
ದೋಹಾ(ಮೇ.15) ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಚೆನ್ನಾಗಿದೆ. ಆದರೆ ಕೆಲ ಒಪ್ಪಂದ, ನೀತಿಗಳು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೆರಳಿಸಿದೆ. ಪ್ರಮುಖವಾಗಿ ತೆರಿಗೆ ಯುದ್ಧ. ತೆರಿಗೆ ವಿಚಾರದಲ್ಲಿ ಭಾರತ ತನ್ನ ನೀತಿಯಲ್ಲಿ ಒಂದಿಂಚು ಸಡಿಲ ಮಾಡಿಲ್ಲ. ಇದು ಡೋನಾಲ್ಡ್ ಟ್ರಂಪ್ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಭಾರತಕ್ಕೆ ಸೆಡ್ಡು ಹೊಡೆಯಲು ಇದೀಗ ಹೊಸ ಉಪಾಯ ಮಾಡಿದ್ದಾರೆ. ಇದೀಗ ಅಮೆರಿಕ ಮೂಲಕ ಕಂಪನಿಗಳ ಸಿಇಒಗಳಿಗೆ ಟ್ರಂಪ್ ವಿಶೇಷ ಸೂಚನೆ ನೀಡುತ್ತಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡದಂತೆ ಸೂಚಿಸುತ್ತಿದ್ದಾರೆ. ಡೋನಾಲ್ಡ್ ಟ್ರಂಪ್ ಯುಎಇ ಭೇಟಿ ವೇಳೆ ನಡೆದ ಉದ್ಯಮಿಗಳ ಕಾರ್ಯಕ್ರಮದಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್‌ಗೆ ಮಹತ್ವದ ಸೂಚನೆ ನೀಡಿದ್ದಾರೆ. ಭಾರತದಲ್ಲಿ ಆ್ಯಪಲ್ ಯಾವುದೇ ಫ್ಯಾಕ್ಟರಿ ತೆರೆಯದಂತೆ ಸೂಚಿಸಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಬೇಡಿ, ಅವರ ದಾರಿ ಅವರು ನೋಡಿಕೊಳ್ಳುತ್ತಾರೆ. ನೀವು ಭಾರತವನ್ನು ಕಟ್ಟುವ ಪ್ರಯತ್ನ ಮಾಡಬೇಡಿ ಎಂದು ಸೂಚಿಸಿದ್ದಾರೆ.
ಕುಕ್ ನನ್ನ ಸ್ನೇಹಿತ, ಆದರೆ ಭಾರತದ ಉಸಾಬರಿ ಯಾಕೆ?
ದೋಹಾದಲ್ಲಿ ಆಯೋಜಿಸಿದ ಉದ್ಯಮಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಡೋನಾಲ್ಡ್ ಟ್ರಂಪ್, ಟಿಮ್ ಕುಕ್ ನನ್ನ ಆತ್ಮೀಯ ಸ್ನೇಹಿತ. ಆದರೆ ಕುಕ್ ಜೊತೆ ನನಗೆ ಸಮಸ್ಯೆ ಇದೆ. ಕಾರಣ ಇತ್ತೀಚೆಗೆ ನಾನು ಸುದ್ದಿಯೊಂದನ್ನು ಕೇಳಿದೆ. ಟಿಮ್ ಕುಕ್ ಆ್ಯಪಲ್ ಕಂಪನಿ 500 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ ಎಂದು ಕೇಳಿದೆ. ಆದರೆ ಈ ಹೂಡಿಕೆಯನ್ನು ಭಾರತದಲ್ಲಿ ಮಾಡುತ್ತಿದೆ ಎಂದು ಗೊತ್ತಾಯಿತು. ಟಿಮ್ ಕುಕ್ ಭಾರತದಲ್ಲಿ ಯಾಕೆ ಹೂಡಿಕೆ ಮಾಡುತ್ತೀರಿ? ನಿಮಗೆ ಭಾರತವನ್ನು ಕಟ್ಟಿ ಬೆಳೆಸುವ ಪ್ರಯತ್ನ ಯಾಕೆ? ಭಾರತ ಅತೀ ಹೆಚ್ಚು ಸುಂಕ ವಿಧಿಸುವ ರಾಷ್ಟ್ರ. ಹೀಗಾಗಿ ಅಮೆರಿಕದಲ್ಲಿ ಹೂಡಿಕೆ ಮಾಡಿ. ನಿಮ್ಮನ್ನು ಆತ್ಮೀಯವಾಗಿ ನೋಡಿಕೊಳ್ಳುತ್ತೇವೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕದನ ಕಿಚ್ಚು.. ಟ್ರಂಪ್ ಸ್ವಹಿತಾಸಕ್ತಿಯ ಹುಚ್ಚು.. ಹೇಗಿತ್ತು ಭಾರತದ ಪಂಚು..?
