'ಕೊರೋನಾ ವೈರಸ್‌ ಮೂಲ ಚೀನಾ ಅಲ್ಲ, ಅಮೆರಿಕಾ!'

By Kannadaprabha NewsFirst Published Mar 14, 2020, 10:24 AM IST
Highlights

ಕೊರೋನಾ ವೈರಸ್‌ ಮೂಲ ಅಮೆರಿಕ: ಚೀನಾ ‘ಬಾಂಬ್‌’!| ಅಮೆರಿಕ ಸೇನೆಯೇ ವೈರಾಣು ತಂದು ವುಹಾನ್‌ಗೆ ಬಿಟ್ಟಿರಬಹುದು| ‘ಮೇಡ್‌ ಇನ್‌ ಚೀನಾ ವೈರಸ್‌’ ಎಂದ ಅಮೆರಿಕಕ್ಕೆ ಭರ್ಜರಿ ತಿರುಗೇಟು

ಬೀಜಿಂಗ್‌[ಮಾ.14]: ಕೊರೋನಾ ವೈರಸ್‌ ವಿಶ್ವದಲ್ಲೇ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್‌ನಲ್ಲಿ ಎಂದು ಜಗತ್ತೇ ನಂಬಿದೆ. ಆದರೆ ಅದನ್ನು ಅಲ್ಲಗಳೆದಿರುವ ಚೀನಾ, ಈ ವೈರಸ್‌ನ ಮೂಲ ಅಮೆರಿಕ. ಅಮೆರಿಕದ ಸೇನೆಯೇ ಕೊರೋನಾ ವೈರಾಣುವನ್ನು ವುಹಾನ್‌ಗೆ ತಂದುಬಿಟ್ಟಿರಬಹುದು ಎಂದು ತೀರಾ ಗಂಭೀರ ಆರೋಪ ಮಾಡಿದೆ.

ಕೊರೋನಾ ಎಂಬುದು ‘ಮೇಡ್‌ ಇನ್‌ ಚೀನಾ ವೈರಸ್‌’, ‘ವುಹಾನ್‌ ವೈರಸ್‌’ ಎಂದೆಲ್ಲಾ ಇತ್ತೀಚೆಗೆ ಅಮೆರಿಕ ಸರ್ಕಾರದ ಉನ್ನತ ನಾಯಕರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್‌ ಅವರು ಅಮೆರಿಕದತ್ತಲೇ ಬೊಟ್ಟು ಮಾಡಿರುವುದು ವಿಶ್ವಾದ್ಯಂತ ಚರ್ಚೆಗೆ ಕಾರಣವಾಗಿದೆ. ಆದರೆ ಇದಕ್ಕೆ ಅವರು ಸೂಕ್ತ ಪುರಾವೆಯನ್ನು ನೀಡಿಲ್ಲ.

‘ಕೆಲವೊಂದಿಷ್ಟು ಅಮೆರಿಕನ್ನರು ಜ್ವರದಿಂದ ಮೃತಪಟ್ಟಿದ್ದಾರೆ. ಅವರನ್ನು ಮರಣೋತ್ತರ ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಕೊರೋನಾ ಕಂಡುಬಂದಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕೇಂದ್ರದ (ಸಿಡಿಸಿ) ನಿರ್ದೇಶಕ ರಾಬರ್ಟ್‌ ರೆಡ್‌ಫೀಲ್ಡ್‌ ಅವರೇ ಬುಧವಾರ ಸದನ ಮೇಲುಸ್ತುವಾರಿ ಸಮಿತಿಯ ಮುಂದೆ ಹೇಳಿದ್ದಾರೆ. ತನ್ಮೂಲಕ ಸಿಡಿಸಿ ಸಿಕ್ಕಿಬಿದ್ದಿದೆ. ಅಮೆರಿಕದಲ್ಲಿ ರೋಗಿಗಳನ್ನು ಗುರುತಿಸುವ ಕಾರ್ಯ ಯಾವಾಗ ಆರಂಭವಾಯಿತು? ಎಷ್ಟುಜನರಿಗೆ ಸೋಂಕು ತಗುಲಿದೆ? ಚಿಕಿತ್ಸೆ ನೀಡಿದ ಆಸ್ಪತ್ರೆಗಳ ಹೆಸರೇನು? ಬಹುಶಃ ಅಮೆರಿಕ ಸೇನೆಯೇ ವುಹಾನ್‌ಗೆ ಈ ಸಾಂಕ್ರಾಮಿಕವನ್ನು ತಂದಿರಬೇಕು. ಪಾರದರ್ಶಕವಾಗಿರಿ! ನಿಮ್ಮ ಅಂಕಿ-ಅಂಶವನ್ನು ಬಹಿರಂಗಪಡಿಸಿ! ಅಮೆರಿಕ ನಮಗೆ ವಿವರಣೆ ನೀಡಬೇಕಾಗಿದೆ’ ಎಂದು ಝಾವೋ ಲಿಜಿಯಾನ್‌ ಬರೆದುಕೊಂಡಿದ್ದಾರೆ.

ಇದರ ಬೆನ್ನಲ್ಲೇ, ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಮುಖವಾಣಿಯಾಗಿರುವ ‘ಗ್ಲೋಬಲ್‌ ಟೈಮ್ಸ್‌’ ದಿನಪತ್ರಿಕೆ, 2019ರಲ್ಲಿ ನಿಧನವೊಂದಿದ 37000 ಕೊರೋನಾ ರೋಗಿಗಳನ್ನು ಅಮೆರಿಕ ತಪ್ಪಾಗಿ ತಪಾಸಣೆ ಮಾಡಿರಬಹುದು ಎಂದು ತಿಳಿಸಿದೆ.

click me!