'ನೀವು ನಮಗೆ ಬೇಕು, ಯಾವುದೇ ಕಾರಣಕ್ಕೂ ಮಲಗಬೇಡಿ' ಸ್ಮಿತ್‌ ಮಚ್ಚಾರ್‌ ಉಳಿಸಿಕೊಳ್ಳಲು ನಡೆದ 45 ನಿಮಿಷಗಳ ಹೋರಾಟ ನೆನೆದ ದಂತವೈದ್ಯ

Published : Oct 07, 2026, 04:56 PM IST
smit machchhar fly dubai

ಸಾರಾಂಶ

ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಹ-ಪೈಲಟ್‌ನಿಂದ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಭೀಕರ ಕೊಡಲಿ ದಾಳಿ ನಡೆದಿದೆ. ವಿಮಾನದಲ್ಲಿದ್ದ ದಂತ ವೈದ್ಯರೊಬ್ಬರು 45 ನಿಮಿಷಗಳ ಕಾಲ ಪ್ರಥಮ ಚಿಕಿತ್ಸೆ ನೀಡಿ ಪೈಲಟ್ ಪ್ರಾಣ ಉಳಿಸಿದ್ದಾರೆ.

ನವದೆಹಲಿ (ಅ.7): ದುಬೈನಿಂದ ಟೆಲ್‌ ಅವೀವ್‌ಗೆ ಹಾರಾಟ ನಡೆಸುತ್ತಿದ್ದ 'ಫ್ಲೈದುಬೈ' (flydubai) ಸಂಸ್ಥೆಯ FZ1073 ವಿಮಾನದಲ್ಲಿ ಸೆಪ್ಟೆಂಬರ್ 30 ರಂದು ನಡೆದಿದ್ದ ಭೀಕರ ಕಾಕ್‌ಪಿಟ್ ದಾಳಿ ಹಾಗೂ ವಿಮಾನ ಅಪಹರಣ ಯತ್ನದ ಘಟನೆಯಿಂದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪೈಲಟ್‌ಗೆ ವಿಮಾನದಲ್ಲಿದ್ದ ದಂತ ವೈದ್ಯರೊಬ್ಬರು ನಡೆಸಿದ 45 ನಿಮಿಷಗಳ ನಿರಂತರ ಪ್ರಥಮ ಚಿಕಿತ್ಸೆ ಮತ್ತು ಧೈರ್ಯವೇ ಅವರ ಪ್ರಾಣ ಉಳಿಸಿದೆ.

ವಿಮಾನದಲ್ಲಿದ್ದ ಪ್ರಯಾಣಿಕ, ಇಸ್ರೇಲ್‌ನಲ್ಲಿ ನೆಲೆಸಿರುವ 47 ವರ್ಷದ ಜಾರ್ಜಿಯನ್ ಮೂಲದ ದಂತ ವೈದ್ಯ ಡಾ. ಶೋಟಾ ಮುಸಾಯೇವ್ (Dr Shota Musaev) ಅವರು ಗಾಯಾಳು ಪೈಲಟ್ ಜೀವ ಉಳಿಸಿದ ಆ ರೋಮಾಂಚನಕಾರಿ 45 ನಿಮಿಷಗಳ ಸಾಹಸವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಕಾಕ್‌ಪಿಟ್‌ನಲ್ಲಿ ಕೇಳಿಸಿದ ಚೀರಾಟ ಮತ್ತು ಕೊಡಲಿ ದಾಳಿ

ವಿಮಾನ ಆಗಸದಲ್ಲಿದ್ದಾಗ ಸಹ-ಪೈಲಟ್ ಆಗಿದ್ದ ಒಮಾನ್ ಮೂಲದ ಹಮ್ಮಮ್ ಅಲ್-ಹಮ್ಮಾಮಿ ಎಂಬಾತ ಹ್ಯಾಕ್ಸ್ ಕೊಡಲಿಯಿಂದ (Crash axe) ಮುಖ್ಯ ಪೈಲಟ್ ಆಗಿದ್ದ ಭಾರತದ ಸ್ಮಿತ್ ಮಚ್ಚಾರ್ ಅವರ ಮೇಲೆ ಇದ್ದಕ್ಕಿದ್ದಂತೆ ಭೀಕರವಾಗಿ ದಾಳಿ ನಡೆಸಿದ್ದ. ಯುಎಇ ಅಟಾರ್ನಿ ಜನರಲ್ ಹಮದ್ ಅಲ್ ಶಮ್ಸಿ ಅವರು ಈ ಘಟನೆಯನ್ನು "ವಿಮಾನ ಅಪಹರಣಕ್ಕೆ ನಡೆಸಿದ 'ಭಯೋತ್ಪಾದನಾ ದಾಳಿಯ ಯತ್ನ'" ಎಂದು ಬಣ್ಣಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದರೂ ಸಹ ಧೈರ್ಯಗೆಡದ ಕ್ಯಾಪ್ಟನ್ ಮಚ್ಚಾರ್, ತಕ್ಷಣವೇ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಹೊರಗಿದ್ದ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಗೆ ಪ್ರವೇಶಿಸಲು ಸಾಧ್ಯವಾಯಿತು. ವೈದ್ಯ ಡಾ. ಮುಸಾಯೇವ್ ಮತ್ತು ಇತರ ಧೈರ್ಯಶಾಲಿ ಪ್ರಯಾಣಿಕರು ಹೆಡ್‌ಫೋನ್ ಕೇಬಲ್‌ಗಳನ್ನು (Headphone cables) ಬಳಸಿ ದಾಳಿಕೋರ ಸಹ-ಪೈಲಟ್‌ನನ್ನು ಕಟ್ಟಿಹಾಕಿ ಸಂಪೂರ್ಣವಾಗಿ ಬಂಧಿಸಿದರು.

