
ವಿಷುವಲ್ ಕ್ಯಾಪಿಟಲಿಸ್ಟ್ ಸಂಸ್ಥೆ ಗ್ಲೋಬಲ್ ಟ್ರಸ್ಟ್ ಇನ್ ಗವರ್ನ್‌ಮೆಂಟ್ (Global Trust in Government) ಎಂಬ ಸಮೀಕ್ಷೆ ಮಾಡಿದ್ದು, ಇದರಲ್ಲಿ ಪ್ರಪಂಚದ ವಿವಿಧ ದೇಶಗಳ ಜನರಲ್ಲಿ ಅಲ್ಲಿನ ಸರ್ಕಾರಗಳ ಮೇಲೆ ಎಷ್ಟರಮಟ್ಟಿಗೆ ನಂಬಿಕೆಯಿದೆ ಎಂಬುದರ ಬಗ್ಗೆ ವರದಿ ನೀಡಿದೆ. ಸಂತಸದ ಸಂಗತಿಯೆಂದರೆ ಭಾರತದ ಜನತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ನಂಬುತ್ತಾರೆ. ಭಾರತದ ಜೊತೆ ನೆದರ್‌ಲೆಂಡ್, ಮಲೇಷಿಯಾ, ಜರ್ಮನಿ ಜನತೆ ಕೂಡ ಆಯಾ ಸರ್ಕಾರಗಳ ಮೇಲೆ ನಂಬಿಕೆ ಇಟ್ಟಿದೆ. ಆದರೆ ವಿಶ್ವದ ದೊಡ್ಡಣ್ಣ ಅಮೆರಿಕಾ, ಆರ್ಥಿಕವಾಗಿ ಸದೃಢವಾಗಿರುವ ಚೀನಾ, ನೆರೆಯ ಪಾಕಿಸ್ತಾನ ಮತ್ತಿತರ ದೇಶಗಳಲ್ಲಿ ಜನ ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ಧಾರೆ ಎನ್ನುತ್ತದೆ ವರದಿ. ಯಾವ ದೇಶದ ಜನ ಅಲ್ಲಿನ ಸರ್ಕಾರವನ್ನು ಎಷ್ಟರಮಟ್ಟಿಗೆ ನಂಬುತ್ತಾರೆ ಎಂಬ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.
ಯಾವ ದೇಶದ ಜನ ನಂಬುತ್ತಾರೆ, ಯಾರು ನಂಬಲ್ಲ?:
ಜಗತ್ತಿನ ಅತಿ ಹೆಚ್ಚು ದೇಶಗಳಲ್ಲಿ ಹೆಚ್ಚಿನ ಜನಸಂಖ್ಯೆ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ತಮ್ಮ ದೇಶದ ಸರ್ಕಾರದ ಮೇಲಿರಿಸಿದ್ದ ನಂಬಿಕೆ ದಿನೇ ದಿನೇ ಕಡಿಮೆಯಾಗುತ್ತಲೇ ಇದೆ ಎನ್ನುತ್ತದೆ ವರದಿ. ಸರ್ಕಾರದ ಮೇಲಿನ ಅಪನಂಬಿಕೆ ಮತ್ತು ರಾಜಕಾರಣಿಗಳ ಮೇಲಿನ ಸಿಟ್ಟು ಹೊಸದೇನಲ್ಲ, ಆದರೆ ಕೋವಿಡ್-19ನಂತ ಮಾರಕ ರೋಗ ಇಡೀ ಜಗತ್ತನ್ನು ತತ್ತರಿಸಿದ ಈ ಕಾಲಘಟ್ಟದಲ್ಲಿ ಸರ್ಕಾರದ ಮೇಲೆ ಅಪನಂಬಿಕೆ ಹೆಚ್ಚಾದರೆ ಅದು ಮುಂದೊಂದು ದಿನ ಚಳವಳಿಯಾಗಿ ರೂಪುಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯಪಡಲಾಗಿದೆ.
