2019ರ ನವೆಂಬರ್‌ನಲ್ಲೇ ಕೊರೋನಾ ಮೊದಲ ಕೇಸ್ ಪತ್ತೆಯಾಗಿತ್ತು!

By Kannadaprabha NewsFirst Published Mar 14, 2020, 10:13 AM IST
Highlights

ಚೀನಾದಲ್ಲಿ ಕೊರೋನಾ ವೈರಸ್‌ ಭಾರೀ ಪ್ರಮಾಣದಲ್ಲಿ ಹಬ್ಬಿದ್ದ ಹುಬೇ ಪ್ರಾಂತ್ಯ| 2020ರ ಜನವರಿಯಲ್ಲಿ ಕೊರೋನಾ ಪ್ರಕರಣ ಕಂಡು ಬಂದಿದ್ದಲ್ಲ| 2019ರ ನ.17ರಂದೇ ಮೊದಲ ಪ್ರಕರಣ ದಾಖಲು

ಬೀಜಿಂಗ್‌[ಮಾ.14]: ಚೀನಾದಲ್ಲಿ ಕೊರೋನಾ ವೈರಸ್‌ ಭಾರೀ ಪ್ರಮಾಣದಲ್ಲಿ ಹಬ್ಬಿದ್ದ ಹುಬೇ ಪ್ರಾಂತ್ಯದಲ್ಲಿ ಎಲ್ಲರೂ ಅಂದುಕೊಂಡಂತೆ 2020ರ ಜನವರಿಯಲ್ಲಿ ಕೊರೋನಾ ಪ್ರಕರಣ ಕಂಡುಬಂದಿಲ್ಲ. ಬದಲಾಗಿ 2019ರ ನ.17ರಂದೇ ಮೊದಲ ಪ್ರಕರಣ ದಾಖಲಾಗಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

2019ರ ನ.17ರಂದು ಹುಬೇನಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. 55 ವರ್ಷದ ವ್ಯಕ್ತಿ ಕೊರೋನಾ ಸೋಂಕಿಗೆ ತುತ್ತಾಗಿದ್ದ ಮೊದಲ ವ್ಯಕ್ತಿ. ಜೊತೆಗೆ 2019ರಲ್ಲಿ ಒಟ್ಟಾರೆ 266 ಜನರಿಗೆ ಕೊರೋನಾ ಸೋಂಕು ತಗುಲಿತ್ತು. ಅವರೆಲ್ಲಾ ಒಂದು ಹಂತದಲ್ಲಿ ವೈದ್ಯಕೀಯ ನಿಗಾವ್ಯಾಪ್ತಿಗೆ ಒಳಪಟ್ಟಿದ್ದರು ಎಂದು ಹಾಂಕಾಂಗ್‌ ಮೂಲದ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಪ್ರಕಟಿಸಿದೆ.

ಈ ಹಿನ್ನೆಲೆಯಲ್ಲಿ ಇದೀಗ ಚೀನಾದ ವಿಜ್ಞಾನಿಗಳ ತಂಡ, ಮೊದಲ ಪ್ರಕರಣ ಬೆಳಕಿಗೆ ಬಂದ ಬಳಿಕ ಅದು ಹೇಗೆ ಒಬ್ಬರಿಂದ ಇನ್ನೊಬ್ಬರಿಗೆ ಹರಡಿತು, ಹರಡಿದ ರೀತಿ ಯಾವುದು ಎಂಬುದರ ಬಗ್ಗೆ ಅಧ್ಯಯನ ಆರಂಭಿಸಿದೆ. ಈ ಕುರಿತ ಮಾಹಿತಿಯು ರೋಗ ಹರಡಿದ್ದು ಹೇಗೆ? ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹರಡಿದರೂ ಅದು ಗಮನಕ್ಕೆ ಬಾರದೆಯೇ ಹೋಗಿದ್ದು ಹೇಗೆ? ಎಂಬುದರ ಮಾಹಿತಿ ನೀಡುವ ಜೊತೆಗೆ, ಸೋಂಕಿನ ಅಗಾಧತೆಯನ್ನು ಅರಿಯಲು ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಸೋಂಕು ಪೀಡಿತನಾಗಿದ್ದ ಮೊದಲ ವ್ಯಕ್ತಿಗಾಗಿ ಇದೀಗ ಅಧಿಕಾರಿಗಳು ತೀವ್ರ ಹುಡುಕಾಟವನ್ನೂ ಆರಂಭಿಸಿದ್ದಾರೆ.

click me!