
ವಾಷಿಂಗ್ಟನ್: ಅಮೆರಿಕಕ್ಕೆ ಆಮದಾಗುವ ವಿದೇಶಿ ಉತ್ಪನ್ನಗಳ ಮೇಲೆ ಯದ್ವಾತದ್ವಾ ತೆರಿಗೆ ಹಾಕಿ ಇಡೀ ವಿಶ್ವಕ್ಕೇ ಶಾಕ್ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಉಲ್ಟಾ ಹೊಡೆದಿದ್ದು, ಸುಮಾರು 75 ದೇಶಗಳ ಮೇಲೆ ಹೇರಿದ್ದ ತೆರಿಗೆಗೆ 90 ದಿನಗಳ ಮಟ್ಟಿಗೆ ತಡೆ ನೀಡಿರುವುದಾಗಿ ಘೋಷಿಸಿದ್ದಾರೆ. ಆದರೆ ಚೀನಾ ಮೇಲಿನ ತೆರಿಗೆಯನ್ನು ಶೇ.104ರಿಂದ 125ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ.
‘ಅಮೆರಿಕ ತೆರಿಗೆ ಹೇರಿದ ಬಳಿಕ ಸುಮಾರು 75 ದೇಶಗಳು, ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಅಮೆರಿಕದ ಜತೆ ಸಂಧಾನಕ್ಕೆ ಆಗಮಿಸಿವೆ. ಹೀಗಾಗಿ ನಾನು ಅವುಗಳ ಮೇಲೆ 90 ದಿನ ತೆರಿಗೆ ಹೇರಿಕೆ ಮುಂದೂಡಲು ನಿರ್ಧರಿಸಿದ್ದೇನೆ. ಅವುಗಳ ಮೇಲೆ ಶೇ.10 ಮೂಲ ಆಮದು ತೆರಿಗೆ ಮುಂದುವರಿಯಲಿದೆ. ಆದರೆ ಚೀನಾ ಮಾತ್ರ ಸುಮ್ಮನಿರದೇ ನಮ್ಮ ಮೇಲೆ ಪ್ರತಿತೆರಿಗೆ ಹೇರಿದೆ. ಹೀಗಾಗಿ ಚೀನಾ ಮೇಲಿನ ತೆರಿಗೆಯನ್ನು ಶೇ.125ಕ್ಕೆ ಹೆಚ್ಚಿಸಿದ್ದೇನೆ’ ಎಂದು ತಮ್ಮ ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದಾರೆ.
75 ದೇಶಗಳ ಮೇಲೆ ಪ್ರತಿತೆರಿಗೆಯನ್ನು ತಡೆ ಹಿಡಿದಿದ್ದಾಗಿ ಟ್ರಂಪ್ ಘೋಷಿಸುತ್ತಿದ್ದಂತೆಯೇ ಬುಧವಾರ ರಾತ್ರಿ ಅಮೆರಿಕ ಷೇರುಪೇಟೆ ಡೌ ಜೋನ್ಸ್ 2000 ಅಂಕದಷ್ಟು ಜಿಗಿದಿದೆ. ಟ್ರಂಪ್ ಘೋಷಣೆಗಳಿಂದ ಕಳೆದ 2-3 ದಿನಗಳಿಂದ ಅಮೆರಿಕ ಷೇರುಪೇಟೆ ಕೂಡ ತೀವ್ರ ಮಂಕಾಗಿತ್ತು.
ಕುಸಿದಿದ್ದ ವಿಶ್ವ ಷೇರುಪೇಟೆ ಇಂದು ಚೇತರಿಕೆ ಸಾಧ್ಯತೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ಹೊಡೆತಕ್ಕೆ ಸಿಲುಕಿ 2-3 ದಿನಗಳಿಂದ ಮಂಕಾಗಿದ್ದ ಜಾಗತಿಕ ಷೇರುಪೇಟೆಗಳು ಗುರುವಾರ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಗುರುವಾರ ಮಹಾವೀರ ಜಯಂತಿ ಕಾರಣ ರಜೆ ಇರುವ ಭಾರತದ ಷೇರುಪೇಟೆ ಕೂಡ ಶುಕ್ರವಾರ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ. ಇದಕ್ಕೆ ಮುನ್ನುಡಿ ಎಂಬಂತೆ ಅಮೆರಿಕ ಷೇರುಪೇಟೆ ಭಾರತೀಯ ಕಾಲಮಾನ ಬುಧವಾರ ತಡರಾತ್ರಿಯೇ ಚೇತರಿಸಿಕೊಂಡಿದೆ. ಟ್ರಂಪ್ ಅವರು ಚೀನಾ ಹೊರತುಪಡಿಸಿ ಮಿಕ್ಕ 75 ದೇಶಗಳ ಮೇಲೆ ಆಮದು ತೆರಿಗೆಯನ್ನು 90 ದಿನ ಮುಂದೂಡಿದ್ದೇ ಇದಕ್ಕೆ ಕಾರಣ.
ಇದನ್ನೂ ಓದಿ: ಮತ್ತೊಮ್ಮೆ ಚೀನಾ ಪ್ರತೀಕಾರ: ಅಮೆರಿಕದ ಸರಕುಗಳ ಮೇಲೆ ಶೇ.84ಕ್ಕೆ ಸುಂಕ ಏರಿಕೆ!
ನಿನ್ನೆ ಕುಸಿದ ಸೆನ್ಸೆಕ್ಸ್, ನಿಫ್ಟಿ:
ಮಂಗಳವಾರ ಚೇತರಿಕೆ ಕಂಡಿದ್ದ ಭಾರತದ ಷೇರುಪೇಟೆ ಬುಧವಾರ ಬೆಳಗ್ಗೆ ಅಮೆರಿಕದ ಹೊಸ ಆಮದು ಸುಂಕದ ಭೀತಿಗೆ ಒಳಗಾಗಿ ಕುಸಿಯಿತು. ಭಾರತ ಮಾತ್ರವಲ್ಲದೇ ಜಾಗತಿಕ ಮಾರುಕಟ್ಟೆಯೂ ಬುಧವಾರ ಕುಸಿಯಿತು. ಸೆನ್ಸೆಕ್ಸ್ ಬುಧವಾರ 379.9 ಅಂಕ ಕುಸಿದು 73,847ರಲ್ಲಿ ಅಂತ್ಯಗೊಂಡರೆ, ನಿಫ್ಟಿ 136.7 ಅಂಕ ಇಳಿಕೆ ಕಂಡು 22,399ರಲ್ಲಿ ಮುಕ್ತಾಯಗೊಂಡಿತು. ಭಾರತ ಮಾತ್ರವಲ್ಲದೇ ವಿದೇಶದಲ್ಲಿಯೂ ಬುಧವಾರ ಷೇರುಪೇಟೆ ಕುಸಿದಿದ್ದು, ಜಪಾನ್ ಶೇ.4.7 , ಹಾಂಗ್‌ಕಾಂಗ್ ಶೇ.1.8, ದಕ್ಷಿಣ ಕೊರಿಯಾ ಶೇ.1.9, ಆಸ್ಟ್ರೇಲಿಯಾ ಶೇ.1.8 ಕುಸಿತ ಕಂಡಿವೆ
ಹೆಚ್ಚುತ್ತಿರುವ ವ್ಯಾಪಾರ ಸಂಘರ್ಷ, ಟ್ರಂಪ್ ತೆರಿಗೆ ನೀತಿ, ವ್ಯಾಪಾರ ಕಳವಳ, ರಿಸರ್ವ್ ಬ್ಯಾಂಕ್ ಸತತ 2ನೇ ಅವಧಿಗೆ ಬಡ್ಡಿದರ ಇಳಿಕೆ ಮಾಡಿರುವುದು ಭಾರತದ ಷೇರುಪೇಟೆಯ ಮೇಲೆಯೂ ಪರಿಣಾಮ ಬೀರಿದೆ.
ಇದನ್ನೂ ಓದಿ: ಅಮೆರಿಕದ ಮೇಲೆ ಚೀನಾ, ಯುರೋಪ್ ಒಕ್ಕೂಟ ಜಂಟಿ ತೆರಿಗೆ ದಾಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