14 ವರ್ಷದೊಳಗಿನ ಅಪ್ರಾಪ್ತರಿಗೆ ಸೋಶಿಯಲ್ ಮೀಡಿಯಾ ಬ್ಯಾನ್, ಫ್ಲೋರಿಡಾದಲ್ಲಿ ಹೊಸ ನೀತಿ!

By Suvarna News  |  First Published Mar 26, 2024, 8:02 PM IST

ಇನ್ಮುಂದೆ 14 ವರ್ಷದೊಳಗಿನವರು ಸಾಮಾಜಿಕ ಮಾಧ್ಯಮ ಬಳಕೆ ಮಾಡುವಂತಿಲ್ಲ. ಇನ್ನು 14 ಹಾಗೂ 15 ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆ ಮಾಡಲು ಪೋಷಕರ ಅನುಮತಿ ಕಡ್ಡಾಯವಾಗಿದೆ. ಈ ಹೊಸ ನಿಯಮ ಫ್ಲೋರಿಡಾದಲ್ಲಿ ಜಾರಿಗೆ ಬಂದಿದೆ. ಈ ನಿಯಮ ಭಾರತದಲ್ಲೂ ಬರಲಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಫ್ಲೋರಿಡಾ(ಮಾ.26) ಸಾಮಾಜಿಕ ಮಾಧ್ಯಮದ ಗೀಳಿನಿಂದ ಹಲವರ ಬದುಕು ದುಸ್ತರವಾದ ಉದಾಹರಣೆಗಳಿವೆ. ಪ್ರಮುಖವಾಗಿ ಮಕ್ಕಳು ಹಾಳಾಗುತ್ತಿದ್ದಾರೆ, ಮಾನಸಿಕವಾಗಿ, ದೈಹಿಕವಾಗಿ, ಆರೋಗ್ಯ ವಿಚಾರದಲ್ಲೂ ಮಕ್ಕಳ ಮೇಲೆ ಸೋಶಿಯಲ್ ಮೀಡಿಯಾ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ 14 ವರ್ಷದೊಳಗಿನ ಅಪ್ರಾಪ್ತರನ್ನು ಎಲ್ಲಾ ಸೋಶಿಯಲ್ ಮೀಡಿಯಾ ಬಳಕೆಯಿಂದ ಬ್ಯಾನ್ ಮಾಡಲಾಗಿದೆ. ಜೊತೆಗೆ 14 ರಿಂದ 16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆ ಮಾಡಲು ಪೋಷಕರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ. ಈ ಹೊಸ ನೀತಿ ಫ್ಲೋರಿಡಾದಲ್ಲಿ ಜಾರಿಗೆ ಬಂದಿದೆ. 

ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆ, ಸೋಶಿಯಲ್ ಮೀಡಿಯಾದಲ್ಲಿ ಖಾತೆ ತೆರೆದು ಸಕ್ರಿಯವಾಗುವುದರಿಂದ ಆಗುವ ಸಾಧಕ ಬಾಧಕಗಳ ಕುರಿತು ತಜ್ಞರ ತಂಡ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿ ಆಧರಿಸಿ ಕಾಯ್ದೆ ತಂದ ಫ್ಲೋರಿಡಾ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿತ್ತು. ಬಳಿಕ ಕಾಯ್ದೆ ಜಾರಿಗೆ ಗವರ್ನರ್‌ಗೆ ಕಳುಹಿಸಲಾಗಿತ್ತು. ಇದೀಗ ಫ್ಲೋರಿಡಾ ಗವರ್ನರ್ ರಾನ್ ಡೆಸ್ಯಾಂಟಿಸ್ ಈ ಕಾಯ್ದೆಗೆ ಸಹಿ ಹಾಕಿದ್ದಾರೆ. ಇದೀಗ ಫ್ಲೋರಿಡಾದಲ್ಲಿ ಸೋಶಿಯಲ್ ಮೀಡಿಯಾ ಬಳಕೆ ನೀತಿ ಜಾರಿಗೆ ಬಂದಿದೆ.

