
ಬಾನ್ನೆವಿಟ್ಜ್, ಜರ್ಮನಿ (ಏ.20): ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಸ್ಯಾಕ್ಸೋನಿಯ ಮುನ್ಸಿಪಲ್ ಕೆಲಸಗಾರನೊಬ್ಬನಿಗೆ ಕಣ್ಣೆದುರೇ ದೊಡ್ಡ ಸಂಪತ್ತು ಅನಿರೀಕ್ಷಿತವಾಗಿ ಸಿಕ್ಕಿತ್ತು. ಆರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ, ಆ ಚಿನ್ನದ ಭವಿಷ್ಯ ಈಗ ನಿರ್ಧಾರವಾಗಿದೆ. ಜರ್ಮನಿಯ ಬಾನ್ನೆವಿಟ್ಜ್‌ನಲ್ಲಿ ನಗರಸಭೆ ಕಾರ್ಮಿಕನೊಬ್ಬ ಮಳೆನೀರು ಸಂಗ್ರಹಣಾ ಹೊಂಡದ ಬಳಿ ಹುಲ್ಲು ಕತ್ತರಿಸುತ್ತಿದ್ದಾಗ, ಕತ್ತರಿಸಿದ ಹುಲ್ಲಿನ ನಡುವೆ ಏನೋ ಮಿನುಗುತ್ತಿರುವುದು ಅವನ ಕಣ್ಣಿಗೆ ಬಿತ್ತು. ಹತ್ತಿರ ಹೋಗಿ ನೋಡಿದಾಗ ಎಂಟು ಸಣ್ಣ ಸೀಲ್ ಮಾಡಿದ ಪ್ಯಾಕೆಟ್‌ಗಳು ಕಂಡುಬಂದವು. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ನಂತರ ನಡೆಸಿದ ಹುಡುಕಾಟದಲ್ಲಿ ಮತ್ತೆರಡು ಪ್ಯಾಕೆಟ್‌ಗಳು ಸಿಕ್ಕವು. ಒಟ್ಟು 10 ಚಿನ್ನದ ಬಿಸ್ಕೆಟ್‌ಗಳು (Gold Bars) ಅಲ್ಲಿ ಬಿದ್ದಿದ್ದವು. ತಲಾ 28 ಗ್ರಾಂ ತೂಕದ ಈ ಬಿಸ್ಕೆಟ್‌ಗಳು ಹುಲ್ಲಿನ ಮೇಲೆ ಫ್ಯಾನ್ ಆಕಾರದಲ್ಲಿ ಹರಡಿಕೊಂಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಒಟ್ಟು ಚಿನ್ನದ ಮೌಲ್ಯ ಸುಮಾರು 40,000 ಯುರೋಗಳು (ಭಾರತೀಯ ರೂಪಾಯಿಗಳಲ್ಲಿ ಅಂದಾಜು ₹35 ಲಕ್ಷಕ್ಕೂ ಹೆಚ್ಚು). ಡ್ರೆಸ್ಡೆನ್‌ನ ದಕ್ಷಿಣ ಭಾಗದಲ್ಲಿರುವ ಹುಲ್ಲುಗಾವಲಿನಲ್ಲಿ ಇಷ್ಟು ಬೆಲೆಬಾಳುವ ಚಿನ್ನವನ್ನು ಯಾರು ಬಿಟ್ಟು ಹೋಗಿರಬಹುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಲಾರಂಭಿಸಿತು.
ಮೇಯರ್ ಹೈಕೋ ವರ್ಸಿಗ್ ಅವರು ಈ ಬಗ್ಗೆ ಕೂಡಲೇ ಪೊಲೀಸರಿಗೆ ದೂರು ನೀಡಿದರು. ಆದರೆ ತನಿಖೆಯಲ್ಲಿ ಈ ಚಿನ್ನಕ್ಕೂ ಯಾವುದೇ ಅಪರಾಧ ಕೃತ್ಯಕ್ಕೂ ಸಂಬಂಧವಿರುವ ಪುರಾವೆಗಳು ಸಿಗಲಿಲ್ಲ. ಪ್ಯಾಕೇಜಿಂಗ್ ಮೇಲಿದ್ದ ಸೀರಿಯಲ್ ನಂಬರ್‌ಗಳ ಮೂಲಕ ಮಾಲೀಕರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಯಿತು, ಆದರೆ ಯಾವುದೇ ಸುಳಿವು ಸಿಗಲಿಲ್ಲ.
ಜರ್ಮನ್ ಕಾನೂನಿನ ಪ್ರಕಾರ, ಬೆಲೆಬಾಳುವ ವಸ್ತು ಸಿಕ್ಕಿದಾಗ ಅದರ ಅಸಲಿ ಮಾಲೀಕರಿಗೆ ಆರು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಈ ಚಿನ್ನದ ಮಾಲೀಕತ್ವ ಸಾಬೀತುಪಡಿಸಲು ಏಪ್ರಿಲ್ 17, 2026 ರವರೆಗೆ ಗಡುವು ನೀಡಲಾಗಿತ್ತು.
