ್ರೆಂಡ್ಶಿಪ್ ಅಂತೆಲ್ಲ ಆಕರ್ಷಕ ಚೌಕಟ್ಟಿನಲ್ಲಿ ವಿದ್ಯಮಾನಗಳನ್ನು ವಿವರಿಸಿಬಿಡಬಹುದು. ಆದರೆ ಇದು ವೈಯಕ್ತಿಕ ಸಮೀಕರಣಗಳಾಚೆಗಿನ ಕತೆ. ಏಕೆಂದರೆ ಭಾರತವು ಮೊದಲ ಬಾರಿಗೆ ಸೌತ್ ಚೀನಾ ಸಮುದ್ರದ ವಿಚಾರದಲ್ಲಿ ಮಾತನಾಡಿ ಪರೋಕ್ಷವಾಗಿ ಚೀನಾದ ವಿರುದ್ಧ ನಿಲುವು ತಾಳಿದ್ದು ಒಬಾಮಾ ಅವಧಿಯಲ್ಲಿ. ಅಕ್ಟೋಬರ್ 2014ರ ಮೋದಿ-ಒಬಾಮಾ ಜಂಟಿ ಹೇಳಿಕೆಯಲ್ಲಿ ಸೌತ್ ಚೀನಾ ಸಮುದ್ರದ ವಿಚಾರವನ್ನು ಸ್ಪಷ್ಟವಾಗಿ ಪ್ರಸ್ತಾಪಿಸಲಾಯಿತು.
ಇಷ್ಟಕ್ಕೂ ಯಾರಾದರೂ ನಿಮಗೆ ಮಣೆ ಹಾಕುವುದೇಕೆ? ನಾಯಕರ ನಡುವೆ ವೈಯಕ್ತಿಕ ನೆಲೆಯಲ್ಲಿ ತಾಳಮೇಳ ಒದಗಿಬಂದಿದೆ ಎಂಬ ಒಂದೇ ಕಾರಣಕ್ಕೆ ಜಾಗತಿಕ ರಾಜಕಾರಣ ಯಾವುದೇ ದೇಶಕ್ಕೆ ಪ್ರಾಮುಖ್ಯ ನೀಡುವುದಿಲ್ಲ. ಮೊದಲು ನೀವದಕ್ಕೆ ಅರ್ಹ, ಬಲಶಾಲಿ ಅಂತ ಸಾಬೀತುಪಡಿಸಿಕೊಂಡಿರಬೇಕು. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ಅನುಸರಿಸಿದ ವಿದೇಶ ನೀತಿಯ ಹಲವು ಮಗ್ಗುಲುಗಳನ್ನು ಹಲವು ರೀತಿಯಲ್ಲಿ ಅದಾಗಲೇ ವಿಶ್ಲೇಷಿಸಿದವರಿದ್ದಾರೆ. ಆದಾಗ್ಯೂ ತುಸು ಕಡಿಮೆ ಗಮನವನ್ನು ಗಳಿಸಿರುವುದು ಭಾರತವು ಈ ಹಂತದಲ್ಲಿ ಸಮುದ್ರಪಟದಲ್ಲಿ ತನ್ನನ್ನು ತಾನು ಗಟ್ಟಿಗೊಳಿಸಿಕೊಂಡ ಬಗೆ.
ಅರುಣಾಚಲಕ್ಕೆ ಚೀನಾ 3.5 ಲಕ್ಷ ರೂ. ಕೋಟಿ ರೈಲ್ವೇ ಮಾರ್ಗ!
