ದಲೈ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾ ಆಟಕ್ಕೆ ಅಮೆರಿಕ ಲಗಾಮು!

By Suvarna News  |  First Published Dec 29, 2020, 9:18 AM IST

ದಲೈ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾ ಆಟಕ್ಕೆ ಅಮೆರಿಕ ಲಗಾಮು| ಹಸ್ತಕ್ಷೇಪ ತಡೆವ ಮಸೂದೆಗೆ ಟ್ರಂಪ್‌ ಸಹಿ


ವಾಷಿಂಗ್ಟನ್(ಡಿ.29): ಚೀನಾ ವಿರುದ್ಧ ಒಂದಿಲ್ಲೊಂದು ಕಾರಣಕ್ಕೆ ಸಂಘರ್ಷದಲ್ಲಿ ತೊಡಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಟಿಬೆಟ್‌ ಮೇಲೆ ಚೀನಾ ಹಿಡಿತವನ್ನು ಕುಗ್ಗಿಸುವ ಮಹತ್ವದ ಮಸೂದೆಯೊಂದಕ್ಕೆ ಸಹಿ ಹಾಕಿದ್ದಾರೆ. ಈ ಕಾಯ್ದೆಯ ಪ್ರಕಾರ ಟಿಬೆಟ್‌ನಲ್ಲಿ ತನ್ನದೇ ಆದ ದೂತಾವಾಸ ಸ್ಥಾಪಿಸುವ ಉದ್ದೇಶವನ್ನು ಅಮೆರಿಕ ಹೊಂದಿದೆ ಹಾಗೂ ಬೌದ್ಧರ ಧರ್ಮಗುರು ದಲೈಲಾಮಾ ಉತ್ತರಾಧಿಕಾರಿ ನೇಮಕದಲ್ಲಿ ಚೀನಾ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ, ಕೇವಲ ಟಿಬೆಟನ್‌ ಬೌದ್ಧ ಸಮುದಾಯಕ್ಕೆ ಪರಮಾಧಿಕಾರ ನೀಡಲು ಉದ್ದೇಶಿಸಲಾಗಿದೆ.

ಚೀನಾ ವಿರೋಧದ ನಡುವೆ ‘ಟಿಬೆಟನ್‌ ನೀತಿ ಹಾಗೂ ಬೆಂಬಲ ಕಾಯ್ದೆ-2020’ ಮಸೂದೆಗೆ ಅಮೆರಿಕ ಸಂಸತ್ತಿನ ಸದನವಾದ ‘ಸೆನೆಟ್‌’ ಕಳೆದ ವಾರ ಅಂಗೀಕಾರ ನೀಡಿತ್ತು. ಭಾನುವಾರ ಇದಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ.

Latest Videos

undefined

ಮುಂದಿನ ದಲೈಲಾಮಾ ನೇಮಕದಲ್ಲಿ ಚೀನಾ ಹಸ್ತಕ್ಷೇಪ ತಡೆಗೆ ಅಂತಾರಾಷ್ಟ್ರೀಯ ಸಮುದಾಯದ ಒಕ್ಕೊರಲ ಬೆಂಬಲ ಗಿಟ್ಟಿಸುವ ಉದ್ದೇಶವನ್ನು ಕಾಯ್ದೆಯಲ್ಲಿ ವ್ಯಕ್ತಪಡಿಸಲಾಗಿದೆ. ಈಗಿನ ಬೌದ್ಧ ಧರ್ಮಗುರು ದಲೈಲಾಮಾ ಅವರು ಸ್ವಾಯತ್ತ ಟಿಬೆಟ್‌ ಉದ್ದೇಶ ಇರಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಚೀನಾ ವಿರೋಧಿಸುತ್ತಿದೆ.

ಅಲ್ಲದೆ, ಚೀನಾ ಅಧಿಕಾರಿಗಳ ಮೇಲೆ ಪ್ರಯಾಣ ನಿರ್ಬಂಧ ಹಾಗೂ ಇತರ ನಿರ್ಬಂಧ ಮುಂದುವರಿಸಲು ಚೀನಾ ನಿರ್ಧರಿಸಿದೆ.

ಟಿಬೆಟ್‌ ರಾಜಧಾನಿ ಲ್ಹಾಸಾದಲ್ಲಿ ಅಮೆರಿಕ ರಾಯಭಾರ ಕಚೇರಿ ಸ್ಥಾಪನೆ ಮಾಡುವರೆಗೆ ಚೀನಾದ ಹೊಸ ದೂತಾವಾಸಗಳ ಮೇಲೆ ಅಮೆರಿಕದಲ್ಲಿ ನಿರ್ಬಂಧ ಮುಂದುವರಿಸುವ ಹಾಗೂ ಟಿಬೆಟ್‌ ಸಮುದಾಯಕ್ಕೆ ಸ್ವಯಂಸೇವಾ ಸಂಸ್ಥೆಗಳು ಸಹಾಯ-ಸಹಕಾರ ನೀಡುವ ಅಂಶಗಳು ಕೂಡ ಕಾಯ್ದೆಯಲ್ಲಿವೆ.

click me!