‘ದಯವಿಟ್ಟು ಮಲಗಬೇಡಿ, ನಿಮ್ಮ ಕುಟುಂಬ ನಿಮಗಾಗಿ ಕಾಯುತ್ತಿದೆ’

ಕಾಕ್‌ಪಿಟ್‌ನಿಂದ ಕೇಳಿಬಂದ ಚೀರಾಟ ಹಾಗೂ ವೈದ್ಯಕೀಯ ನೆರವಿನ ಕರೆಯನ್ನು ಕೇಳಿ ಮುಸಾಯೇವ್ ಓಡಿ ಹೋದಾಗ, ಪೈಲಟ್ ಸ್ಮಿತ್ ಮಚ್ಚಾರ್ ತಲೆ ಮತ್ತು ಎಡಗೈಗೆ ಆಳವಾದ ಗಾಯಗಳಾಗಿ ಭಾರಿ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತಾ ನೆಲದ ಮೇಲೆ ಬಿದ್ದಿದ್ದರು.

ತಕ್ಷಣವೇ ತಮ್ಮಲ್ಲಿದ್ದ ಟೀ-ಶರ್ಟ್‌ಗಳಿಂದ ಗಾಯದ ಜಾಗವನ್ನು ಒತ್ತಿ ಹಿಡಿದ ವೈದ್ಯರು, ವಿಮಾನದ ಸಿಬ್ಬಂದಿಯಿಂದ ಐಸ್ ಪ್ಯಾಕ್‌ಗಳನ್ನು ತರಿಸಿ ರಕ್ತಸ್ರಾವ ತಡೆಯಲು ಯತ್ನಿಸಿದರು. "ಪ್ರತಿಯೊಬ್ಬರಿಗೂ ಅವರ ಪ್ರಜ್ಞೆ ತಪ್ಪದಂತೆ ನೋಡಿಕೊಳ್ಳುವುದು ಮುಖ್ಯವಾಗಿತ್ತು. ನಾನು ಅವರ ಬಳಿ, 'ದಯವಿಟ್ಟು ನಿದ್ದೆ ಮಾಡಬೇಡಿ, ನಮಗೆ ನಿಮ್ಮ ಅಗತ್ಯವಿದೆ. ನಿಮಗೆ ಎಷ್ಟು ಮಕ್ಕಳಿದ್ದಾರೆ? ಅವರ ಹೆಸರೇನು?' ಎಂದು ಪ್ರಶ್ನಿಸುತ್ತಾ ಮಾತುಕತೆಯಲ್ಲಿ ತೊಡಗಿಸಿದೆ. 'ಹೆದರಬೇಡಿ, ನೀವು ನಿಮ್ಮ ಕುಟುಂಬದ ಬಳಿಗೆ ಸುರಕ್ಷಿತವಾಗಿ ಮರಳುತ್ತೀರಿ, ನಾವು ಶೀಘ್ರದಲ್ಲೇ ಲ್ಯಾಂಡ್ ಆಗಲಿದ್ದೇವೆ' ಎಂದು ಧೈರ್ಯ ತುಂಬಿದೆ" ಎಂದು ಡಾ. ಮುಸಾಯೇವ್ ನೆನಪಿಸಿಕೊಂಡಿದ್ದಾರೆ.

'ನನಗೆ ಬದುಕಬೇಕಿದೆ, ಇಲ್ಲಿ ಸಾಯಲು ಇಷ್ಟವಿಲ್ಲ!'

ತೀವ್ರ ನೋವಿನಿಂದ ಬಳಲುತ್ತಿದ್ದ ಪೈಲಟ್ ಸ್ಮಿತ್, "ದಯವಿಟ್ಟು ನನಗೆ ಸಹಾಯ ಮಾಡಿ. ನನ್ನ ದೇವರು ನನ್ನೊಂದಿಗಿದ್ದಾನೆ. ನಾನು ಬದುಕಲು ಬಯಸುತ್ತೇನೆ, ನನಗೆ ಇಲ್ಲೇ ಸಾಯಲು ಇಷ್ಟವಿಲ್ಲ. ನನ್ನ ತಲೆಯಲ್ಲಿ ತೀವ್ರವಾದ ನೋವಾಗುತ್ತಿದೆ" ಎಂದು ವೈದ್ಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರು.

