ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಬಾಸ್ಟಿಲ್ ಡೇ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಐತಿಹಾಸಿಕ ದಿನದಲ್ಲಿ ಸೇನೆ ವೈಮಾನಿಕ ಪ್ರದರ್ಶನ ಎಲ್ಲರಲ್ಲಿ ರೋಮಾಂಚನ ತಂದಿದೆ.
ಪ್ಯಾರಿಸ್(ಜು.14) ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಬಾಸ್ಟಿಲ್ ಡೇನಲ್ಲಿ ಪಾಲ್ಗೊಂಡಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಮ್ಯಾನುಯೆಲ್ ಮ್ಯಾಕ್ರೋನ್ ಅಹ್ವಾನದ ಮೇರೆಗೆ ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗಿಯಾದ ಮೋದಿಗೆ ಗೌರವ ವಂದನೆ ನೀಡಲಾಗಿದೆ. ಫ್ರಾನ್ಸ್ ಸೇನಾ ವಿಮಾನಗಳ ವೈಮಾನಿಕ ಪ್ರದರ್ಶನ ಮೈನವೀರೇಳುವಂತಿತ್ತು. ಇತ್ತ ಆಕರ್ಷಕ ಪಥಸಂಚಲನ ಬಾಸ್ಟಿಲ್ ಡೇ ಮೆರುಗು ಹೆಚ್ಚಿಸಿತ್ತು.
ಪ್ರಧಾನಿ ಮೋದಿಯನ್ನು ಈ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ಫ್ರಾನ್ಸ್ ಬ್ಯೂರೋಕ್ರಾಟ್ಸ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ನಾಯಕರ ಜೊತೆ ಮೋದಿ ಮಾತುಕತೆ ನಡಸಿದರು. ಇತ್ತ ಅಧ್ಯಕ್ಷ ಮ್ಯಾನುಯೆಲ್ ತೆರೆದ ಸೇನಾ ವಾಹನದ ಮೂಲಕ ಕಾರ್ಯಕ್ರಮಕ್ಕೆ ಆಗಮಿಸಿದರು. ಫ್ರಾನ್ಸ್ ಅಧ್ಯಕ್ಷರನ್ನು ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೊರ್ನೆ, ಸೇನಾಧಿಕಾರಿಗಳು ಸ್ವಾಗತಿಸಿದರು. ಸೇನಾ ಗೌರವ ವಂದನೆ ಸ್ವೀಕರಿಸಿದ ಮ್ಯಾಕ್ರೋನ್ ಬಳಿಕ ಪ್ರಧಾನಿ ಮೋದಿ ಬಳಿ ಆಗಮಿಸಿ ಆತ್ಮೀಯವಾಗಿ ಆಲಿಂಗಿಸಿಕೊಂಡರು.
ಪ್ರಧಾನಿ ಮೋದಿ, ಮ್ಯಾಕ್ರೋನ್ ಸೇರಿದಂತೆ ಗಣ್ಯರು ತಮ್ಮ ಆಸೀನದಲ್ಲಿ ಕುಳಿತಕೊಂಡ ಬೆನ್ನಲ್ಲೇ ಸೇನೆಯ ವೈಮಾನಿಕ ಪ್ರದರ್ಶನ ಆರಂಭಗೊಂಡಿತು. ಆಗಸದಲ್ಲಿ ಸೇನಾ ಏರ್‌ಕ್ರಾಫ್ಟ್ ಚಿತ್ತಾರ ಮೂಡಿಸಿತು. .
ಬಾಸ್ಟಿಲ್ ಡೇ ದಿನಾಚರಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿಗೆ ಫ್ರಾನ್ಸ್ ಅತ್ಯುನ್ನತ ನಾಗರೀಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಫ್ರೆಂಚ್‌ನ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಗೌರವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಗೌರವಕ್ಕೆ ಪಾತ್ರರಾದ ಭಾರತದ ಮೊದಲ ಪ್ರಧಾನಿ ಅನ್ನೋ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.
ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಹಾನರ್ ಪ್ರಶಸ್ತಿಯನ್ನು ವಿಶ್ವದ ಹಲವು ಗಣ್ಯ ನಾಯಕರು ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಅಂದಿನ ವೇಲ್ಸ್ ರಾಜಕುಮಾರ ಕಿಂಗ್ ಚಾರ್ಲ್ಸ್, ಜರ್ಮನಿಯ ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಘಾಲಿಯ ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಸಿ ಬೌಟ್ರೋಸ್ ಬೌಟ್ರೋಸ್ ಸೇರಿದಂತೆ ಕೆಲವೇ ಕೆಲವು ಗಣ್ಯರು ಸೇರಿದ್ದಾರೆ. ಈ ಸಾಲಿಗೆ ಮೋದಿ ಸೇರಿಕೊಂಡಿದ್ದಾರೆ.
ಈ ವರ್ಷ ಭಾರತ - ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವವಾಗಿದೆ. ಮೋದಿ ಈ ಭೇಟಿ ಹಲವು ಕಾರಣಗಳಿಂದ ಮಹತ್ವದ್ದಾಗಿದೆ. ಭಾರತ ಹಾಗೂ ಫ್ರಾನ್ಸ್‌ನ ಭವಿಷ್ಯದ ಪಾಲುದಾರಿಕೆಯನ್ನು ಕಾರ್ಯತಂತ್ರ, ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಹಕಾರದಂತಹ ವಿವಿಧ ವಲಯಗಳಲ್ಲಿ ರೂಪಿಸಲು ಅವಕಾಶವನ್ನು ಒದಗಿಸುತ್ತದೆ.
ಪ್ಯಾರಿಸ್‌ನಲ್ಲಿನ ಭಾರತೀಯ ಸಮುದಾಯ ಉದ್ದೇಶಿಸಿ ಗುರುವಾರ ರಾತ್ರಿ ಮಾತನಾಡಿದ ಅವರು, ‘ಭಾರತ ಹಾಗೂ ಫ್ರಾನ್ಸ್ ಸಂಬಂಧ ಮುಂದುವರಿಯಲಿದೆ. ಚರೈವೇತಿ ಚರೈವೇತಿ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಫ್ರಾನ್ಸ್ ನಾಣ್ಣುಡಿ ಕೂಡ ಮುನ್ನಡೆಯಿರಿ ಎಂದು ಹೇಳುತ್ತದೆ. ಸಮಾನತೆ, ಏಕತೆ ಭಾರತ ಹಾಗೂ ಫ್ರಾನ್ಸ್ ಧ್ಯೇಯಗಳು. ಭಾರತ ಹಾಗೂ ಫ್ರಾನ್ಸ್ ಅನೇಕ ಸವಾಲುಗಳನ್ನು 21ನೇ ಶತಮಾನದಲ್ಲಿ ಒಟ್ಟಾಗಿ ಎದುರಿಸಲಿವೆ’ ಎಂದರು. ಅಲ್ಲದೆ, ‘ಫ್ರಾನ್ಸ್ ಫುಟ್ಬಾಲಿಗ ಎಂಬಾಪೆಗೆ ಫ್ರಾನ್ಸ್‌ಗಿಂತ ಭಾರತದಲ್ಲೇ ಅಭಿಮಾನಿಗಳು ಹೆಚ್ಚು’ ಎಂದು ಮೋದಿ ಚಟಾಕಿ ಹಾರಿಸಿದರು.
‘ಶುಕ್ರವಾರ ಫ್ರಾನ್ಸ್ ರಾಷ್ಟ್ರೀಯ ದಿನ. ಇದರಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ನನ್ನ-ಫ್ರಾನ್ಸ್ ನಂಟು ಹಳೆಯದು. ಇಂಡೋ-ಫ್ರಾನ್ಸ್ ಸಾಂಸ್ಕೃತಿಕ ಕೇಂದ್ರ ಗುಜರಾತಲ್ಲಿ ಸ್ಥಾಪನೆ ಆದಾಗ ನಾನು ಅದರ ಸದಸ್ಯನಾಗಿದ್ದೆ. 20015ಕ್ಕೆ ಫ್ರಾನ್ಸ್‌ಗೆ ಬಂದಿದ್ದೆ. ವಿಶ್ವಯುದ್ಧದಲ್ಲಿ ಮಡಿದ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೆ’ ಎಂದು ಅವರು ಸ್ಮರಿಸಿದರು.