ಸತತ ಪ್ರತಿಭಟನೆ ನಡುವೆ ಚೀನಾದಲ್ಲಿ ಕೊರೋನಾ ಸ್ಫೋಟ, ಬೀಜಿಂಗ್ ಸೇರಿ ಕೆಲ ನಗರದಲ್ಲಿ ಲಾಕ್‌ಡೌನ್!

By Suvarna NewsFirst Published Nov 27, 2022, 8:18 PM IST
Highlights

ಶೂನ್ಯ ಕೋವಿಡ್ ನೀತಿ ಅನುಸರಿಸುತ್ತಿರುವ ಚೀನಾ, ಅನಗತ್ಯವಾಗಿ ಲಾಕ್‌ಡೌನ್ ಹೇರುತ್ತಿದೆ ಎಂದು ಜನರು ಬೀದಿ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ಚೀನಾದಲ್ಲಿ ಕೋವಿಡ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದೀಗ ರಾಜಧಾನಿ ಸೇರಿ ಹಲವು ನಗರಗಳಲ್ಲಿ ಕಠಿಣ ಲಾಕ್‌ಡೌನ್ ಹೇರಲಾಗಿದೆ.

ಬೀಜಿಂಗ್(ನ.27): ಚೀನಾದಲ್ಲಿ ಒಂದೆಡೆ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆ, ಮತ್ತೊಂದೆಡೆ ಭಾರಿ ಪ್ರತಿಭಟನೆ ಕಮ್ಯೂನಿಸ್ಟ್ ಸರ್ಕಾರಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ. ಚೀನಾದಲ್ಲಿ ಅತೀಯಾದ ಲಾಕ್‌ಡೌನ್ ನೀತಿಗೆ ರೋಸಿ ಹೋಗಿರುವ ಜನರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಟನೆ ಹತ್ತಿಕ್ಕಲು ಗುಂಡಿನ ದಾಳಿಗಳು ನಡೆದಿದೆ. ಕೆಲ ಪ್ರತಿಭಟನಾಕಾರರು ಮೃತಪಟ್ಟಿದ್ದರೆ, ಹಲವರು ಗಾಯಗೊಂಡಿದ್ದಾರೆ. ಭಾರಿ ಪ್ರತಿಭಟನೆ ಬೆನ್ನಲ್ಲೇ ಇತ್ತ ಚೀನಾದಲ್ಲಿ ದಾಖಲೆಯ ಮಟ್ಟದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಒಂದೇ ದಿನ 40,000ಕ್ಕೂ ಕೋವಿಡ್ ಪ್ರಕರಣ ದಾಖಲಾಗಿದೆ. ಇದರ ಪರಿಣಾಮ ಚೀನಾ ರಾಜಧಾನಿ ಬೀಜಿಂಗ್ ಸೇರಿದಂತೆ ಕೆಲ ನಗರದಲ್ಲಿ ಹೊಸದಾಗಿ ಲಾಕ್‌ಡೌನ್ ಹೇರಲಾಗಿದೆ.

ಚೀನಾದಲ್ಲಿನ ಕೋವಿಡ್ ಪ್ರಕರಣಗಳ ಏರಿಕೆ ಇದೀಗ ಇತರ ರಾಷ್ಟ್ರಗಳಿಗೂ ಎಚ್ಚರಿಕೆ ಕರೆಗಂಟೆಯಾಗಿದೆ. 2019ರ ಅಂತ್ಯದಲ್ಲಿ ಚೀನಾದಲ್ಲಿ ಆರಂಭಗೊಂಡ ಕೊರೋನಾ ಇಡೀ ವಿಶ್ವಕ್ಕೆ ಹಬ್ಬಿ ಸ್ಥಗಿತಗೊಂಡಿತ್ತು. ಇದೀಗ ಇತರ ಎಲ್ಲಾ ದೇಶದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಭಾರತ ಬಹುತೇಕ ಕೋವಿಡ್ ವೈರಸ್ ಮೆಟ್ಟಿನಿಂತಿದೆ. ಇದೀಗ ಚೀನಾದಲ್ಲಿ ಮತ್ತೆ ಕೋವಿಡ್ ಸ್ಫೋಟಗೊಂಡಿದೆ.

