ಬೆಂಗಳೂರಿನಂಥ ಬಿಸಿಲಿಗೆ ಕಾದ ಕೆಂಡವಾದ ಜರ್ಮನಿ, ಈ ವರ್ಷವೊಂದರಲ್ಲೇ 5 ಸಾವಿರ ಸಾವು

Published : Jul 11, 2026, 04:32 PM IST
Germany Heatwave

ಸಾರಾಂಶ

ಜರ್ಮನಿಯಲ್ಲಿ ಈ ವರ್ಷದ ತೀವ್ರ ಬಿಸಿಹವೆಯಿಂದಾಗಿ 5,120ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್ ವರದಿ ಮಾಡಿದೆ. ಈ ಘಟನೆಯು ಯುರೋಪ್‌ನಾದ್ಯಂತ ತಾಪಮಾನ ಏರಿಕೆಯ ತೀವ್ರತೆಯನ್ನು ತೋರಿಸಿದೆ.

ಬರ್ಲಿನ್ (ಜು.11): ಜರ್ಮನಿಯಲ್ಲಿ ಪ್ರಸಕ್ತ ವರ್ಷದಲ್ಲಿ ತೀವ್ರವಾಗಿ ಕಾಡಿದ ಬಿಸಿಹವೆಗೆ (Heatwave) ಇದುವರೆಗೆ ಅಂದಾಜು 5,120 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ದೇಶದ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ 'ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್' (RKI) ಗುರುವಾರ ಬಿಡುಗಡೆ ಮಾಡಿದ ವರದಿಯಲ್ಲಿ ಆತಂಕಕಾರಿ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಜೂನ್ ತಿಂಗಳ ಕೊನೆಯ ವಾರದಲ್ಲಿ ವಾರದ ಸರಾಸರಿ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ಗಿಂತ ತೀವ್ರವಾಗಿ ಏರಿಕೆಯಾಗಿದ್ದ ಅವಧಿಯಲ್ಲೇ ಈ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ, 20 ಡಿಗ್ರಿ ಸರಾಸರಿ ತಾಪಮಾನ ಬೆಂಗಳೂರಿನಲ್ಲಿ ಚಳಿಯ ಫೀಲ್‌ ಕೊಟ್ಟರೆ, ದೂರದ ಯುರೋಪ್‌ ದೇಶ ಜರ್ಮನಿಯಲ್ಲಿ ಇದು ಸಾವುಗೆ ಕಾರಣವಾಗುವಷ್ಟು ಬಿಸಿಲು ಎನಿಸಿಕೊಂಡಿದೆ.

ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್‌ನ ಸಾಪ್ತಾಹಿಕ ವರದಿಯ ಪ್ರಕಾರ, ಮೃತರ ಪೈಕಿ ಬಹುಪಾಲು ಅಂದರೆ ಸುಮಾರು 4,270 ಜನರು 75 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಾಗಿದ್ದಾರೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದು, ಅತ್ಯಂತ ಹಿರಿಯ ವಯಸ್ಸಿನ ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು ಹೆಚ್ಚಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಕಳೆದ ಒಂದು ದಶಕದ ಇತಿಹಾಸವನ್ನು ಗಮನಿಸಿದರೆ ಜರ್ಮನಿಯಲ್ಲಿ 2018 ರಲ್ಲಿ 8,400 ಹಾಗೂ 2019 ರಲ್ಲಿ 6,900 ಜನರು ಬಿಸಿಹವೆಗೆ ಬಲಿಯಾಗಿದ್ದು, ಇದು ಸಾರ್ವಕಾಲಿಕ ಗರಿಷ್ಠ ದಾಖಲೆಯಾಗಿದೆ.