ಸಾಗರದಲ್ಲಿ ಭಾರತದ ಚಕ್ರವ್ಯೂಹ
ಸ್ಟ್ರಿಂಗ್ ಆಫ್ ಪಲ್‌ರ್ ಎಂಬ ಪದಪುಂಜವನ್ನು ನೀವು ಕೇಳಿರಬಹುದು. ಮ್ಯಾನ್ಮಾರ್, ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ನೆಲೆಗಳನ್ನು ನಿರ್ಮಿಸಿಕೊಂಡು ಚೀನಾವು ಭಾರತವನ್ನು ಸುತ್ತುವರಿದಿರುವುದನ್ನು ವಿವರಿಸುವ ಶಬ್ದಗುಚ್ಛವದು. 2008ರಲ್ಲಿ ಶ್ರೀಲಂಕಾದ ಹಂಬನತೋಟ ಬಂದರನ್ನು ಚೀನಾ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು ತುಂಬ ಸದ್ದು ಮಾಡಿದ್ದ ಬೆಳವಣಿಗೆ. ಆದರೆ, 2014ರಲ್ಲಿ ಬಂದ ಮೋದಿ ಸರ್ಕಾರ ಇದಕ್ಕೆ ತಾನೂ ಒಂದು ಪ್ರತಿವ್ಯೂಹ ಹೆಣೆಯುವಲ್ಲಿ ಯಶಸ್ವಿಯಾಯಿತು.
ಚೀನಾದ ಪೂರೈಕೆಗಳನ್ನು ತಡೆದು ನಿಲ್ಲಿಸಬಹುದಾದ ಮಲಾಕಾ ಜಲಸಂಧಿಯ ಮೇಲೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳ ಮೂಲಕ ಭಾರತ ಹೊಂದಿರುವ ಹಿಡಿತವಂತೂ ಮೊದಲಿನಿಂದಲೂ ಇತ್ತಷ್ಟೆ. ಇದಕ್ಕೆ ಬಲ ತುಂಬುವಂತೆ 2018ರಲ್ಲಿ ಭಾರತವು ಸಿಂಗಾಪುರದ ಚಾಂಗಿ ಬಂದರಿನಲ್ಲಿ ತನ್ನದೊಂದು ನೆಲೆ ದಕ್ಕಿಸಿಕೊಂಡಿತು. ಅದೇ ವರ್ಷ ಇಂಡೊನೇಷ್ಯಾದ ಸಬಂಗ್ ಸಮುದ್ರ ತೀರದಲ್ಲಿ ಜಂಟಿಯಾಗಿ ಬಂದರು ಅಭಿವೃದ್ಧಿಪಡಿಸಿತು ಭಾರತ. ಇದಂತೂ ಮಲಾಕಾವನ್ನು ಉಸಿರುಗಟ್ಟಿಸುವ ಸಂದರ್ಭ ಬಂದರೆ ಬಹಳ ಅನುಕೂಲಕ್ಕೆ ಬರುವಂಥದ್ದು.
ಅಷ್ಟಕ್ಕೇ ನಿಲ್ಲಲಿಲ್ಲ ಮೋದಿಯ ಸಮುದ್ರ ರಾಯಭಾರದ ದಿಗ್ವಿಜಯ. ಇತ್ತ ಇಂಡಿಯನ್ ಓಷನ್‌ನ ಪಶ್ಚಿಮ ಭಾಗದಲ್ಲಿ ಒಮಾನ್ ಜತೆ ಒಪ್ಪಂದ ಮಾಡಿಕೊಂಡು ಡುಕುಂ ಬಂದರಿನಲ್ಲಿ ನೆಲೆ ಕಂಡುಕೊಂಡಿತು. ರೆಡ್ ಸೀ ಮತ್ತು ಗಲ್‌್ಫ ಆಫ್ ಅಡೆನ್‌ಗೆ ಸುರಕ್ಷಿತ ಪ್ರವೇಶ ಕೊಡುವಲ್ಲಿ ಬಹು ಸಹಕಾರಿ ಇದು. ಇದಕ್ಕೂ ಮೊದಲು ಹತ್ತಿರದ ಜಿಬೂತಿಯಲ್ಲಿ ಚೀನಾ ತನ್ನ ನೌಕಾನೆಲೆ ಸ್ಥಾಪಿಸಿಕೊಂಡಿದೆ ಎಂಬುದನ್ನು ಗಮನಿಸಿದಾಗ, ಒಮಾನಿನಲ್ಲಿ ಭಾರತಕ್ಕೆ ನೆಲೆ ಸಿಕ್ಕಿರುವುದರ ಮಹತ್ವ ಇನ್ನಷ್ಟುಅರ್ಥವಾಗುತ್ತದೆ. ಇದಕ್ಕೂ ಮೊದಲು 2015ರಲ್ಲೇ ಒಪ್ಪಂದವೊಂದರ ಮೂಲಕ ಸಿಶೆಲ್ಸ್‌ನಲ್ಲಿ ನೌಕಾನೆಲೆ ಖಾತ್ರಿಪಡಿಸಿಕೊಂಡಿತ್ತು ಭಾರತ. ಇರಾನಿನ ಜತೆ ಮತ್ತೇನೇ ಭಿನ್ನಾಭಿಪ್ರಾಯ, ಅಮೆರಿಕದ ಕಿರಿಕಿರಿ ಇದ್ದಿರಬಹುದಾರೂ ಚಬಹಾರ್ ಬಂದರಿನ ಪ್ರವೇಶ ಖಾತ್ರಿ ಪಡಿಸಿಕೊಂಡಿರುವುದಂತೂ ಭಾರತದ ಸಾಧನೆ.
ಭಾರತ-ಆಸ್ಪ್ರೇಲಿಯಾ ಒಪ್ಪಂದ
ಇವೆಲ್ಲಕ್ಕೆ ಕಲಶವಿಟ್ಟಂತಿರುವುದು ಜೂನ್ 4, 2020ರಂದು ಮೋದಿ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅಂತರ್ಜಾಲ ಮಾತುಕತೆಯಲ್ಲೇ ಸಹಿ ಹಾಕಿರುವ ಕಾರ್ಯತಂತ್ರ ಒಪ್ಪಂದ. ಇದರ ಪ್ರಕಾರ ಉಭಯ ದೇಶಗಳು ಪರಸ್ಪರರ ನೌಕಾನೆಲೆಗಳನ್ನು ಕಾರ್ಯಾಚರಣೆಗಳಿಗೆ ಉಪಯೋಗಿಸಿಕೊಳ್ಳಬಹುದು. ಅದಾಗಲೇ ಚೀನಾದ ಬಂಡವಾಳವನ್ನು ಬಹುಮಟ್ಟಿಗೆ ದೇಶದೊಳಗೆ ಬಿಟ್ಟುಕೊಂಡು, ವುಹಾನ್ ವೈರಸ್ಸಿನ ನಂತರ ಚೀನಾದೊಂದಿಗೆ ಮುನಿಸಿಕೊಂಡಿರುವ ಆಸ್ಪ್ರೇಲಿಯಾವು ಭಾರತದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುತ್ತಿರುವ ವಿದ್ಯಮಾನ ಸಣ್ಣ ಬೆಳವಣಿಗೆ ಅಲ್ಲವೇ ಅಲ್ಲ. ಇವೆಲ್ಲವೂ ಭಾರತದ ಸಮುದ್ರಬಲ ವಿಸ್ತರಣೆಯ ಸಂದೇಶವಾಗಿರುವುದರಿಂದ ಅಮೆರಿಕ, ಜಪಾನ್, ಆಸ್ಪ್ರೇಲಿಯಾದಂಥ ರಾಷ್ಟ್ರಗಳು ತಮ್ಮ ಚೀನಾ ವಿರುದ್ಧದ ಸಮತೋಲನದ ಆಟದಲ್ಲಿ ಭಾರತವನ್ನು ಪ್ರಮುಖ ಸಹಭಾಗಿಯಾಗಿ ನೋಡುತ್ತಿವೆ.