ಚೀನಾದಲ್ಲಿ ಸಾರ್ವಕಾಲಿಕ ದಾಖಲೆಯ ಕೋವಿಡ್ ಕೇಸ್, ಒಂದೇ ದಿನ 31,444 ಪ್ರಕರಣ

ಶಾಂಘೈ ನಗರದಲ್ಲಿ ಜನರು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶ್ವಿವಿದ್ಯಾಲಯಗಳಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಹಲವರನ್ನು ಬಂಧಿಸಲಾಗಿದೆ. ಪ್ರತಿಭಟನೆಗೆ ಬೆಚ್ಚಿ ಬಿದ್ದಿರುವ ಅಧ್ಯಕ್ಷ ಕ್ಸಿ ಜಿನ್‌ಪಿನ್, ಉರ್ಮ್ಕಿ ಪ್ರಾಂತ್ಯದಲ್ಲಿ ಹೇರಿದ್ದ ಲಾಕ್‌ಡೌನ್ ಹಿಂಪಡೆಯಲಾಗಿದೆ. ಇಲ್ಲಿ ಅಪಾರ್ಟ್‌ಮೆಂಟ್ ಬ್ಲಾಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಕೋವಿಡ್ ಲಾಕ್‌ಡೌನ್ ಕಾರಣ ಜನರು ಹೊರಬರಲಾಗದೆ 10 ಮಂದಿ ಮೃತಪಟ್ಟರೆ, 9ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಚೀನಾ ಸರ್ಕಾರದ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಲಾಕ್‌ಡೌನ್‌ ನಿರ್ಬಂಧದ ವೇಳೆ ಚೀನಾದ ಕ್ಸಿಂಗ್‌ಜಿಯಾಂಗ್‌ ಪ್ರದೇಶದಲ್ಲಿ 21 ಅಂತಸ್ತಿನ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿಕೊಂಡು 10 ಜನ ಸಾವನ್ನಪ್ಪಿದ್ದು 9 ಜನ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. ದೇಶದಲ್ಲಿ ಕೊರೋನಾ ಹೆಚ್ಚಾದ ಕಾರಣ ಲಾಕ್‌ಡೌನ್‌ ಘೋಷಿಸಿ ಮನೆಯಿಂದ ಹೊರಹೋಗದಂತೆ ನಿರ್ಬಂಧ ಹೇರಲಾಗಿದ್ದ ವೇಳೆ ಅಗ್ನಿ ಅವಘಡ ನಡೆದಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿಗೆ 3 ಗಂಟೆಗಳ ಅವಧಿ ತಗುಲಿದೆ. ಕಟ್ಟಡದಲ್ಲಿನ ಬಹುತೇಕ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಚೀನಾದಲ್ಲಿ 6 ತಿಂಗಳ ಬಳಿಕ ಕೋವಿಡ್‌ಗೆ ಮೊದಲ ಸೋಂಕಿತ ಬಲಿ

ತುರ್ತು ಚಿಕಿತ್ಸೆ ಒದಗಿಸಲಾದರೂ 10 ಜನ ಮೃತಪಟ್ಟಿದ್ದು ಸಣ್ಣ ಪುಟ್ಟಗಾಯಗಳಿಗೊಳಗಾಗಿರುವ 9 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ನಿರ್ಬಂಧ ಕಾರಣ ಹೊರಬರಲಾಗದೆ ಜನ ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್‌ ಆಗುತ್ತಿದ್ದಂತೆ ಬೆಂಕಿಗಾಹುತಿಯಾದ ಕಟ್ಟಡ ಕಡಿಮೆ ಕೋವಿಡ್‌ ಪ್ರಮಾಣವಿದ್ದ ಸ್ಥಳದಲ್ಲಿದ್ದು ಜನರು ಹೊರಬರಲು ಅವಕಾಶವಿತ್ತು ಎಂದು ಸರ್ಕಾರ ಹೇಳಿದೆ. ಇದೇ ವೇಳೆ ಅಗ್ನಿಶಾಮಕ ಸಿಬ್ಬಂದಿ 4 ಗಂಟೆ ತಡವಾಗಿ ಬಂದಿದ್ದಾರೆಂದು ಜನ ಆಕ್ರೋಶ ಹೊರಹಾಕಿದ್ದಾರೆ.

click me!