
ನವದೆಹಲಿ: ಕುಖ್ಯಾತ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೆನಡಾದಲ್ಲಿ ತನ್ನ ಅಟ್ಟಹಾಸ ಮುಂದುವರೆಸಿದ್ದು, ಭಾರತೀಯ ಮೂಲದ ಉದ್ಯಮಿ ದರ್ಶನ್ ಸಿಂಗ್ ಸಾಹಸಿ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೆನಡಾದಲ್ಲಿ ಭಾರತೀಯ ನಟ ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಅವರ ಹೊಟೇಲ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರಾದ ಗೋಲ್ಡಿ ಧಿಲ್ಲೊನ್ ಮತ್ತು ಕುಲ್ದೀಪ್ ಸಿಧು ಹೊತ್ತುಕೊಂಡಿದ್ದರು. ಈಗ ಅಲ್ಲಿನ ಭಾರತೀಯ ಮೂಲದ ಉದ್ಯಮಿಯೊಬ್ಬನ ಮೇಲೆ ಇದೇ ಗ್ಯಾಂಗ್ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ. ಸೋಮವಾರ ಈ ಘಟನೆ ನಡೆದಿದೆ. ಭಾರತೀಯ ಮೂಲದ ಅಬಾಟ್ಸ್‌ಫೋರ್ಡ್‌ನಲ್ಲಿ ನೆಲೆಸಿರುವ ಕೈಗಾರಿಕೋದ್ಯಮಿಯೊಬ್ಬರ ಹತ್ಯೆ ಮತ್ತು ಪಂಜಾಬಿ ಗಾಯಕನ ಮನೆಯ ಮೇಲೆ ಗುಂಡಿನ ಹಾರಿಸಿದ ಹೊಣೆಯನ್ನು ಈ ಗ್ಯಾಂಗ್ ಹೊತ್ತುಕೊಂಡಿದೆ.
ರಾಜಸ್ಥಾನ ಪೊಲೀಸರು ಅಮೆರಿಕಾದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಸಕ್ರಿಯ ಸಹಚರನಾದ ಜಗದೀಪ್ ಸಿಂಗ್ ಆಲಿಯಾಸ್ ಜಗ್ಗಾ ಎಂಬುವವರನ್ನು ಬಂಧಿಸಿದ ನಂತರ ಕೆನಡಾದಲ್ಲಿ ಈ ಎರಡು ಘಟನೆಗಳು ನಡೆದಿವೆ. ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಾದ ಗೋಲ್ಡಿ ಧಿಲ್ಲನ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಭಾರತೀಯ ಮೂಲದ ಉದ್ಯಮಿ ದರ್ಶನ್ ಸಿಂಗ್ ಸಹಾಸಿ ಹತ್ಯೆ ಹಿಂದೆ ತಮ್ಮ ತಂಡ ಇರುವುದಾಗಿ ಹೇಳಿಕೊಂಡಿದೆ. 68 ವರ್ಷದ ದರ್ಶನ್ ಸಿಂಗ್ ಸಾಹಸಿ ದೊಡ್ಡ ಮಟ್ಟದಲ್ಲಿ ಮಾದಕವಸ್ತುಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಆತನಿಂದ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಆತನ ನೀಡದೇ ಇದ್ದಾಗ ಹತ್ಯೆ ನಡೆದಿದೆ ಎಂದು ಗ್ಯಾಂಗ್ ಹೇಳಿಕೊಂಡಿದೆ.
ಕಾದು ಕುಳಿತು ಗುಂಡಿಕ್ಕಿ ಹತ್ಯೆ
ವರದಿಗಳ ಪ್ರಕಾರ, ಸೋಮವಾರ ಬೆಳಗ್ಗೆ ಬ್ರಿಟಿಷ್ ಕೊಲಂಬಿಯಾದ ಅಬಾಟ್ಸ್‌ಫೋರ್ಡ್‌ನಲ್ಲಿರುವ ಅವರ ಮನೆಯ ಹೊರಗೆ ದರ್ಶನ್ ಸಿಂಗ್ ಸಹಸಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಗುಂಡು ಹಾರಿಸಿದ ವ್ಯಕ್ತಿ ಸಹಸಿ ತನ್ನ ಮನೆಯ ಹೊರಗೆ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ತನ್ನ ಕಾರಿನ ಬಳಿ ಬರುವುದಕ್ಕಾಗಿಯೇ ಕಾಯುತ್ತಿದ್ದ, ಆತ ಬರುತ್ತಿದ್ದಂತೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗ ಸಹಾಸಿ ಅವರು ತುಂಬಾ ಗಂಭೀರ ಸ್ಥಿತಿಯಲ್ಲಿದ್ದರು. ತಂಡ ಸಾಹಸಿ ಅವರನ್ನು ಬದುಕಿಸುವುದಕ್ಕೆ ಹಲವು ಪ್ರಯತ್ನ ಮಾಡಿದರು ಅವರು ಬದುಕುಳಿಯಲಿಲ್ಲ ಎಂದು ವರದಿಯಾಗಿದೆ.
