ಚೀನಾದಲ್ಲಿ ಕೋವಿಡ್ ಉಲ್ಬಣಗೊಂಡಿದ್ದು ಅಲ್ಲಿನ ಆಸ್ಪತ್ರೆಗಳು ಹೌಸ್ ಫುಲ್ ಆಗಿವೆ. ಬೆಡ್, ವೆಂಟಿಲೇಟರ್ ಸಿಗದೆ ಜನರು ಪರದಾಟ ನಡೆಸುತ್ತಿದ್ದು, ಈ ಹಿನ್ನೆಲೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಕಮ್ಯುನಿಸ್ಟ್ ಪಕ್ಷದ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಬೀಜಿಂಗ್: ಕಳೆದ ಕೆಲ ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಹೊಸ ಕೋವಿಡ್ ಪ್ರಕರಣಗಳು (COVID Cases) ದಾಖಲಾಗುತ್ತಿರುವ ಚೀನಾದಲ್ಲಿ (China), ಪರಿಸ್ಥಿತಿ ನಿರ್ವಹಣದಲ್ಲಿ ಸರ್ಕಾರ (Government) ಭಾರೀ ವೈಫಲ್ಯ ಕಂಡಿದೆ. ದೇಶ ಇದೀಗ ಆರೋಗ್ಯ ತುರ್ತುಪರಿಸ್ಥಿತಿ (Health Emergency) ಎದುರಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿದೆ. ಈ ನಡುವೆ ಸತತ 5ನೇ ದಿನವೂ ಚೀನಾದಲ್ಲಿ ದಾಖಲೆಯ 40,000 ಪ್ರಕರಣಗಳು ದಾಖಲಾಗಿದ್ದು, ಸರ್ಕಾರ ಮತ್ತು ಜನರಲ್ಲಿ (People) ಆತಂಕ ಹುಟ್ಟಿಸಿದೆ. ಮತ್ತೊಂದೆಡೆ ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯ ಮತ್ತು ಕಠಿಣ ಕ್ವಾರಂಟೈನ್ (Quarantine) ನಿಯಮ ಜಾರಿಗೊಳಿಸಿರುವ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಮತ್ತು ಕಮ್ಯುನಿಸ್ಟ್ ಸರ್ಕಾರದ (Communist Government) ವಿರುದ್ಧ ದೇಶದ ಹಲವೆಡೆ ಸೋಮವಾರವೂ ಪ್ರತಿಭಟನೆ (Protest) ನಡೆಸಲಾಗಿದ್ದು, ಅಧಿಕಾರದಿಂದ ಕೆಳಗಿಳಿಯುವಂತೆ ಆಗ್ರಹಿಸಲಾಗಿದೆ.
ಪರಿಸ್ಥಿತಿ ಗಂಭೀರ:
ದೇಶದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣ ಹೆಚ್ಚುತ್ತಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ. ಇದರ ನಡುವೆಯೇ ಹಲವು ಪ್ರದೇಶಗಳಲ್ಲಿ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್, ಆಕ್ಸಿಜನ್ ಸಿಲಿಂಡರ್ ಮತ್ತು ವೆಂಟಿಲೇಟರ್‌ಗಳ ಕೊರತೆ ಎದುರಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸೋಂಕು ನಿರ್ವಹಣೆಯಲ್ಲಿ ಸರ್ಕಾರದ ಈ ವೈಫಲ್ಯದ ಮನಗಂಡಿರುವ ಜನರು ಮುಂಜಾಗ್ರತಾ ಕ್ರಮವಾಗಿ ಸ್ವತಃ ಮನೆಯಲ್ಲೇ ಅಗತ್ಯ ವ್ಯವಸ್ಥೆ ಕಲ್ಪಿಸಿಕೊಳ್ಳಲು ಮುಂದಾಗಿದ್ದಾರೆ.
ಇದನ್ನು ಓದಿ: ಸತತ ಪ್ರತಿಭಟನೆ ನಡುವೆ ಚೀನಾದಲ್ಲಿ ಕೊರೋನಾ ಸ್ಫೋಟ, ಬೀಜಿಂಗ್ ಸೇರಿ ಕೆಲ ನಗರದಲ್ಲಿ ಲಾಕ್‌ಡೌನ್!