ಹಾರಾಟದ ಮಧ್ಯದಲ್ಲಿ ಪೈಲಟ್‌ನ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸಿತು. ಒಂದು ಹಂತದಲ್ಲಿ ಅವರ ನಾಡಿಮಿಡಿತ (Pulse) ತೀವ್ರವಾಗಿ ಕುಸಿಯಿತು. ತಕ್ಷಣವೇ ವೈದ್ಯರು ಅವರ ಕಾಲುಗಳನ್ನು ಮೇಲಕ್ಕೆತ್ತಿ ನಾಡಿಮಿಡಿತ ಸಾಧಾರಣ ಸ್ಥಿತಿಗೆ ಬರುವಂತೆ ಮಾಡಿದರು. ತದನಂತರ ಪೈಲಟ್‌ನ ತುಟಿಗಳು ನೀಲಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದಾಗ, ವೈದ್ಯರು ವಿಮಾನದ ಸಿಬ್ಬಂದಿಗೆ "ನಾವು ತಕ್ಷಣವೇ ವಿಮಾನವನ್ನು ಲ್ಯಾಂಡ್ ಮಾಡಬೇಕು, ಇವರ ಬಳಿ ಹೆಚ್ಚು ಸಮಯವಿಲ್ಲ" ಎಂದು ತುರ್ತು ಎಚ್ಚರಿಕೆ ನೀಡಿದರು.

ಗಾಯಾಳು ಪೈಲಟ್ ನೋವು ನಿವಾರಕ ಮಾತ್ರೆಗಳನ್ನು (Painkillers) ಕೇಳಿದರೂ, ಅಧಿಕ ರಕ್ತಸ್ರಾವ ಮತ್ತು ಗಾಯದ ತೀವ್ರತೆ ಹೆಚ್ಚಾಗುವ ಅಪಾಯವಿದ್ದಿದ್ದರಿಂದ ವೈದ್ಯರು ಯಾವುದೇ ಔಷಧ ನೀಡಲು ಒಪ್ಪಲಿಲ್ಲ.

ಸೌದಿ ಅರೇಬಿಯಾಕ್ಕೆ ಡೈವರ್ಟ್; ಪೈಲಟ್ ಚೇತರಿಕೆ

ಪ್ರಯಾಣಿಕರಲ್ಲಿದ್ದ ಇಬ್ಬರು ಸ್ಟ್ಯಾಂಡ್‌ಬೈ ಪೈಲಟ್‌ಗಳು ಕಾಕ್‌ಪಿಟ್ ಪ್ರವೇಶಿಸಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ತಕ್ಷಣವೇ ವಿಮಾನವನ್ನು ಸೌದಿ ಅರೇಬಿಯಾದ 'ತಬುಕ್' (Tabuk) ವಿಮಾನನಿಲ್ದಾಣಕ್ಕೆ ತುರ್ತು ಡೈವರ್ಟ್ ಮಾಡಿ ಲ್ಯಾಂಡ್ ಮಾಡಲಾಯಿತು. ಅಲ್ಲಿ ಕ್ಯಾಪ್ಟನ್ ಮಚ್ಚಾರ್ ಅವರನ್ನು ವೈದ್ಯಕೀಯ ತಂಡಕ್ಕೆ ಹಸ್ತಾಂತರಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಯುಎಇಗೆ ರವಾನಿಸಲಾಯಿತು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಡಾ. ಮುಸಾಯೇವ್, "ಕ್ಯಾಪ್ಟನ್ ಸ್ಮಿತ್ ನಮ್ಮೆಲ್ಲರ ಜೀವ ಉಳಿಸಿದ ನಿಜವಾದ ಹೀರೊ. ಅವರು ಕಾಕ್‌ಪಿಟ್ ಬಾಗಿಲು ತೆರೆಯದಿದ್ದರೆ ದೊಡ್ಡ ದುರಂತವೇ ನಡೆಯುತ್ತಿತ್ತು. ಅವರು ನಮ್ಮ ಪ್ರಾಣ ಉಳಿಸಿದರು, ನಾವು ಅವರ ಪ್ರಾಣ ಉಳಿಸಿದೆವು" ಎಂದಿದ್ದಾರೆ. ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಂಗಳವಾರ ಮಾಹಿತಿ ನೀಡಿದ್ದು, ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಆರೋಗ್ಯ ಸ್ಥಿರವಾಗಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫ್ಲೈದುಬೈ ಇಸ್ರೇಲಿ ಸೇನಾ ಮುಖ್ಯ ಕಚೇರಿಗೆ ಡಿಕ್ಕಿ ಹೊಡೆಸುವ ನಿರ್ಧಾರ ಫೇಲ್ ಬಳಿಕ ಪೈಲಟ್‌ ಎರಡನೇ ಯೋಚ್ನೆ ಇದಾಗಿತ್ತು!
28 ವರ್ಷ, 29 ದೇಶ, 50,000 ಕಿ.ಮೀ.! ಕೊನೆಗೆ ಸಮುದ್ರವನ್ನೇ ಈಜಿ ತಾಯಿಯ ಮನೆ ತಲುಪಿದ ವ್ಯಕ್ತಿ!