ಪಾಕ್‌ನಲ್ಲಿ ಪ್ರತಿ ವರ್ಷ 1000 ಬಾಲಕಿಯರ ಬಲವಂತದ ಮತಾಂತರ!

By Suvarna NewsFirst Published Dec 29, 2020, 12:53 PM IST
Highlights

ಮುಸ್ಲಿಂ ಬಾಹುಳ್ಯದ ಪಾಕಿಸ್ತಾನದಲ್ಲಿ ಮದುವೆಗಾಗಿ ಇತರ ಧರ್ಮೀಯ ಹುಡುಗಿಯರ ಬಲವಂತದ ಮತಾಂತರ|  ಪ್ರತಿ ವರ್ಷ 1000 ಬಾಲಕಿಯರ ಬಲವಂತದ ಮತಾಂತರ| ಅಪ್ರಾಪ್ತೆಯರೇ ಟಾರ್ಗೆಟ್‌, ಅಪಹರಿಸಿ ಮದುವೆ!

ಕರಾಚಿ(ಡಿ.29): ಮುಸ್ಲಿಂ ಬಾಹುಳ್ಯದ ಪಾಕಿಸ್ತಾನದಲ್ಲಿ ಮದುವೆಗಾಗಿ ಇತರ ಧರ್ಮೀಯ ಹುಡುಗಿಯರ ಬಲವಂತದ ಮತಾಂತರ ನಿರಂತರವಾಗಿ ನಡೆಯುತ್ತಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ವರ್ಷಕ್ಕೆ ಸುಮಾರು 1000 ಯುವತಿಯರನ್ನು (ಇವರಲ್ಲಿ ಅಪ್ರಾಪ್ತೆಯರೂ ಇದ್ದಾರೆ) ಇಸ್ಲಾಂಗೆ ಮತಾಂತರಿಸಿ ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಇತ್ತೀಚಿನ ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಂತೂ ಇದು ವಿಪರೀತವಾಗಿದೆ. ಲಾಕ್‌ಡೌನ್‌ ಕಾರಣ ಶಾಲೆಗೆ ತೆರಳದೆ ಮಕ್ಕಳು ಮನೆಯಲ್ಲೇ ಇದ್ದರು. ಇದನ್ನೇ ದುರುಪಯೋಗಪಡಿಸಿಕೊಂಡ ಶ್ರೀಮಂತರು, ಜಮೀನ್ದಾರರು ಹಾಗೂ ಅಪಹರಣಕಾರರು ಹಿಂದೂ, ಕ್ರೈಸ್ತ ಹಾಗೂ ಸಿಖ್‌ ಸಮುದಾಯದ ಬಾಲಕಿಯರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಈ ಧರ್ಮದಲ್ಲಿನ ಬಡವರನ್ನು ಗುರುತಿಸುವ ಇವರು, ಅವರ ಸಾಲವನ್ನು ಕಟ್ಟಿಕೊಡುವ ಆಮಿಷ ಒಡ್ಡಿ ಅವರ ಚಿಕ್ಕ ಚಿಕ್ಕ ಹೆಣ್ಣುಮಕ್ಕಳನ್ನು ಹೊತ್ತೊಯ್ದಿದ್ದಾರೆ. ಮುದುಕರಿಗೆ ಹಾಗೂ ಮಧ್ಯವಯಸ್ಕರಿಗೆ ಅಪ್ರಾಪ್ತೆಯರನ್ನು ಮದುವೆ ಮಾಡಿಸಿದ್ದಾರೆ ಎಂದು ಪಾಕಿಸ್ತಾನದ ಸ್ವತಂತ್ರ ಮಾನವ ಹಕ್ಕು ಆಯೋಗದ ಹೇಳಿಕೆ ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ರೀತಿ ವರ್ಷಕ್ಕೆ ಸುಮಾರು 1000 ಹೆಣ್ಣುಮಕ್ಕಳ ಮದುವೆಯನ್ನು ಅವರ ಒಪ್ಪಿಗೆ ಇಲ್ಲದೇ ಮಾಡಿಸಲಾಗುತ್ತಿದೆ ಎಂದೂ ಅದು ಹೇಳಿದೆ.

ಇಂಥ ಬಾಲಕಿಯರಲ್ಲಿ 14 ವರ್ಷದ ನೇಹಾ ಎಂಬ ಕ್ರೈಸ್ತ ಬಾಲಕಿ ಕೂಡ ಇದ್ದಾಳೆ. ಈಕೆಯನ್ನು 45 ವರ್ಷದ ಮಧ್ಯವಯಸ್ಕ ವಿವಾಹಿತ ವ್ಯಕ್ತಿ ಮದುವೆ ಆಗಿದ್ದ. ಈತನಿಗೆ ನೇಹಾಗಿಂತ ದುಪ್ಪಟ್ಟು ವಯಸ್ಸಿನ ಇಬ್ಬರು ಮಕ್ಕಳಿದ್ದರೂ ಇಂಥ ಹೀನ ಕೃತ್ಯ ಎಸಗಿದ್ದ. ಈಗ ಈತನನ್ನು ಬಂಧಿಸಲಾಗಿದೆ. ಇನ್ನು ಸಿಂಧ್‌ನ ಸೋನಿಯಾ ಕುಮಾರಿ ಎಂಬ 13 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರಿಸಿ, ಇಬ್ಬರು ಮಕ್ಕಳ ಅಪ್ಪನಾದ 36 ವರ್ಷದ ವಿವಾಹಿತನಿಗೆ ಮದುವೆ ಮಾಡಿಕೊಡಲಾಗಿದೆ. ಇದೇ ರೀತಿ ಕರಾಚಿಯ ಆರ್ಝೂ ರಾಜಾ ಎಂಬ 13ರ ಕ್ರೈಸ್ತ ಬಾಲಕಿಯನ್ನು ಪಕ್ಕದ ಮನೆಯ 40 ವರ್ಷದ ಇಸ್ಲಾಂ ವ್ಯಕ್ತಿ ಅಪಹರಿಸಿ ಮದುವೆ ಆಗಿದ್ದ.

ಮೊದಮೊದಲು ಸಿಂಧ್‌ ಪ್ರಾಂತ್ಯದ ಹಿಂದೂ ಯುವತಿಯರನ್ನು ಟಾರ್ಗೆಟ್‌ ಮಾಡಲಾಗುತ್ತಿತ್ತು. ಇತ್ತೀಚೆಗೆ ಕ್ರೈಸ್ತರನ್ನೂ ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಶೇ.3.6ರಷ್ಟುಇದೆ. ಇವರಲ್ಲಿ ಹಿಂದೂಗಳು, ಕ್ರೈಸ್ತರು ಹಾಗೂ ಸಿಖ್ಖರು ಪ್ರಮುಖರು.

click me!