ಪರಿಣಾಮ ನವೆಂಬರ್ 11 ರಿಂದ ಕೋವಿಡ್ ಚಿಕಿತ್ಸೆ ನೀಡುವ ಸಾಧನಗಳ ಮಾರಾಟದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಆಕ್ಸಿಮೀಟರ್, ಆಕ್ಸಿಜನ್ ಸಿಲಿಂಡರ್ ಮತ್ತು ವೆಂಟಿಲೇಟರ್ ಖರೀದಿಗೆ ಜನ ಮುಂದಾಗಿದ್ದು, ಇವುಗಳ ಮಾರಾಟದಲ್ಲಿ 90 ಪಟ್ಟು ಹೆಚ್ಚಳ ಕಂಡುಬಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಉಪಕರಣಗಳ ಕೊರತೆ ಎದುರಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಜೊತೆಗೆ ಒಂದು ವೇಳೆ ಕೋವಿಡ್ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ನೀತಿ ಕೈಬಿಟ್ಟರೆ ಕೋವಿಡ್ ಸ್ಫೋಟಗೊಂಡು ಸುಮಾರು 1.2 ಮನೆಗಳಲ್ಲಿ ವೆಂಟಿಲೇಟರ್ ಹಾಗೂ ಆಕ್ಸಿಜನ್ ಮಶೀನ್‌ಗಳ ಅಗತ್ಯ ಬೀಳಲಿದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: CHINA: ಚೀನಾದಲ್ಲಿ ಕೊರೋನಾ ರೌದ್ರ ನರ್ತನ: ಮತ್ತೆ ಲಾಕ್ ಡೌನ್, ದಂಗೆ ಎದ್ದ ಜನ
ಪ್ರತಿಭಟನೆಗೆ ಮಣಿದ ಚೀನಾ ಸರ್ಕಾರ: ನಿರ್ಬಂಧ ಸಡಿಲಿಕೆ
ಚೀನಾ ಸರ್ಕಾರದ ಶೂನ್ಯ ಕೋವಿಡ್ ನೀತಿಯ ವಿರುದ್ಧ ಭಾರಿ ಪ್ರತಿಭಟನೆ ನಡೆದ ಬೆನ್ನಲ್ಲೇ ಚೀನಾ ಸರ್ಕಾರ ಮಣಿದಿದೆ. ಕೋವಿಡ್ ಕೇಸುಗಳು ಹೆಚ್ಚುತ್ತಿದ್ದರೂ ಸೋಮವಾರ ಕಠಿಣ ಲಾಕ್‌ಡೌನ್ ನಿಯಮಗಳ ಸಡಿಲಿಕೆಗೆ ಮುಂದಾಗಿದೆ.
ಕಳೆದೊಂದು ವಾರದಿಂದ ಮನೆಯಲ್ಲೇ ಬಂಧಿಯಾಗಿದ್ದ ಇಲ್ಲಿನ ಕ್ಸಿನ್‌ಜಿಯಾಂಗ್ ಜಿಲ್ಲೆಯ 40 ಲಕ್ಷ ನಿವಾಸಿಗಳಿಗೆ ಬಸ್‌ಗಳಲ್ಲಿ ಜಿಲ್ಲೆಯೊಳಗೆ ಓಡಾಡಲು ಅವಕಾಶ ನೀಡಲಾಗಿದೆ. ಕಡಿಮೆ ಕೇಸುಗಳಲ್ಲಿದ್ದ ಪ್ರದೇಶದಲ್ಲಿ ವ್ಯಾಪಾರಿಗಳಿಗೆ ಶೇ. 50 ರಷ್ಟು ಸಾಮರ್ಥ್ಯದೊಂದಿಗೆ ವ್ಯವಹಾರ ಆರಂಭಿಸಲು ಅನುಮತಿ ನೀಡಲಾಗಿದೆ. ಅಲ್ಲದೇ ಸಾರ್ವಜನಿಕ ಸಾರಿಗೆ ಹಾಗೂ ವಿಮಾನಗಳ ಸಂಚಾರದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ್ದು, ಮಂಗಳವಾರದಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತೆ ಎಂದಿನಂತೇ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿ ಸಾರ್ವಕಾಲಿಕ ದಾಖಲೆಯ ಕೋವಿಡ್ ಕೇಸ್, ಒಂದೇ ದಿನ 31,444 ಪ್ರಕರಣ
ಇತ್ತೀಚೆಗೆ ಚೀನಾ ಸರ್ಕಾರದ ಕೋವಿಡ್ ನಿರ್ವಹಣೆ ವೈಫಲ್ಯ, ಕಠಿಣ ಲಾಕ್‌ಡೌನ್ ನಿಯಮಗಳಿಂದ ಬೇಸತ್ತು ಜನರು ಭಾರಿ ಪ್ರತಿಭಟನೆ ನಡೆಸಿದ್ದರು. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರಾಜೀನಾಮೆಗೆ ಆಗ್ರಹಿಸಿದ್ದರು.