
ಬೊಗೋಟಾ (ಜೂನ್ 12, 2023) : ಕೊಲಂಬಿಯಾದ ಅಮೆಜಾನ್‌ನಲ್ಲಿ 40 ದಿನಗಳ ಕಾಲ ನಾಪತ್ತೆಯಾಗಿದ್ದ 11 ತಿಂಗಳ ಕೂಸು ಸೇರಿದಂತೆ ನಾಲ್ವರು ಆದಿವಾಸಿ ಕುಟುಂಬದ ಮಕ್ಕಳು, ಅರಣ್ಯದಲ್ಲಿ ಬೀಜಗಳು, ಬೇರುಗಳು ಹಾಗೂ ಸಸ್ಯಗಳನ್ನು ತಿನ್ನುತ್ತ ಬದುಕುಳಿದಿದ್ದರು ಎಂಬ ಕುತೂಹಲದ ವಿಷಯ ಬೆಳಕಿಗೆ ಬಂದಿದೆ. ಮಕ್ಕಳು ಆದಿವಾಸಿ ಮೂಲದವರಾಗಿದ್ದು, ಅವರಿಗೆ ಅರಣ್ಯದಲ್ಲಿ ಬದುಕುವ ಕಲೆ ಗೊತ್ತಿತ್ತು. ಇದೇ ಅವರು 40 ದಿನ ದಟ್ಟಾರಾಣ್ಯದಲ್ಲಿ ಜೀವಂತವಾಗಿ ಉಳಿದರು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ಸಂಪರ್ಕಿಸಿದ ತಜ್ಞರು ಹೇಳಿದ್ದಾರೆ.
ಇದೇ ವೇಳೆ, ಕೊಲಂಬಿಯಾ ಮೂಲನಿವಾಸಿಗಳ ರಾಷ್ಟ್ರೀಯ ಸಂಸ್ಥೆಯ ತಜ್ಞರು ಪ್ರತಿಕ್ರಿಯಿಸಿ, ‘ತಾಯಿಯ ಗರ್ಭದಲ್ಲಿದ್ದಾಗಲೇ ಮಕ್ಕಳಿಗೆ ಪರಿಸರ ಜ್ಞಾನ ಬಂದಿರುವ ಸಂಕೇತವಿದು’ ಎಂದಿದ್ದಾರೆ. ಮೇ 1ರಂದು ಅಮೆಜಾನ್ ಕಾಡಿನ ಮೇಲೆ 6 ಸುಶಿಕ್ಷಿತ ಆದಿವಾಸಿ ಕುಟುಂಬದ ಸದಸ್ಯರನ್ನು ಹೊತ್ತು ಹಾರುತ್ತಿದ್ದ ಪುಟ್ಟವಿಮಾನ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿತ್ತು.
ಇದನ್ನು ಓದಿ: Amazing..ಅಮೆಜಾನ್ ಕಾಡಿಗೇ ಸವಾಲೆಸೆದು ಬದುಕಿ ಬಂದ ಮಕ್ಕಳು..!
ಆಗ ಅಪಘಾತದ ಕೆಲ ದಿನಗಳ ಬಳಿಕ ವಿಮಾನದಲ್ಲಿದ್ದ ಪೈಲಟ್ ಹಾಗೂ ಮಹಿಳೆಯ ಶವ (ಮಕ್ಕಳ ತಂದೆ-ತಾಯಿ ಶವ) ಪತ್ತೆಯಾಗಿತ್ತು. ಆದರೆ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರು. ಅವರು 13 ವರ್ಷ, 9 ವರ್ಷ, 4 ವರ್ಷ ಮತ್ತು 11 ತಿಂಗಳ ವಯಸ್ಸಿನವರಾಗಿದ್ದಾರೆ. ಅವರಿಗಾಗಿ ಕೊಲಂಬಿಯಾದ ಸೇನೆ ತೀವ್ರ ಹುಡುಕಾಟ ನಡೆಸಿತ್ತು. ಶನಿವಾರ ಇವರು ಪತ್ತೆಯಾಗಿದ್ದರು.
ಅರಣ್ಯದಲ್ಲಿ ಹೀಗೆ ಬದುಕಿದ್ದರು:
40 ದಿನ ಈ ಮಕ್ಕಳು ಹೇಗೆ ಬದುಕಿದ್ದರು ಎಂಬುದಕ್ಕೆ ಈಗ ಉತ್ತರ ದೊರಕಿದೆ. ಈ ಮಕ್ಕಳ ಅಜ್ಜ ಈ ಬಗ್ಗೆ ವಿವರ ನೀಡಿದ್ದು, ‘ಪತನವಾದ ವಿಮಾನದಲ್ಲಿದ್ದ ಯುಕ್ಕಾ ಹಿಟ್ಟು ಕೂಡ ನೆಲಕ್ಕೆ ಬಿದ್ದಿತ್ತು. ಮೊದಲು ಅದನ್ನು ತಿನ್ನುತ್ತಾ ಬದುಕಿದರು. ನಂತರ ಈ ಮಕ್ಕಳ ರಕ್ಷಣೆಗೆ ಬಳಸಲಾಗಿದ್ದ ಹೆಲಿಕಾಪ್ಟರುಗಳು, ಅರಣ್ಯಕ್ಕೆ ಆಹಾರದ ಪೊಟ್ಟಣಗಳು, ನೀರು ಹಾಗೂ ಬಿಸ್ಕತ್ ಎಸೆದವು. ಅದನ್ನೂ ಮಕ್ಕಳು ತಿಂದರು’ ಎಂದಿದ್ದಾರೆ.
ಇದನ್ನೂ ಓದಿ: ಅಮೆಜಾನ್ ದಟ್ಟಾರಣ್ಯದಲ್ಲಿ ವಿಮಾನ ಪತನ, ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು 40 ದಿನ ಬಳಿಕ ಜೀವಂತ ಪತ್ತೆ!
‘ಆದರೆ ಈ ಆಹಾರ ಅಷ್ಟು ಸಾಲಲ್ಲ ಎಂಬುದು ಗೊತ್ತಿರುವ ವಿಚಾರವೇ. ಹೀಗಾಗಿ ಖಾದ್ಯಗಳೆಂದು ಗುರುತಿಸಲ್ಪಟ್ಟಿರುವ ಅಮೆಜಾನ್ ಅರಣ್ಯಗಳಲ್ಲಿನ ಬೀಜಗಳು, ಹಣ್ಣುಗಳು, ಬೇರುಗಳು ಮತ್ತು ಸಸ್ಯಗಳನ್ನು ಸಹ ಇವರು ಸೇವಿಸಿದ್ದಾರೆ ಎಂದು ಕೊಲಂಬಿಯಾದ ರಾಷ್ಟ್ರೀಯ ಮೂಲನಿವಾಸಿಗಳ ಸಂಸ್ಥೆಯ ತಜ್ಞ ಲೂಯಿಸ್ ಅಕೋಸ್ಟಾ ಹೇಳಿದ್ದಾರೆ.
ರಕ್ಷಿಸಲ್ಪಟ್ಟ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಸಫಾರಿಗೆ ಹೋದವರ ಮೇಲೆ ಅಟ್ಟಿಸಿಕೊಂಡು ಹೋದ ವ್ಯಾಘ್ರ: ಪ್ರವಾಸಿಗರು ಜಸ್ಟ್ ಮಿಸ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