ಟ್ರಂಪ್ ಪಕ್ಷಕ್ಕಾಗಿ ಎಲಾನ್ ಮಸ್ಕ್ ₹4700 ಕೋಟಿ ಖರ್ಚು ಮಾಡಿದ್ರೂ ವಿರೋಧ ಪಕ್ಷದ ಭಾರತೀಯ ಮೂಲದ ಹಲವರ ಗೆಲವು!

Published : Nov 05, 2026, 08:43 AM IST
donald trump and elon musk

ಸಾರಾಂಶ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ ಜಯ ಸಾಧಿಸಿದ್ದು, ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ. ಎಲಾನ್ ಮಸ್ಕ್ ಅವರ ಕೋಟ್ಯಂತರ ರೂಪಾಯಿ ಖರ್ಚಿನ ನಡುವೆಯೂ ಭಾರತೀಯ ಮೂಲದ ಹಲವು ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದಾರೆ.

ವಾಷಿಂಗ್ಟನ್‌: ಅಮೆರಿಕ ಸಂಸತ್ತಿನ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ ಜಯ ದಾಖಲಿಸಿದ್ದು, ಸಂಸತ್ತಿನ ಉಭಯ ಸದನಗಳಾದ ಸೆನೆಟ್ ಮತ್ತು ಜನಪ್ರತಿನಿಧಿ ಸಭೆ ಎರಡರ ಮೇಲೂ ಪೂರ್ಣ ನಿಯಂತ್ರಣ ಸಾಧಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷಕ್ಕೆ ಈ ಫಲಿತಾಂಶ ತೀವ್ರ ಹಿನ್ನಡೆ ತಂದಿದೆ. ಈ ಮೂಲಕ ವಿದೇಶಗಳ ಮೇಲೆ ಭಾರಿ ತೆರಿಗೆ ಹೇರಿಕೆ, ಇರಾನ್‌ ವಿರುದ್ಧ ಯುದ್ಧ ಅವರಿಗೆ ಮುಳುವಾದಂತಾಗಿದೆ.

ಟ್ರಂಪ್ ಪಕ್ಷಕ್ಕಾಗಿ ₹4700 ಕೋಟಿ ಖರ್ಚು ಮಾಡಿದ್ದ ಮಸ್ಕ್!

ವಾಷಿಂಗ್ಟನ್: ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅಮೆರಿಕದ ಮಧ್ಯಂತರ ಚುನಾವಣೆಗಾಗಿ ಬರೋಬ್ಬರಿ ₹4,700 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿದ್ದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಅಭ್ಯರ್ಥಿಗಳು ಮತ್ತು ಅವರ ಪ್ರಚಾರ ಕಾರ್ಯಗಳಿಗಾಗಿ ಮಸ್ಕ್ ಈ ಭಾರಿ ಮೊತ್ತವನ್ನು ವಿನಿಯೋಗಿಸಿದ್ದರು. ಇಷ್ಟೊಂದು ದೊಡ್ಡ ಮೊತ್ತವನ್ನು ಖರ್ಚು ಮಾಡಿದಾಗಲೂ ಮಸ್ಕ್ ಬೆಂಬಲಿತ ರಿಪಬ್ಲಿಕನ್ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆ ಆಗಿದೆ.

ಭಾರತದ ನಂಟಿನ ಹಲವರಿಗೆ ಅಮೆರಿಕದಲ್ಲಿ ಜಯ

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿ ಅನೇಕ ಕಡೆ ಗೆಲವು ಕಂಡಿದ್ದಾರೆ. ಭಾರತೀಯ ಮೂಲದ ಡೆಮಾಕ್ರಟಿಕ್‌ ಪಕ್ಷದ ನಾಯಕರಾದ ಅಮಿ ಬೇರಾ, ರೋ ಖನ್ನಾ, ಸುಹಾಸ್ ಸುಬ್ರಮಣ್ಯಂ ಮತ್ತು ಪ್ರಮೀಳಾ ಜಯಪಾಲ್ ಅವರು ಜನಪ್ರತಿನಿಧಿ ಸಭೆಗೆ ಮರು-ಆಯ್ಕೆ ಆಗಿದ್ದರೆ, ಪಿಯಾ ದಾಂಡಿಯಾ ಮೊದಲ ಬಾರಿಗೆ ಸಭೆ ಪ್ರವೇಶಿಸಿದ್ದಾರೆ. ಬೇರಾ ಸತತ 8ನೇ ಅವಧಿಗೆ ಆಯ್ಕೆಯಾಗಿದ್ದು, ಅಮೆರಿಕ ಕಾಂಗ್ರೆಸ್‌ನಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಭಾರತೀಯ ಮೂಲದವರು ಎನಿಸಿದ್ದಾರೆ.

ಅತ್ತ ಮೇರಿಲ್ಯಾಂಡ್‌ ಲೆಫ್ಟಿನೆಂಟ್‌ ಗವರ್ನರ್‌ ಹುದ್ದೆಗೆ ಅರುಣಾ ಮಿಲ್ಲರ್‌ ಮರು-ಆಯ್ಕೆ ಆಗಿದ್ದಾರೆ. ಡೆಮಾಕ್ರಟಿಕ್ ಅಭ್ಯರ್ಥಿ ಪೂಜಾ ಸೇಥಿ ಟೆಕ್ಸಾಸ್ ಶಾಸಕಾಂಗಕ್ಕೆ ಆಯ್ಕೆಯಾದ ಮೊದಲ ಭಾರತೀಯ-ಅಮೆರಿಕನ್ ಮಹಿಳೆ ಹಾಗೂ ಮೊದಲ ಏಷ್ಯನ್-ಅಮೆರಿಕನ್ ಡೆಮಾಕ್ರಟಿಕ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಟ್ಕಳ ಅಳಿಯಗೆ ಜಯ

