ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದು| 7 ತಿಂಗಳ ಬಳಿಕ ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಬಿಡುಗಡೆ|
ಶ್ರೀನಗರ[ಮಾ.14]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಗೃಹಬಂಧನದಲ್ಲಿದ್ದ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (82)ಅವರು ಇದೀಗ ಬಂಧನಮುಕ್ತರಾಗಿದ್ದಾರೆ. ಈ ಮೂಲಕ 7 ತಿಂಗಳ ದೀರ್ಘಾವಧಿ ಬಳಿಕ ಗೃಹಬಂಧನದಿಂದ ಮುಕ್ತರಾದಂತಾಗಿದೆ.
ಆ.5ರಂದು ಫಾರೂಕ್‌ರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಸೆ.15ರಂದು ಅವರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆ ಹೇರಿ, ಗೃಹ ಬಂಧನಕ್ಕೆ ಗುರಿಪಡಿಸಲಾಗಿತ್ತು. ನಂತರ ಡಿ.13ರಂದು ಅದನ್ನು ವಿಸ್ತರಿಸಲಾಗಿತ್ತು. ಬಿಡುಗಡೆ ಬಳಿಕ ಮಾತನಾಡಿದ ಫಾರೂಕ್, ತಮ್ಮ ಗೃಹಬಂಧನದ ವಿರುದ್ಧ ಧ್ವನಿಯೆತ್ತಿದ ರಾಜಕೀಯ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.
undefined
ಅಲ್ಲದೆ ಅಮ್ಮ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಜೊತೆಗೆ, ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಸಂದರ್ಭದಲ್ಲಿ ಬಂಧನ ಮಾಡಲಾದ ಇತರ ರಾಜಕೀಯ ನಾಯಕರನ್ನು ಬಂಧನದಿಂದ ಬಿಡುಗಡೆ ಮಾಡಬೇಕು. ಅಲ್ಲದೆ, ಅವರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ನಾನೀಗ ಬಂಧನದಿಂದ ಮುಕ್ತವಾಗಿದ್ದೇನೆ. ಆದರೆ, ಎಲ್ಲ ರಾಜಕೀಯ ನಾಯಕರು ಬಂಧನದಿಂದ ಬಿಡುಗಡೆಯಾದ ಬಳಿಕವಷ್ಟೇ ನನಗೆ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ ಎಂದು ಹೇಳಿದ್ದಾರೆ.