ಡೀಪ್‌ಫೇಕ್‌ ವಿರುದ್ಧ ಜಾಗತಿಕ ಸಮರ ಅಗತ್ಯ: ಮೋದಿ

By Kannadaprabha NewsFirst Published Nov 23, 2023, 8:48 AM IST
Highlights

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಡೀಪ್‌ಫೇಕ್‌ ವಿಡಿಯೋಗಳು ಹಾಗೂ ಫೋಟೋಗಳ ಹಾವಳಿ ಬಗ್ಗೆ ಮತ್ತೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಡೀಪ್‌ಫೇಕ್‌ ವಿರುದ್ಧ ಎಲ್ಲರೂ ಒಟ್ಟಾಗಿ ಸಮರ ಸಾರಬೇಕು ಹಾಗೂ ಜಗತ್ತಿನ ಎಲ್ಲ ದೇಶಗಳು ಸೇರಿಕೊಂಡು ಕೃತಕ ಬುದ್ಧಿಮತ್ತೆಯ ದುರ್ಬಳಕೆಗೆ ನಿಯಂತ್ರಣ ಹೇರಬೇಕು ಎಂದು ಜಾಗತಿಕ ನಾಯಕರಿಗೆ ಒತ್ತಾಯಿಸಿದ್ದಾರೆ.

ನವದೆಹಲಿ: ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ಡೀಪ್‌ಫೇಕ್‌ ವಿಡಿಯೋಗಳು ಹಾಗೂ ಫೋಟೋಗಳ ಹಾವಳಿ ಬಗ್ಗೆ ಮತ್ತೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಡೀಪ್‌ಫೇಕ್‌ ವಿರುದ್ಧ ಎಲ್ಲರೂ ಒಟ್ಟಾಗಿ ಸಮರ ಸಾರಬೇಕು ಹಾಗೂ ಜಗತ್ತಿನ ಎಲ್ಲ ದೇಶಗಳು ಸೇರಿಕೊಂಡು ಕೃತಕ ಬುದ್ಧಿಮತ್ತೆಯ ದುರ್ಬಳಕೆಗೆ ನಿಯಂತ್ರಣ ಹೇರಬೇಕು ಎಂದು ಜಾಗತಿಕ ನಾಯಕರಿಗೆ ಒತ್ತಾಯಿಸಿದ್ದಾರೆ.

ಜಿ20 ವರ್ಚುವಲ್‌ ಶೃಂಗದಲ್ಲಿ ಬುಧವಾರ ಸಂಜೆ ಮಾತನಾಡಿದ ಅವರು, ಸಮಾಜಕ್ಕೆ ಅದರ ಸುರಕ್ಷತೆಯನ್ನು ಖಾತರಿಪಡಿಸುವ ಜತೆಗೆ ಕೃತಕ ಬುದ್ಧಿಮತ್ತೆಯ ಲಾಭ ಎಲ್ಲರಿಗೂ ಆಗುವಂತೆ ನೋಡಿಕೊಳ್ಳಬೇಕು. ಆದರೆ, ಕೃತಕ ಬುದ್ಧಿಮತ್ತೆಯ ಋಣಾತ್ಮಕ ಬಳಕೆಯೇ ಪ್ರಪಂಚದಾದ್ಯಂತ ಹೆಚ್ಚುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ರಶ್ಮಿಕಾ ಬಳಿಕ ಕತ್ರಿನಾ ಡೀಪ್‌ ಫೇಕ್ ಫೋಟೊ ವೈರಲ್: ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ

ಈ ಹಂತದಲ್ಲಿ ಡೀಪ್‌ಫೇಕ್‌ ಬಗ್ಗೆ ಪ್ರಸ್ತಾಪಿಸಿದ ಅವರು, ಕೃತಕ ಬುದ್ಧಿಮತ್ತೆಯ (ಎಐ) ಋಣಾತ್ಮಕ ಪರಿಣಾಮಗಳ ಬಗ್ಗೆ ಜಗತ್ತು ಚಿಂತಿತವಾಗಿದೆ. ಎಐಗಾಗಿ ಜಾಗತಿಕ ನಿಯಮಗಳನ್ನು ರೂಪಿಸಿ ನಾವು ಒಟ್ಟಾಗಿ ಕೆಲಸ ಮಾಡಬೇಕು ಎಂದು ಭಾರತ ಆಶಿಸುತ್ತದೆ. ಕೃತಕ ಬುದ್ಧಿಮತ್ತೆ ದುರ್ಬಳಕೆ ಮಾಡಿಕೊಂಡು ಡೀಪ್‌ಫೇಕ್‌ ಸೃಷ್ಟಿಸಲಾಗುತ್ತಿದ್ದು, ಡೀಪ್‌ಫೇಕ್‌ಗಳು ಸಮಾಜ ಮತ್ತು ವ್ಯಕ್ತಿಗಳಿಗೆ ಎಷ್ಟು ಅಪಾಯಕಾರಿ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಾವು ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದರು.