ಏಷ್ಯಾ ಪೆಸಿಫಿಕ್ ಈಗ ಇಂಡೋ ಪೆಸಿಫಿಕ್
ಬದಲಾಗಿರುವ ಪದಪುಂಜವೊಂದು ಜಾಗತಿಕ ರಾಜಕೀಯದ ಆಲೋಚನೆ ಮಗ್ಗಲು ಬದಲಿಸಿರುವುದನ್ನು ಹೇಗೆ ಸೂಚಿಸುತ್ತದೆ ಎಂಬುದನ್ನು ಆಸ್ಪ್ರೇಲಿಯಾದ ರಕ್ಷಣಾತಜ್ಞ ರೊರಿ ಮೆಡ್ಕಾಫ್ ಅವರು ಮನೋಜ್ಞವಾಗಿ ವಿವರಿಸಿದ್ದಾರೆ. 2016ರ ನವೆಂಬರ್ ತಿಂಗಳಿನಲ್ಲಿ ಜಪಾನಿನ ಬುಲೆಟ್ ಟ್ರೇನ್ ಒಂದರಲ್ಲಿ ಕುಳಿತು ಅಲ್ಲಿನ ಆಗಿನ ಪ್ರಧಾನಿ ಶಿಂಜೊ ಅಬೆ ಜತೆ ಸುದೀರ್ಘ ಚರ್ಚೆ ನಡೆಸುತ್ತಾರೆ ಪ್ರಧಾನಿ ಮೋದಿ. ಆ ಭೇಟಿಯಲ್ಲಿ ಹೊರಬಿದ್ದ ಹಲವು ನಿರ್ಣಯಗಳಲ್ಲೊಂದು, ಎರಡೂ ದೇಶಗಳು ಇಂಡಿಯನ್ ಓಷನ್ ಮತ್ತು ಪೆಸಿಫಿಕ್ ಸಮುದ್ರಗಳ ಸಂಗಮ ಪ್ರದೇಶವನ್ನು ‘ಇಂಡೋ ಪೆಸಿಫಿಕ್’ ಎಂದು ಕರೆಯುವುದಕ್ಕೆ ನಿರ್ಧರಿಸಿಕೊಳ್ಳುತ್ತಾರೆ.
ಅಲ್ಲಿಯವರೆಗೆ ಅದು ‘ಏಷ್ಯಾ ಪೆಸಿಫಿಕ್’ ಅಂತ ಕರೆಸಿಕೊಳ್ಳುತ್ತಿತ್ತು. ಇದಕ್ಕೂ ಮೊದಲು ಆಸ್ಪ್ರೇಲಿಯಾ ತನ್ನ ರಕ್ಷಣಾ ಶ್ವೇತಪತ್ರದಲ್ಲಿ 2013ರಲ್ಲೇ ‘ಇಂಡೋ ಪೆಸಿಫಿಕ್’ ಪದವನ್ನು ಜಾರಿಗೆ ತಂದಿರುತ್ತದೆ. ತೀರಾ ಟೆಕ್ನಿಕಲ್ ಆಗಿ ನೋಡುವುದಾದರೆ ಇಂಡಿಯನ್ ಓಷನ್ ಮತ್ತು ಪೆಸಿಫಿಕ್ ಸಾಗರಗಳು ಬೆರೆತುಕೊಳ್ಳುವ ಪ್ರಾಂತ್ಯ ಇಂಡೋ ಪೆಸಿಫಿಕ್. ಮೇಲ್ನೋಟಕ್ಕೆ ಹೆಸರಿನಲ್ಲೇನಿದೆ ಎಂದು ಹೇಳಿಬಿಡಬಹುದಾದರೂ ಅದು ಇಂಡಿಯಾಕ್ಕೆ ಸಮುದ್ರ ಮಾರ್ಗದರ್ಶಕನ ಪಾತ್ರವನ್ನು ನೀಡುವ ಪ್ರಯತ್ನವಾಗಿತ್ತೆಂಬುದು ಯಾರಿಗೂ ಹೊಳೆಯಬಹುದಾದ ಸಂಗತಿ.
