9 ವರ್ಷದ ಮಗನನ್ನು ವ್ಯಾನ್‌ನಲ್ಲಿ ಕೂಡಿಹಾಕಿದ್ದ ತಂದೆ! ಮಲ-ಮೂತ್ರ, ಕಸದ ರಾಶಿಯ ನಡುವೆ ಬಾಲಕನ ನರಕಯಾತನೆ!

Published : Apr 13, 2026, 09:12 AM IST
child rescue

ಸಾರಾಂಶ

ಹೆತ್ತ ತಂದೆಯೇ ತನ್ನ 9 ವರ್ಷದ ಮಗನನ್ನು ತಿಂಗಳುಗಟ್ಟಲೆ ವ್ಯಾನ್‌ನಲ್ಲಿ ಕೂಡಿಹಾಕಿ ಹಿಂಸಿಸಿದ್ದಾನೆ. ನೆರೆಹೊರೆಯವರು ವ್ಯಾನ್‌ನಿಂದ ಬರುತ್ತಿದ್ದ ಶಬ್ದವನ್ನು ಕೇಳಿ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಬಾಲಕನನ್ನು ರಕ್ಷಿಸಿ, ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. ಹೆತ್ತ ತಂದೆಯೇ ತನ್ನ 9 ವರ್ಷದ ಮಗನನ್ನು ತಿಂಗಳುಗಳ ಕಾಲ ವ್ಯಾನ್‌ನಲ್ಲಿ ಕೂಡಿಹಾಕಿ ನರಕಯಾತನೆ ನೀಡಿದ ಕೃತ್ಯ ಬೆಳಕಿಗೆ ಬಂದಿದೆ. ವ್ಯಾನ್‌ನಲ್ಲಿ ಏನೋ ಶಬ್ದ ಬರುತ್ತಿದೆ ಎಂದು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಅವರು ಬಂದು ಪರಿಶೀಲನೆ ಮಾಡಿದ್ದಾರೆ. ಆಗ ಮಾಹಿತಿ ಹೊರಬಿದ್ದಿದ್ದು, ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.

ಈ ಘಟನೆ ಪೂರ್ವ ಫ್ರಾನ್ಸ್‌ನ ಹಗನ್‌ಬಾಕ್ ಎಂಬ ಪುಟ್ಟ ಗ್ರಾಮದಲ್ಲಿ ನಡೆದಿದ್ದು, ಪೊಲೀಸರು ಬಾಲಕನ ತಂದೆಯನ್ನು ಬಂಧಿಸಿದ್ದಾರೆ. ಪೂರ್ವ ಫ್ರಾನ್ಸ್‌ನ ಹಗನ್‌ಬಾಕ್ ಗ್ರಾಮದ ನಿವಾಸಿಗಳು ಕಳೆದ ಕೆಲವು ದಿನಗಳಿಂದ ಮನೆಯ ಪಕ್ಕದಲ್ಲಿದ್ದ ವ್ಯಾನ್‌ನಿಂದ ವಿಚಿತ್ರ ಶಬ್ದಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಮೊದಮೊದಲು ಇದು ಪ್ರಾಣಿಗಳ ಶಬ್ದವಿರಬಹುದು ಎಂದು ನಿರ್ಲಕ್ಷಿಸಿದ್ದರು. ಆದರೆ ಶಬ್ದ ನಿರಂತರವಾದಾಗ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಜಗತ್ತನ್ನೇ ಬೆಚ್ಚಿಬೀಳಿಸುವ ಕ್ರೌರ್ಯ ಅನಾವರಣಗೊಂಡಿದೆ.

ನರಕದಂತಿದ್ದ ವ್ಯಾನ್:

ಪೊಲೀಸರು ಬಲವಂತವಾಗಿ ವ್ಯಾನ್‌ನ ಬಾಗಿಲು ತೆರೆದಾಗ ಒಳಗಿದ್ದ ದೃಶ್ಯ ಕಂಡು ಹೌಹಾರಿದ್ದಾರೆ. ವ್ಯಾನ್ ತುಂಬಾ ಕಸದ ರಾಶಿ, ಪ್ಲಾಸ್ಟಿಕ್ ಬಾಟಲಿಗಳು ಮತ್ತು ಮಲಮೂತ್ರದ ರಾಶಿ ಇತ್ತು. ಆ ಕೊಳಕು ವಾತಾವರಣದ ನಡುವೆ 9 ವರ್ಷದ ಬಾಲಕ ಬಟ್ಟೆಯಿಲ್ಲದೆ ಬೆತ್ತಲೆಯಾಗಿ, ಕೇವಲ ಒಂದು ಹಳೆಯ ಬ್ಲಾಂಕೆಟ್ ಹೊದ್ದು ಮುದುರಿ ಮಲಗಿದ್ದ. 2024ರ ನವೆಂಬರ್‌ನಿಂದಲೂ ಈ ಬಾಲಕ ಇದೇ ವ್ಯಾನ್‌ನಲ್ಲಿ ಬಂದಿಯಾಗಿದ್ದ ಎಂದು ತಿಳಿದುಬಂದಿದೆ.

