ಇರಾನ್‌-ಅಮೆರಿಕ ಮಾತುಕತೆ ವಿಫಲವಾಗಿದ್ದು ಯಾಕೆ?

Published : Apr 13, 2026, 07:40 AM IST
us iran talks fail jd vance statement nuclear deal rejected us conditions islamabad meeting update

ಸಾರಾಂಶ

ಪಾಕಿಸ್ತಾನದಲ್ಲಿ ನಡೆದ ಅಮೆರಿಕ ಮತ್ತು ಇರಾನ್ ನಡುವಿನ ಬಹುನಿರೀಕ್ಷಿತ ಸಂಧಾನ ಮಾತುಕತೆ ವಿಫಲಗೊಂಡಿದೆ. ಅಣ್ವಸ್ತ್ರ ಯೋಜನೆ, ಆಸ್ತಿ ಬಿಡುಗಡೆ, ಹೋರ್ಮುಜ್ ಜಲಸಂಧಿ ಮತ್ತು ಪರಸ್ಪರ ವಿಶ್ವಾಸದ ಕೊರತೆಯಂತಹ ಹಲವು ವಿಚಾರಗಳಲ್ಲಿನ ಭಿನ್ನಾಭಿಪ್ರಾಯಗಳು ಮಾತುಕತೆ ಮುರಿದುಬೀಳಲು ಕಾರಣವಾಗಿವೆ.

ನವದೆಹಲಿ (ಏ.13): ಪಾಕಿಸ್ತಾನದಲ್ಲಿ ನಡೆದ ಬಹುನಿರೀಕ್ಷಿತ ಅಮೆರಿಕ ಮತ್ತು ಇರಾನ್ ನಡುವಣ ಸಂಧಾನ ಮಾತುಕತೆ ಮುರಿದುಬಿದ್ದಿದೆ. ಇದರೊಂದಿಗೆ, ಷರತ್ತುಗಳ ನಡುವೆಯೇ ನಡೆದಿದ್ದ ಮಾತುಕತೆ ಯಶಸ್ಸಿನ ಬಗ್ಗೆ ಇದ್ದ ಅನುಮಾನ ದೃಢವಾಗಿದೆ. ಮಾತುಕತೆ ಮುರಿದು ಬೀಳಲು ಉಭಯ ದೇಶಗಳ ನಡುವಿನ ವಿಶ್ವಾಸದ ಕೊರತೆ ಸೇರಿ ಹಲವು ಕಾರಣಗಳು ಕಂಡುಬಂದಿವೆ.

ಅಣ್ವಸ್ತ್ರ ಯೋಜನೆ ವಿಚಾರ

ಇರಾನ್‌ ತನ್ನ ಅಣ್ವಸ್ತ್ರ ಕಾರ್ಯಕ್ರಮ ಕೈಬಿಡಬೇಕೆಂಬುದು ಅಮೆರಿಕದ ಪ್ರಮುಖ ಷರತ್ತಾಗಿತ್ತು. ಆದರೆ, ಮಾತುಕತೆ ವೇಳೆ ಈ ವಿಚಾರದಲ್ಲಿ ಇರಾನ್‌ನಿಂದ ಸ್ಪಷ್ಟ ಬದ್ಧತೆ ಸಿಕ್ಕಿಲ್ಲ

ಅತಿಯಾದ ಷರತ್ತು

ಅಣುಯೋಜನೆ, ಹೋರ್ಮುಜ್‌ ಜಲಸಂಧಿ ಮುಕ್ತ ಸೇರಿ ವಿವಿಧ ವಿಚಾರಗಳಲ್ಲಿ ಅಮೆರಿಕವು ಇರಾನ್‌ ಮುಂದೆ ಅತಿಯಾದ ಷರತ್ತುಗಳನ್ನು ಮುಂದಿಟ್ಟಿತ್ತು.

ನಿರ್ಬಂಧ, ಆಸ್ತಿ ಬಿಡುಗಡೆ ಗೊಂದಲ

ಕತಾರ್‌ ಸೇರಿ ವಿದೇಶಗಳಲ್ಲಿರುವ ಇರಾನ್‌ನ ಆಸ್ತಿ, ಹಣವನ್ನು ಅಮೆರಿಕ ಮುಟ್ಟುಗೋಲು ಹಾಕಿದ್ದು, ಅವುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಇರಾನ್‌ ಪಟ್ಟುಹಿಡಿದಿದೆ. ಆದರೆ, ತಕ್ಷಣಕ್ಕೆ ಅವುಗಳನ್ನು ಬಿಡುಗಡೆ ಮಾಡುವ ಸಂಬಂಧ ಅಮೆರಿಕ ಅಧಿಕಾರಿಗಳಿಂದ ಯಾವುದೇ ಭರವಸೆ ಸಿಗಲಿಲ್ಲ.