ನಿಧಾನಕ್ಕೆ ವಿಯೆಟ್ನಾಂ, ಸಿಂಗಾಪುರ ಸೇರಿದಂತೆ ಬಹುತೇಕ ಏಷ್ಯಾದ ರಾಷ್ಟ್ರಗಳೆಲ್ಲ ಇಂಡೋ ಪೆಸಿಫಿಕ್ ಎಂಬ ಪದಕ್ಕೆ ತಾವೂ ಆತುಕೊಳ್ಳುತ್ತವೆ. 2017ರಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ದಾಖಲೆಗಳು ಸಹ ಅಧಿಕೃತವಾಗಿ ಇಂಡೋ ಪೆಸಿಫಿಕ್ ಪದವನ್ನು ಒಪ್ಪಿಕೊಳ್ಳುತ್ತವೆ. ಈ ಶಬ್ದವನ್ನು ಬಳಸುವುದು ಸಲ್ಲ ಅಂತ ಸಿಟ್ಟುಮಾಡಿಕೊಂಡಿದ್ದು ಚೀನಾ ಮಾತ್ರ. ಅಲ್ಲಿಗೆ ಉಳಿದೆಲ್ಲ ದೇಶಗಳು ತಮ್ಮ ಪದಗುಚ್ಛವನ್ನು ಬದಲಿಸಿ ಯಾರನ್ನು ಚುಚ್ಚುವುದಕ್ಕೆ ಹೊರಟಿದ್ದವೆಂಬುದು ಸ್ಪಷ್ಟವಾಯಿತು. ಅಲ್ಲದೆ, ಚೀನಾದ ವಿರುದ್ಧ ಸಮತೋಲನ ಸಾಧಿಸುವುದಕ್ಕೆ ಅವೆಲ್ಲ ಖುಷಿಗೊಳಿಸುವುದಕ್ಕೆ ಮುಂದಾಗಿರುವುದು ಭಾರತವನ್ನು ಎಂಬುದೂ ಸ್ಪಷ್ಟವೇ.
ಬೈಡೆನ್‌ರಿಂದ ಭಾರತಕ್ಕೇನು ಲಾಭ, ನಷ್ಟ?
ಭಾರತಕ್ಕಿದೆ ಸಾಗರ ವಾರಸುದಾರಿಕೆ
ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ಹಾಗೂ ಇತರ ಕೆಲ ಮಾತುಗಳಲ್ಲಿ ಚೋಳರ ನೌಕಾಬಲವನ್ನು, ಗತವೈಭವದ ಅಧ್ಯಾಯಗಳನ್ನು ಅಭಿಮಾನದಿಂದ ಮೆಲುಕು ಹಾಕಿರುವುದನ್ನು ಕಾಣಬಹುದು. ವಾಸ್ಕೋ-ಡ-ಗಾಮಾ ಬಂದ ನಂತರವಷ್ಟೇ ಭಾರತೀಯರು ಹಡಗು ಹಾಗೂ ಸಮುದ್ರ ಮಾರ್ಗ ಪ್ರಯಾಣಗಳ ಬಗ್ಗೆ ಅರಿತಿದ್ದು ಎಂಬಂತೆ ನಾವು ಇತಿಹಾಸ ಗ್ರಹಿಸಿಕೊಂಡುಬಿಟ್ಟಿದ್ದೇವೆ. ಆದರೆ, ನೌಕಾಬಲವನ್ನು ಉಪಯೋಗಿಸಿಕೊಂಡು ಏಷ್ಯಾದ ಸಮುದ್ರ ತೀರದ ದೇಶಗಳ ರಾಜಕೀಯವನ್ನೆಲ್ಲ ಪ್ರಭಾವಿಸಿದ ದಕ್ಷಿಣ ಭಾರತದ ಚೋಳರ ಇತಿಹಾಸ ಮೂರನೇ ಶತಮಾನದಷ್ಟುಪ್ರಾಚೀನವಾದದ್ದು.
