ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ಹಿಂದೂಫೋಬಿಯಾ ಮತ್ತು ಹಿಂದೂ ಧರ್ಮದ ಮೇಲಿನ ಅಸಹಿಷ್ಣುತೆಯ ವಿರುದ್ಧ ವಿಧೇಯಕ ಮಂಡಿಸಲಾಗಿದೆ. ಈ ಮೂಲಕ ಹಿಂದೂಫೋಬಿಯಾ ವಿರುದ್ಧದ ವಿಧೇಯಕ ಮಂಡಿಸಿದ ಅಮೆರಿಕದ ಮೊದಲ ರಾಜ್ಯ ಜಾರ್ಜಿಯಾ ಆಗಲಿದೆ.
ವಾಷಿಂಗ್ಟನ್: ಹಿಂದೂಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳ ನಡುವೆಯೇ ಹಿಂದೂಫೋಬಿಯಾ (ಹಿಂದೂ ವಿರೋಧಿ ಭಾವನೆ) ಮತ್ತು ಹಿಂದೂ ಧರ್ಮದ ಮೇಲಿನ ಅಸಹಿಷ್ಣುತೆಯ ವಿರುದ್ಧ ಇದೇ ಮೊದಲ ಬಾರಿಗೆ ಅಮೆರಿಕದ ಜಾರ್ಜಿಯಾ ರಾಜ್ಯದಲ್ಲಿ ವಿಧೇಯಕವೊಂದನ್ನು ಮಂಡಿಸಲಾಗಿದೆ. ಈ ಮೂಲಕ ಹಿಂದೂಫೋಬಿಯಾ ವಿರುದ್ಧದ ವಿಧೇಯಕ ಮಂಡಿಸಿದ ಅಮೆರಿಕದ ಮೊದಲ ರಾಜ್ಯ ಜಾರ್ಜಿಯಾ ಆಗಲಿದೆ.
ಒಂದು ವೇಳೆ ವಿಧೇಯಕ ಕಾನೂನಾಗಿ ಪರಿವರ್ತನೆಯಾದರೆ ಅಮೆರಿಕದಲ್ಲಿರುವ ಹಿಂದೂಗಳ ವಿರುದ್ಧದ ಧಾರ್ಮಿಕ ಆಧಾರದ ದೌರ್ಜನ್ಯಗಳಿಗೆ ಕಾನೂನು ಮೂಲಕ ಕಡಿವಾಣ ಬೀಳಲಿದೆ. ರಿಪಬ್ಲಿಕನ್ ಸೆನೆಟರ್‌ಗಳಾದ ಶಾನ್ ಸ್ಟಿಲ್ ಮತ್ತು ಕ್ಲಿಂಟ್ ಡಿಕ್ಸನ್ ಅವರು ಡೆಮಾಕ್ರಟಿಕ್ ಪಕ್ಷದ ಸೆನೆಟರ್‌ಗಳಾದ ಜೇಸನ್ ಸ್ಟೀವ್ಸ್ ಮತ್ತು ಇಮ್ಯಾನ್ಯುವಲ್ ಡಿ. ಡೋನ್ಸ್ ಅವರು ಜಂಟಿಯಾಗಿ ಈ ವಿಧೇಯಕವನ್ನು ಬೆಂಬಲಿಸಿದ್ದಾರೆ.
ಸೆನೆಟ್ ಬಿಲ್ 375 ಹೆಸರಿನ ವಿಧೇಯಕವು ಜಾರ್ಜಿಯಾ ಕೋಡ್‌ಗೆ ತಿದ್ದುಪಡಿ ಪ್ರಸ್ತಾಪಿಸಿದ್ದು, ಇದು ಹಿಂದೂಫೋಬಿಯಾವನ್ನು ಹಿಂದೂ ಧರ್ಮದ ಕುರಿತ ಹಗೆತನ, ವಿನಾಶಕ ಮತ್ತು ಅವಹೇಳನಕಾರಿ ನಡತೆ ಮತ್ತು ವರ್ತನೆ ಎಂದು ವ್ಯಾಖ್ಯಾನಿಸುತ್ತದೆ. ಹಾಲಿ ಇರುವ ತಾರತಮ್ಯ ವಿರೋಧಿ ಕಾನೂನಿಗೆ ಹಿಂದೂಫೋಬಿಯಾವನ್ನೂ ಸೇರಿಸಲು ಈ ತಿದ್ದುಪಡಿ ಅವಕಾಶ ಮಾಡಿಕೊಡುತ್ತದೆ. ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟವು ಹಿಂದೂಫೋಬಿಯಾ ಬಿಲ್ ಅನ್ನು ಸ್ವಾಗತಿಸಿದೆ. ಈ ಹಿಂದೆ ಜಾರ್ಜಿಯಾವು ಹಿಂದೂಫೋಬಿಯಾ ಮತ್ತು ಹಿಂದೂ ಧರ್ಮ ವಿರೋಧಿ ನಡೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿತ್ತು.