ಭಾರತ ಪ್ರಸ್ತಾವನೆ ನೀಡಿ ಸುಮ್ಮನಾಗಿದೆ, ನೀತಿಯಿಂದ ಹಿಂದೆ ಸರಿದಿಲ್ಲ
ತೆರಿಗೆ ಹೆಚ್ಚಳ ಕಡಿತಗೊಳಿಸಿ ಅಮೆರಿಕ ಉತ್ಪನ್ನಗಳು ಭಾರತದಲ್ಲಿ ವ್ಯಾಪಾರ ವಹಿವಾಟು ಮಾಡುವಂತೆ ಮಾಡಲು ಭಾರತಕ್ಕೆ ಮನವಿ ಮಾಡಲಾಗಿತ್ತು. ಇದರಂತೆ ಭಾರತ ಸುಂಕ ಕಡಿತಗೊಳಿಸುವ ಪ್ರಸ್ತಾವನೆ ಮುಂದಿಟ್ಟಿತ್ತು. ಆದರೆ ಭಾರತ ಪ್ರಸ್ತಾವನೆ ಮುಂದಿಟ್ಟಿದೆ ಹೊರತು ಯಾವುದೇ ಸುಂಕ ಕಡಿತಗೊಳಿಸಿಲ್ಲ, ಅದಿಕೃತ ಹೇಳಿಕೆಯನ್ನು ನೀಡಿಲ್ಲ ಎಂದು ಟ್ರಂಪ್ ಭಾರತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚೀನಾದಿಂದ ಆ್ಯಪಲ್ ಉತ್ಪಾದನೆ ಇದೀಗ ಭಾರತಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಆದರೆ ಇದರ ಆರಂಭದಲ್ಲೇ ಡೋನಾಲ್ಡ್ ಟ್ರಂಪ್, ಟಿಮ್ ಕುಕ್ ತಲೆಗೆ ಹುಳ ಬಿಟ್ಟಿದ್ದಾರೆ. ಅಮೆರಿಕ ಇದೀಗ ಹಲವು ದೇಶಗಳಿಗೆ ಅತೀ ಹೆಚ್ಚಿನ ಸುಂಕ ವಿಧಿಸುತ್ತಿದೆ. ತೆರಿಗೆ ಮೂಲಕ ಇತರ ದೇಶಗಳ ಬಗ್ಗು ಬಡಿಯಲು ಟ್ರಂಪ್ ಮುಂದಾಗಿದ್ದಾರೆ. ಇದರ ಎರಡನೇ ಹಂತದ ಪ್ರಯತ್ನವಾಗಿ ಇದೀಗ, ಅಮೆರಿಕ ಮೂಲದ ಕಂಪನಿಗಳನ್ನು ಅಮೆರಿಕದಲ್ಲೇ ಹೂಡಿಕೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಭಾರತದಲ್ಲಿ 3 ಆ್ಯಪಲ್ ಘಟಕ ಕಾರ್ಯನಿರ್ವಹಿಸುತ್ತಿದೆ. ಇದೀಗ ಮತ್ತೆರೆಡು ಉತ್ಪಾದನಾ ಘಟಕ ನಿರ್ಮಾಣ ಹಂತದಲ್ಲಿದೆ. 500 ಬಿಲಿಯನ್ ಡಾಲರ್ ಹೂಡಿಕೆ ಮೂಲಕ ಭಾರತದಲ್ಲಿ ಆ್ಯಪಲ್ ಉತ್ಪಾದನೆ ವಿಸ್ತರಿಸಲು ಮುಂದಾಗಿದೆ. ಡೋನಾಲ್ಡ್ ಟ್ರಂಪ್ ಚೀನಾ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ ಬೆನ್ನಲ್ಲೇ ಚೀನಾ ಕೂಡ ಅಮೆರಿಕ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಿದೆ. ಈ ಸುಂಕ ಯುದ್ಧದಿಂದ ಆ್ಯಪಲ್ ಇದೀಗ ಸುರಕ್ಷಿತ ತಾಣವಾಗಿ ಭಾರತದಲ್ಲಿ ವಿಸ್ತರಣೆ ಮಾಡುತ್ತಿದೆ.