ಈ ಘಟನೆಯ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮವಾಗಿ ಸಮೀಪದ ಮೂರು ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಮೃತ ಸಾಹಸಿ ಅವರು 1991ರಲ್ಲಿ ಭಾರತದಿಂದ ಕೆನಡಾಗೆ ತೆರಳಿ ಅಲ್ಲೇ ಸೆಟಲ್ ಆಗಿದ್ದರು. ಅವರು ಕೆನಮ್ ಇಂಟರ್ನ್ಯಾಷನಲ್‌ನ ಅಧ್ಯಕ್ಷರಾಗಿದ್ದರು. ಇದು ಜವಳಿಯನ್ನು ಮರುಬಳಕೆ ಮಾಡುವ ಪ್ರಸಿದ್ಧ ಕಂಪನಿಯಾಗಿದೆ. ಕೆನಡಾದಗೆ ಬಂದ ಆರಂಭದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದ ಸಾಹಸಿ ನಂತರ ಕಷ್ಟದಲ್ಲಿ ಸಿಲುಕಿದ್ದ ಜವಳಿ ಮರುಬಳಕೆ ಘಟಕದಲ್ಲಿ ಸ್ಟಾಕ್‌ಗಳನ್ನು ಪಡೆದು ಅದನ್ನು ಜಾಗತಿಕ ಕಂಪನಿಯಾಗಿ ಪರಿವರ್ತಿಸಿದರು.
ಉದ್ಯಮಿ ಮಾತ್ರವಲ್ಲ, ಕೊಡುಗೈ ದಾನಿಯಾಗಿದ್ದ ದರ್ಶನ್
ಸಾಹಸಿ ಒಬ್ಬ ಯಶಸ್ವಿ ಕೈಗಾರಿಕೋದ್ಯಮಿ ಮಾತ್ರವಲ್ಲದೆ ಕೊಡುಗೈ ದಾನಿ ಆಗಿದ್ದರು. ಅವರ ಸಾವು ಅಬಾಟ್ಸ್‌ಫೋರ್ಡ್ ಮತ್ತು ಕೆನಡಾದ ಪಂಜಾಬಿ ಸಮುದಾಯದಲ್ಲಿ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಕೆನಡಾದಲ್ಲಿರುವ ಭಾರತೀಯ ವಲಸಿಗರ ಸುರಕ್ಷತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಸಮುದಾಯದ ಅನೇಕರ ಮುಖಂಡರು ಕಳವಳ ವ್ಯಕ್ತಪಡಿಸಿದ್ದು, ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಇದರ ಜೊತೆಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಖ್ಯಾತ ಪಂಜಾಬಿ ಗಾಯಕಚನ್ನಿ ನಟ್ಟನ್ ಅವರ ಮನೆಯ ಹೊರಗೂ ಗುಂಡಿನ ದಾಳಿ ನಡೆಸಿದೆ. ಮತ್ತೊಬ್ಬ ಗಾಯಕ ಸರ್ದಾರ್ ಖೇರಾ ಜೊತೆ ನಟ್ಟನ್ ಮತ್ತಷ್ಟು ಆತ್ಮೀಯನಾಗಲು ಮುಂದಾದ ಹಿನ್ನೆಲೆ ಆತನ ಮನೆ ಮುಂದೆ ದಾಳಿ ಮಾಡಲಾಗಿದೆ ಎಂದು ಕೃತ್ಯ ನಡೆಸಿದ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಧಿಲ್ಲೊನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾನೆ.
ಇದನ್ನೂ ಓದಿ: ಎರಡೂ ಕೈ, 2 ಕಾಲುಗಳು ಇಲ್ಲದ ದೇಶದ ಮೊದಲ ಬಿಲ್ಲುಗಾರ್ತಿ ಈ ಬಾಲಕಿ
ಇದನ್ನೂ ಓದಿ: ಐಐಟಿಯನ್‌ಗೆ ಸಿಕ್ತು ಅಮೇಜಾನ್‌ನಲ್ಲಿ ಉದ್ಯೋಗ: ಅಪ್ಪನ ಪ್ರತಿಕ್ರಿಯೆ ಭಾರಿ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