ನಡೆಯಲು ಸಾಧ್ಯವಾಗದ ಸ್ಥಿತಿ:

ದೀರ್ಘಕಾಲದವರೆಗೆ ಸಣ್ಣ ಜಾಗದಲ್ಲಿ ಕುಳಿತೇ ಇದ್ದಿದ್ದರಿಂದ ಬಾಲಕನ ಸ್ನಾಯುಗಳು ಬಿಗಿದುಕೊಂಡಿದ್ದು, ಆತನಿಗೆ ಈಗ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಸರಿಯಾದ ಆಹಾರವಿಲ್ಲದೆ ಆತ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾನೆ. 2024ರ ಕೊನೆಯ ಭಾಗದಿಂದ ಆತ ಸ್ನಾನವನ್ನೇ ಮಾಡಿರಲಿಲ್ಲ ಎನ್ನುವುದು ಮಗುವಿನ ಸ್ಥಿತಿಯನ್ನು ನೋಡಿದರೆ ತಿಳಿಯುತ್ತದೆ. ಪ್ಲಾಸ್ಟಿಕ್ ಬಾಟಲಿ ಮತ್ತು ಕವರ್‌ಗಳಲ್ಲೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದೆ ಎಂದು ಬಾಲಕ ಪೊಲೀಸರ ಮುಂದೆ ತನ್ನ ನೋವು ತೋಡಿಕೊಂಡಿದ್ದಾನೆ.

ತಂದೆಯ ವಿಚಿತ್ರ ಸಮರ್ಥನೆ:

ಪೊಲೀಸರ ವಿಚಾರಣೆಯ ವೇಳೆ 43 ವರ್ಷದ ತಂದೆ ನೀಡಿರುವ ಹೇಳಿಕೆ ಆಶ್ಚರ್ಯಕರವಾಗಿದೆ. 'ನನ್ನ ಸಂಗಾತಿ ಮಗನನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲು ಪ್ರಯತ್ನಿಸುತ್ತಿದ್ದಳು. ಅಲ್ಲಿಗೆ ಹೋದರೆ ಮಗುವಿಗೆ ತೊಂದರೆಯಾಗುತ್ತದೆ ಎಂಬ ಭಯದಿಂದ ಆತನನ್ನು ರಕ್ಷಿಸಲು ವ್ಯಾನ್‌ನಲ್ಲಿ ಬಚ್ಚಿಟ್ಟಿದ್ದೆ' ಎಂದು ಹೇಳಿಕೊಂಡಿದ್ದಾನೆ. ದಿನಕ್ಕೆ ಎರಡು ಬಾರಿ ತಂದೆ ಮಗನಿಗೆ ಊಟ ತಂದುಕೊಡುತ್ತಿದ್ದ. ನೆರೆಹೊರೆಯವರು ಶಬ್ದದ ಬಗ್ಗೆ ಕೇಳಿದಾಗ, ಅದು ವ್ಯಾನ್ ಒಳಗಿರುವ ಬೆಕ್ಕಿನ ಶಬ್ದ ಎಂದು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದ.

ಕಾನೂನು ಕ್ರಮ:

ಮಗುವನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದಕ್ಕೆ, ಸರಿಯಾದ ಆಹಾರ ಮತ್ತು ಆರೈಕೆ ನೀಡದೆ ಕ್ರೌರ್ಯ ಎಸಗಿದ್ದಕ್ಕೆ ತಂದೆಯ ವಿರುದ್ಧ ಪೊಲೀಸರು ಕಠಿಣ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಮಗುವಿನ ಈ ಸ್ಥಿತಿಯನ್ನು ತಿಳಿದಿದ್ದರೂ ಪೊಲೀಸರಿಗೆ ಮಾಹಿತಿ ನೀಡದ ತಂದೆಯ ಸಂಗಾತಿಯ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗಿದೆ. ಸದ್ಯ ಬಾಲಕನನ್ನು ಮತ್ತು ಆತನ ಇಬ್ಬರು ಸಹೋದರರನ್ನು ಅಧಿಕಾರಿಗಳು ಸುರಕ್ಷಿತವಾಗಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

ಈ ಘಟನೆಯು ಮನುಷ್ಯತ್ವದ ಅಧಃಪತನಕ್ಕೆ ಸಾಕ್ಷಿಯಾಗಿದ್ದು, ಫ್ರಾನ್ಸ್ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಬಾಲಕನಿಗೆ ಸೂಕ್ತ ಚಿಕಿತ್ಸೆ ಮತ್ತು ಮಾನಸಿಕ ಸಾಂತ್ವನ ನೀಡಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇರಾನ್‌-ಅಮೆರಿಕ ಮಾತುಕತೆ ವಿಫಲವಾಗಿದ್ದು ಯಾಕೆ?
ಅಮೆರಿಕ-ಇರಾನ್‌ ಸಂಧಾನ ಮಾತುಕತೆ ವಿಫಲ: ಜಗತ್ತಿಗೆ ಮತ್ತೆ ಯುದ್ಧ ಭೀತಿ