ತೆರಿಗೆಯಿಂದ ಸ್ಮಾರ್ಟ್‌ಫೋನ್‌ಗೆ ವಿನಾಯ್ದತಿ
ಚೀನಾ ಮೇಲೆ ಶೇ.145ರಷ್ಟು ತೆರಿಗೆ ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್, ಚಿಪ್ ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳನ್ನು ತನ್ನ ಸುಂಕದಿಂದ ಹೊರಗಿಟ್ಟಿದ್ದಾರೆ. ಈ ಮೂಲಕ ಚೀನಾದಲ್ಲಿ ಅತಿ ಹೆಚ್ಚು ಐಫೋನ್ ಉತ್ಪಾದನೆ ಮಾಡುತ್ತಿದ್ದ ಐಫೋನ್ ಉತ್ಪಾದಿಸುವ ಆ್ಯಪಲ್ ಸೇರಿ ಹಲವು ಕಂಪನಿಗಳು ದರ ಏರಿಕೆ ಬಿಸಿಯಿಂದ ಬಚಾವಾಗಿವೆ.
ಚೀನಾ ಮೇಲೆ ಶೇ.145ರಷ್ಟು ತೆರಿಗೆ ಘೋಷಣೆಯು ಅಮೆರಿಕ ಮೂಲದ ಕಂಪನಿಯಾದ ಆ್ಯಪಲ್‌ಗೆ ಕಂಟಕವಾಗಿತ್ತು. ಐಫೋನ್ ದರ ಶೇ.50ರಷ್ಟು ಹೆಚ್ಚುವ ಸಾಧ್ಯತೆ ಇತ್ತು. ಹೀಗಾಗಿ ಐಫೋನ್ ಪ್ರಿಯರು ಇದರಿಂದ ಆತಂಕಿತರಾಗಿದ್ದರು. ಅವರ ಆತಂಕ ದೂರ ಮಾಡಲು ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಅನ್ನು ಸುಂಕದ ಪಟ್ಟಿಯಿಂದ ಹೊರಗಿಡಲಾಗಿದೆ. ಚೀನಾ ಮೇಲಿನ ಶೇ.145 ಸುಂಕ ಮಾತ್ರವಲ್ಲ, ಇತರ ದೇಶಗಳ ಮೇಲಿನ ಶೇ.10ರಷ್ಟು ಮೂಲ ಸುಂಕ ದರವೂ ಇವುಗಳಿಗೆ ಅನ್ವಯಿಸಲ್ಲ ಅಮೆರಿಕ ಸುಂಕ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಮತ್ತೊಮ್ಮೆ ಚೀನಾ ಪ್ರತೀಕಾರ: ಅಮೆರಿಕದ ಸರಕುಗಳ ಮೇಲೆ ಶೇ.84ಕ್ಕೆ ಸುಂಕ ಏರಿಕೆ!
ನಾನು ಸ್ವಸ್ಥ: ಆರೋಗ್ಯ ತಪಾಸಣೆ ಬಳಿಕ ಟ್ರಂಪ್ ಸ್ವಯಂ ಘೋಷಣೆ
ಶುಕ್ರವಾರ ಆರೋಗ್ಯ ತಪಾಸಣೆಗೆ ಒಳಪಟ್ಟಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಾನು ಸಂಪೂರ್ಣ ಸ್ವಸ್ಥನಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಆದರೆ ವೈದ್ಯರಿಂದ ಇನ್ನೂ ಆ ಕುರಿತ ಅಧಿಕೃತ ವರದಿ ಬಂದಿಲ್ಲ. ಅದು ಕೆಲ ದಿನಗಳಲ್ಲಿ ಲಭಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ತಪಾಸಣೆಯ ಬಗ್ಗೆ ಮಾತನಾಡಿದ ಟ್ರಂಪ್, ‘ಯಾವೆಲ್ಲಾ ಪರೀಕ್ಷೆಗಳಿವೆಯೋ, ಎಲ್ಲವನ್ನೂ ಮಾಡಿಸಿಕೊಂಡೆ. ಅದು ತುಂಬಾ ಸುದೀರ್ಘವಾಗಿತ್ತು. ವೈದ್ಯರು ಜೀವನಶೈಲಿಯಲ್ಲಿ ಕೆಲ ಬದಲಾವಣೆಗಳನ್ನು ಸೂಚಿಸಿದ್ದಾರೆ. ಉಳಿದಂತೆ ನನ್ನ ಹೃದಯ, ಆತ್ಮ ಚೆನ್ನಾಗಿದೆ’ ಎಂದಿದ್ದಾರೆ.
ಗಮನಿಸಬೇಕಾದ ಅಂಶವೆಂದರೆ, ಜೋ ಬೈಡೆನ್ ಅಧ್ಯಕ್ಷರಾಗಿದ್ದ ವೇಳೆ ಅವರ ಸ್ವಾಸ್ಥ್ಯವನ್ನು ಪ್ರಶ್ನಿಸುತ್ತಾ, ಅವರಿಗೆ ಅರಳುಮರಳು ಎಂದು ಟ್ರಂಪ್ ಟೀಕಿಸುತ್ತಿದ್ದರು. ಆದರೆ ಒಮ್ಮೆಯೂ ತಮ್ಮ ಆರೋಗ್ಯದ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸುತ್ತಿರಲಿಲ್ಲ.
ಇದನ್ನೂ ಓದಿ: ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?