ಭಾರತದ ಗತವೈಭವ
ಚೀನಾದ ಬಂದರು ಪಟ್ಟಣವಾದ ಚ್ವಾಂಜೊದಲ್ಲಿ ಹಿಂದು ದೇವಾಲಯಗಳ ಜಾಲವೇ ಇದೆ. ಈಗದು ಸ್ಥಳೀಯ ನಂಬಿಕೆಗಳ ದೇವತೆಗಳ ಹೆಸರಲ್ಲಿ ಪ್ರಚಲಿತವಾಗಿದೆ ಎಂಬುದು ಬೇರೆ ವಿಷಯ. 1930ರಲ್ಲಿ ಉತ್ಖನನವಾದಾಗ ಅಲ್ಲಿ ನರಸಿಂಹ ದೇವರ ಕಲ್ಲಿನ ವಿಗ್ರಹ, ಶಿವ-ವಿಷ್ಣು ದೇವರ ಪುರಾಣ ಕತೆಗಳ ಬಿಂಬಿಸುವ ಕೆತ್ತನೆಗಳೆಲ್ಲ ಬೆಳಕಿಗೆ ಬಂದವು. ಕ್ರಿಶ 960ರ ಸುಮಾರಿಗೆ ಚ್ವಾಂಜೊದಲ್ಲಿ ಪಾರಮ್ಯ ಮೆರೆದಿದ್ದ ತಮಿಳು ವ್ಯಾಪಾರಿಗಳು ಇವನ್ನು ನಿರ್ಮಿಸಿದ್ದರು ಎಂದೆನ್ನುತ್ತದೆ ಚರಿತ್ರೆ. ಅಂದರೆ ನಮ್ಮ ಪೂರ್ವಜರು ಸಮುದ್ರಮಾರ್ಗದ ಮೇಲೆ ಇಟ್ಟುಕೊಂಡಿದ್ದ ಹಿಡಿತ ಎಂಥದ್ದಾಗಿರಬಹುದು?
ಚೀನಾ ಸಹ ಸಮುದ್ರ ಪಾರಮ್ಯವನ್ನು ಗಳಿಸಿತಾದರೂ ಅದರ ಪ್ರಾರಂಭ ಮೂರನೇ ಶತಮಾನದಷ್ಟುಹಿಂದಕ್ಕೆ ಹೋಗುವುದಿಲ್ಲ. ಹತ್ತನೇ ಶತಮಾನದ ಸೊಂಗ್ ರಾಜಮನೆತನದೊಂದಿಗೆ ಚೀನಿಯರ ಸಮುದ್ರ ಪರಾಕ್ರಮ ಶುರುವಾಯಿತು. ಇದೀಗ ಮತ್ತೆ ಚೀನಾದ ಹಾನ್ಮತ್ತು ಭಾರತದ ಹಿಂದು ನಾಗರಿಕತೆಗಳು ತಮ್ಮ ಗತವೈಭವದ ಕಸುವನ್ನು ಆವಾಹಿಸಿಕೊಳ್ಳುತ್ತ ನೀನಾ ನಾನಾ ಎಂಬಂತೆ ನೀಲ ಸಾಗರದಲೆಗಳ ಮೇಲೆ ನಿಂತಿರುವಂತೆ ಭಾಸವಾಗುತ್ತಿದೆ. ಸದ್ಯಕ್ಕೆ ಜಗತ್ತಿನ ಪ್ರಮುಖ ಅಕ್ಷೋಹಿಣಿಗಳೆಲ್ಲ ಭಾರತದ ಬೆನ್ನಿಗಿವೆ.
- ಚೈತನ್ಯ ಹೆಗಡೆ