ಕರ್ನಾಟಕದ ನಂಟು ಹೊಂದಿರುವ ಅಬ್ದುಲ್ ಅಲ್-ಸಯೀದ್‌ ಅವರು ಮಿಚಿಗನ್ ರಾಜ್ಯದಿಂದ ವಿಜಯಿಯಾಗಿದ್ದಾರೆ. ಅಮೆರಿಕದ ಇತಿಹಾಸದಲ್ಲೇ ಸೆನೆಟ್ ಪ್ರವೇಶಿಸುತ್ತಿರುವ ಮೊದಲ ಮುಸಲ್ಮಾನ ಎಂಬ ಇತಿಹಾಸ ಸೃಷ್ಟಿಸಿದ್ದಾರೆ. ಸಯೀದ್‌ ಪತ್ನಿ ಸಾರಾ ಜಕಾಕು ಅವರ ತಂದೆ ಭಟ್ಕಳದವರು. ವಕೀಲರು ಹಾಗೂ ಶಿಕ್ಷಣತಜ್ಞರಾಗಿದ್ದ ಅವರ ತಾತ ಜುಕಾಕು ಶಂಸುದ್ದೀನ್ ಅವರು ಬಿ.ಡಿ. ಜತ್ತಿ ಸರ್ಕಾರದಲ್ಲಿ ಹಣಕಾಸು ಇಲಾಖೆಯ ಉಪ ಸಚಿವರಾಗಿದ್ದರು.

ನನಗೂ ಜ್ಞಾನೇಶ್ ಕೊಡಿ: ಟ್ರಂಪ್‌ ಕುರಿತ ಮೀಮ್ಸ್ ವೈರಲ್‌

ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷ ಹೀನಾಯವಾಗಿ ಸೋತ ಬೆನ್ನಲ್ಲೇ, ಸೋಷಿಯಲ್‌ ಮೀಡಿಯಾದಲ್ಲಿ ಟ್ರಂಪ್‌ ಕುರಿತ ಮೀಮ್ಸ್‌ ಹರಿದಾಡುತ್ತಿವೆ. ಮೋದಿ ಅವರನ್ನು ಉದ್ದೇಶಿಸಿ ಟ್ರಂಪ್, ‘ಬ್ರೋ ನನಗೂ ಜ್ಞಾನೇಶ್‌ (ಸಿಇಸಿ ಜ್ಞಾನೇಶ್‌ ಕುಮಾರ್) ಕೊಡಿ’ ಎಂದು ಕೇಳಿದ್ದಾರೆ ಎಂಬ ವ್ಯಂಗ್ಯದ ಸಂದೇಶಗಳು ವೈರಲ್‌ ಆಗಿವೆ. ’ಜ್ಞಾನೇಶ್ ಬಿಜೆಪಿ ಪಕ್ಷಪಾತಿ. ಬಿಜೆಪಿಯನ್ನು ಗೆಲ್ಲಿಸಿದ್ದೇ ಅವರು’ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಟ್ರಂಪ್‌ ಕುರಿತ ಮೀಮ್ಸ್ ಹರಿದಾಡುತ್ತಿವೆ.

‘ಜ್ಞಾನೇಶ್‌ ಕುಮಾರ್‌ ಅಲ್ಲಿದ್ದರೆ ಟ್ರಂಪ್‌ರನ್ನು ಸೋಲಲು ಬಿಡುತ್ತಿರಲಿಲ್ಲ’ ಎಂದು ಕಾಕ್ರೋಚ್‌ ಪಕ್ಷ ಹಾಗೂ ಕಾಂಗ್ರೆಸ್‌ನ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡುತ್ತಿದ್ದಾರೆ. ವಕೀಲ ಪ್ರಶಾಂತ್‌ ಭೂಷಣ್‌ ಹಂಚಿಕೊಂಡ ಪೋಸ್ಟ್‌ನಲ್ಲಿ, ‘ಮೋದಿ: ಕ್ಷಮಿಸಿ, ಜ್ಞಾನೇಶ್‌ರನ್ನು ನಿಮಗೆ ಕೊಡಲಾಗಲಿಲ್ಲ’ ಎಂದು ಬರೆಯಲಾಗಿದೆ. ಜ್ಞಾನೇಶ್‌ ಇದ್ದಿದ್ದರೆ ಟ್ರಂಪ್‌ಗೆ ಈ ಸ್ಥಿತಿ ಬರುತ್ತಿರಲಿಲ್ಲ’ ಎಂದು ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ ಪೋಸ್ಟ್‌ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ರಾಮಾಯಣ ಮಾಡಿದ್ದಲ್ಲ, ಆಗಿದ್ದು'.. ಸಿನಿಮಾ ನೋಡಿದವ್ರು ಹೇಳಿರೋ ಈ ಮಾತಿಗೆ 'ನೋ' ಅನ್ನೋ ಹಾಗಿಲ್ಲ, ಸಾಕ್ಷಿ ಇದೆ!
ಐತಿಹಾಸಿಕ ಕಥೆ 'ರಾಮಾಯಣ'ದಲ್ಲಿ ರಾಮನೇ ಎಲ್ಲಾ.. ಆದ್ರೆ ಈ ಸಿನಿಮಾ ನೋಡಿ ಪ್ರೇಕ್ಷಕರು ಹೇಳ್ತಿರೋ ಸತ್ಯ ಏನ್ ಗೊತ್ತಾ?!