
ರಷ್ಯಾದ ಸೈಬೀರಿಯಾ ಪ್ರದೇಶದಲ್ಲಿ ಅಕ್ಟೋಬರ್ 2026ರ ಆರಂಭದಲ್ಲಿ ನಡೆದ ಘಟನೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಇರ್ಕುಟ್ಸ್ಕ್ ಆ್ಯಂಟಿ-ಪ್ಲೇಗ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಲ್ಯಾಬ್ ಟೆಕ್ನಿಷಿಯನ್ ಡಾರಿಯಾ ಶಿಪಿಲೋವಾ ಮೃತಪಟ್ಟಿದ್ದಾರೆ. ತೀವ್ರ ನ್ಯುಮೋನಿಯಾ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ.
ರಷ್ಯಾದ ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್ ಅಂತ್ಯದಲ್ಲಿ ಮಾದರಿಗಳನ್ನು ಸಂಗ್ರಹಿಸುವ ವೇಳೆ ಜೀವಂತ ಬ್ಯಾಕ್ಟೀರಿಯಾ ಹೊಂದಿದ್ದ ಟೆಸ್ಟ್ ಟ್ಯೂಬ್ ಒಡೆದಿತ್ತು ಎಂದು ಡಾರಿಯಾ ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದರು. ಕೆಲವು ವರದಿಗಳಲ್ಲಿ ಆ ಬ್ಯಾಕ್ಟೀರಿಯಾವನ್ನು ಪ್ಲೇಗ್ಗೆ ಕಾರಣವಾಗುವ ಯರ್ಸೀನಿಯಾ ಪೆಸ್ಟಿಸ್ (Yersinia pestis) ಎಂದು ಉಲ್ಲೇಖಿಸಲಾಗಿದೆ. ಆದರೆ ರಷ್ಯಾದ ಅಧಿಕೃತ ಆರೋಗ್ಯ ಸಂಸ್ಥೆ ರೋಸ್ಪೊಟ್ರೆಬ್ನಾಡ್ಜೋರ್, ಇದನ್ನು ಅಜ್ಞಾತ ಕಾರಣದ ನ್ಯುಮೋನಿಯಾ ಎಂದು ಹೇಳಿದ್ದು, ರೋಗಕಾರಕ ಬ್ಯಾಕ್ಟೀರಿಯಾಗೆ ಸಂಬಂಧಿಸಿದ ಯಾವುದೇ ಲ್ಯಾಬ್ ಅಪಘಾತ ನಡೆದಿಲ್ಲ ಎಂದು ತಿಳಿಸಿದೆ.
ಈ ಘಟನೆಯ ಬಳಿಕ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸುಮಾರು 197ರಿಂದ 200 ಜನರನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
ವ್ಯುಹಾನ್ ಪಾರ್ಟ್-2 ಎಂದೇಕೆ ಕರೆಯಲಾಗುತ್ತಿದೆ?
ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯುಹಾನ್ ಪಾರ್ಟ್-2 ಎಂಬ ಚರ್ಚೆಗೆ ಕಾರಣವಾಗಿದೆ. ಕೆಲವು ರಷ್ಯಾದ ಟೆಲಿಗ್ರಾಂ ಚಾನೆಲ್ಗಳು ಹಾಗೂ ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳಲ್ಲಿ ಸೈಬೀರಿಯಾದ ಈ ಘಟನೆಯನ್ನು ವ್ಯುಹಾನ್ಗೆ ಹೋಲಿಸಲಾಗಿದೆ. ಇದಕ್ಕೆ ಮುಖ್ಯ ಕಾರಣ, ಲ್ಯಾಬ್ನಲ್ಲಿ ಟೆಸ್ಟ್ ಟ್ಯೂಬ್ ಒಡೆದಿರುವ ವರದಿ, ನಂತರ ಲ್ಯಾಬ್ ಸಿಬ್ಬಂದಿಯೊಬ್ಬರು ಮೃತಪಟ್ಟಿರುವುದು, ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಕ್ರಮಗಳು ಹಾಗೂ ಆರಂಭದಲ್ಲಿ ಸೋಂಕಿನ ಕಾರಣ ಸ್ಪಷ್ಟವಾಗದಿರುವುದು. ಕೊರೊನಾ ಸಾಂಕ್ರಾಮಿಕದ ನಂತರ ಲ್ಯಾಬ್ ಸುರಕ್ಷತೆ ಮತ್ತು ಸಂಭಾವ್ಯ ಲ್ಯಾಬ್ ಲೀಕ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆ ಹೆಚ್ಚಾಗಿದೆ. ಹೀಗಾಗಿ ಲ್ಯಾಬ್ಗೆ ಸಂಬಂಧಿಸಿದ ಇಂತಹ ಯಾವುದೇ ಘಟನೆ ನಡೆದಾಗ ವ್ಯುಹಾನ್ನ ನೆನಪು ಸಹಜವಾಗಿಯೇ ಮೂಡುತ್ತದೆ. ಆದರೆ ಸೈಬೀರಿಯಾ ಪ್ರಕರಣವನ್ನು ವ್ಯುಹಾನ್ನೊಂದಿಗೆ ನೇರವಾಗಿ ಹೋಲಿಸಲು ಸದ್ಯ ಯಾವುದೇ ಸಾಕ್ಷ್ಯವಿಲ್ಲ.
ಅಲ್ಲಿ ನಿಜವಾಗ್ಲೂ ನಡೆದಿರುವುದು ಏನು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಸಿಗ್ತಿಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡ್ತಿದ್ದಾರೆ. ಸ್ಥಳೀಯ ಮಾಧ್ಯಮಗಳು ಮತ್ತು ಕೆಲವು ಅಧಿಕಾರಿಗಳು ಪ್ಲೇಗ್ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾರೆ. ನೆರೆಯ ಗಣರಾಜ್ಯದ ಮುಖ್ಯಸ್ಥರೊಬ್ಬರು ಕೂಡ ಈ ಸಾವು ಬಹುಶಃ ಪ್ಲೇಗ್ನಿಂದ ಸಂಭವಿಸಿರಬಹುದು ಎಂದಿದ್ದಾರೆ. ಪ್ಲೇಗ್ ಒಂದು ಹಳೆಯ ಕಾಯಿಲೆಯಾಗಿದ್ದರೂ ಈಗಲೂ ಅಪಾಯಕಾರಿ ಸೋಂಕು. ಇದರಲ್ಲಿ ಮೂರು ಪ್ರಮುಖ ರೂಪಗಳಿದ್ದು, ನ್ಯುಮೋನಿಕ್ ಪ್ಲೇಗ್ ಅತ್ಯಂತ ಗಂಭೀರ ರೂಪ ಎಂದು ಪರಿಗಣಿಸಲಾಗುತ್ತದೆ. ಇದು ಉಸಿರಾಟದ ಹನಿಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡಬಹುದು. ಸಮಯಕ್ಕೆ ಸರಿಯಾಗಿ ಆ್ಯಂಟಿಬಯೋಟಿಕ್ ಚಿಕಿತ್ಸೆ ದೊರೆಯದಿದ್ದರೆ ಜೀವಕ್ಕೆ ಅಪಾಯ ಹೆಚ್ಚಾಗಬಹುದು. ಆದರೆ ಸೋಂಕು ಹರಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಸದ್ಯಕ್ಕೆ ಈ ಘಟನೆ ಸ್ಥಳೀಯ ಮಟ್ಟದಲ್ಲಿ ನಿಯಂತ್ರಣದಲ್ಲಿರುವಂತೆ ಕಾಣುತ್ತಿದೆ. ಯಾವುದೇ ಅಂತಾರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