Latest Videos

ಸೋಶಿಯಲ್ ಮೀಡಿಯಾದಿಂದ ರೊಮ್ಯಾಂಟಿಕ್ ಲೈಫೂ ಹಾಳು!

ನೂತನ ಕಾಯ್ದೆ ಪ್ರಕಾರ, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ಸಕ್ರಿಯವಾಗಿರುವ ಅಪ್ರಾಪ್ತರ ಖಾತೆಗಳನ್ನು ಡಿಲೀಟ್ ಮಾಡಬೇಕು. ಇನ್ನು 15 ವರ್ಷದ ಮಕ್ಕಳು ಪೋಷಕರ ಒಪ್ಪಿಗೆ ಪಡೆದು ಸಾಮಾಜಿಕ ಮಾಧ್ಯಮ ಖಾತೆ ಬಳಕೆ ಮಾಡಬಹುದು. 14 ರಿಂದ 16 ವರ್ಷದೊಳಗಿನ ಮಕ್ಕಳು ಪೋಷಕರ ಒಪ್ಪಿಗೆಯೊಂದಿಗೆ ಸೋಶಿಯಲ್ ಮೀಡಿಯಾ ಖಾತೆ ನಿರ್ವಹಿಸಬಹುದು ಅಥವಾ ಬಳಕೆ ಮಾಡಬಹುದು. ಆದರೆ ಪೋಷಕರಿಲ್ಲದ ಮಕ್ಕಳು ಥರ್ಡ್ ಪಾರ್ಟಿ ಅನುಮತಿ ಪಡೆಯುವ ಅಗತ್ಯವಿದೆ  

ಫ್ಲೋರಿಡಾದಲ್ಲಿ ಅಧಿಕಾರದಲ್ಲಿರುವ ಸ್ಟೇಟ್ ರಿಪಬ್ಲಿಕನ್ ಪಕ್ಷ ಈ ಹೊಸ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಿತ್ತು. ಈ ಕಾಯ್ದೆಯನ್ನು ಫೆಬ್ರವರಿಯಲ್ಲಿ ಮಂಡನೆ ಮಾಡಲಾಗಿತ್ತು. ಮೊದಲು ಮಂಡಿಸಿದ ಕಾಯ್ದೆಯಲ್ಲಿ 16 ವರ್ಷದೊಳಗಿನ ಎಲ್ಲಾ ಅಪ್ರಾಪ್ತರು ಸೋಶಿಯಲ್ ಮೀಡಿಯಾ ಬಳಕೆಯಿಂದ ಬ್ಯಾನ್ ಮಾಡಲಾಗಿತ್ತು. ಇದಾದ ಬಳಿಕ ಕೆಲ ತಿದ್ದುಪಡಿ ತರಲಾಗಿತ್ತು. ಇದೀಗ ಈ ಕಾಯ್ದೆ ಜಾರಿಯಾಗಿದೆ.

ಈ ರೀತಿ ಬಳಸಿದ್ರೆ ಮಕ್ಕಳ ಬೆಳವಣಿಗೆಗೆ ನೆರವಾಗುತ್ತೆ Social Media

ಈ ಕಾಯ್ದೆಯಿಂದ ನಮ್ಮ ಮಕ್ಕಳನ್ನು ಸುರಕ್ಷಿತವಾಗಿಡಲು ಹಾಗೂ ಉತ್ತಮ ಭವಿಷ್ಯ ರೂಪಿಸಲು ಪೋಷಕರಿಗೆ ಸಹಾಯವಾಗಲಿದೆ ಎಂದು ಗವರ್ನರ್ ರಾನ್ ಡೆಸ್ಯಾಂಟಿಸ್ ಹೇಳಿದ್ದಾರೆ. ಈ ಕಾಯ್ದೆ ಎಲ್ಲೆಡೆಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಭಾರತದಲ್ಲೂ ಈ ರೀತಿಯ ಕಾಯ್ದೆಯ ಅಗತ್ಯವಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಭಾರತದಲ್ಲಿ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುವ ಅಗತ್ಯವಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 

click me!