ಡೀಪ್‌ಫೇಕ್ ಸೃಷ್ಟಿಸಲು ಕೃತಕ ಬುದ್ಧಿಮತ್ತೆಯ ಬಳಕೆಯ ಬಗ್ಗೆ ಪ್ರಧಾನಿ ಇತ್ತೀಚೆಗೆ ಕೂಡ ಕಳವಳ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್‌, ಸಾರಾ ತೆಂಡೂಲ್ಕರ್‌, ಕಾಜೋಲ್‌ ಸೇರಿ ಅನೇಕರ ಡೀಪ್‌ಫೇಕ್‌ ಫೋಟೋ/ವಿಡಿಯೋಗಳನ್ನು ಸೃಷ್ಟಿಸಲಾಗಿತ್ತು. ಬೇರೆಯವರ ದೇಹಕ್ಕೆ ಈ ಗಣ್ಯರ ಮುಖ ಅಂಟಿಸಿ ಸಂದೇಹ ಬಾರದಂತೆ ನಕಲಿ ವಿಡಿಯೋ/ಫೋಟೋ ರೂಪಿಸಲಾಗಿತ್ತು. ಹೀಗೆ ಮಾಡಲು ಬಳಸಲಾಗುವ ತಂತ್ರಜ್ಞಾನಕ್ಕೆ ಡೀಪ್‌ಫೇಕ್‌ ಎನ್ನುತ್ತಾರೆ.

ಟೆಕ್‌ ಉದ್ಯಮಕ್ಕೆ ಸೆಡ್ಡು ಹೊಡೆದ 16 ವರ್ಷದ ಭಾರತೀಯ ಬಾಲೆ, 100 ಕೋಟಿ ಮೌಲ್ಯದ ಕಂಪೆನಿ ಒಡತಿ!

ಇಸ್ರೇಲ್‌-ಹಮಾಸ್‌ ಯುದ್ಧ ವ್ಯಾಪಿಸಬಾರದು: ಮೋದಿ

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧವು ಪ್ರಾದೇಶಿಕ ಸಂಘರ್ಷದ ರೂಪ ಪಡೆಯದಂತೆ ನಾವೆಲ್ಲರೂ ನೋಡಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜಿ20 ವರ್ಚುವಲ್‌ ಶೃಂಗದಲ್ಲಿ ಕೊನೆಯ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಪಶ್ಚಿಮ ಏಷ್ಯಾದಲ್ಲಿ ಅಭದ್ರತೆಯ ಆತಂಕ ಕಾಡುತ್ತಿದೆ. ಆದರೆ ಇಸ್ರೇಲ್-ಹಮಾಸ್ ಯುದ್ಧವು ಪ್ರಾದೇಶಿಕ ಸಂಘರ್ಷದ ಸ್ವರೂಪ ಪಡೆಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಸ್ರೇಲ್‌-ಹಮಾಸ್‌ ಪರಸ್ಪರ ಒತ್ತೆಯಾಳುಗಳ ಬಿಡುಗಡೆ ಘೋಷಣೆ ಮಾಡಿದ್ದನ್ನುಮೋದಿ ಸ್ವಾಗತಿಸಿದರು.

ಭಯೋತ್ಪಾದನೆ ಯಾರಿಗೂ ಸ್ವೀಕಾರಾರ್ಹವಲ್ಲ ಎಂದು ಹೇಳಿದ ಮೋದಿ, ಅದು ಎಲ್ಲೇ ಇದ್ದರೂ ನಾಗರಿಕರ ಸಾವು ಖಂಡಿತ ಎಂದು ಪ್ರತಿಪಾದಿಸಿದರು.

ಡೀಪ್‌ ಫೇಕ್‌ಗೆ ಕಡಿವಾಣ ಹಾಕಲು ಇಂದು ಕೇಂದ್ರ ಸಭೆ

ನವದೆಹಲಿ: ಡೀಪ್‌ಫೇಕ್‌ ವಿಡಿಯೋ ದಿನೇ ದಿನೇ ಖ್ಯಾತನಾಮರಿಗೆ ಮಸಿ ಬಳಿಯುವ ಯತ್ನ ನಡೆಸುತ್ತಿರುವ ಬೆನ್ನಲ್ಲೇ, ಇಂಥ ವಿಡಿಯೋಗಳನ್ನು ಪ್ರಸಾರ ಮಾಡುತ್ತಿರುವ ಸಾಮಾಜಿಕ ಜಾಲತಾಣಗಳ ಜೊತೆ ಕೇಂದ್ರ ಸರ್ಕಾರ ಗುರುವಾರ ಸಭೆಯೊಂದನ್ನು ಆಯೋಜಿಸಿದೆ. ಕೇಂದ್ರ ಎಲೆಕ್ಟ್ರಾನಿಕ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ತಂತ್ರಜ್ಞಾನದ ಇಂಥ ದುರ್ಬಳಕೆ ಮುಂದಿನ ದಿನಗಳಲ್ಲಿ ದೊಡ್ಡ ಅಪಾಯ ತರಲಿದೆ ಎಂದು ಎಚ್ಚರಿಸಿದ್ದರು.

ಜೊತೆಗೆ ಸಚಿವ ಅಶ್ವಿನ್‌ ವೈಷ್ಣವ್‌ ಕೂಡಾ ಇಂಥ ಸಂಗತಿಗಳನ್ನು ತಡೆಯಲು ಜಾಲತಾಣಗಳು ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಅಂಥ ಕಂಪನಿಗಳಿಗೆ ಮಾಹಿತಿ ತಂತ್ರಜ್ಞಾನದ ಕಠಿಣ ಕಾಯ್ದೆಗಳಡಿ ನೀಡಿರುವ ಕೆಲ ವಿನಾಯ್ತಿ ರದ್ದುಗೊಳಿಸುವ ಎಚ್ಚರಿಕೆ ನೀಡಿದ್ದರು. ಮತ್ತೊಂದೆಡೆ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಕೂಡಾ, ಇಂಥ ಘಟನೆಗಳ ವಿರುದ್ಧ ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರುವ ಎಲ್ಲಾ ಅವಕಾಶಗಳು ಕಾನೂನಿನಲ್ಲಿ ಇರಲಿವೆ ಎಂದು ಹೇಳಿದ್ದರು.

click me!