ಉಕ್ರೇನ್‌ನಲ್ಲಿ ಭಾರತೀಯ ಕಂಪನಿ ಮೇಲೆ ರಷ್ಯಾ ದಿಢೀರ್ ದಾಳಿ: 400 ಕೋಟಿ ರೂ ನಷ್ಟ!

Published : Oct 05, 2026, 09:32 AM IST
Kusum Healthcare

ಸಾರಾಂಶ

ಉಕ್ರೇನ್‌ನ ಸುಮಿ ನಗರದಲ್ಲಿರುವ ಭಾರತೀಯ ಮೂಲದ ಕುಸುಮ್‌ ಗ್ರೂಪ್‌ನ ಔಷಧ ಘಟಕದ ಮೇಲೆ ರಷ್ಯಾ ಡ್ರೋನ್‌ ದಾಳಿ ನಡೆಸಿದೆ. ಈ ಭೀಕರ ದಾಳಿಯಲ್ಲಿ ಒಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದು, ಕಂಪನಿಗೆ ಸುಮಾರು 400 ಕೋಟಿ ರೂ. ನಷ್ಟವಾಗಿದೆ. ರಷ್ಯಾದ ಈ ಕೃತ್ಯವನ್ನು ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದಾರೆ.

ನವದೆಹಲಿ: ಉಕ್ರೇನ್‌ನಲ್ಲಿರುವ ಭಾರತೀಯ ಮೂಲದ ಔಷಧ ಕಂಪನಿಯಾದ ಕುಸುಮ್‌ ಗ್ರೂಪ್‌ನ ಫಾರ್ಮಾ ಘಟಕದ ಮೇಲೆ ರಷ್ಯಾ ನಡೆಸಿದ ಡ್ರೋನ್‌ ದಾಳಿಯಲ್ಲಿ ಒಬ್ಬ ಮೃತಪಟ್ಟು, ಹಲವರು ಗಂಭೀರ ಗಾಯಗೊಂಡಿದ್ದಾರೆ.

ಉಕ್ರೇನ್‌ನ ಸುಮಿ ನಗರದಲ್ಲಿರುವ ಫಾರ್ಮಾ ಘಟಕದ ಮುಖ್ಯ ರಚನೆಯು ಡ್ರೋನ್‌ ದಾಳಿಯಿಂದ ಸಂಪೂರ್ಣ ನಾಶವಾಗಿದ್ದು, ಸಾವು-ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಷ್ಯಾ ದಾಳಿಯಿಂದ ಕಂಪನಿಗೆ 400 ಕೋಟಿ ರು. ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ರಷ್ಯಾದ ಈ ದಾಳಿಯನ್ನು ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದಾರೆ.

ಕುಸುಮ್‌ ಗ್ರೂಪ್‌ ಭಾರತೀಯ ಮೂಲದ ರಾಜೀವ್‌ ಗುಪ್ತಾ ನೇತೃತ್ವದ ಕಂಪನಿಯಾಗಿದ್ದು, ಭಾರತ, ಉಕ್ರೇನ್‌ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಉತ್ಪನ್ನ ಮಾರಾಟ ಮಾಡುತ್ತಿದೆ. ಹೆಚ್ಚಾಗಿ ಜನರಿಕ್‌ ಔಷಧಿಗಳನ್ನು ಈ ಕಂಪನಿ ತಯಾರಿಸುತ್ತದೆ. ಉಕ್ರೇನ್‌, ಉಜ್ಬೇಕಿಸ್ತಾನ ಮತ್ತಿತರ ದೇಶಗಳಲ್ಲಿ ಹೆಚ್ಚಿನ ವ್ಯವಹಾರ ನಡೆಸುತ್ತದೆ. 1994ರಲ್ಲಿ ಭಾರತೀಯ ಔಷಧಗಳನ್ನು ಉಕ್ರೇನ್‌ನಲ್ಲಿ ಹಂಚಿಕೆ ಮಾಡುವ ಕಾರ್ಯ ಆರಂಭಿಸಿದ್ದ 2009ರಲ್ಲಿ ಉಕ್ರೇನ್‌ನಲ್ಲಿ ತನ್ನದೇ ಆದ ಉತ್ಪಾದನಾ ಘಟಕವನ್ನು ಶುರು ಮಾಡಿತ್ತು. ಭಾರತದ ಮಧ್ಯಪ್ರದೇಶ, ರಾಜಸ್ಥಾನದಲ್ಲೂ ಈ ಕಂಪನಿ ತನ್ನ ಘಟಕಗಳನ್ನು ಹೊಂದಿದೆ.

ಧಗಧಗಿಸಿದ ಔಷಧ ಘಟಕ

ರಷ್ಯಾದ ಶಹೀದ್ (Shahed) ಡ್ರೋನ್‌ಗಳು ನೇರವಾಗಿ ಔಷಧ ಘಟಕಕ್ಕೆ ಅಪ್ಪಳಿಸಿದ ಪರಿಣಾಮ ಘಟನಾ ಸ್ಥಳದಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡು, ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಈ ಭೀಕರ ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಸಾವು-ನೋವುಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆತಂಕ ಸೃಷ್ಟಿಸಿವೆ.

1994ರಲ್ಲಿ ಆರಂಭವಾದ ಕುಸುಮ್ ಗ್ರೂಪ್ ಪ್ರಯಾಣ

ಭಾರತೀಯ ಪ್ರಜೆಯಾದ ರಾಜೀವ್ ಗುಪ್ತಾ ಅವರು 1994ರಲ್ಲಿ ‘ಕುಸುಮ್ ಗ್ರೂಪ್’ ಸಂಸ್ಥೆಯನ್ನು ಉಕ್ರೇನ್‌ಗೆ ಭಾರತೀಯ ಔಷಧಿಗಳನ್ನು ಪೂರೈಸುವ ವಿತರಕ ಕಂಪನಿಯಾಗಿ ಆರಂಭಿಸಿದ್ದರು.

