WHO ಚೇರ್ಮನ್‌ ಆಗಿ ಹರ್ಷವರ್ಧನ್‌ ಅಧಿಕಾರ ಸ್ವೀಕಾರ

Kannadaprabha News   | Asianet News
Published : May 23, 2020, 11:06 AM ISTUpdated : May 23, 2020, 11:15 AM IST
WHO ಚೇರ್ಮನ್‌ ಆಗಿ ಹರ್ಷವರ್ಧನ್‌ ಅಧಿಕಾರ ಸ್ವೀಕಾರ

ಸಾರಾಂಶ

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಚೇರ್ಮನ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಮೇ.23): ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ 34 ಸದಸ್ಯರ ಕಾರ್ಯಕಾರಿ ಮಂಡಳಿಯ ಚೇರ್ಮನ್‌ ಆಗಿ ಭಾರತದ ಪ್ರತಿನಿಧಿ ಡಾ. ಹರ್ಷವರ್ಧನ್‌ ಶುಕ್ರವಾರ ಅಧಿಕಾರ ಸ್ವೀಕರಿಸಿದರು. 

ಕೇಂದ್ರ ಆರೋಗ್ಯ ಸಚಿವರೂ ಆಗಿರುವ ಹರ್ಷವರ್ಧನ್‌, ದೇಶದಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಈ ಹಿಂದೆ ದೇಶದಲ್ಲಿ ಪೋಲಿಯೋ ನಿರ್ಮೂಲನೆ ಆಂದೋಲನದ ನೇತೃತ್ವ ವಹಿಸಿದ್ದ ಖ್ಯಾತಿ ಹೊಂದಿದ್ದಾರೆ. ಡಬ್ಲ್ಯುಎಚ್‌ಒ ಕಾರ್ಯಕಾರಿ ಮಂಡಳಿಯ ಚೇರ್ಮನ್‌ ಹುದ್ದೆಯಲ್ಲಿ ಹರ್ಷವರ್ಧನ್‌ 1 ವರ್ಷ ಸೇವೆ ಸಲ್ಲಿಸಲಿದ್ದು, ಈ ಮಂಡಳಿಯ ಸದಸ್ಯರಾಗಿ 3 ವರ್ಷ ಕಾರ್ಯ ನಿರ್ವಹಿಸಲಿದ್ದಾರೆ. ಜಪಾನ್‌ನ ಡಾ. ಹಿರೋಕಿ ನಕಟಾನಿ ಇಲ್ಲಿಯವರೆಗೆ ಡಬ್ಲ್ಯುಎಚ್‌ಒ ಕಾರ್ಯಕಾರಿ ಮಂಡಳಿಯ ಚೇರ್ಮನ್‌ ಆಗಿದ್ದರು.

ಚೀನಾ ವಿರುದ್ಧ ತನಿಖೆಯ ನಿರ್ಧಾರ ಕೈಗೊಳ್ಳುತ್ತಾರಾ?

ಕೊರೋನಾ ವೈರಸ್‌ ಚೀನಾದ ಪ್ರಯೋಗಾಲಯದಲ್ಲಿ ಹುಟ್ಟಿದೆ ಮತ್ತು ಅದನ್ನು ಚೀನಾ ಬಚ್ಚಿಟ್ಟಿದೆ ಎಂದು ಅಮೆರಿಕ ಸೇರಿದಂತೆ ಹಲವು ದೇಶಗಳು ಆರೋಪ ಮಾಡುತ್ತಿದ್ದು, ಈ ಕುರಿತು ಡಬ್ಲ್ಯುಎಚ್‌ಒ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತಿರುವ ವೇಳೆಯಲ್ಲೇ ಭಾರತ ಈ ಮಹತ್ವದ ಹುದ್ದೆ ವಹಿಸಿಕೊಂಡಿದೆ. ಹೀಗಾಗಿ ಚೀನಾ ವಿರುದ್ಧ ತನಿಖೆಗೆ ಹರ್ಷವರ್ಧನ್‌ ಆದೇಶಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ಕಳೆದ ಮಂಗಳವಾರ ನಡೆದ 194 ದೇಶಗಳ ವಿಶ್ವ ಆರೋಗ್ಯ ಸಮಾವೇಶದಲ್ಲಿ ಹರ್ಷವರ್ಧನ್‌ ಅವರ ಆಯ್ಕೆಗೆ ಒಪ್ಪಿಗೆ ದೊರಕಿತ್ತು. ಕಳೆದ ವರ್ಷವೇ ಡಬ್ಲ್ಯುಎಚ್‌ಒದ ಆಗ್ನೇಯ ಏಷ್ಯಾ ರಾಷ್ಟ್ರಗಳ ಸಮೂಹವು ಅವಿರೋಧವಾಗಿ ಭಾರತಕ್ಕೆ ಈ ಸ್ಥಾನ ನೀಡುವುದಕ್ಕೆ ನಿರ್ಧರಿಸಿತ್ತು. ಡಬ್ಲ್ಯುಎಚ್‌ಒ ಕಾರ್ಯಕಾರಿ ಮಂಡಳಿಯ ಚೇರ್ಮನ್‌ ಹುದ್ದೆಯು ಪೂರ್ಣಾವಧಿ ಹುದ್ದೆ ಅಲ್ಲ. ಹರ್ಷವರ್ಧನ್‌ ಅವರ ಕಾರ್ಯ ಒಂದು ವರ್ಷದಲ್ಲಿ ಎರಡು ಕಾರ್ಯಕಾರಿ ಮಂಡಳಿಯ ಸಭೆ ನಡೆಸುವುದಕ್ಕೆ ಸೀಮಿತವಾಗಿದೆ. ಡಬ್ಲ್ಯುಎಚ್‌ಒದ ಆರೋಗ್ಯ ಸಮಾವೇಶದ ನಿರ್ಣಯಗಳನ್ನು ಜಾರಿಗೊಳಿಸುವ ಜವಾಬ್ದಾರಿ ಕಾರ್ಯಕಾರಿ ಮಂಡಳಿಯ ಮೇಲಿರುತ್ತದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ
ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್