ಇಂದಿನಿಂದ ಭಾರತ ಸೇರಿದಂತೆ ವಿಶ್ವದ ಮೇಲೆ ಟ್ರಂಪ್ ತೆರಿಗೆ ಬಿಸಿ: ಷೇರುಪೇಟೆ ಚೇತರಿಕೆ!

Published : Apr 09, 2025, 08:31 AM IST
ಇಂದಿನಿಂದ  ಭಾರತ ಸೇರಿದಂತೆ ವಿಶ್ವದ ಮೇಲೆ ಟ್ರಂಪ್ ತೆರಿಗೆ ಬಿಸಿ: ಷೇರುಪೇಟೆ ಚೇತರಿಕೆ!

ಸಾರಾಂಶ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಪ್ರತಿತೆರಿಗೆ ನೀತಿಯಿಂದ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಪರಿಣಾಮ ಬೀರಿದೆ. ಈ ತೆರಿಗೆ ನೀತಿಯಿಂದಾಗಿ ಷೇರುಪೇಟೆಗಳು ಕುಸಿದಿದ್ದರೂ, ಮಂಗಳವಾರದಂದು ಚೇತರಿಕೆ ಕಂಡಿವೆ.

ವಾಷಿಂಗ್ಟನ್‌: ಅಮೆರಿಕದ ದೇಶೀ ಉದ್ಯಮಕ್ಕೆ ಆದ್ಯತೆ, ಆರ್ಥಿಕತೆಯ ಹಿತ ಹಾಗೂ ಉದ್ಯೋಗ ಸೃಷ್ಟಿಯ ಸಬೂಬು ನೀಡಿ ವಿಶ್ವದ ಅನೇಕ ದೇಶಗಳ ಮೇಲೆ ಭಾರಿ ಪ್ರಮಾಣದ ಪ್ರತಿತೆರಿಗೆ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಘೋಷಣೆಗಳು ಬುಧವಾರದಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತಕ್ಕೂ ಬಿಸಿ ತಟ್ಟಲಿದೆ. ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ ಶೇ.26, ವಿಯೆಟ್ನಾಂಗೆ ಶೇ.46, ಥಾಯ್ಲೆಂಡ್‌ಗೆ ಶೇ.34, ಚೀನಾಕ್ಕೆ ಶೇ.104 ಹೀಗೆ ಒಂದೊಂದು ದೇಶಗಳಿಗೆ ಒಂದೊಂದು ರೀತಿಯ ಪ್ರತಿತೆರಿಗೆ ಹಾಕುವುದಾಗಿ ಟ್ರಂಪ್‌ ಏ.1ರಂದು ಘೋಷಿಸಿದ್ದರು. ಆದರೆ, ವಿಶ್ವದಲ್ಲಿ ಇದರಿಂದ ಸಾಕಷ್ಟು ಅಲ್ಲೋಲ ಕಲ್ಲೋಲವಾಗಿ ಷೇರುಪೇಟೆಗಳು ಭಾರಿ ಪ್ರಮಾಣದಲ್ಲಿ ಕುಸಿದು ಬಿದ್ದಿವೆ. ಆದರೂ ಪ್ರತಿತೆರಿಗೆ ಘೋಷಣೆ ಹಿಂಪಡೆಯಲು ನಿರಾಕರಿಸಿದ್ದಾರೆ.

ಟ್ರಂಪ್‌ರ ಈ ನಡೆಯಿಂದ ಕಂಗೆಟ್ಟು ಅನೇಕ ದೇಶಗಳು ಅಮೆರಿಕ ಜತೆ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿವೆ. ಆದರೆ ಚೀನಾ ಸೇರಿ ಕೆಲವು ದೇಶಗಳು ತೊಡೆ ತಟ್ಟಿದ್ದು, ಅಮೆರಿಕದ ಮೇಲೆಯೇ ಹೆಚ್ಚುವರಿ ಪ್ರತಿತೆರಿಗೆ ಹೇರಿವೆ. ಈ ಮೂಲಕ ಹೊಸ ಅಂತಾರಾಷ್ಟ್ರೀಯ ತೆರಿಗೆ ಯುದ್ಧಕ್ಕೆ ವೇದಿಕೆ ಸಜ್ಜಾಗಿದೆ. ಅಮೆರಿಕದ ಈ ನಡೆಯಿಂದಾಗಿ ವಿಶ್ವಾದ್ಯಂತ ಅಟೋಮೊಬೈಲ್‌, ಡೈರಿ, ಸ್ಟೀಲ್‌ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರೀ ತಲ್ಲಣ ಸೃಷ್ಟಿಯಾಗಿದೆ.