ಸಾರ್ವಜನಿಕ ಸಂಸ್ಥೆಗಳು ಮತ್ತು ಸರ್ಕಾರಗಳನ್ನು ಎಷ್ಟು ಮಂದಿ ನಂಬುತ್ತಾರೆ ಎಂಬ ಡೇಟಾವನ್ನು ಗ್ಲೋಬಲ್ ಟ್ರಸ್ಟ್‌ವರ್ತಿನೆಸ್ ಮಾನಿಟರ್ ಮೂಲಕ ಸಮೀಕ್ಷೆ ಮಾಡಲಾಗಿದೆ. ವಿಶ್ವ ಸಾಂಕ್ರಾಮಿಕ ಮಹಾಮಾರಿ ಕೊರೋನಾವೈರಸ್ ಆರ್ಭಟ ಆರಂಭವಾದಾಗಿನಿಂದ ಒಟ್ಟಾರೆ ಜಗತ್ತಿನ ದೇಶಗಳ ಜನರ ಸರ್ಕಾರದ ಮೇಲಿನ ವಿಶ್ವಾಸ ಶೇಕಡ 8 ಹೆಚ್ಚಾಗಿದೆ. ಆದರೆ ಇಂತಾ ತುರ್ತು ಸ್ಥಿತಿಯಲ್ಲಿ ಕೇವಲ ಎಂಟು ಪರ್ಸೆಂಟ್ ಹೆಚ್ಚಾಗಿರುವುದನ್ನು ಉತ್ತಮ ಬೆಳವಣಿಗೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎನ್ನುತ್ತದೆ ವರದಿ. ಒಂದು ದೇಶದಿಂದ ಇನ್ನೊಂದು ದೇಶದ ಜನರ ವಿಶ್ವಾಸ ಬೇರೆ ಬೇರೆ ತೆರನಾಗಿದೆ. ಭಾರತ, ನೆದರ್‌ಲೆಂಡ್ಸ್, ಜರ್ಮನಿ ಮತ್ತು ಮಲೇಷಿಯಾ ಸರ್ಕಾರದ ಮೇಲೆ ಅಲ್ಲಿನ ಜನರಿಗೆ ನಂಬಿಕೆ ಹೆಚ್ಚಿದೆ. ಲ್ಯಾಟಿನ್ ಅಮೆರಿಕಾದ ದೇಶಗಳಲ್ಲಿ ಜನರಿಗೆ ಸರ್ಕಾರದ ಮೇಲೆ ಕನಿಷ್ಟ ನಂಬಿಕೆಯೂ ಇಲ್ಲದಂತಾಗಿದೆ. ಅಂದರೆ ಈ ದೇಶಗಳಲ್ಲಿ ರಾಜಕಾರಣಿಗಳ ಮೇಲೆ ಜನರಿಗೆ ಕಿಂಚಿತ್ತೂ ನಂಬಿಕೆಯೇ ಇಲ್ಲ. ಕೊಲಂಬಿಯಾದಲ್ಲಿ ಜನರಿಗೆ ಸರ್ಕಾರದ ಮೇಲೆ ಕೇವಲ 4% ನಂಬಿಕೆಯಿದ್ದರೆ, ಅರ್ಜೆಂಟಿನಾದಲ್ಲಿ ಕೇವಲ 3% ಜನರಿಗೆ ಸರ್ಕಾರದ ಮೇಲೆ ನಂಬಿಕೆಯಿದೆ. ಅಂದರೆ ದೇಶದ ಬಹುತೇಕ ಜನರಿಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲವಾಗಿದೆ.