ಯುರೋಪ್ ಖಂಡದಾದ್ಯಂತ ತಲ್ಲಣ

ಜರ್ಮನಿಯ ಈ ಪರಿಸ್ಥಿತಿ ಮಾತ್ರವಲ್ಲದೆ ಇಡೀ ಯುರೋಪ್ ಖಂಡವೇ ಪ್ರಸಕ್ತ ಸಾಲಿನಲ್ಲಿ ತಾಪಮಾನ ಏರಿಕೆಯಿಂದ ತತ್ತರಿಸಿದೆ. ಯುರೋಪಿಯನ್ ಯೂನಿಯನ್‌ನ 'ಕೊಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವಿಸ್' ಗುರುವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಪಶ್ಚಿಮ ಯುರೋಪ್ ಭಾಗವು ಇತಿಹಾಸದಲ್ಲೇ ಅತ್ಯಂತ ಕಡು ಬೇಸಿಗೆಯ ಜೂನ್ ತಿಂಗಳನ್ನು ಅನುಭವಿಸಿದೆ. ಇಲ್ಲಿ ಜೂನ್ ತಿಂಗಳ ಸರಾಸರಿ ತಾಪಮಾನವು 20.74 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಜೂನ್ 20 ರಿಂದ 28 ರವರೆಗಿನ ತೀವ್ರ ಬಿಸಿಹವೆಯ ಸಂದರ್ಭದಲ್ಲಿ ಫ್ರಾನ್ಸ್, ಬೆಲ್ಜಿಯಂ, ಸ್ಪೇನ್ ಮತ್ತು ನೆದರ್ಲ್ಯಾಂಡ್ಸ್ ದೇಶಗಳಲ್ಲಿ ಒಟ್ಟಾರೆಯಾಗಿ 4,700ಕ್ಕೂ ಹೆಚ್ಚು ಅನಿರೀಕ್ಷಿತ ಸಾವುಗಳು (Excess Deaths) ಸಂಭವಿಸಿವೆ ಎಂದು ಆಯಾ ದೇಶಗಳ ರಾಷ್ಟ್ರೀಯ ಸಂಸ್ಥೆಗಳು ವರದಿ ಮಾಡಿವೆ.

ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಆಕ್ರೋಶದ ಮಹಾಪೂರ

ಬಿಸಿಹವೆಯ ತೀವ್ರತೆ ಹೆಚ್ಚುತ್ತಿದ್ದಂತೆ ಜರ್ಮನಿಯ ಒಕ್ಕೂಟ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹೆಚ್ಚಾಗಿದೆ. ಜೂನ್ 27-28 ರ ವಾರಾಂತ್ಯದಲ್ಲಿ ಪಶ್ಚಿಮ ಜರ್ಮನಿಯ ಕೊಲೋನ್ ನಗರವೊಂದರಲ್ಲೇ ಬರೊಬ್ಬರಿ 120 ಜನರು ಬಿಸಿಹವೆಗೆ ಬಲಿಯಾಗಿದ್ದಾರೆ. ಇದು ಸಾಮಾನ್ಯ ದಿನಗಳ ಸಾವಿನ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ದೇಶದ ಗ್ರೀನ್ಸ್ ಪಕ್ಷದ ನಾಯಕಿ ಕತ್ರಿನಾ ಡ್ರೋಜ್ ಸಂಸತ್ತಿನ ಚರ್ಚೆಯ ವೇಳೆ ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಸಾವುಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಮತ್ತು ತುರ್ತು ಸೇವಾ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿದ್ದರೂ, ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್ ಈವರೆಗೆ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದಾರೆ ಎಂದು ಕತ್ರಿನಾ ಕಠಿಣ ಶಬ್ದಗಳಲ್ಲಿ ಟೀಕಿಸಿದ್ದಾರೆ. ಅಷ್ಟೇ ಅಲ್ಲದೆ, ಪ್ರಸ್ತುತ ಸರ್ಕಾರವು ಹವಾಮಾನ ಸಂರಕ್ಷಣಾ ಕಾನೂನುಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಬಜೆಟ್ ಕಡಿತದ ವಿವಾದ