ಹೋರ್ಮುಜ್‌ ಸಮಸ್ಯೆ

ಹೋರ್ಮುಜ್‌ ಜಲಸಂಧಿಯಲ್ಲಿ ಸಾಗುವ ಹಡಗುಗಳಿಂದ ಶುಲ್ಕ ವಸೂಲಿ ಮಾಡುವುದಾಗಿ ಇರಾನ್‌ ತಿಳಿಸಿದರೆ, ಅಮೆರಿಕದ ನಿಯೋಗ ಇದನ್ನು ವಿರೋಧಿಸಿತು. ಜತೆಗೆ, ಜಲಸಂಧಿಯನ್ನು ತಕ್ಷಣ ಎಲ್ಲಾ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಪಟ್ಟುಹಿಡಿಯಿತು. ಆದರೆ, ಇದಕ್ಕೆ ಇರಾನ್‌ ಒಪ್ಪಲಿಲ್ಲ ಎಂದು ಹೇಳಲಾಗಿದೆ.

ಲೆಬನಾನ್‌ ಮೇಲೆ ದಾಳಿ ನಿಲ್ಲಿಸಲು ಆಗ್ರಹ

2 ವಾರಗಳ ಕದನ ವಿರಾಮ ಲೆಬನಾನ್‌ಗೂ ಅನ್ವಯಿಸಬೇಕು. ಅಮೆರಿಕ, ಇಸ್ರೇಲ್‌ ನಡೆಸಿದ ಜಂಟಿ ದಾಳಿಯಿಂದಾದ ಹಾನಿ ಭರಿಸಿಕೊಡಬೇಕು ಎಂದು ಇರಾನ್‌ ಪಟ್ಟುಹಿಡಿದಿತ್ತು. ಆದರೆ, ಇದಕ್ಕೆ ಅಮೆರಿಕದಿಂದ ಸ್ಪಷ್ಟ ಭರವಸೆ ಸಿಕ್ಕಿಲ್ಲ.

ವಿಶ್ವಾಸದ ಕೊರತೆ

ಮಾತುಕತೆಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಪಾಕಿಸ್ತಾನದ ಮೂಲಗಳ ಪ್ರಕಾರ ಎರಡೂ ಕಡೆಯವರ ನಡುವೆ ವಿಶ್ವಾಸದ ಕೊರತೆ ಇತ್ತು. ಕೆಲ ವಿಚಾರಗಳ ಚರ್ಚೆಯ ವೇಳೆ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಇರಾನ್‌ ನಿಯೋಗವು ಯುದ್ಧದಿಂದಾದ ಮಕ್ಕಳು, ಸಾರ್ವಜನಿಕರ ಸಾವು-ನೋವನ್ನು ಜಗತ್ತಿನ ಮುಂದೆ ಪ್ರದರ್ಶಿಸಲು ಮುಂದಾಯಿತು. ತಾವು ಆಗಮಿಸಿದ್ದ ವಿಮಾನಗಳ ಖಾಲಿ ಸೀಟುಗಳನ್ನು ಯುದ್ಧದಲ್ಲಿ ಮೃತಮಕ್ಕಳ ಫೋಟೋ ಇಟ್ಟು ಅಮೆರಿಕಕ್ಕೆ ಇರಿಸು-ಮುರುಸು ಉಂಟು ಮಾಡಿತ್ತು. ಜತೆಗೆ, ಸಂಧಾನಕ್ಕೂ ಮೊದಲು ಹಿಡಿದುಕೊಂಡು ಬಂದಿದ್ದ ಪಟ್ಟಿಯ ವಿಚಾರವಾಗಿ ಎರಡೂ ದೇಶಗಳು ಹಿಡಿದ ಪಟ್ಟು ಸಡಿಲಿಸುವ ಪ್ರಯತ್ನ ನಡೆಸಲಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕ-ಇರಾನ್‌ ಸಂಧಾನ ಮಾತುಕತೆ ವಿಫಲ: ಜಗತ್ತಿಗೆ ಮತ್ತೆ ಯುದ್ಧ ಭೀತಿ
ಅಮೆರಿಕ ಕಂಡೀಷನ್ ಒಪ್ಪಿಕೊಳ್ಳಲಿಲ್ಲವಾ ಇರಾನ್? ಮತ್ತೆ ನೀವೇ ಬರಬೇಕು ನಾನಲ್ಲ ಎಂದ ಟ್ರಂಪ್