ವಾಷಿಂಗ್ಟನ್ (ನ.12): 'ಪ್ರಧಾನಿ ನರೇಂದ್ರ ಮೋದಿ ಜತೆಗೆ ಅಮೆರಿಕವು ಅತ್ಯುತ್ತಮ ಬಾಂಧವ್ಯ ಹೊಂದಿದೆ. ಭಾರತ-ಅಮೆರಿಕ ಮಧ್ಯೆ ಸದ್ಯದಲ್ಲೇ ವ್ಯಾಪಾರ ಒಪ್ಪಂದ ಕುದುರುವ ನಿರೀಕ್ಷೆ ಇದೆ. ಈ ಒಪ್ಪಂದ ಈ ಹಿಂದೆ ನಾವು ಮಾಡಲುದ್ದೇಶಿಸಿದ್ದ ಒಪ್ಪಂದಕ್ಕಿಂತ ಭಿನ್ನವಾಗಿರಲಿದೆ. ಬಳಿಕ ಭಾರತದ ಮೇಲಿನ ಭಾರಿ ತೆರಿಗೆ ತೆಗೆದುಹಾಕಲಿದ್ದೇವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದಾರೆ.
ಭಾರತಕ್ಕೆ ಅಮೆರಿಕದ ನೂತನ ರಾಯಭಾರಿ ಸೆರ್ಗಿಯೋ ಗೋರ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ನಾವು ನ್ಯಾಯಯುತವಾದ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಈ ಹಿಂದಿನ ಒಪ್ಪಂದ ನ್ಯಾಯಸಮ್ಮತ ವಾಗಿರಲಿಲ್ಲ. ಇದೀಗ ನಾವು ಒಪ್ಪಂದದ ಕೊನೆಯ ಹಂತದಲ್ಲಿದ್ದೇವೆ. ಈ ಒಪ್ಪಂದ ಎಲ್ಲರಿಗೂ ಹಿತಕರವಾಗಿರಲಿದೆ' ಎಂದರು. ಅಲ್ಲದೆ, 'ಸದ್ಯ ಭಾರತ ನಮ್ಮನ್ನು ಇಷ್ಟಪಡಲಿಕ್ಕಿಲ್ಲ. ಆದರೆ ಮುಂದೆ ಮತ್ತೆ ಇಷ್ಟಪಡಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದೇನೆ' ಎಂದರು.
ತೆರಿಗೆ ಕಡಿತ: 'ಭಾರತವು ರಷ್ಯಾದ ತೈಲ ಖರೀದಿಸುತ್ತಿದ್ದ ಹಿನ್ನೆಲೆಯಲ್ಲಿ ಭಾರೀ ತೆರಿಗೆ ವಿಧಿಸಲಾಗಿದೆ. ಆದರೆ ಈಗ ಅವರು ರಷ್ಯಾ ತೈಲ ಖರೀದಿ ಕಡಿಮೆ ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ಹೇರಲಾಗಿರುವ ತೆರಿಗೆ ಕಡಿಮೆ ಮಾಡಲಿದ್ದೇವೆ' ಎಂದು ಟ್ರಂಪ್ ನುಡಿದರು. 'ಭಾರತವು ಅಮೆರಿಕದ ಪಾಲಿಗೆ ಇಂಡೋ ಫೆಸಿಫಿಕ್ ಪ್ರದೇಶದಲ್ಲಿ ಪ್ರಮುಖ ಆರ್ಥಿಕ ಮತ್ತು ಭದ್ರತಾ ಪಾಲುದಾರ ರಾಷ್ಟ್ರವಾಗಿದೆ' ಎಂದು ಟ್ರಂಪ್ ಹೇಳಿದ್ದಾರೆ.
ವಾಷಿಂಗ್ಟನ್: ಭಾರತದ ಅಮೆರಿಕ ರಾಯಭಾರಿಯಾಗಿ ಸೆರ್ಗಿಯೋ ಗೋರ್ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ವ್ಯಾಪಾರ ಒಪ್ಪಂದ ವಿಚಾರವಾಗಿ ತಿಕ್ಕಾಟದ ಹೊತ್ತಿನಲ್ಲೇ ಟ್ರಂಪ್ ಅವರ ನಂಬಿಗಸ್ಥ ಗೋರ್ ಅಧಿಕಾರ ಸ್ವೀಕರಿಸಿದ್ದು ವಿಶೇಷ.
ವಾಷಿಂಗ್ಟನ್: ಅಮೆರಿಕದ ಇತಿಹಾಸದಲ್ಲೇ ಅತೀ ಸುದೀರ್ಘ (41 ದಿನದ) ಶಟ್ ಡೌನ್‌ಗೆ ಸದ್ಯದಲ್ಲೇ ಅಂತ್ಯ ಬೀಳಲಿದೆ. ಶಟ್‌ಡೌನ್‌ಗೆ ಅಂತ್ಯ ಹಾಡುವ ಮಸೂದೆಗೆ ಅಮೆರಿಕದ ಮೇಲ್ಮನೆ ಸೆನೆಟ್‌ನಲ್ಲಿ ಒಪ್ಪಿಗೆ ಸಿಕ್ಕಿದೆ. ಇನ್ನು ಈ ಬಿಲ್ ಕೆಳಮನೆಯಲ್ಲಿ ಮಂಡನೆಯಾಗಲಿದ್ದು ರಿಪಬ್ಲಿಕನ್ ಪಕ್ಷದ ಸದಸ್ಯರು ಬಹುಸಂಖ್ಯಾತರಾಗಿರುವ ಕಾರಣ ಈ ಬಿಲ್‌ಗೆ ಒಪ್ಪಿಗೆ ಸಿಗುವ ವಿಶ್ವಾಸವಿದೆ.
ಆರೋಗ್ಯ ಸಬ್ಸಿಡಿ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಶುರುವಾದ ತಿಕ್ಕಾಟದಿಂದಾಗಿ ಸರ್ಕಾರಿ ಖರ್ಚು-ವೆಚ್ಚಗಳ ಬಿಲ್‌ಗೆ ಸಂಸತ್ತಿನಲ್ಲಿ ಸೋಲಾಗಿ ಅಮೆರಿಕದಲ್ಲಿ ಅ.1ರಿಂದ ಶಟ್ ಡೌನ್ ಆರಂಭವಾಗಿತ್ತು. ಇದರಿಂದಾಗಿ ಸರ್ಕಾರವು ಸುಮಾರು 13 ಲಕ್ಷ ಸರ್ಕಾರಿ ನೌಕರರಿಗೆ ಅ.1ರಿಂದ ವೇತನ ನೀಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಯಾವುದೇ ಖರ್ಚು-ವೆಚ್ಚ ಮಾಡಲಾಗದೆ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದೀಗ ಡೆಮಾಕ್ರಟಿಕ್ ಪಕ್ಷದ ಕೆಲ ಪ್ರತಿನಿಧಿಗಳು ರಾಜಿಗೆ ಮುಂದಾಗಿದ್ದರಿಂದ ಮೇಲ್ಮನೆಯಲ್ಲಿ ಶಟ್ ಡೌನ್ ಅಂತ್ಯಗೊಳಿಸುವ ಬಿಲ್‌ಗೆ ಒಪ್ಪಿಗೆ ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