2002ರಲ್ಲಿ ಇತರ ಕಂಪನಿಗಳ ಉತ್ಪನ್ನಗಳ ವಿತರಣೆಯನ್ನು ಸ್ಥಗಿತಗೊಳಿಸಿದ ಸಂಸ್ಥೆಯು ತನ್ನದೇ ಆದ ಸ್ವತಂತ್ರ ಬ್ರ್ಯಾಂಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿತು. 2007ರಲ್ಲಿ ಭಾರತದಲ್ಲಿ ಹಾಗೂ 2009ರಲ್ಲಿ ಉಕ್ರೇನ್‌ನ ಸುಮಿಯಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಯಿತು. ತದನಂತರ ಭಾರತದಲ್ಲೂ ಇನ್ನೂ ಎರಡು ಉತ್ಪಾದನಾ ಸೌಲಭ್ಯಗಳನ್ನು ತೆರೆಯಲಾಯಿತು.

ಪ್ರಸ್ತುತ ಈ ಸಂಸ್ಥೆಯು 50ಕ್ಕೂ ಹೆಚ್ಚು ಪ್ರಮುಖ ಜೆನೆರಿಕ್ (Generic) ಔಷಧಿಗಳನ್ನು ತಯಾರಿಸುತ್ತಿದ್ದು, ಉಕ್ರೇನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್ ಹಾಗೂ ಫಿಲಿಪೈನ್ಸ್ ಸೇರಿದಂತೆ 9ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಜಾಲವನ್ನು ಹೊಂದಿದೆ. ಭಾರತೀಯ ಬೇರುಗಳನ್ನು ಹೊಂದಿರುವ ಈ ಸಂಸ್ಥೆ, ತನ್ನನ್ನು ಉಕ್ರೇನಿಯನ್ ಕಂಪನಿ ಎಂದೇ ಗುರುತಿಸಿಕೊಂಡಿದೆ.

ಯುದ್ಧ ಪ್ರಾರಂಭವಾದಾಗಿನಿಂದಲೂ ಸುಮಿಯಲ್ಲಿರುವ ಈ ಘಟಕವು ಔಷಧ ಪೂರೈಕೆಯನ್ನು ನಿಲ್ಲಿಸದೆ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇತ್ತೀಚಿನ ದಾಳಿಯು ಸಂಸ್ಥೆಯ ಕಾರ್ಯಾಚರಣೆಗೆ ತೀವ್ರ ಹೊಡೆತ ನೀಡಿದೆ.

ಝೆಲೆನ್ಸ್ಕಿ ಖಂಡನೆ ಮತ್ತು ಉಕ್ರೇನ್‌ನ ಕ್ಷಿಪಣಿ ಪ್ರತ್ಯುತ್ತರ

ಈ ಕ್ರೂರ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತೀವ್ರವಾಗಿ ಖಂಡಿಸಿದ್ದಾರೆ. ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಸ್ಥರು ಮತ್ತು ಪ್ರೀತಿಪಾತ್ರರಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಬೇಸಿಗೆಯಿಂದಲೂ ಮಾಸ್ಕೋ ಪಡೆಯು ಉಕ್ರೇನ್‌ನ ವಿವಿಧ ನಗರಗಳ ಮೇಲೆ ವೇಗವಾಗಿ ಚಲಿಸುವ ಅಗ್ಗದ ಜೆಟ್-ಚಾಲಿತ ಶಹೀದ್ ಡ್ರೋನ್‌ಗಳನ್ನು ಸಾಲಾಗಿ ಪ್ರಯೋಗಿಸುತ್ತಿದೆ. ಇವುಗಳನ್ನು ಹೊಡೆದುರುಳಿಸಲು ಉಕ್ರೇನಿಯನ್ ವಾಯು ರಕ್ಷಣಾ ಪಡೆಗಳ ಇಂಟರ್‌ಸೆಪ್ಟರ್ ಡ್ರೋನ್‌ಗಳು ವೇಗ ಸಾಲದೆ ಹೆಣಗಾಡುತ್ತಿವೆ.

ಈ ಸವಾಲುಗಳ ನಡುವೆಯೇ, ಉಕ್ರೇನ್ ದೇಶೀಯವಾಗಿ ಅಭಿವೃದ್ಧಿಪಡಿಸಿದ FP-7 ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ರಥಮ ಬಾರಿಗೆ ಯುದ್ಧ ಭೂಮಿಯಲ್ಲಿ ಯಶಸ್ವಿಯಾಗಿ ಬಳಸಿದ್ದಾಗಿ ಘೋಷಿಸಿದೆ. ಸರಿಸುಮಾರು 250 ಕಿಲೋಮೀಟರ್ ದೂರದ ಸಶಸ್ತ್ರ ಗುರಿಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಹಲ್ಗಾಂ ದಾಳಿಯ ರೂವಾರಿ ಹತ ಉಗ್ರ ಮೂಸಾ ಕಾಡಿನ ರಹಸ್ಯ ಬಯಲು, ಗುಂಡಿನ ಗಾಯ ವಾಸಿಗೆ ಜೇನು ಹಚ್ಚಿಕೊಳ್ಳುತ್ತಿದ್ದ!
ನಾನು ಸಾವಿಗೆ ಅಂಜಲ್ಲ, ಉದ್ದೇಶಪೂರ್ವಕ ವಿಮಾನಪತನಕ್ಕೆ ಯತ್ನಿಸಿದ್ದೆ: ಫ್ಲೈ ದುಬೈ ಉಗ್ರ ಪೈಲಟ್