ಮೇಯರ್ ವರ್ಸಿಗ್ ಅವರ ಪ್ರಕಾರ, ಸುಮಾರು 12 ರಿಂದ 15 ಜನರು ಈ ಚಿನ್ನ ನನ್ನದು ಎಂದು ಹಕ್ಕು ಮಂಡಿಸಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಕೆಲವು ಕಥೆಗಳು ಹೀಗಿದ್ದವು:
ಒಬ್ಬ ಪಾದಚಾರಿ ಬಂದು, "ನಾನು ವಾಕಿಂಗ್ ಹೋಗುವಾಗ ನನ್ನ ಜೇಬಿನಿಂದ ಚಿನ್ನದ ಬಿಸ್ಕೆಟ್‌ಗಳು ಬಿದ್ದಿವೆ" ಎಂದಿದ್ದ. ಮತ್ತೊಬ್ಬ ವ್ಯಕ್ತಿ, "ನನ್ನ ಡ್ರೋನ್ ಆ ಭಾಗದಲ್ಲಿ ಪತನಗೊಂಡಿತ್ತು, ಅದರಲ್ಲಿ ಈ ಚಿನ್ನವಿತ್ತು" ಎಂದು ಕಟ್ಟುಕಥೆ ಹೇಳಿದ್ದ. ವಯಸ್ಸಾದ ಮಹಿಳೆಯೊಬ್ಬರು ತಾನು ವಂಚನೆಗೆ ಒಳಗಾಗಿ ಚಿನ್ನ ಕಳೆದುಕೊಂಡಿರುವುದಾಗಿ ಹೇಳಿ ಬಂದಿದ್ದರು, ಆದರೆ ಅದು ಈ ಚಿನ್ನಕ್ಕೆ ಮ್ಯಾಚ್ ಆಗಲಿಲ್ಲ. ಆದರೆ ಯಾರೊಬ್ಬರೂ ಕೂಡ ಚಿನ್ನದ ಬಿಸ್ಕೆಟ್ ಮೇಲಿರುವ ನಂಬರ್‌ಗಳಿಗೆ ಸರಿಹೊಂದುವ 'ಖರೀದಿ ರಶೀದಿ'ಯನ್ನು ಹಾಜರುಪಡಿಸಲಿಲ್ಲ.
ಆರು ತಿಂಗಳ ಗಡುವು ಏಪ್ರಿಲ್ 17ಕ್ಕೆ ಮುಕ್ತಾಯಗೊಂಡಿರುವುದರಿಂದ, ಈಗ ಈ ಚಿನ್ನ ಅಧಿಕೃತವಾಗಿ ಬಾನ್ನೆವಿಟ್ಜ್ ನಗರಸಭೆಯ ಸ್ವತ್ತಾಗಿದೆ. ಮೇಯರ್ ವರ್ಸಿಗ್ ಅವರು ಈ ಹಣವನ್ನು ಸಮಾಜಸೇವೆಯಲ್ಲಿ ತೊಡಗಿರುವ ಸ್ಥಳೀಯ ಸಂಸ್ಥೆಗಳಿಗೆ ಹಂಚಲು ನಿರ್ಧರಿಸಿದ್ದಾರೆ. ಸ್ವಯಂಸೇವಕ ಅಗ್ನಿಶಾಮಕ ದಳ, ಕ್ರೀಡಾ ಕ್ಲಬ್‌ಗಳು, ಸಂಗೀತ ಶಾಲೆಗಳು ಹಾಗೂ ಹಿರಿಯ ನಾಗರಿಕರ ಸಂಘ ಪ್ರತಿ ಹತ್ತು ಸಂಸ್ಥೆಗಳಿಗೆ ಒಂದೊಂದು ಚಿನ್ನದ ಬಿಸ್ಕೆಟ್ ನೀಡಿ, ಅದನ್ನು ಅವರು ಮಾರಿ ತಮ್ಮ ಸೇವೆಗೆ ಬಳಸಿಕೊಳ್ಳುವಂತೆ ಮಾಡುವ ಪ್ರಸ್ತಾವನೆ ಮೇಯರ್ ಮುಂದಿದೆ. "ನನ್ನದಲ್ಲದ ವಸ್ತುವನ್ನು ನಾನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ, ಆದರೆ ಮಾಲೀಕರು ಸಿಗದ ಕಾರಣ ಇದು ಈಗ ಸಾರ್ವಜನಿಕ ಸೇವೆಗೆ ಬಳಕೆಯಾಗಲಿದೆ" ಎಂದು ಮೇಯರ್ ಹೇಳಿದ್ದಾರೆ. ಒಟ್ಟಿನಲ್ಲಿ, ಯಾರೋ ಕಳೆದುಕೊಂಡ ಚಿನ್ನ ಈಗ ಒಂದು ಇಡೀ ನಗರದ ಸಾಮಾಜಿಕ ಸಂಸ್ಥೆಗಳ ಪಾಲಿಗೆ ಅದೃಷ್ಟದ ಮಳೆಯಾಗಿ ಸುರಿಯಲಿದೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