2026ರ ಅಂತ್ಯದ ವೇಳೆಗೆ ಅಮೆರಿಕಾದಲ್ಲಿ ಮಾರಾಟವಾಗುವ ಹೆಚ್ಚಿನ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸಬೇಕು ಅಂತ ಆ್ಯಪಲ್ ಗುರಿ ಹೊಂದಿದೆ. ಚೀನಾದಲ್ಲಿ ತೆರಿಗೆ ಜಾಸ್ತಿ ಇರೋದ್ರಿಂದ ಈ ಪ್ಲಾನ್ ಬೇಗ ಮಾಡ್ತಿದ್ದಾರೆ ಅಂತ ಕಳೆದ ತಿಂಗಳು ರಾಯಿಟರ್ಸ್ ವರದಿ ಮಾಡಿತ್ತು. ಈಗ ಚೀನಾದಲ್ಲಿ ತಯಾರಾಗ್ತಿರೋ 80% ಐಫೋನ್‌ಗಳೂ ಸೇರಿದಂತೆ ವರ್ಷಕ್ಕೆ 6 ಕೋಟಿಗೂ ಹೆಚ್ಚು ಐಫೋನ್‌ಗಳನ್ನು ಆ್ಯಪಲ್ ಅಮೆರಿಕಾದಲ್ಲಿ ಮಾರಾಟ ಮಾಡುತ್ತದೆ. ಚೀನಾಕ್ಕೆ ಹೋಲಿಸಿದ್ರೆ ಭಾರತದಲ್ಲಿ ಐಫೋನ್ ತಯಾರಿಸೋದ್ರ ಖರ್ಚು 5-8% ಜಾಸ್ತಿ. ಕೆಲವೊಮ್ಮೆ 10% ವರೆಗೂ ಹೋಗಬಹುದು ಅಂತ ರಾಯಿಟರ್ಸ್ ವರದಿ ಮಾಡಿದೆ.
ಟ್ರಂಪ್ ತೆರಿಗೆಗಳಿಂದ ತಪ್ಪಿಸಿಕೊಳ್ಳಲು ಆ್ಯಪಲ್ ಭಾರತದಲ್ಲಿ ಉತ್ಪಾದನೆ ಹೆಚ್ಚಿಸಿತ್ತು. ಮಾರ್ಚ್‌ನಲ್ಲಿ ಭಾರತದಿಂದ ಅಮೆರಿಕಕ್ಕೆ 2 ಬಿಲಿಯನ್ ಡಾಲರ್ ಮೌಲ್ಯದ 600 ಟನ್ ಐಫೋನ್‌ಗಳನ್ನು ರಫ್ತು ಮಾಡಿತ್ತು. ಟಾಟಾ ಮತ್ತು ಫಾಕ್ಸ್‌ಕಾನ್‌ನ ದಾಖಲೆ ರಫ್ತು ಇದಾಗಿದೆ. ಇದರಲ್ಲಿ 1.3 ಬಿಲಿಯನ್ ಡಾಲರ್‌ನ ಸ್ಮಾರ್ಟ್‌ಫೋನ್‌ಗಳನ್ನು ಫಾಕ್ಸ್‌ಕಾನ್ ಮಾತ್ರ ರಫ್ತು ಮಾಡಿದೆ ಅಂತ ರಾಯಿಟರ್ಸ್ ಕಳೆದ ತಿಂಗಳು ವರದಿ ಮಾಡಿತ್ತು.
ಅಮೆರಿಕ ಉತ್ಪನ್ನಕ್ಕೆ ಭಾರತದ ಸುಂಕ ಹೆಚ್ಚಳ? : ಚಿಲ್ಲರೆ ಹಣದುಬ್ಬರ 6 ವರ್ಷಗಳಲ್ಲೇ ಕನಿಷ್ಠ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