2027ರ ಜರ್ಮನಿಯ ಕರಡು ಮುಂಗಡ ಪತ್ರದಲ್ಲಿ (Draft Budget) ಬಜೆಟ್ ಕೊರತೆಯನ್ನು ನೀಗಿಸಲು ಸರ್ಕಾರವು ಹವಾಮಾನ ಸಂರಕ್ಷಣಾ ನಿಧಿಯಿಂದ ಶತಕೋಟಿ ಯುರೋಗಳನ್ನು ಬಳಸಿಕೊಳ್ಳುತ್ತಿರುವುದನ್ನು ಗ್ರೀನ್ಸ್ ಪಕ್ಷವು ತೀವ್ರವಾಗಿ ಖಂಡಿಸಿದೆ. ಬಜೆಟ್ ಕರಡಿನ ಪ್ರಕಾರ, 'ಹವಾಮಾನ ಮತ್ತು ಪರಿವರ್ತನೆ ನಿಧಿ'ಗೆ (KTF) ಮಾಡಲಾದ ಕಡಿತವನ್ನು ಇನ್ನು ಸಂಪೂರ್ಣವಾಗಿ ಸ್ಪಷ್ಟಪಡಿಸಲಾಗಿಲ್ಲ. ಹವಾಮಾನ ವೈಪರೀತ್ಯದ ಇಂತಹ ಕಠಿಣ ಸಂದರ್ಭದಲ್ಲಿ ಪರಿಸರ ಕಾಳಜಿಯ ಯೋಜನೆಗಳಿಗೆ ಅನುದಾನ ಕಡಿತ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಹವಾಮಾನ ಗುರಿ ಮತ್ತು ಸದ್ಯದ ವಾಸ್ತವ

ಜರ್ಮನಿಯು 2030ರ ವೇಳೆಗೆ ತನ್ನ ಹವಾಮಾನ ಗುರಿಗಳನ್ನು ತಲುಪಲು ಹಾಗೂ ಅಸ್ಥಿರ ಪಳೆಯುಳಿಕೆ ಇಂಧನಗಳ (Fossil Fuels) ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕಳೆದ ಮಾರ್ಚ್ ತಿಂಗಳಷ್ಟೇ ದೃಢ ಯೋಜನೆಗಳನ್ನು ರೂಪಿಸಿತ್ತು. ಇದಕ್ಕಾಗಿ ಪವನ ಶಕ್ತಿ (Wind Power) ಸಾಮರ್ಥ್ಯ ವಿಸ್ತರಣೆ ಮತ್ತು ಎಲೆಕ್ಟ್ರಿಕ್ ವಾಹನಗಳ (EV) ಮಾರಾಟಕ್ಕೆ ಉತ್ತೇಜನ ನೀಡಲು 8 ಶತಕೋಟಿ ಯುರೋಗಳನ್ನು ಮೀಸಲಿಟ್ಟಿತ್ತು. 2030ರ ವೇಳೆಗೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 1990ರ ಮಟ್ಟಕ್ಕಿಂತ ಕನಿಷ್ಠ 65% ರಷ್ಟು ಕಡಿಮೆ ಮಾಡಲು ಮತ್ತು 2045 ರ ವೇಳೆಗೆ ಸಂಪೂರ್ಣ ಹವಾಮಾನ ತಟಸ್ಥ (Climate-Neutral) ದೇಶವಾಗಲು ಜರ್ಮನಿ ಗುರಿ ಹೊಂದಿದೆ. ಆದರೆ, ಪ್ರಸ್ತುತ ಈ ಕಡಿತದ ಪ್ರಮಾಣವು ಕೇವಲ 48% ರಷ್ಟಿದ್ದು, ಸರ್ಕಾರದ ಈಗಿನ ನೀತಿಗಳು ಈ ಬೃಹತ್ ಗುರಿ ತಲುಪಲು ಯಾವುದೇ ರೀತಿಯಲ್ಲೂ ಸಾಲುವುದಿಲ್ಲ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Gold In The Ocean: ಸಮುದ್ರದಲ್ಲಿ 2 ಕೋಟಿ ಟನ್‌ ಬಂಗಾರ ಇದ್ರೂ ಯಾಕೆ ತೆಗೆಯುತ್ತಿಲ್ಲ? ವಿಜ್ಞಾನಿಗಳು ಏನಂತಾರೆ?
ಗಗನದಲ್ಲೇ ವಿಮಾನದ ಕಿಟಕಿಯೊಡೆದು ಹೊರಗೆ ಹಾರಿಹೋಗುತ್ತಿದ್ದ ಗಂಡ.. ಬುದ್ಧಿವಂತೆ ಹೆಂಡತಿ ಮಾಡಿದ್ದೇನು?