ಟ್ರಂಪ್‌ ಪ್ರತಿತೆರಿಗೆಗೆ ಕಾರಣವೇನು?:
ಏ.1ರಂದು ಮಾತನಾಡಿದ್ದ ಟ್ರಂಪ್‌, ‘ಹಲವು ದಶಕಗಳ ಕಾಲ ನಮ್ಮ ದೇಶವನ್ನು ಸ್ನೇಹಿತರು ಸೇರಿ ಎಲ್ಲರೂ ವ್ಯಾಪಾರದ ಹೆಸರಿನಲ್ಲಿ ಲೂಟಿ, ಅತ್ಯಾಚಾರ ಮಾಡಿದ್ದಾರೆ. ಇದೀಗ ನ್ಯಾಯಸಮ್ಮತ ವ್ಯಾಪಾರಕ್ಕಾಗಿ ಆ ದೇಶಗಳ ಮೇಲೆ ಪ್ರತಿ ತೆರಿಗೆ ಹಾಕುತ್ತಿದ್ದೇವೆ. ಇಂದು ವಿಮೋಚನೆಯ ದಿನ. ಈ ದಿನವನ್ನು ಅಮೆರಿಕದ ಉದ್ಯಮ ಉದ್ಯಮದ ಮರುಹುಟ್ಟಿನ ದಿನವಾಗಿ ನೆನಪಿನಲ್ಲಿಟ್ಟುಕೊಳ್ಳಲಾಗುತ್ತದೆ’ ಎಂದು ಪ್ರತಿ ತೆರಿಗೆ ಘೋಷಿಸಿದ ಬಳಿಕ ಹೇಳಿದ್ದರು.‘ಈ ರೀತಿಯ ತೆರಿಗೆಯ ಮೂಲಕ ಅಮೆರಿಕದ ಖಜಾನೆಗೆ ನೂರಾರು ಶತಕೋಟಿ ಆದಾಯ ಬರಲಿದೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರವನ್ನು ನ್ಯಾಯಸಮ್ಮತಗೊಳಿಸಲಿದೆ’ ಎಂದು ಟ್ರಂಪ್‌ ಇದೇ ವೇಳೆ ತಿಳಿಸಿದ್ದರು. 

ಏ.9ರೊಳಗೆ ಚೀನಾ ತನ್ನ ಶೇ.34 ಪ್ರತಿತೆರಿಗೆ ಹಿಂಪಡೆಯದಿದ್ದರೆ ಇನ್ನೂ ಶೇ.50ರಷ್ಟು ಹೆಚ್ಚುವರಿ ಪ್ರತಿತೆರಿಗೆ ಹೇರುವೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಕಿದ್ದ ಬೆದರಿಕೆ ಈಗ ನಿಜವಾಗಿದ್ದು, ಬುಧವಾರದಿಂದಲೇ ಜಾರಿಗೆ ಬರಲಿದೆ. ಇದರೊಂದಿಗೆ ಚೀನಾ ವಸ್ತುಗಳ ಮೇಲೆ ಅಮೆರಿಕ ಶೇ.104ರಷ್ಟು ತೆರಿಗೆ ಹೇರಿದಂತಾಗುತ್ತದೆ. ಇದು ಟ್ರಂಪ್ ಹೇರಿದ ತೆರಿಗೆಯಲ್ಲೇ ಅತ್ಯಧಿಕವಾಗಿದೆ.

ಇದನ್ನೂ ಓದಿ: ಚಿನ್ನದ ಬೆಲೆ ಬರೋಬ್ಬರಿ 34,000ರೂಗೆ ಇಳಿಕೆ ಸಾಧ್ಯತೆ, ಅಮೆರಿಕ ತಜ್ಞರ ಸೂಚನೆ

ಚೀನಾ ಮೇಲೆ ಅಮೆರಿಕ ಮೊದಲು ಶೇ.20 ತೆರಿಗೆ ಹೇರಿತ್ತು. ಟ್ರಂಪ್‌ ಏ.2ರಂದು ಶೇ.34 ತೆರಿಗೆ ಘೋಷಿಸಿದ್ದರು. ಬಳಿಕ ಚೀನಾ ಕೂಡ ಶೇ.34 ಪ್ರತಿತೆರಿಗೆ ಘೋಷಿಸಿತ್ತು. ಇದೇ ಕೋಪದಲ್ಲಿ ಈಗ ಟ್ರಂಪ್ ಶೇ.50 ಹೆಚ್ಚುವರಿ ತೆರಿಗೆ ಪ್ರಕಟಿಸಿದ್ದಾರೆ. ಇದರಿಂದ ಚೀನಾ ಮೇಲೆ ಅಮೆರಿಕ ಶೇ.104 ತೆರಿಗೆ ಹೇರಿದಂತಾಗಿದೆ,ಹೆದರಲ್ಲ- ಚೀನಾ:ಈ ನಡುವೆ ಹಾಕಿರುವ ಬೆದರಿಕೆಗೆ ತಿರುಗೇಟು ನೀಡಿರುವ ಕ್ಸಿ ಜಿನ್‌ಪಿಂಗ್‌ ಸರ್ಕಾರ, ‘ಇಂಥ ತಳಬುಡವಿಲ್ಲದ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಇದು ಕೇವಲ ಬ್ಲ್ಯಾಕ್‌ಮೇಲ್‌ ತಂತ್ರ. ಕೊನೆಯವರೆಗೆ ನಾವು ಇದರ ವಿರುದ್ಧ ಹೋರಾಡುತ್ತೇವೆ’ ಎಂದಿದೆ.