ಒಂದು ದೇಶದಲ್ಲಿ 10 % ಜನ ಸರ್ಕಾರಿ ಕೆಲಸದಲ್ಲಿ ಇದ್ದಾರೆ ಎಂದು ಅಂದುಕೊಂಡರೂ, ಸರ್ಕಾರಿ ನೌಕರರು ಕೂಡ ಅಲ್ಲಿನ ಸರ್ಕಾರವನ್ನು ನಂಬುತ್ತಿಲ್ಲ ಎಂದಾಯಿತು. ಅಷ್ಟರಮಟ್ಟಿಗೆ ಇಲ್ಲಿನ ರಾಜಕಾರಣಿಗಳ ಮೇಲೆ ಜನರಿಗೆ ರೇಜಿಗೆ ಹುಟ್ಟಿದೆ.
ಇದನ್ನೂ ಓದಿ: ಹೈಪರ್‌ಸಾನಿಕ್ ಜಿರ್ಕಾನ್ ಕ್ಷಿಪಣಿ ಯಶಸ್ವಿ ಪರೀಕ್ಷೆ ನಡೆಸಿದ ರಷ್ಯಾ!
ಇನ್ನು ಸಾರ್ವಜನಿಕ ಸಂಸ್ಥೆಗಳ ಮೇಲಿನ ನಂಬಿಕೆ ಹೇಗಿದೆ?:
ಸಾರ್ವಜನಿಕ ವಲಯದ ಸಂಸ್ಥೆಗಳ ಮೇಲೆ ಜನರಿಗೆ ಹೆಚ್ಚಿನ ನಂಬಿಕೆಯಿದ್ದು, ಸರ್ಕಾರದ ಸ್ವಾಮ್ಯ ಅಥವಾ ಪಾಲುದಾರಿಕೆ ಇರುವ ಸೇವಾ ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಇನ್ನು ವೃತ್ತಿ ಅಥವಾ ಇಂಡಸ್ಟ್ರಿ ಆಧಾರಿತ ಸಾರ್ವಜನಿಕ ವಲಯದ ಮೇಲೆ ನಂಬಿಕೆ ಈ ಕೆಳಗಿನಂತಿದೆ.
ವೈದ್ಯರ ಮೇಲಿನ ನಂಬಿಕೆ - 64%
ವಿಜ್ಞಾನಿಗಳ ಮೇಲಿನ ನಂಬಿಕೆ - 61%
ಶಿಕ್ಷಕರ ಮೇಲಿನ ನಂಬಿಕೆ - 55%
ಸೇನೆಯ ಮೇಲಿನ ನಂಬಿಕೆ - 42%
ಸಾಮಾನ್ಯ ಪುರುಷ-ಮಹಿಳೆ ಮೇಲಿನ ನಂಬಿಕೆ - 38%
ಪೊಲೀಸರ ಮೇಲಿನ ನಂಬಿಕೆ - 37%
ನ್ಯಾಯಮೂರ್ತಿ-ನ್ಯಾಯಾಧೀಶರ ಮೇಲಿನ ನಂಬಿಕೆ - 34%
ಟಿವಿ ನ್ಯೂಸ್ ಓದುವವರ ಮೇಲಿನ ನಂಬಿಕೆ - 27%
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 30 ರೂಪಾಯಿ ಏರಿಕೆ!
ಇವೆಲ್ಲವೂ ಜಗತ್ತಿನಾದ್ಯಂತ ವೃತ್ತಿಯಾಧರಿಸಿ ಮಾಡಿದ ಸಮೀಕ್ಷೆಯಿಂದ ತಿಳಿದುಬಂದ ಮಾಹಿತಿ. ಒಟ್ಟಿನಲ್ಲಿ ರಾಜಕಾರಣಿಗಳ ಕಾನೂನುಬಾಹಿರ, ಜನವಿರೋಧಿ ನೀತಿಗಳಿಂದ ಜನ ಬೇಸತ್ತಿರುವುದು ಸ್ಪಷ್ಟ. ಆದರೆ ಭಾರತೀಯರು ಮಾತ್ರ ಇನ್ನೂ ಸರ್ಕಾರದ ಮೇಲೆ ನಂಬಿಕೆ ಇರಿಸಿದ್ದಾರೆ ಎಂಬುದು ಸಮಾಧಾನದ ವಿಚಾರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