
-ಕಾಂಗೋ, ಉಗಾಂಡಾದಲ್ಲಿ ಆರೋಗ್ಯ ತುರ್ತುಪರಿಸ್ಥಿತಿ: ಡಬ್ಲ್ಯುಎಚ್‌ಒ
ಅಬುಜಾ (ನೈಜೀರಿಯಾ): ಎಬೋಲಾ ರೋಗವು 88 ಜನರನ್ನು ಬಲಿ ತೆಗೆದುಕೊಂಡು, 300ಕ್ಕೂ ಹೆಚ್ಚು ಜನರಿಗೆ ಹಬ್ಬಿರುವ ಶಂಕೆ ವ್ಯಕ್ತವಾದ ಬೆನ್ನಲ್ಲೇ, ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಆಫ್ರಿಕಾ ದೇಶಗಳಾದ ಕಾಂಗೋ ಮತ್ತು ಉಗಾಂಡಾದಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ.
ಕಾಂಗೋದ ಪೂರ್ವ ಪ್ರಾಂತ್ಯವಾದ ಇಟುರಿ ಸಾಂಕ್ರಾಮಿಕದ ಕೇಂದ್ರಬಿಂದು. ಇಲ್ಲಿಗೆ ಸುಮಾರು 1,000 ಕಿ.ಮೀ. ದೂರದ ರಾಜಧಾನಿ ಕಿನ್ಶಾಸಾದ ವ್ಯಕ್ತಿಯೊಬ್ಬ ಭೇಟಿ ನೀಡಿದ್ದ. ಈಗ ಅವನಿಗೆ ಎಬೋಲಾ ಹರಡಿರುವುದು ದೃಢಪಟ್ಟಿದೆ. ಉತ್ತರ ಕಿವು ಪ್ರಾಂತ್ಯದಲ್ಲೂ ಸೋಂಕು ಪತ್ತೆಯಾಗಿದೆ. ಆದರೆ ಇದು ಕೋವಿಡ್ ರೀತಿಯ ಆತಂಕಕಾರಿ ಪರಿಸ್ಥಿತಿಯನ್ನು ಉಂಟುಮಾಡುವುದಿಲ್ಲ ಎಂದು ಡಬ್ಲ್ಯುಎಚ್‌ಒ ಟ್ವೀಟ್ ಮಾಡಿದೆ.
ಸೋಂಕು ಬುಂಡಿಬುಗ್ಯೋ ವೈರಸ್‌ನಿಂದ ಉಂಟಾಗುತ್ತದೆ. ಪ್ರಾಣಿಗಳಲ್ಲಿ ಹರಡಿ ನಂತರ ಮನುಷ್ಯನಿಗೆ ತಾಗುತ್ತದೆ. ತೀವ್ರವಾದ ಜ್ವರ, ತಲೆನೋವು ಮತ್ತು ಮೈಕೈ ನೋವು, ವಾಂತಿ- ಇದರ ಲಕ್ಷಣಗಳು.
ಎಬೋಲಾ ರೋಗದ ಅಪರೂಪದ ರೂಪವಾಗಿದ್ದು, ಇದಕ್ಕೆ ಚಿಕಿತ್ಸೆ ಅಥವಾ ಲಸಿಕೆಗಳು ಲಭ್ಯವಿಲ್ಲ. ಬುಂಡಿಬುಗ್ಯೋ ವೈರಸ್ ಮೊದಲು 2007-2008ರಲ್ಲಿ ಉಗಾಂಡಾದ ಬುಂಡಿಬುಗ್ಯೋ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಆಗ 149 ಜನ ಬಾಧಿತರಾಗಿ 37 ಜನ ಮೃತಪಟ್ಟಿದ್ದರು. 2ನೇ ಬಾರಿ 2012ರಲ್ಲಿ ಕಾಂಗೋದ ಇಸಿರೋದಲ್ಲಿ ಹರಡಿತ್ತು. ಅಲ್ಲಿ 57 ಪ್ರಕರಣಗಳು ಮತ್ತು 29 ಸಾವುಗಳು ವರದಿಯಾಗಿದ್ದವು.
ಕಾಂಗೋದ ಮೊಂಗ್ವಾಲು ಪ್ರದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಇಲ್ಲಿ ಸೋಂಕಿನ ನಿಯಂತ್ರಣ ಮತ್ತು ಸಂಪರ್ಕಿತರ ಪತ್ತೆ ಕಷ್ಟಕರವಾಗಿದೆ. ಐಸಿಸ್ ಬೆಂಬಲಿತ ಗುಂಪುಗಳ ಮಿಲಿಟರಿ ಸಂಘರ್ಷ, ಗಣಿಗಾರಿಕೆಯಿಂದಾಗಿ ಜನರ ನಿರಂತರ ವಲಸೆ ಸೋಂಕು ಹರಡುವಿಕೆ ತಡೆಯಲು ಅಡ್ಡಿಪಡಿಸಿವೆ ಎಂದು ಆಫ್ರಿಕಾ ಸಿಡಿಸಿ ನಿರ್ದೇಶಕ ಡಾ. ಜೀನ್ ಕಸೆಯಾ ಶನಿವಾರ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