ಷೇರುಪೇಟೆ ಚೇತರಿಕೆ: ಸೆನ್ಸೆಕ್ಸ್‌ 1089, ನಿಫ್ಟಿ 374 ಅಂಕ ಏರಿಕೆ
ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತೆರಿಗೆ ನೀತಿಯ ತಲ್ಲಣದಿಂದ ಸೋಮವಾರ ಕುಸಿದಿದ್ದ ಭಾರತದ ಷೇರು ಮಾರುಕಟ್ಟೆ ಮಂಗಳವಾರ ಅರ್ಧದಷ್ಟು ಚೇತರಿಸಿಕೊಂಡಿದ್ದು, ಸೆನ್ಸೆಕ್ಸ್‌ 1089 ಅಂಕ ಮತ್ತು 374 ಅಂಕ ಏರಿಕೆ ಕಂಡಿವೆ. ಇದರಿಂದ ಹೂಡಿಕೆದಾರರು 7.32 ಲಕ್ಷ ಕೋಟಿ ರು.ನಷ್ಟು ಶ್ರೀಮಂತರಾಗಿದ್ದಾರೆ.ಸೋಮವಾರ 2226.7 ಅಂಕ ಕುಸಿತ ಕಂಡಿದ್ದ ಸೆನ್ಸೆಕ್ಸ್‌ ಮಂಗಳವಾರ 1089 ಅಂಕಗಳ ಚೇತರಿಕೆ ಕಂಡು 74,227 ರಲ್ಲಿ ಮುಕ್ತಾಯಗೊಂಡಿತು. 

ಇನ್ನು 742.8 ಅಂಕ ನೆಗೆತ ಕಂಡಿದ್ದ ನಿಫ್ಟಿಯೂ ಚೇತರಿಕೆ ಹಾದಿ ಕಂಡುಕೊಂಡಿದ್ದು, 374.28 ಅಂಕಗಳ ಜಿಗಿತದೊಂದಿಗೆ 22,535 ರಲ್ಲಿ ಅಂತ್ಯವಾಯಿತು.ಮಂಗಳವಾರ ಪವರ್‌ಗ್ರಿಡ್‌ ಹೊರತುಪಡಿಸಿ ಎಲ್ಲಾ ಸೆನ್ಸೆಕ್ಸ್‌ ಸಂಸ್ಥೆಗಳು ಸಕಾರಾತ್ಮಕವಾಗಿ ಕೊನೆಗೊಂಡವು. ಟೈಟಾನ್, ಬಜಾಜ್‌ ಫೈನಾನ್ಸ್‌, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಲಾರ್ಸೆನ್‌ & ಟೂಬ್ರೊ, ಆಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫಿನ್‌ಸರ್ವ್‌, ಏಷ್ಯನ್ ಪೇಂಟ್ಸ್‌ ಮತ್ತು ಜೊಮ್ಯಾಟೋ ಅತಿ ಹೆಚ್ಚು ಲಾಭ ಗಳಿಸಿದವು.

ಇದನ್ನೂ ಓದಿ: ಸ್ಟಾರ್ಟ್ಅಪ್ ಬಿಸ್ನೆಸ್ ಈಗ ಕಾರುಬಾರು, ಪಿಯೂಷ್ ಗೋಯೆಲ್ ವಿವಾದಿತ ಹೇಳಿಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜೀವ ನೀಡಿದವಳೇ ಉಸಿರು ತೆಗೆದಳು: ಅಡ್ಡದಾರಿ ಹಿಡಿದ ತಾಯಿ: ಬುದ್ದಿ ಹೇಳಿದ 16ರ ಹರೆಯದ ಮಗಳ ಕೊಲೆ
ಬ್ಯಾಕ್ ಟು ಬ್ಯಾಕ್ ಎರಡೆರಡು ಬೊಗಳೆ ಬಿಟ್ಟು ನಗೆಪಾಟಲಿಗೀಡಾದ ಪಾಕಿಸ್ತಾನದ ಆಸೀಂ ಮುನೀರ್